ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶ್ರೀವಿಜಯೀಂದ್ರತೀರ್ಥರು ಗುರುರಾಜರೂ ಹೌದು! ರಾಜಗುರುಗಳೂ ಹೌದು ! ಎಲ್ಲಾ ಶಾಸ್ತ್ರಗಳಲ್ಲಿ ತಲಸ್ಪರ್ಶಿ ಪಾಂಡಿತ್ಯ ಅವರದು. ಮಾಂತ್ರಿಕರನ್ನು ದಿಗ್ಭ್ರಮೆಗೊಳಿಸುವ ಮಂತ್ರಶಕ್ತಿ ಸಂಪನ್ನರು. ಸದ್‌ವೈಷ್ಣವ ಸಿದ್ಧಾಂತದಲ್ಲಿ ವೀರನಿಷ್ಠೆಯವರು, ಪ್ರಮಾಣಪ್ರಮೇಯಗಳ ಪರಿಜ್ಞಾನ ಸಂಪನ್ನರು. ಆಡಿದ ಮಾತೆಲ್ಲ ಗ್ರಂಥವಾಗುವ ಧೀಮಂತರು, ವಿಮತೀಯ ವಿದ್ವಾಂಸರನ್ನೂ ಪುರಸ್ಕರಿಸುವ ಉದಾರಿಗಳು. ಸಾಮಾನ್ಯ ಭಕ್ತರಿಗೆ ಶ್ರೀಹರಿವಾಯುಗಳ ಅನುಗ್ರಹ ತಲುಪಿಸುವ ಹರಿದಾರಿಗಳು.
ಪರಕೀಯರ ಆಕ್ರಮಣ ವೇದ ಸಂಸ್ಕೃತಿಯ ನಾಶ. ಕುಹಕಿಗಳು, ಸ್ವಾರ್ಥಕ್ಕೋಸ್ಕರ ದೇಶದ್ರೋಹಿಗಳಾಗಿ ಪರದೇಶೀಯರ ಸಂಸ್ಕೃತಿಯನ್ನು ಅವಲಂಬಿಸಿ ರಾಷ್ಟ್ರವಿಘಾತಕರಾಗಿದ್ದಾರೆ. ಇದನ್ನು ತಡೆಯಲು ಶ್ರೀವಿಜಯೀಂದ್ರತೀರ್ಥರು ತೋರಿದ ಮಾರ್ಗ ಐಕ್ಯಮತ್ಯ, ರಾಷ್ಟ್ರಪ್ರೇಮ, ದೈವಭಕ್ತಿ ಮತ್ತು ಯುವಕರಲ್ಲಿ ಸದ್ಭಾವನೆ ಉಂಟು ಮಾಡಿತು, ವಿಜಯನಗರದ ರಕ್ಷಣೆಗೆ ಬಹಳಷ್ಟು ಶ್ರಮಿಸಿದ ಶ್ರೀವಿಜಯೀಂದ್ರರ ಉಪದೇಶ ಎಲ್ಲಾ ಮಾಂಡಲೀಕರನ್ನು ಐಕ್ಯಮತ್ಯ ಮತ್ತು ಕೆಚ್ಛೆದೆಯ ಸಾಹಸ ಪ್ರದರ್ಶನಕ್ಕೆ ಕಾರಣವಾಯಿತು. ಯಾವುದೇ ರಾಜ್ಯಗಳ ಅವನತಿಗೆ ಕಾರಣ, ಸನಾತನ ಸಂಸ್ಕೃತಿಯ ತಿರಸ್ಕಾರ, ಇದು ಆಗಬಾರದು ಎಂಬ ಸಾಮಾಜಿಕ ಪ್ರಜ್ಞೆಯನ್ನು ತೋರಿಸಿದವರು ಶ್ರೀವಿಜಯೀಂದ್ರರು.
