ಕಲ್ಪ ಮೀಡಿಯಾ ಹೌಸ್ | ಮೈಸೂರು |
ನಗರದ ಅಗ್ರಹಾರದಲ್ಲಿರುವ ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಶ್ರೀ ಉತ್ತರಾದಿ ಮಠದಲ್ಲಿ ಶ್ರೀ ಸತ್ಯ ಸಂತುಷ್ಟ ತೀರ್ಥರ ಆರಾಧನಾ ಮಹೋತ್ಸವ ಶುಕ್ರವಾರ ಸಾವಿರಾರು ಭಕ್ತರ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ನೆರವೇರಿತು.
ಶ್ರೀಸತ್ಯ ಸಂತುಷ್ಟ ತೀರ್ಥರ ವೃಂದಾವನಕ್ಕೆ ಉತ್ತರಾದಿ ಮಠದ ಪೀಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ ಪಂಚಾಮೃತ ಅಭಿಷೇಕ ನಡೆಸಿದ್ದು ಭಕ್ತಿ ಭಾವದ ಪ್ರತೀಕವಾಗಿತ್ತು. ಇದೇ ಸಂದರ್ಭ ಸಂಸ್ಥಾನ ಪ್ರತಿಮಾ ಶ್ರೀ ಮೂಲ ರಾಮದೇವರು ಮತ್ತು ಮೂಲ ಸೀತಾದೇವಿಯವರ ಪೂಜೆ ನಡೆಸಿದ ಶ್ರೀಗಳು, ಭಕ್ತರಿಗೆ ಫಲ ಮಂತ್ರಾಕ್ಷತೆ ಅನುಗ್ರಹಿಸಿದರು.
ಶ್ರೀ ಸತ್ಯಾತ್ಮತೀರ್ಥರ 50ನೇ ವರ್ಧಂತಿ ಉತ್ಸವದ ಅಂಗವಾಗಿ ಶ್ರೀ ಧನ್ವಂತರಿ ದೇವರಿಗೆ ಬೆಳ್ಳಿ ಪಲ್ಲಕ್ಕಿ, ಸುವರ್ಣ ನೇತ್ರ, ವೃಂದಾವನಗಳಿಗೆ ಸುವರ್ಣ ದ್ವಾದಶ ನಾಮಗಳ ಸಮರ್ಪಣೆಯೂ ಇದೇ ಸಂದರ್ಭ ಸಂಪನ್ನಗೊಂಡಿತು. ಎರಡು ಸಾವಿರಕ್ಕೂ ಹೆಚ್ಚು ಭಕ್ತರಿಗೆ ಶ್ರೀ ಸತ್ಯಾತ್ಮತೀರ್ಥರು ಮುದ್ರಾ ಧಾರಣೆ ಪ್ರದಾನ ಮಾಡಿದರು. ಶಾಸಕ ರಾಮದಾಸ್, ಮುಡಾ ಅಧ್ಯಕ್ಷ ರಾಜೀವ್ ಇತರರು ಶ್ರೀಗಳ ದರ್ಶನ ಪಡೆದರು.ಆಶೀರ್ವಚನ
ಆರಾಧನಾ ಮಹೋತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ, ದೇವರು ಮಾನವನಿಗೆ ಅನಂತ ಸುಖಗಳನ್ನು ದಯಪಾಲಿಸಿದ್ದಾನೆ. ಅದನ್ನು ವಿನಮ್ರತೆಯಿಂದ ದೇವರಿಗೆ ಸಮರ್ಪಿಸಿ ಸ್ವೀಕರಿಸುವ ಪ್ರವೃತ್ತಿ ನಮ್ಮದಾಗಬೇಕು ಎಂದು ಸಂದೇಶ ನೀಡಿದರು.ನಾಲಿಗೆ ಮೇಲೆ ನಿಯಂತ್ರಣ ಇದ್ದರೆ ಮಾತ್ರ ಆರೋಗ್ಯ ಉತ್ತಮವಾಗಿರುತ್ತದೆ, ವ್ಯಕ್ತಿತ್ವರೂ ಶ್ರೇಷ್ಠವಾಗುತ್ತದೆ. ದೇವರು ನಮ್ಮ ದೇಹ ಮತ್ತು ಮನಸ್ಸುಗಳನ್ನು ಚೇತೋಹಾರಿಯಾಗಿಡಲು ಧನ್ವಂತರಿ ರೂಪದಲ್ಲಿ ಅವತರಿಸಿದ್ದಾನೆ. ನಮ್ಮೊಳಗೆ ಇದ್ದು ಪ್ರೇರಣೆ ನೀಡುತ್ತಾನೆ. ಈ ಸತ್ಯವನ್ನು ಅರ್ಥ ಮಾಡಿಕೊಳ್ಳುವುದೇ ಜೀವನದ ದರ್ಶನ ಎಂದವರು ಹೇಳಿದರು.
ದೇವರಿಗೆ ನೈವೇದ್ಯ ಮಾಡದ ಆಹಾರವನ್ನು ಎಂದಿಗೂ ತಿನ್ನಬೇಡಿ ಎಂದು ಕರೆ ನೀಡಿದ ಸ್ವಾಮೀಜಿ, ಅಪಥ್ಯವಾದ ತಿನಿಸುಗಳು ಪಾಪ ಸಂಘಟನೆಗೆ ರಹದಾರಿಯಾಗುತ್ತದೆ. ಹಾಗಾಗಿ ನಾವು ವಿಹಿತವಾದ, ಭಗವಂತನಿಗೆ ಸಮರ್ಪಣೆಮಾಡಿದ್ದನ್ನೇ ಹಿತ, ಮಿತವಾಗಿ ಸ್ವೀಕರಿಸಬೇಕು ಎಂದರು.ನಿರಾತಂಕವಾಗಿ ಜೀವನ ಸಾಗಿಸುವ ಸೂತ್ರ ತಿಳಿಸುವ ರಾಮಾಯಣ, ಮಹಾಭಾರತ, ವೇದ, ಉಪನಿಷತ್ತುಗಳನ್ನು ದೇವರು ದಯಪಾಲಿಸಿದ್ದಾನೆ. ಇವು ಮುಕ್ತಿಗೂ ದಾರಿಯಾಗಿವೆ. ಇವೆಲ್ಲವನ್ನೂ ದಯಪಾಲಿಸಿದ ದೇವರಿಗೆ ನಾವು ಕೃತಜ್ಞರಾಗುವ ಮೂಲಕ ಜೀವನ ಸಾರ್ಥಕಪಡಿಸಿಕೊಳ್ಳೋಣ ಎಂದರು.
ಶ್ರೀ ಜಯತೀರ್ಥ ವಿದ್ಯಾಪೀಠದ ಕುಲಪತಿ ಗುತ್ತಲ ರಂಗಾಚಾರ್ಯ, ಪಂಡಿತರಾದ ಅನಿರುದ್ಧಾಚಾರ್ಯ ಪಾಂಡುರಂಗಿ, ಹರೀಶಾಚಾರ್ಯ, ಬಿದರಹಳ್ಳಿ ಕೃಷ್ಣಾಚಾರ್ಯ, ಸತ್ಯಬೋಧಾಚಾರ್ಯ ರಟ್ಟಿಹಳ್ಳಿ, ಭಾರ್ಗವ ಪಾಂಡುರಂಗಿ ಇತರರು ಇದ್ದರು. ನಂತರ ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post