ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಉಡುಪಿಯ ಶ್ರೀಕೃಷ್ಣಾಪುರ ಮಠದ ಪೀಠಾಧೀಶರಾಗಿದ್ದ ಮಹಾತಪಸ್ವಿ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದಂಗಳವರು 19ನೇ ಶತಮಾನದ ಪಂಡಿತಾಗ್ರಣಿಗಳೆಂದು ದೇಶದಲ್ಲೇ ಪ್ರಖ್ಯಾತರಾಗಿದ್ದು, ಉಡುಪಿಯ ಅಷ್ಟ ಮಠದ ವಲಯದಲ್ಲೇ ಪ್ರಭಾವಪೂರ್ಣವಾದ ವ್ಯಕ್ತಿತ್ವವನ್ನು ಹೊಂದಿದ್ದರು.
ಗರ್ಭಾಷ್ಠಮದಲ್ಲೇ ಉಪನೀತರಾಗಿದ್ದ ಶ್ರೀ ಶ್ರೀ ವಿದ್ಯಾಧೀಶ ತೀರ್ಥರು ಉಡುಪಿ ಬಳಿಯ ಭಾಗವತಬೆಟ್ಟು ಎಂಬ ಗ್ರಾಮದಲ್ಲಿ 1808ರಲ್ಲಿ ಮಡಿಕುಳ್ಳಾಯ ಮನೆತನದಲ್ಲಿ ಜನಿಸಿದರು.
ಬಾಲ್ಯದಲ್ಲಿಯೇ ವಿಶೇಷವಾದ ದೈವಾನುಗ್ರಹ ಹೊಂದಿದ ಶ್ರೀ ಶ್ರೀಗಳವರು ಶ್ರೀ ಕೃಷ್ಣಾಪುರ ಮಠದ ಶ್ರೀವಿದ್ಯಾಸಮುದ್ರ ತೀರ್ಥರ ಕಾಲದ ನಂತರ ದ್ವಂದ್ವ ಮಠದ ಯತಿಗಳಾದ ಶ್ರೀಭುವನೇಂದ್ರ ತೀರ್ಥರು ತಮ್ಮ ಗುರುಗಳಾದ ಶ್ರೀಕೃಷ್ಣಾಪುರ ಮಠದ ಶ್ರೀವಿದ್ಯಾಸಮುದ್ರ ತೀರ್ಥರ ಬೃಂದಾವನಸ್ಥ ಕಾರ್ಯವನ್ನು ಮುಗಿಸಿ, ಮುಂದೆ ಶ್ರೀಕೃಷ್ಣಾಪುರ ಮಠಕ್ಕೆ ಉತ್ತಮ ಶಿಷ್ಯನನ್ನು ನೇಮಿಸಲು ಚಿಂತಾಕ್ರಾಂತರಾಗಿ ಮಠಕ್ಕೆ ಬಂದರು.

ಶ್ರೀ ಕೃಷ್ಣನ ಪೂಜೆಗಾಗಿ ಶ್ರೀಮದಾನಂದತೀರ್ಥರಿಂದ ನಿಯೋಜಿಸಲ್ಪಟ್ಟ 8 ಜನ ಯತಿಗಳಲ್ಲಿ ಶ್ರೀ ಜನಾರ್ಧನ ತೀರ್ಥರ ಪರಂಪತೆಯಲ್ಲಿ ಬಂದ 32ನೇ ಪೀಠಾಧಿಪತಿಗಳಾದ ಶ್ರೀಗಳವರು ತಮ್ಮ ದ್ವಂದ್ವ ಮಠವಾದ ಶ್ರೀ ಪುತ್ತಿಗೆ ಮಠದ ವಿದ್ವನ್ಮಣಿಗಳಾದ ಶ್ರೀ ಭುವನೇಂಧ್ರ ತೀರ್ಥರಲ್ಲಿ ಶಾಸ್ತ್ರವ್ಯಾಸಂಗವನ್ನು ಮಾಡಿ ಅಪರಿಮಿತಿವಾದ ಪ್ರೌಢಿಮೆಯನ್ನು ಗಳಿಸಿಕೊಂಡರು. ಇಷ್ಟಕ್ಕೆ ತೃಪ್ತರಾಗದ ಶ್ರೀ ವಿದ್ಯಾಧೀಶರು ಮತ್ತಷ್ಟು ವಿಶೇಷ ಜ್ಞಾನವನ್ನು ಸಂಪಾದಿಸಲು `ಶಾಸ್ತ್ರನಗರಿ’ ಎಂದು ಪ್ರಸಿದ್ಧವಾದ ಕಾಶಿ ಕ್ಷೇತ್ರಕ್ಕೆ ಹೋಗಿ 12 ವರ್ಷಗಳ ಕಾಲ ವಿಶದವಾಗಿ ಶಾಸ್ತ್ರಾಧ್ಯಯನ ಮಾಡಿ ಅವುಗಳಲ್ಲಿ ಪ್ರಭುತ್ವವನ್ನು ಪಡೆದುಕೊಂಡರು.

