ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದ ಎಡ ದಂಡೆಯ ಮುಖ್ಯ ಕಾಲುವೆ ಒಡೆದು ಅಪಾರ ಪ್ರಮಾಣದ ನೀರು ಮುನಿರಾಬಾದ್ ಪ್ರದೇಶದಲ್ಲಿ ನುಗ್ಗಿರುವುದರ ಬಗ್ಗೆ ವರದಿಯಾಗಿದೆ. ಜನರಲ್ಲಿ ಆತಂಕ ಹೆಚ್ಚಾಗಿ ತುಂಗಭದ್ರಾ ಡ್ಯಾಂ ಒಡೆದುಹೋಗಿದೆ ಎಂಬ ಸುಳ್ಳು ವದಂತಿಗೆ ಅಧಿಕಾರಿಗಳು ಅಂತಕ ದೂರ ಮಾಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ತುಂಗಭದ್ರಾ ಮಂಡಳಿಯ ಅಧಿಕಾರಿಗಳು ಯಾರು ಕೂಡ ವದಂತಿಯನ್ನು ನಂಬಬಾರದು ಮುಖ್ಯ ಕಾಲುವೆಯಲ್ಲಿ ಬಿರುಕು ಉಂಟಾಗಿ ಕಾಲುವೆ ಒಡೆದಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕದ ಹೆಸರಾಂತ ಪ್ರವಾಸಿ ತಾಣ ಹಂಪೆ, ಆನೆಗುಂದಿ, ನವಬೃಂದಾವನ ಮುನಿರಾಬಾದ್ ಮತ್ತು ಸುತ್ತಮುತ್ತಲಿನ ಪ್ರದೇಶವು ಮಳೆಯ ನೀರಿನಿಂದ ಸುತ್ತುವರೆದಿದೆ. ರಾಜ್ಯದಾದ್ಯಂತ ಸುರಿದ ಭಾರೀ ಮಳೆಯ ಕಾರಣದಿಂದಾಗಿ ಹೊಸಪೇಟೆಯ ತುಂಗಾಭದ್ರಾ ಅಣೆಕಟ್ಟಿನ 33 ಗೇಟ್ ಮೂಲಕ ಹರಿಯುತ್ತಿರುವ ನೀರು ಹೆಚ್ಚಾಗುತ್ತಿದ್ದು ಹಿಂಬದಿಯಿಂದ ಬರುತ್ತಿರುವ ನೀರಿನ ಮಟ್ಟ ಅದಕ್ಕಿಂತ ಹೆಚ್ಚಾಗಿದೆ.
ಈ ದಿನ ಮುನಿರಾಬಾದ್ ಪ್ರದೇಶದಲ್ಲಿ ಕೆನಲ್ ಸಹ ಒಡೆದಿದ್ದು ಮುನಿರಾಬಾದ್ ಪ್ರದೇಶ ಜಲಾವೃತವಾಗಿದೆ. ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ಕೊಪ್ಪಳದ ಶಾಸಕರಾದ ಶ್ರೀ ರಾಘವೇಂದ್ರ ಹಿಟ್ನಾಳ್ ಸ್ಥಳದಲ್ಲಿ ಧಾವಿಸಿ ಮುನ್ನೆಚ್ಚರಿಕೆ ಕ್ರಮವಾಗಿ ಮುನಿರಾಬಾದ್ ಮತ್ತು ನದಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸವಾಗಿರುವ ಜನರನ್ನು ಸ್ಥಳಾಂತರ ಮಾಡಲು ಸೂಚಿಸಿದ್ದಾರೆ.
ಈ ಭಾಗದ ಜೀವನದಿಯಾದ ತುಂಗಭದ್ರೆಯ ಮಿತಿ ಮೀರಿದ ನೀರಿನ ಹರಿವಿನಿಂದಾಗಿ ಹೊಸಪೇಟೆ, ಕಂಪ್ಲಿ ಗಂಗಾವತಿಯ ಹಲವು ಕಡೆ ಹಲವು ಸಮಸ್ಯೆಗಳು ಉದ್ಭವಿಸಿ, ಸಮಸ್ಯೆ ಉಲ್ಭಣಗೊಂಡಿವೆ.
ಈ ಭಾಗದಲ್ಲಿ ಭತ್ತದ ಬೇಳೆಯು ಸರ್ವನಾಶವಾಗಿದ್ದು ಸಂಪೂರ್ಣವಾಗಿ ಹಾನಿಯಾಗಿದೆ. ಈಗ ರೈತರಿಗೆ ಸಾಲ ಮನ್ನಾವಾಗಿರುವ ಹಿನ್ನೆಲೆಯಲ್ಲಿ ಪರಿಹಾರ ಸಿಗುವುದು ತುಂಬಾ ಕಷ್ಟವಾಗಿದ್ದು ಇದರಿಂದಾಗಿ ಬಹಳ ನಷ್ಠ ಉಂಟಾಗಿದೆ ಎಂದು ತಿಳಿದುಬಂದಿದೆ.
