ಕಲ್ಪ ಮೀಡಿಯಾ ಹೌಸ್ | ಕೊಪ್ಪಳ |
ಕೊಪ್ಪಳ #Koppal ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯ ನವವೃಂದಾವನ ಗಡ್ಡೆಯಲ್ಲಿ ಮಧ್ವ ಸಿದ್ಧಾಂತ ಯತಿಪರಂಪರೆಯ ಶ್ರೀಜಯತೀರ್ಥರ ಆರಾಧನೆಯನ್ನು ನಡೆಸಲು ಅನುಮತಿಗೆ ಕೋರಿ ಮಂತ್ರಾಲಯ #Mantralaya ಶ್ರೀರಾಘವೇಂದ್ರ ಸ್ವಾಮಿ ಮಠದವರು ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಧಾರವಾಡ ಹೈಕೋರ್ಟಿನ ವಿಭಾಗೀಯ ಪೀಠ ಬುಧವಾರ ವಜಾಗೊಳಿಸಿದೆ.
ಅಲ್ಲದೆ, ಇದೇ ವಿವಾದಕ್ಕೆ ಸಂಬಂಧಿಸಿದಂತೆ ಕೆಲವು ದಿನಗಳ ಹಿಂದಷ್ಟೇ ಉತ್ತರಾದಿಮಠದ #UttaradiMatha ಪರವಾಗಿ ಬಂದಂತಹ ಉಚ್ಚ ನ್ಯಾಯಾಲಯದ ಏಕಸದಸ್ಯ ಪೀಠದ ತೀರ್ಪಿಗೂ ತಡೆಯಾಜ್ಞೆ ಕೋರಿ ಶ್ರೀರಾಯರ ಮಠದವರು ಸಲ್ಲಿಸಿದ್ದ ಮತ್ತೊಂದು ಮಧ್ಯಂತರ ಅರ್ಜಿಯನ್ನೂ ಸಹ ಹೈಕೋರ್ಟ್‌ನ ಇದೇ ಪೀಠ ವಜಾಗೊಳಿಸಿದೆ.
ಶ್ರೀಜಯತೀರ್ಥರ (ಟೀಕಾಚಾರ್ಯ) ಮೂಲವೃಂದಾವನ ಕಲಬುರಗಿ ಜಿಲ್ಲೆಯ ಮಳೇಖೇಡದಲ್ಲಿದೆ. ಉತ್ತರಾದಿಮಠದ ಯತಿ ಪರಂಪರೆಯಲ್ಲಿ ಬರುವ ರಘುವರ್ಯತೀರ್ಥರ ಮೂಲಬೃಂದಾವನ ನವವೃಂದಾವನ ಗಡ್ಡೆಯಲ್ಲಿದ್ದು, ಅದನ್ನೇ “ಜಯತೀರ್ಥ”ರದ್ದು #SriJayathirtharu ಎಂದು ಶ್ರೀರಾಯರಮಠ ಗೊಂದಲ ಸೃಷ್ಟಿಸುತ್ತಿದೆ ಎಂದು ಉತ್ತರಾದಿಮಠ ವಾದ ಮಂಡಿಸಿತ್ತು.
ಬುಧವಾರ, ಈ ವಿಚಾರವಾಗಿ ಅರ್ಜಿಗಳ ಪರಿಶೀಲಿಸಿದ ಹೈಕೋರ್ಟ್ #HighCourt ಧಾರವಾಡ ದ್ವಿಸದಸ್ಯ ಪೀಠವು, ಶ್ರೀರಾಯರಮಠದ ಈ ಎರಡೂ ಮಧ್ಯಂತರ ಅರ್ಜಿಗಳನ್ನು ತಿರಸ್ಕರಿಸಿದೆ. ರಾಯರಮಠಕ್ಕೆ ನವ ವೃಂದಾವನ ಗಡ್ಡೆಯಲ್ಲಿ ಜಯತೀರ್ಥರ ಆರಾಧನೆಯನ್ನು ಮಾಡಲು ಅನುಮತಿಯನ್ನು ನೀಡಿಲ್ಲ.
ಪ್ರತಿವರ್ಷದಂತೆ, ಈ ಬಾರಿಯೂ ಸಹ ಮಳಖೇಡದಲ್ಲಿರುವ ಟೀಕಾಚಾರ್ಯರ ಮೂಲಬೃಂದಾವ ಸನ್ನಿಧಾನದಲ್ಲಿ ಉತ್ತರಾದಿಮಠದ ಪೀಠಾಧಿಪತಿ ಶ್ರೀಸತ್ಯಾತ್ಮತೀರ್ಥರ ನೇತೃತ್ವದಲ್ಲಿ ಆರಾಧನಾ ಮಹೋತ್ಸವ ಆರಂಭಗೊಂಡಿದೆ. ಬುಧವಾರದಿಂದ ಮೂರು ದಿನಗಳ ಕಾಲ ಶ್ರೀಜಯತೀರ್ಥರ ಆರಾಧನೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಮೂಲಬೃಂದಾವನ ಕುರಿತ ಹೈಕೋರ್ಟ್ ತೀರ್ಪು ಭಕ್ತರ ವಲಯದಲ್ಲಿ ಹರ್ಷದ ಹೊನಲು ಹರಿಸಿದೆ.