ಅನೇಕ ಪೀಠಾಧಿಪತಿಗಳಿಗೆ ಶಾಸ್ತ್ರ ಪಾಠಗಳನ್ನು ಹೇಳಿ ಹಲವಾರು ಧೀಮಂತ ಶಿಷ್ಯರನ್ನು ರೂಪಿಸಿ, 12 ಬಾರಿ ಅತೀ ವಿಜೃಂಭಣೆಯಿಮದ ನಭೂತೋ ನಭವಿಷ್ಯತಿ ಎಂಬಂತೆ ಶ್ರೀಮನ್ನ್ಯಾಯಸುಧಾ ಗ್ರಂಥದ ಮಂಗಲ ಮಾಡಿ ಅಭೂತಪೂರ್ವ ಕೀತಿಯನ್ನು ಸಂಪಾದಿಸಿದರು.
ಅಸಂಖ್ಯಾತ ಶಿಷ್ಯರನ್ನು ತಯಾರು ಮಾಡಿದ ಶ್ರೀಗಳವರು ಆಗಿನ ಪೇಜಾವರ, ಶಿರೂರು ಮತ್ತು ಸೋದಾಮಠದ ಶ್ರೀ ಶ್ರೀಗಳವರಿಗೂ ಸುಧಾಂತ ಪಾಠವನ್ನು ಹೇಳಿದರು. ಹರಿದಾಸ ಸಾಹಿತ್ಯವನ್ನು ವಿಶೇಷವಾಗಿ ಪ್ರೋತ್ಸಾಹಿಸಿ ಸಮಾನ ಶ್ರದ್ಧೆಯಿಂದ ಕಾಣುತ್ತಿದ್ದರು. ಹಾಗಾಗಿ ಅವರ ಬಳಿಯಲ್ಲಿ ಸುರಪುರದ ಶ್ರೀ ಆನಂದ ದಾಸರಿಂದ `ಕಮಲಪತಿ ವಿಠಲ’ ಎಂಬ ಅಂಕಿತ ದೀಕ್ಷೆ ಪಡೆದಿದ್ದ ಸಂತೆಬೆನ್ನೂರು ಶ್ರೀ ರಾಮಾಚಾರ್ಯರೇ ಮೊದಲಾದ ಅನೇಕ ಹರಿದಾಸರು ಶಾಸ್ತ್ರ ವ್ಯಾಸಂಗ ನಿರತರಾಗಿದ್ದರು.

ಶ್ರೀ ವಿದ್ಯಾಧೀಶರು 19ನೇ ಶತಮಾನದ ಪ್ರಖಾಂಡ ಪಂಡಿತರಾಗಿದ್ದು, ಹಲವಾರು ಕವಿ, ಪಂಡಿತರುಗಳನ್ನು ಸಮಾಜಕ್ಕೆ ಉಡುಗೊರೆಯಾಗಿ ಕೊಟ್ಟಿದ್ದಾರೆ. ಅವರಲ್ಲಿ ಪಂಡಿತ ಜಂಬುಖಂಡಿ ವಾದಿರಾಜ ಆಚಾರ್ಯರು ಸೇರಿದಂತೆ ಅನೇಕ ಪಂಡಿತರು ಶಾಸ್ತ್ರ ವ್ಯಾಸಂಗ ನಿರತರಾಗಿದ್ದರು. ಉಡುಪಿಯಲ್ಲಿರುವ ಶ್ರೀವಿದ್ಯಾಧೀಶ ಸಂಸ್ಕೃತ ಮಹಾಪಾಠ ಶಾಲೆಯ ಸಂಸ್ಥಾಪಕರೂ ಹೌದು. ಉಡುಪಿಯಲ್ಲಿ ಶ್ರೀ ಶ್ರೀಗಳವರ ಹೆಸರು ಸ್ಮರಣೀಯವಾದುದು. ಶ್ರೀಮಠವು ಒಂದು ವಿಶ್ವವಿದ್ಯಾಲಯದಂತೆ ಮೆರೆಯುತ್ತಿತ್ತು.