ದ್ವೈತ ದುಂದುಭಿಯನ್ನು ಅವ್ಯಾಹತವಾಗಿ ಮೊಳಗುವಂತೆ ಮಾಡಿದವರೇ ಶ್ರೀವಿಜಯೀಂದ್ರ ತೀರ್ಥರು, ಇವರ ಹರಿತವಾದ ಶೈಲಿ, ಕೂಲಂಕುಷ ವಿಮರ್ಶಾದೃಷ್ಟಿ, ಸ್ವಸಿದ್ಧಾಂತ ನಿಷ್ಠೆ, ಸಂಪ್ರದಾಯ ಸಂರಕ್ಷಣಾ ದೀಕ್ಷೆಗಳೆಲ್ಲವೂ ಸಮಕಾಲೀನ ಶೈವ, ಅದ್ವೈತ ವಿಶಿಷ್ಟಾದ್ವೈತ ದಿಗ್ಧಂತಿ ಪಂಡಿತರನ್ನೂ ಮೂಕೂಭೂತರನ್ನಾಗಿ ಮಾಡಿತು. ಅವರು ತರ್ಕ, ಮೀಮಾಂಸಾ ಶಾಸ್ತ್ರಗಳಲ್ಲಿ ಎಂತಹ ಪ್ರಕಾಂಡ ಪಂಡಿತರೋ ಅಂತೆಯೇ ಕಾವ್ಯ ನಾಟಕ ಅಲಂಕಾರಾದಿಗಳಲ್ಲಿಯೂ ಪರಿಣಿತರು. ಆದ್ದರಿಂದಲೇ ಅವರು ಬಗೆಬಗೆಯ ಸಾಹಿತ್ಯ ಮಾಧ್ಯಮಗಳನ್ನು ಉಪಯೋಗಿಸಿಕೊಂಡು ಮಧ್ವರಾದ್ಧಾಂತದ ಸರ್ವತೋಮುಖ ವಿಕಾಸಕ್ಕೆ ಕಾರಣರಾದವರು.
ಶ್ರೀ ವಿಜಯೀಂದ್ರ ಮಹಾಸ್ವಾಮಿಗಳು ಆಸ್ತಿಕ ಸಮಾಜದ ಅಕ್ಷಯ ಆಸ್ತಿ. ಗುರುಗಳು ವೇದಾಂತ ಸಾಮ್ರಾಜ್ಯದ ದಿಗ್ಗಜರೆನಿಸಿದ, ವ್ಯಾಸತ್ರಯ ರಚಿಸಿದ, ಶ್ರೀವ್ಯಾಸರಾಜಗುರುಸಾರ್ವಭೌಮರು. ಶಿಷ್ಯ ಪ್ರಶಿಷ್ಯರ ವೈಭವವೂ ಅಂತಹದ್ದೇ, ಮಹಾಜ್ಞಾನಿಗಳಾದ ವ್ಯಾಖ್ಯಾತರಾದ ಶ್ರೀ ಸುಧೀಂಧ್ರ ಸ್ವಾಮಿಗಳಂತಹ ಶಿಷ್ಯರನ್ನೂ, ಅತ್ಯಂತ ದಯಾಳುಗಳಾದ ಭಕ್ತರಿಗೆ ಸರ್ವಾಭಿಷ್ಟವನ್ನು ಕೊಡತಕ್ಕಂತಹ ಶ್ರೀ ರಾಘವೇಂದ್ರ ಸ್ವಾಮಿಗಳ ಪರಮಗುರುಗಳು ಅಂತ ಅಂದರೇ ಶ್ರೀ ವಿಜಯೀಂದ್ರ ಮಹಾಸ್ವಾಮಿಗಳ ಸೌಭಾಗ್ಯಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ, ಎಣೆ ಇಲ್ಲದ ವೈಭವ ಇವರದ್ದು, ಶ್ರೀಗಳನ್ನು ದಿನನಿತ್ಯ ನೆನಪಿಸಿಕೊಳ್ಳದೇ ಇರುವ ಮಾಧ್ವ ಸಾಧಕವರ್ಗವೇ ಇಲ್ಲ ಎಂದರೆ ತಪ್ಪಾಗಲಾರದು.
ತಾತ್ವಿಕ ಪ್ರಪಂಚದಲ್ಲಿ ವಿಶೇಷ ಸಾಧನೆಗೈದಂತೆ ಶ್ರೀ ವಿಜಯೀಂದ್ರ ತೀರ್ಥರು ಸಾಮಾಜಿಕವಾಗಿಯೂ ಜನರಲ್ಲಿ ಭಕ್ತಿ ಸಿದ್ಧಾಂತ ಪ್ರತಿಪಾದನೆಯಲ್ಲಿ ಹಿಂದಿಲ್ಲ, ಇಂದಿನ ಗೌಡಸಾರಸ್ವತ ಮಠವಾದ ಕಾಶೀಮಠದ ಮೂಲಸ್ಥಾಪನೆಯು ಶ್ರೀ ವಿಜಯೀಂದ್ರರಿಂದಲೇ ಆಯಿತೆಂಬುವುದು ಅವರ ಸಾಮಾಜಿಕ ಚಿಂತನೆಗೆ ದ್ಯೋತಕವಾಗಿದೆ.