ಕಲಬುರ್ಗಿಯ ಹಿರಿಯ ವಕೀಲರಾದ ಅಮಿತ ಕುಮಾರ ದೇಶಪಾಂಡೆ, ಧಾರವಾಡ ಸತೀಶ ರಾಯಚೂರು, ಹೈದರಾಬಾದಿನ ಶ್ರೀಧರಮೂರ್ತಿ, ರಮೇಶ ಕರಣಂ, ಬೆಂಗಳೂರಿನ ಅನಿಲ ಕೆಂಭಾವಿ, ದೆಹಲಿಯ ಸೌರಭ ಸಿನ್ಹಾ, ಧಾರವಾಡದ ಆನಂದ ಬಾಗೇವಾಡಿ, ವಾದಿರಾಜ ವಡವು ಉತ್ತರಾದಿ ಮಠದ ಪರ ಸಮರ್ಥವಾಗಿ ವಾದ ಮಂಡಿಸಿದ್ದರು.
ಅನೇಕ ಭಕ್ತರು ನ್ಯಾಯಕ್ಕೆ , ಸತ್ಯಕ್ಕೆ ಜಯವಾಗಬೇಕು ಎಂದು ನಿರಂತರ ಪಾರಾಯಣ ಜಪ ಇತ್ಯಾದಿಗಳನ್ನು ಮಾಡಿದ್ದಾರೆ. ಎಲ್ಲರೂ ಮಾಡಿದ ಪಾರಾಯಣದ ಫಲ, ವಿಶೇಷವಾಗಿ ಪರಮಪೂಜ್ಯ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ತಪಸ್ಸಿನ ಬಲದಿಂದ, ಶ್ರೀಮಟ್ಟೀಕಾಕೃತ್ಪಾದರ ಪರಮಾನುಗ್ರಹ, ಹರಿವಾಯುದೇವರ ಆಶೀರ್ವಾದದಿಂದ ಇದು ಸಾಧ್ಯವಾಗಿದೆ ಎಂದು ತಿಳಿಸಲು ಹರ್ಷವಾಗುತ್ತಿದೆ.
-ಪಂ.ವಿದ್ಯಾಧೀಶಾಚಾರ್ಯ ಗುತ್ತಲ್, ಆಡಳಿತಾಧಿಕಾರಿಗಳು, ಉತ್ತರಾದಿಮಠ
ಯರಗೋಳದಲ್ಲಿ ಭಕ್ತಿಭಾದ ಪೂರ್ವಾರಾಧನೆ
ಯಾದಗಿರಿ: ಮಧ್ವಸಿದ್ಧಾಂತದ ಯತಿವರೇಣ್ಯರು ನಡೆದಾಡಿದ ಭೂಮಿ, ಮಧ್ವಮತದ ಮೇರುಕೃತಿ ಶ್ರೀಮನ್ನ್ಯಾಯಸುಧಾದಿ ಗ್ರಂಥಗಳ ರಚಿಸಿದ ಸ್ಥಳ ಎಂಬ ಕಾರಣಕ್ಕೆ ಪ್ರಖ್ಯಾತವಾಗಿರುವ ಇಲ್ಲಿಗೆ ಸಮೀಪದ ಯರಗೋಳದಲ್ಲಿ ಉತ್ತರಾದಿ ಮಠಾಧೀಶರಾದ ಶ್ರೀಸತ್ಯಾತ್ಮೀರ್ಥರ ನೇತೃತ್ವದಲ್ಲಿ ಬುಧವಾರ ಶ್ರೀಜಯತೀರ್ಥರ ಪೂರ್ವಾರಾಧನೆ ಭಕ್ತಿಭಾವದಿಂದ ನಡೆಯಿತು.
ಟೀಕಾಚಾರ್ಯ ಖ್ಯಾತಿಯ ಜಯತೀರ್ಥರ ಆರಾಧನಾ ಮಹೋತ್ಸವ ಜು.24 ರಿಂದ ಜು. 26ರವರೆಗೆ ಆರಂಭಗೊಂಡಿದ್ದು, ಪ್ರತಿವರ್ಷದಂತೆ ಆರಾಧನೆಯ ಮೊದಲ ದಿನದಂದು ಯರಗೋಳದಲ್ಲಿ ಶ್ರೀಸತ್ಯಾತ್ಮತೀರ್ಥರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ರಾಜ್ಯ-ಅಂತಾರಾಜ್ಯಗಳಿಂದ ಅನೇಕ ಭಕ್ತರು ಆಗಮಿಸಿದ್ದರು. ಸಂಜೆ ಮಳಖೇಡಕ್ಕೆ ಶ್ರೀಗಳು ತೆರಳಿ, ಅಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು. ಗುರುವಾರ ಮಧ್ಯಾರಾಧನೆ ಹಾಗೂ ಶುಕ್ರವಾರ ಉತ್ತರಾರಾಧನೆ ನಡೆಯಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post