ಇವರು ತಮ್ಮ ಆಶ್ರಮಕಾಲದಲ್ಲಿ ಉತ್ತರ ಭಾರತದ ಪ್ರಯಾಗದಲ್ಲಿ ಮತ್ತು ಉಡುಪಿ ಹತ್ತಿರದ ದಂಡತೀರ್ಥದಲ್ಲಿ ಮುಖ್ಯಪ್ರಾಣ ದೇವರ ಪ್ರತಿಷ್ಠಾಪನೆಯನ್ನು ಮಾಡಿ, ನಿರಂತರ ನಿತ್ಯಪೂಜೆ ನಡೆಯುವ ವ್ಯವಸ್ಥೆ ಮಾಡಿದರು. ಅದಲ್ಲದೇ, ಉಡುಪಿಯ ಯಾತ್ರಾರ್ಥಿಗಳಿಗೆ ಅನುಕೂಲವಾಗುವಂತೆ ಅನೇಕ ಕಡೆಗಳಲ್ಲಿ ಧರ್ಮಸತ್ರಗಳನ್ನು ಸ್ಥಾಪಿಸಿ ಪೋಷಿಸುತ್ತಿದ್ದರು.

ಉಡುಪಿಯ ಶ್ರೀಕೃಷ್ಣನಿಗೆ ವಿಶಿಷ್ಟ ಹಾಗೂ ಕಲಾಪೂರ್ಣವಾದ ಭವ್ಯ ಸುವರ್ಣ ಮಂಟಪವನ್ನು ಅರ್ಪಿಸಿದ ಕೀರ್ತಿ ಶ್ರೀವಿದ್ಯಾಧೀಶರದ್ದು. ಇವರು 66 ವರ್ಷಗಳ ಕಾಲ ಪೀಠಾಧಿಪತಿಗಳಾಗಿದ್ದರು. ಪಂಡಿತರುಗಳಲ್ಲದೇ, ಕವಿಗಳು, ಹರಿದಾಸರು, ಹರಿಕಥೆ, ಯಕ್ಷಗಾನ, ನಾಟಕ ಮುಂತಾದ ಕಲೆಗಳಿಗೆ ಉಡುಪಿ ಶ್ರೀಕೃಷ್ಣಾಪುರ ಮಠವು ರಾಜಾಶ್ರಯವಾಗಿತ್ತು. ಶ್ರೀಮಠದಲ್ಲಿ ದಿನನಿತ್ಯವೂ ವೇದಘೋಷ, 500 ರಿಂದ 1000 ಭಕ್ತರಿಗೆ ತೀರ್ಥಪ್ರಸಾದ, ಮೃಷ್ಠಾನ್ನ ಭೋಜನ ನಡೆಯುತ್ತಿತ್ತು. 100ಕ್ಕೂ ಮಿಕ್ಕಿ ಮಠದಲ್ಲಿ ಸೇವಾನಿರತರು ಮತ್ತು ನಿರಂತರ ದಾನ ಧರ್ಮಾದಿಗಳು ನಡೆಯುತ್ತಿತ್ತು.