ಕಾರುಣ್ಯ ಸಿಂಧುಗಳಾದ ಶ್ರೀ ವಿಜಯೀಂದ್ರರ ಮಹಿಮೆ ಅಪಾರ. ಸಾಮರಸ್ಯ ಸೌಹಾರ್ಧತೆಗೆ ಮಾದರಿಯಾದವರು. ಮಾನವೀಯತೆಯ ಪರಾಕಾಷ್ಠತೆ, ಕಲೆಯ ಎಲ್ಲಾ ಪ್ರಕಾರಗಳಿಗೆ ಅವರು ಕೊಟ್ಟು ಪ್ರೋತ್ಸಾಹ ಸಂಸ್ಕೃತಿಯ ಉಳಿವಿಗೆ ಕೊಟ್ಟ ದೊಡ್ಡ ಕೊಡುಗೆ, ಸ್ನೇಹ ಅಭಿಮಾನಕ್ಕೆ ಮತ್ತೊಂದು ಹೆಸರೇ ಶ್ರೀ ವಿಜಯೀಂದ್ರರು.
ಶ್ರೀ ರಾಯರ ‘ಇಂದು ಎನಗೆ ಗೋವಿಂದದಂಥ ಕೃತಿಗೆ ಶ್ರೀ ವಿಜಯೀಂದ್ರರ ‘‘ಪಾಪ ವಿಮೋಚನ ಸ್ಫೂರ್ತಿಯಾಗಿದೆ ಎಂದರೆ ಇನ್ನು ವೇದಾಂತ ಗ್ರಂಥಗಳ ಬಗ್ಗೆ ಹೆಚ್ಚೇನು ಹೇಳುವುದು.
ಕುಂಭಕೋಣದಲ್ಲಿ ದ್ವೈತಸಿದ್ಧಾಂತ ಪತಾಕೆಯನ್ನು ಶತಮಾನಗಟ್ಟಲೆ ಹಾರುವಂತೆ ಮಾಡಿದ್ದು ಇವರ ಪಾಠ ಪ್ರವಚನಗಳ ಫಲಶ್ರುತಿ. ಕುಂಭಕೋಣದ ಪ್ರಭುಗಳೆಂದೇ ಖ್ಯಾತರಾದ ಇವರ ಮಹಿಮೆಯನ್ನು ಅಲ್ಲಿನ ಕಲ್ಲುಬಂಡೆಗಳೂ ಸಹ ಇಂದಿಗೂ ಸಾರುವುವು.
ಗ್ರಂಥ ರಚನೆ ಶ್ರೀ ವಿಜಯೀಂದ್ರತೀರ್ಥರ ಸಾಧನೆಗಳ ಕಿರೀಟದ ಮಹಾಮಣಿ, ಒಂದಲ್ಲ, ಎರಡಲ್ಲ, ನೂರಾನಾಲ್ಕು ಗ್ರಂಥಗಳನ್ನು ರಚಿಸಿದ ಕೀರ್ತಿ ಇವರದು. ಅವು ಕೇವಲ ಗ್ರಂಥಗಳಾಗಿರದೇ ಗ್ರಂಥರತ್ನಗಳಾಗಿವೆ ಎಂಬ ಶ್ರೀ ಗುರುಗುಣಸ್ತವನದ ಮಾತು ಅಕ್ಷರಶಃ ನಿಜವಾದುದು. ಸಂಖ್ಯೆ ಹಾಗೂ ಸತ್ತ್ವ ಎರಡರಲ್ಲೂ ಸಹ ಹಿರಿಮೆಯನ್ನು ಹೀಗೆ ಕಾಪಾಡಿಕೊಂಡವರ ಸಂಖ್ಯೆ ವಾಙ್ಮಯ ಪ್ರಪಂಚದಲ್ಲಿಯೇ ಅದ್ಭುತವೆನ್ನಿಸುವಂತಹುದು .ಶ್ರೀ ವಾದಿರಾಜರ ಸಹಪಾಠಿಗಳಾಗಿ ಶ್ರೀ ವಿಜಯೀಂದ್ರರ ಸ್ಮರಣೆ ಸಾರ್ಥಕ. ಕರ್ತವ್ಯ ಕೂಡ ಆದರೆ ಗ್ರಂಥಸಂರಕ್ಷಣೆಯ ಬಗ್ಗೆ ಆಸ್ಥೆ ಇಲ್ಲದ ನಮ್ಮ ಜನತೆಯ ಔದಾಸೀನ್ಯದಿಂದಾಗಿ ಆ ಬಗ್ಗೆ ವಿಶೇಷ ವಿವರಗಳು ಇಂದು ಲಭ್ಯವಾಗಿಲ್ಲ. ಅವರಿಂದ ರಚಿತ ಎಂಬುದಾಗಿ ಕೆಲವು ಕೃತಿಗಳು ಮಾತ್ರ ಇಂದು ಉಪಲಬ್ಧವಿದೆ.
