ಶಿವಮೊಗ್ಗ: ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಜ.12ರಂದು ನಗರದ ಪ್ರತಿಷ್ಠಿತ ವಿವೇಕಾನಂದ ಜಾಗೃತಿ ವೇದಿಕೆ ವತಿಯಿಂದ ವಿಶಿಷ್ಟ ಹಾಗೂ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದ್ದು, ವೈಶಿಷ್ಠ್ಯಪೂರ್ಣ ವೇದಿಕೆಯೊಂದಕ್ಕೆ ನಗರ ಸಾಕ್ಷಿಯಾಗಲಿದೆ.
ಪ್ರತಿ ವರ್ಷವೂ ವಿಭಿನ್ನವಾಗಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ವೇದಿಕೆ, ಈ ಬಾರಿಯೂ ಸಹ ವಿಭಿನ್ನ ಕಾರ್ಯಕ್ರಮಗಳನ್ನು ಯೋಜಿಸಿಕೊಂಡಿದ್ದು, ಇದಕ್ಕಾಗಿ ವಿವೇಕ ಮಂಟಪವನ್ನು ನಿರ್ಮಾಣ ಮಾಡಲಿದೆ. ಕಳೆದ ಬಾರಿ ವಿವೇಕ ರಾಕ್ ಎನ್ನುವ ಕಲ್ಪನೆಯಲ್ಲಿ ವೇದಿಕೆ ನಿರ್ಮಾಣ ಮಾಡಿ ನಗರ ಗಮನ ಸೆಳೆದಿತ್ತು ಈ ತಂಡ.
ಜ.12ರಂದು ಬೆಳಗ್ಗೆ 5.50ಕ್ಕೆ ಯೋಗಾಚಾರ್ಯ ಸಿ.ವಿ. ರುದ್ರಾರಾಧ್ಯರಿಂದ ಯೋಗಾಭ್ಯಾಸ ಹಾಗೂ ಆರೋಗ್ಯ ಜೀವನಕ್ಕೆ ಮಾರ್ಗದರ್ಶನ ನಡೆಯಲಿದೆ.
ಅಂದು ಸಂಜೆ 5.30ಕ್ಕೆ ದೇಶಭಕ್ತಿ ಸಾರುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ವಿವೇಕಾನಂದರ ಚೈತನ್ಯದಾಯಕ ನುಡಿಮುತ್ತುಗಳು ಎಂಬ ವಿಚಾರದಲ್ಲಿ ಪ್ರಖರ ಭಾಷಣ ನಡೆಯಲಿದ್ದು, ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರು ರಾಮಕೃಷ್ಣ ಆಶ್ರಮದ ರಮೇಶ್ ಉಮಾರಾಣಿ ಹಾಗೂ ಯುವ ಭಾಷಣಗಾರ್ತಿ ಕುಮಾರಿ ಭಾವನ ಆರ್. ಗೌಡ ಪಾಲ್ಗೊಳ್ಳಲಿದ್ದಾರೆ. ಚಿತ್ರನಟರಾದ ಧನುಂಜಯ ಹಾಗೂ ಸುಚೇಂದ್ರ ಪ್ರಸಾದ್ ವೇದಿಕೆಯನ್ನು ಅಲಂಕರಿಸಲಿದ್ದಾರೆ.

ಕಲ್ಲಗಂಗೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಪರಮಪೂಜ್ಯ ಶ್ರೀ ವಿನಯಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಮುಖ್ಯಅತಿಥಿಗಳಾಗಿ, ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ, ಶಾಸಕ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್. ರೌದ್ರೇಗೌಡ, ಮಹಾಪೌರರಾದ ಲತಾ ಗಣೇಶ್, ಉಪಮಹಾಪೌರ ಎಸ್.ಎನ್. ಚನ್ನಬಸಪ್ಪ, ಹಿಂದೂ ಮುಖಂಡ ದೀನದಯಾಳು ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ.
ಡಿವಿಎಸ್ ಪ್ರೌಢಶಾಲೆಯ ಮಕ್ಕಳಿಂದ ಪ್ರಾರ್ಥನಾಗೀತೆ ನಡೆಯಲಿದ್ದು, ಸ್ಟೆಪ್ ಹೋಲ್ರ‍್ಸ್ ಡ್ಯಾನ್ಸ್ ಗ್ರೂಪ್ ತಂಡದಿಂದ ದೇಶಭಕ್ತಿ ಸಾರವ ನೃತ್ಯ ಪ್ರಸ್ತುತವಾಗಲಿದೆ. ಸಾಂದೀಪಿನಿ ಶಾಲಾ ಮಕ್ಕಳು ದೇಶಭಕ್ತಿಗೀತೆಯ ಗಾನಸುಧೆ ಹರಿಸಲಿದ್ದು, ಭಕ್ತಿ ಸಂಗಮ ಭಜನಾ ಮಂಡಳಿಯಿಂದ ಕಾರ್ಯಕ್ರಮ ಹಾಗೂ ಶಿಕಾರಿಪುರದ ಮೆಟ್ರೋ ಡ್ಯಾನ್ಸ್ ಗ್ರೂಪ್ ತಂಡದಿಂದ ದೇಶಭಕ್ತಿ ಸಾರುವ ನೃತ್ಯ ಪ್ರದರ್ಶನ ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ದೇಶಭಕ್ತರು, ಸಾರ್ವಜನಿಕರು ಭಾಗವಹಿಸಿ ತನುಮನಧನಗಳ ಸಹಕಾರದಿಂದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕಾಗಿ ವಿವೇಕಾನಂದ ಜಾಗೃತಿ ವೇದಿಕೆ ಕೋರಿದೆ.