ಉಡುಪಿಯಲ್ಲಿ ಅಷ್ಟಮಠಗಳು 11 ಆನೆಯನ್ನು ಹೊಂದಿದ್ದ ಕಾಲದಲ್ಲಿ ಮೂರು ಆನೆಗಳು ಶ್ರೀಕೃಷ್ಣಾಪುರ ಮಠದಲ್ಲಿದ್ದವು. ಶ್ರೀಶ್ರೀಗಳವರ ಶಿಷ್ಯರಾದ ಪೂಜ ಶ್ರೀ ವಿದ್ಯಾಪೂರ್ಣ ಶ್ರೀಪಾದಂಗಳವರು ತಮ್ಮ ಗುರುಗಳಂತೆ ವೈಭವದಲ್ಲಿ ಮಠದ ಕೀರ್ತಿಯನ್ನು ವಿಸ್ತರಿಸಿ, ಉಡುಪಿಯ ಕೃಷ್ಣನಿಗೆ ಸುಂದರ ಹಾಗೂ ಕಲಾತ್ಮಕವಾಗಿರುವ ಚಿನ್ನದ ಪಲ್ಲಕ್ಕಿಯನ್ನು ಸಮರ್ಪಿಸಿದರು. ಈ ಪಲ್ಲಕ್ಕಿಯು ನಿತ್ಯವೂ ಶ್ರೀಕೃಷ್ಣ ಉತ್ಸವಕ್ಕೆ ಉಪಯೋಗಿಸಲ್ಪಡುತ್ತಿದೆ. ಈ ರೀತಿಯ ರಾಜ ವೈಭವ, ರಾಜಾಶ್ರಯ, ದಾನಧರ್ಮಗಳು, ಕಲಾಪೋಷಣೆ, ವಿದ್ವತ್ತಿಗೆ ಮನ್ನಣೆ, ಉಡುಪಿಯ ಇತಿಹಾಸದಲ್ಲಿಯೇ ಇದೇ ಮೊದಲು, ಪ್ರಾಯಶಃ ಇದೇ ಕೊನೆಯೂ ಇರಬಹುದು. ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ದೈನಂದಿನ ಕೈಂಕರ್ಯಗಳು, ನಿತ್ಯಶ್ರೀ, ನಿತ್ಯೋತ್ಸವ, ನಿತ್ಯ ಮಂಗಳಕರವಾಗಿ ಒಂದು ಭವ್ಯ ರಾಜಸಂಸ್ಥಾನದಂತೆ ಶ್ರೀಮಠವು ಮೆರೆಯುತ್ತಿತ್ತು.
ಮಂಗಳೂರಿನ ಸಮೀಪವಿರುವ ಶ್ರೀಕೃಷ್ಣಾಪುರ ಮಠದಲ್ಲಿರುವ ಶ್ರೀ ಮಠದ ಶಾಖೆಗೆ ಆಗಮಿಸಿದ ಅಪರಿಚಿತ ಭಿಕ್ಷುಕನೊಬ್ಬನು ಮಠದ ಅಂಗಣದಲ್ಲಿ ರಾತ್ರಿ ಭೋಜನಕ್ಕಾಗಿ ಮಠದಿಂದ ಅಕ್ಕಿ, ಬೇಳೆ, ಅನ್ನದ ಪಾತ್ರೆಗಳನ್ನು ಪಡೆದು, ಬೆಳಗ್ಗೆ ಆ ವ್ಯಕ್ತಿಯು ಕಾಣದೇ ಇದ್ದಾಗ ಶ್ರೀಮಠದಿಂದ ಪಡೆದ ಪಾತ್ರೆಗಳೆಲ್ಲವೂ ಚಿನ್ನದ ಪಾತ್ರೆಗಳಾಗಿ ಪರಿವರ್ತನೆಗೊಂಡಿದ್ದವು. ಇದರಿಂದ ಮಠದ ಸಂಪತ್ತು ವೃದ್ಧಿ ಆದದ್ದಲ್ಲದೇ, ಶ್ರೀ ಶ್ರೀಗಳವರ ದೈವಾನುಗ್ರಹ ಹಾಗೂ ಮಹಿಮೆಯನ್ನು ಸಾರುತ್ತಿದೆ.
ಅಪಾರ ಜ್ಞಾನ, ಸಂಪತ್ತು, ಭಕ್ತಿ, ವೈರಾಗ್ಯ, ತಪಸ್ಸು, ನೇರ ನುಡಿ, ಸ್ಪಷ್ಟ ಅಧಿಕಾರವಾಣಿ, ವಿದ್ಯಾಪೋಷಣೆ, ಕಲೆಗಳಿಗೆ ಪ್ರೋತ್ಸಾಹ, ಉದಾರತೆ, ಘನಸ್ತಿಕೆ ಮತ್ತು ಪ್ರಾಮಾಣಿಕತೆ ಮತ್ತಿತರ ಗುಣಗಳಿಂದ ಪೂರ್ಣವಾಗಿದ್ದ ಶ್ರೀ ಶ್ರೀಗಳವರ ವ್ಯಕ್ತಿತ್ವದ ಆಳ ಮತ್ತು ಎತ್ತರ ಇಂದಿನ ಕಾಲದಲ್ಲಿ ಕಲ್ಪನೆಗೂ ಮೀರಿದ ವಿಷಯವಾಗಿದೆ.