ಕಾವೇರಿ ತೀರದಲ್ಲಿ ಜನಿಸಿದ್ದ ಇವರು ಅದೇ ಕಾವೇರಿ ತೀರದ ಕುಂಭಕೋಣದ ತಮ್ಮ ಮಠದಲ್ಲಿ ಶ್ರೀಮೂಲರಘುಪತಿಯ ಪೂಜಾದಿಗಳನ್ನು ಮುಗಿಸಿ, ಮೌನಯುಕ್ತ ಶ್ರೀಹರಿಯಧ್ಯಾನಾಸಕ್ತರಾಗಿ ಕುಳಿತು, ಓಂಕಾರೋಚ್ಛಾರಣೆ ಮಾಡುತ್ತಾ ಮಾಡುತ್ತಾ ಭೌತಿಕ ದೇಹವನ್ನು ತೊರೆದು ಪರಗತಿಗೆ ತೆರಳಿದ ಇಚ್ಛಾಮರಣಿಗಳು. ಶ್ರೀಸುಧೀಂದ್ರತೀರ್ಥರು ಶಾಸ್ತ್ರೋಕ್ತ ರೀತಿಯಲ್ಲಿ, ವಿಶಿಷ್ಟ ಸುಂದರ ಬೃಹತ್ ಬೃಂದಾವನವನ್ನು ಸ್ಥಾಪಿಸಿದರು. ಬೃಂದಾವನದ ಎದುರಿಗೆ ಶ್ರೀ ಲಕ್ಷ್ಮೀನಾರಾಯಣದೇವರ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ. ಇದು ಇಂದಿಗೂ ಬೃಂದಾವನದಲ್ಲಿ ಸದಾ ವಿಷ್ಣುಪರ ಚಿಂತನೆಯನ್ನು ಮಾಡುವ ವಿಷ್ಣುತತ್ಪರರು ಎಂಬುದು ಸೂಚಿತ ಹಾಗೂ ‘ವಿಠ್ಠಲ ‘ಶ್ರೀವಿಷ್ಣುತೀರ್ಥರು ‘ಶ್ರೀವಿಜಯೀಂದ್ರರು ಹೀಗೆ ಮೂರು ಬಾರಿ ಜನ್ಮಾಂತರವಾದರೂ ವಿಷ್ಣುವಿಕಾರವಿಲ್ಲದ ಕೇವಲ ವಿಷ್ಣು ವಿಜಯಕಾರರಿವರು ಎಂಬುದೂ ತಿಳಿಯುತ್ತದೆ. ಈ ರೀತಿಯಲ್ಲಿ ಬೃಂದಾವನದಲ್ಲಿ ತೇಜೋರೂಪದಿಂದ ಇದ್ದು ತಮ್ಮ ಭಕ್ತರಿಗೆ ಕಾಮಧೇನು ಕಲ್ಪವೃಕ್ಷವಾಗಿ ಅನುಗ್ರಹಿಸುತ್ತಿದ್ದಾರೆ.
