ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದ ಧಾರ್ಮಿಕ ಸಂಸ್ಥೆಗಳ ಅಭಿವೃದ್ದಿಗೆ ಬಿಜೆಪಿ ಸರಕಾರ ಪಣ ತೊಟ್ಟಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ. ಹೆಚ್ಚುವರಿಯಾಗಿ 142.59 ಕೋಟಿ ರೂಪಾಯಿಗಳ ಅನುದಾನವನ್ನು ಒದಗಿಸಿ ಆದೇಶ ಹೊರಡಿಸಲಾಗಿದೆ ಎಂದು ಮಾನ್ಯ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರಾದ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆಯನ್ನು ನೀಡಿರುವ ಅವರು, ಈ ಬಗ್ಗೆ ಅಧಿಕೃತ ಅದೇಶವನ್ನು ಹೊರಡಿಸಲಾಗಿದ್ದು, ರಾಜ್ಯದಲ್ಲಿರುವ ವಿವಿಧ ಸಮುದಾಯಗಳ 178 ಮಠಗಳಿಗೆ 108.24 ಕೋಟಿ ರೂಪಾಯಿಗಳು, 59 ದೇವಸ್ಥಾನಗಳಿಗೆ 21.35 ಕೋಟಿ ರೂಪಾಯಿಗಳು ಮತ್ತು 26 ವಿವಿಧ ಸಂಘ-ಸಂಸ್ಥೆಗಳು ಹಾಗೂ ಟ್ರಸ್ಟ್‌ಗಳಿಗೆ 13 ಕೋಟಿ ಒಟ್ಟು 142.59 ಕೋಟಿ ರೂಪಾಯಿಗಳ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ ಎಂದಿದ್ದಾರೆ.
ನಮ್ಮ ಸರಕಾರ ರಾಜ್ಯದಲ್ಲಿನ ವಿವಿಧ ದೇವಸ್ಥಾನಗಳು, ಮಠಗಳು ಹಾಗೂ ಹೊರ ರಾಜ್ಯಗಳಲ್ಲಿರುವ ಕರ್ನಾಟಕ ಛತ್ರಗಳ ಅಭಿವೃದ್ದಿಗಾಗಿ ಕಳೆದ 10 ವರ್ಷಗಳಲ್ಲೇ ಅತಿ ಹೆಚ್ಚು ಅನುದಾನವನ್ನು ನೀಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಹೊರ ರಾಜ್ಯದ ಪ್ರಸಿದ್ದ ಧಾರ್ಮಿಕ ಯಾತ್ರಾ ಸ್ಥಳಗಳಲ್ಲಿ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಕರ್ನಾಟಕ ಛತ್ರಗಳ ನಿರ್ಮಾಣ ಹಾಗೂ ಅಭಿವೃದ್ದಿಗೂ ವಿಶೇಷ ಆದ್ಯತೆಯನ್ನು ನೀಡಿದ್ದಾರೆ. ಒಂದು ವರ್ಷದ ಅವಧಿಯಲ್ಲಿ ರಾಜ್ಯವನ್ನು ದೇಶದಲ್ಲೇ ಪ್ರಮುಖ ಧಾರ್ಮಿಕ ಶ್ರದ್ದಾಕೇಂದ್ರವನ್ನಾಗಿಸುವತ್ತ ಸ್ಪಷ್ಟವಾದ ಹೆಜ್ಜೆಯನ್ನು ಇಡಲಾಗಿದೆ. ರಾಜ್ಯದ ಮುಜರಾಯಿ ಇಲಾಖೆಯ ಇತಿಹಾಸದಲ್ಲೇ ಬೃಹತ್ ಅಭಿವೃದ್ದಿ ಪರ್ವದ ಮೈಲಿಗಲ್ಲನ್ನು ನೆಡಲಾಗಿದೆ. ಕಾಶಿಯಾತ್ರೆ, ತಸ್ತೀಕ್ ಹಣ ಹೆಚ್ಚಳ ಸೇರಿದಂತೆ ಎಲ್ಲಾ ರೀತಿಯ ನೂತನ ಯೋಜನೆಗಳಿಗೂ ಮುಖ್ಯಮಂತ್ರಿಗಳು ಉತ್ತಮ ಸಹಕಾರ ನೀಡಿದ್ದಾರೆ ಎಂದರು.
ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರಕಾರ ರಾಜ್ಯದ ಧಾರ್ಮಿಕ ಕೇಂದ್ರಗಳ ಅಭಿವೃದ್ದಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ. ಕಳೆದ ಹಲವಾರು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಅತಿಹೆಚ್ಚು ಅನುದಾನ ನೀಡುವ ಮೂಲಕ ಎಲ್ಲ ಸಮುದಾಯದ ಧಾರ್ಮಿಕ ಭಾವನೆಗಳಿಗೂ ಆದ್ಯತೆ ನೀಡಿದ್ದಾರೆ. ರಾಜ್ಯದ ಮುಜರಾಯಿ ಇಲಾಖೆಗೆ ಹೆಚ್ಚಿನ ಮಹತ್ವ ನೀಡುವ ಮೂಲಕ ಉತ್ತಮ ಕಾರ್ಯಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಅತಿಹೆಚ್ಚು ಅನುದಾನ ನೀಡುವ ಮೂಲಕ ಇಲಾಖೆಯ ಅಭಿವೃದ್ದಿಗೆ ಹೆಚ್ಚಿನ ಸಹಕಾರ ನೀಡುತ್ತಿರುವುದಕ್ಕೆ ನಾನು ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post