ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಎಸ್’ಎಸ್’ಎಲ್’ಸಿ ಪರೀಕ್ಷಾ ಫಲಿತಾಂಶವನ್ನು ಆಗಸ್ಟ್ ಮೊದಲ ವಾರದಲ್ಲಿ ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಸೋಮವಾರ ಬೆಂಗಳೂರು ನಗರದ ವಿವಿಧೆಡೆಯ ಐದು ಎಸ್ ಎಸ್ ಎಲ್ ಸಿ ಮೌಲ್ಯಮಾಪನ ಕೇಂದ್ರಗಳಿಗೆ ಭೇಟಿ ನೀಡಿ ಮೌಲ್ಯಮಾಪನ ಪ್ರಕ್ರಿಯೆಯನ್ನು ವೀಕ್ಷಿಸಿ, ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯಾದ್ಯಂತ 220 ಮೌಲ್ಯಮಾಪನ ಕೇಂದ್ರದಲ್ಲಿ ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ವಿವಿಧ ವಿಷಯಗಳ ಮೌಲ್ಯಮಾಪನ ನಡೆಯುತ್ತಿದೆ ಎಂದರು.
ಇದರಲ್ಲಿ ಈಗಾಗಲೇ 120 ಕೇಂದ್ರಗಳಲ್ಲಿ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನು ಎರಡು ದಿನಗಳಲ್ಲಿ 180 ಕೇಂದ್ರಗಳಲ್ಲಿ ಮೌಲ್ಯಮಾಪನ ಪ್ರಕ್ರಿಯೆ ಮುಗಿಯಲಿದೆ. ಬೆಂಗಳೂರು ಮಹಾನಗರದ 28 ಕೇಂದ್ರಗಳಲ್ಲಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಮೌಲ್ಯಮಾಪನಕ್ಕೆ ಶೇ. 45ರಷ್ಟು ಶಿಕ್ಷಕರು ಹಾಜರಾಗಿದ್ದು, ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಮೌಲ್ಯಮಾಪನ ನಡೆಯುತ್ತಿದೆ ಎಂದರು.
ಇನ್ನು 10 ದಿನಗಳಲ್ಲಿ ರಾಜ್ಯದ ಎಲ್ಲ ಕೇಂದ್ರಗಳ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, 8.5 ಲಕ್ಷ ವಿದ್ಯಾರ್ಥಿಗಳ ಫಲಿತಾಂಶವನ್ನು ಆಗಸ್ಟ್ ಮೊದಲ ವಾರದಲ್ಲಿ ಪ್ರಕಟಿಸುವ ಆಲೋಚನೆ ಹೊಂದಲಾಗಿದೆ ಎಂದು ತಿಳಿಸಿದರು.
ಇಂದು ಸಚಿವರು ಬೆಂಗಳೂರಿನ ಮಲ್ಲೇಶ್ವರದ ಸ್ಟೆಲ್ಲಾ ಮೇರಿಸ್ ಪ್ರೌಢಶಾಲೆ, ಎಂಎಲ್ಎ ಪ್ರೌಢಶಾಲೆ, ನಿರ್ಮಲಾರಾಣಿ ಪ್ರೌಢಶಾಲೆ, ರಾಜಾಜಿನಗರದ ಎಸ್ ಜೆ ಆರ್ ಸಿ ಕಾಲೇಜು, ಸೇಂಟ್ ಆನ್ಸ್ ಪ್ರೌಢಶಾಲೆಗಳ ಮೌಲ್ಯಮಾಪನ ಕೇಂದ್ರಗಳಿಗೆ ಭೇಟಿ ನೀಡಿ ಮೌಲ್ಯಮಾಪನ ಪ್ರಕ್ರಿಯೆ ವೀಕ್ಷಿಸಿದರು.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
Get In Touch With Us info@kalpa.news Whatsapp: 9481252093
Discussion about this post