ಶ್ರೀ ವಿಜಯೀಂದ್ರರ ವ್ಯಕ್ತಿತ್ವ
ಶ್ರೀವಿಜಯಿಂದ್ರತೀರ್ಥರು ಕುಬೇರನಂತೆ, ದಾತರಾರು, ಧರೆಯಂತೆ ಕ್ಷಮಾಶೀಲರು, ಅವೈದಿಕವಾದ, ಅಧರ್ಮ, ಭಗವದ್ವೇಷನಿರಾದವರನ್ನು ಕಂಡಾಂಗ ಅವರ ಕೋಪ ಪ್ರಲಯಾಗ್ನಿ ಸಮಾನವಾಗುತ್ತಿತ್ತು. ಹಿಮವತ್ಪರ್ವದಂತೆ ಧೈರ್ಯಶಾಲಿಗಳು, ಯುಧಿಷ್ಠಿರನಂತೆ ಸತ್ಯಶೀಲರು. ಸಹಸ್ರಫಣಿಯಾದ ಆದಿಶೇಷನಂತೆ ವಾಗ್ವೈಖರೀ, ವಿರಾಜಿತರವರು. ಜಯ ಗಳಿಸುವುದರಲ್ಲಿ ಅಂಗಾರಕನಂತೆ ಪರಾಕ್ರಮಿಗಳು, ಭೂಸುರರ ಭೂಪತಿಗಳ ಸಭೆಗಳಲ್ಲಿ ವಾದ ಮತ್ತು ಜ್ಞಾನವಿಷಯದಲ್ಲಿ, ವಾಯುದೇವರಂತೆ ಸಮರ್ಥರು. ಐಶ್ವರ್ಯದಲ್ಲಿ ಸಂಪದಧಿದೇವತೆ ಲಕ್ಷ್ಮೀಯಂತೆ ಪೂರ್ಣರು, ಶ್ರೇಷ್ಠದಾನಿಗಳು, ಸರ್ವಶಾಸ್ತ್ರವನ್ನು ಚೆನ್ನಾಗಿ ತಿಳಿದವರು. ಶ್ರೀಶೇಷಶಾಯಿಯಾದ ರಮಾರಮಣವನ್ನು ಪೂಜಿಸಿ, ಸಂತೋಷಪಡಿಸಿ, ಸರ್ವಲೋಕಗಳಲ್ಲಿ ಸರ್ವರಿಂದ ಪೂಜ್ಯರಾದ ಶ್ರೀವಿಜಯಿಂದ್ರ ಮುನೀಂದ್ರರು ಜಗತ್ತಿನಲ್ಲಿ ಮಾನವೋತ್ತಮರಿಂದ ಮಾನಿತರಾದರು. ಇಂಥಾ ಮಹಿಮೆಯು ಅವರಿಗೆ ಶ್ರೀಬ್ರಹ್ಮಕರಾರ್ಚಿತ, ಶ್ರೀಮೂಲರಾಮಚಂದ್ರ ಮತ್ತು ಶ್ರೀ ಸರ್ವಜ್ಞರಕಾರ್ಚಿತ ಶ್ರೀ ದಿಗ್ವಿಜಯ ರಾಮದೇವರ ಪೂಜಾಫಲದಿಂದ ಲಭ್ಯವಾಯಿತು. ಶ್ರೀವಿಜಯಿಂದ್ರರು ವೈದಿಕ ಸತ್ತತ್ವಗಳು, ಧರ್ಮ, ಸಂಸ್ಕೃತಿಗಳನ್ನು ರಕ್ಷಣ-ಪೋಷಣ-ಪ್ರಾಸಾರಾದಿಗಳಿಂದ ರೂಢಮೂಲವಾಗುವಂತೆ ಮಾಡಿದ ಮಹಾನುಭಾವರು. ಅವರ ಅಪ್ರತಿಹತ ಪಂಡಿತ್ಯ ಪ್ರತಿಭೆಗಳು, ಸರ್ವತೋಮುಖವಾದುವು. ‘‘ಸರ್ವತಂತ್ರ ಸ್ವತಂತ್ರ ವೈದಿಕ ಮತಸ್ಥಾಪನಾಚಾರ್ಯರು’’ ಎಂಬ ಅವರ ಬಿರುದು ಅನ್ವರ್ಥಕವಾದುದು. ಹದಿನಾರನೆಯ ಶತಮಾನದಲ್ಲಿ ಅವರ ಕೀರ್ತಿ ಅಜರಾಮರವಾಗಿತ್ತು. ಅದು ಚತುಃಷಷ್ಠಿ ಕಲೆಗಳಲ್ಲಿ ಅವರನ್ನು ಸರಿಗಟ್ಟುವವರೇ ಇರಲಿಲ್ಲವೆಂದು ಹೇಳಬಹುದು.