ಶ್ರೀ ಶ್ರೀಗಳವರು ತಿರುಪತಿ ಶ್ರೀನಿವಾಸದ ದರ್ಶನ ಪೂರೈಸಿಕೊಂಡು ಬೆಂಗಳೂರಿಗೆ ಆಗಮಿಸಿದಾಗ ಅಸ್ವಸ್ಥರಾದ ಕಾರಣ ಅವರ ಶಿಷ್ಯರಾದ ಪ್ರಾತಃ ಸ್ಮರಣೀಯ ಶತಾಯುಷಿ ಪುತ್ತಿಗೆ ಮಠದ ಶ್ರೀ ಶ್ರೀ ಸುಧೀಂದ್ರ ತೀರ್ಥರು ಇಲ್ಲೇ ಇದ್ದು ತಮ್ಮ ಗುರುಗಳ ವಿಶೇಷ ಆರೈಕೆ ಮತ್ತು ಸೇವಾ ಕೈಂಕರ್ಯ ಮಾಡುತ್ತಿದ್ದರು. ಅದೇ ಸಮಯದಲ್ಲಿ ಇವರ ಶಿಷ್ಯರಾದ ವಿದ್ವಾನ್ ಜಂಬುಖಂಡಿ ವಾದಿರಾಜಾಚಾರ್ಯರು ಕೂಡಾ ಭಾಗಿಗಳಾಗಿ ಗುರುಗಳ ಸೇವೆ ಮಾಡಿದರು. ಅಂತಿಮ ದಿನ ಹರಿದಿನ ಮಿಥುನ ಮಾಸದ ಕೃಷ್ಣಪಕ್ಷದ ಏಕಾದಶಿ 1881ರ ಸಂವತ್ಸರದಲ್ಲಿ ಶ್ರೀವಿದ್ಯಾಧೀಶ ತೀರ್ಥರು ಹರಿಸ್ಮರಣೆ ಮಾಡುತ್ತಾ ಹರಿಪುರ ಪ್ರಯಾಣ ಬೆಳೆಸಿದರು.
ಗುಂಡೋಪಂತ ವಂಶಸ್ಥರಿಂದ ಶ್ರೀ ಶ್ರೀಗಳವರಿಗೆ ದಾನವಿತ್ತು ಗುಂಡೋಪಂತರ ಛತ್ರದಲ್ಲಿ ಕಂಗೊಳಿಸುತ್ತಿರುವ ಸಮ್ಯರ್ಗ ಜ್ಞಾನಪರರಾದ ಶ್ರೀವಿದ್ಯಾಧೀಶ ತೀರ್ಥರ ಭವ್ಯ ಬೃಂದಾವನವು ಬೆಂಗಳೂರಿನಲ್ಲಿಯೇ ಪ್ರಥಮ ಹಾಗೂ ಏಕೈಕ ಮಾಧ್ವಯತಿಗಳ ಮೂಲ ಬೃಂದಾವನವಾಗಿದ್ದು, ಭಕ್ತಜನರಿಗೆ ಇಂದಿಗೂ ವರಪ್ರದಾಯಕ ಸ್ಥಳವಾಗಿದ್ದು, ಶ್ರೀಶ್ರೀಗಳವರು ನಮ್ಮನ್ನೆಲ್ಲಾ ಹರಸುತ್ತಿದ್ದಾರೆ.
ಲೇಖನ: ಸಿಎ ಕೆ. ವೇದವ್ಯಾಸ ಆಚಾರ್ಯ,
ಅಧ್ಯಕ್ಷರು,
ಶ್ರೀಕೃಷ್ಣಪ್ರಜ್ಞ ಪ್ರತಿಷ್ಠಾನ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post