ಶ್ರೀವ್ಯಾಸರಾಜಗುರುಸಾರ್ವಭೌಮರ, ಶ್ರೀಸುರೇಂದ್ರಯತಿಚಕ್ರವರ್ತಿಗಳಂತಹ ಜಗನ್ಮಾನ್ಯರಿಂದ ತಯಾರಾದ ಶ್ರೀವಿಜಯಿಂದ್ರರ ವ್ಯಕ್ತಿತ್ವ ಬಹುಮುಖವಾದುದು. ಸುಮಾರು ತೊಂಭತ್ತೇಳು ವರ್ಷಗಳ ತುಂಬುಜೀವನದಲ್ಲಿ ಅವರು ಸಾಧಿಸಿದ, ಮಾಡಿದ ಅಸದೃಶ ಕಾರ್ಯಗಳನ್ನು ವಿಮರ್ಶಿಸಿದಾಗ ಆ ವಿಭೂತಿಪುರುಷರ ಭವ್ಯ ವ್ಯಕ್ತಿತ್ವ ನಮ್ಮ ಚಿತ್ತಭಿತ್ತಿಯಲ್ಲಿ ಚೆನ್ನಾಗಿ ಚಿತ್ರಿತವಾಗುವುದು. ಸಕಲ ಶಾಸ್ತ್ರಗಳು, ಕಲೆಗಳಲ್ಲಿ ಪ್ರವೀಣರಾದ ಅವರು ವೈದಿಕ, ಸದ್ವೈಷ್ಣವ ಸಿದ್ಧಾಂತ ಸ್ಥಾಪನೆಗಾಗಿ ಅನೇಕ ಮತ ಪ್ರಚಾರಕರಾದ ಪ್ರಬಲ ವಾದಿಗಳೊಡನೆ ನಡೆಸಿದ ವಾಕ್ಯಾರ್ಥ-ವಾದಗಳು ಇತಿಹಾಸ ಪ್ರಸಿದ್ಧವಾದವು.
ಸಕಲ ಶಾಸ್ತ್ರಗಳ ಪ್ರಸಾರಕ್ಕಾಗಿ ಕುಂಭಕೋಣದಲ್ಲಿ ಅವರು ಸ್ಥಾಪಿಸಿದ ಸಂಸ್ಕೃತ ಮಹಾವಿದ್ಯಾಪೀಠವು ದಕ್ಷಿಣಭಾರತದಲ್ಲಿ ಪ್ರಖ್ಯಾತಿ ಗಳಿಸಿತ್ತು. ಶ್ರೀಯವರ ಸತ್ಸಂಪ್ರದಾಯ ದೀಕ್ಷೆ, ವಿದ್ಯಾಪ್ರಸಾರ, ವಿದ್ವಜ್ಜನ, ಆಶ್ರಿತಜನ ಸಂರಕ್ಷಣ, ಪೋಷಣಗಳಲ್ಲಿನ ಶ್ರದ್ಧೆಗಳು ಅವರಿಗೆ ಲೋಕಮಾನ್ಯತೆ ತಂದುಕೊಟ್ಟಿತು. ದ್ವೈತಸಿದ್ಧಾಂತವನ್ನು ಸುಭದ್ರಗೊಳಿಸಲು ಅವರಿಂದ ರಚಿತವಾದ ನೂರಾನಾಲ್ಕು ಪ್ರೌಢಪ್ರಬಂಧಗಳು ಇಂದಿಗೂ ದ್ವೈತಸಿದ್ಧಾಂತ ಮಹಾಮಂದಿರದ ಕಳಸಗಳಂತೆ ಕಂಗೊಳಿಸುತ್ತಿವೆ. ಶ್ರೀವಿಜಯಿಂದ್ರತೀರ್ಥರ ಮಾರ್ಗದರ್ಶನ-ಉಪದೇಶಾದಿಗಳಿಂದ ಭಾರತದ ಜನತೆ ವೈದಿಕ-ಆಧ್ಯಾತ್ಮಿಕ ಹಾಗೂ ಧಾರ್ಮಿಕ ಪ್ರಗತಿಯನ್ನು ಸಾಧಿಸಿತು.
Get In Touch With Us info@kalpa.news Whatsapp: 9481252093
Discussion about this post