ಹಾಗೆಯೇ ತುಂಗಭದ್ರಾ ನದಿಯ ನೀರಿನ ಮಟ್ಟ ಹೆಚ್ಚಾಗಿ ಅಲ್ಲಿನ ಜನವಸತಿಗಳಿಗೆ ನೀರು ನುಗ್ಗಿದ ಪರಿಣಾಮವಾಗಿ ಅನೇಕ ಮನೆಗಳಿಗೆ ತೊಂದರೆ ಉಂಟಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಮಳೆ ಹೆಚ್ಚಾಗಿ ಮಂತ್ರಾಲಯದ ಶ್ರೀರಾಘವೇಂದ್ರ ಗುರುಗಳ ಮಂದಿರವೂ ಸಂಪೂರ್ಣ ಹಾನಿಗೂಂಡಿದ್ದನ್ನು ಇಂದು ಜ್ಞಾಪಿಸಬಹುದು.
ಅದೇರೀತಿ ಈ ಭಾಗದ ಪ್ರಸಿದ್ಧ ಹುಲಿಗಿ, ಹೂಸುರಮ್ಮ ದೇವಸ್ಥಾನ ಮತ್ತು ಹಂಪೆಯ ವಿರೂಪಾಕ್ಷ ದೇವಸ್ಥಾನದ ಹತ್ತಿರವೆಲ್ಲಾ ನೀರು ಬಂದಿದ್ದು, ಹವಾಮಾನ ವರದಿಗಳ ಪ್ರಕಾರ ಈ ಭಾಗದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಆದರೆ ಒಳ ಹರಿವು ಹೆಚ್ಚಾಗಿರುವ ಕಾರಣ ಇನ್ನೂ 3-4 ದಿನಗಳು ಈ ಕಷ್ಟ ಎದುರಿಸಬೇಕಾಗುತ್ತದೆ.
ಭಾರೀ ಮಳೆಯಿಂದ ತತ್ತರಿಸಿರುವ ಮಲೆನಾಡು ಎಲ್ಲಾ ಕಡೆ ಜಲಾವೃತ ಮತ್ತು ನದಿನೀರಿನ ಮಟ್ಟ ಹೆಚ್ಚಾಗಲು ಕಾರಣೀಭೂತವಾಗಿದೆ. ಅನೇಕ ಕಡೆ ಹಳೆಯ ಸೇತುವೆ ಮೇಲಿನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅನೇಕ ಕಡೆಯಿಂದ ಬರುವ ಮಳೆನೀರಿನ ನದಿಗಳ ನೀರಿನ ಮಟ್ಟ ಹೆಚ್ಚಾಗುತ್ತಲಿದ್ದು, ಮುಂದೆ ಇನ್ನು ಪ್ರವಾಹವಾಗುವ ಸಾಧ್ಯತೆ ಹೆಚ್ಚಾಗಿರುವುದು ಕಂಡುಬಂದಿದೆ.
ಕಲ್ಪ ನ್ಯೂಸ್ ಜೊತೆಯಲ್ಲಿ ಮಾತನಾಡಿದ ಶಾಸಕ ರಾಘವೇಂದ್ರ ಹಿಟ್ನಾಳ್, ಜಿಲ್ಲಾಡಳಿತ ಈಗಾಗಲೇ ಮುನ್ನೆಚ್ಚರಿಕೆಯಾಗಿ ಅಧಿಕಾರಿಗಳಿಗೆ ಜಲಾವೃತವಾದ ಪ್ರದೇಶದಲ್ಲಿ ಪ್ರತಿಯೊಬ್ಬ ಅಧಿಕಾರಿಗಳ ತಪ್ಪದೇ ಹಾಜರಿರುವಂತೆ ಸೂಚಿಸಲಾಗಿದೆ. ಎಂತಹ ಪರಿಸ್ಥಿತಿಯಲ್ಲಿಯೂ ಸಹ ಜನರಿಗೆ ಸ್ಪಂದಿಸುವಂತೆ ನಿರ್ದೇಶನ ನೀಡಲಾಗಿದ್ದು, ಜನರ ಸುರಕ್ಷತೆ ಭದ್ರತೆಗೆ ಬೇಕಾಗುವ ಎಲ್ಲಾ ಕ್ರಮಗಳನ್ನು ಸ್ಥಳದಲ್ಲಿಯೇ ನಿರ್ಧಾರ ತೆಗೆದುಕೊಳ್ಳಲು ಸೂಚಿಸಲಾಗಿದೆ. ಪ್ರವಾಹ ಪರಿಸ್ಥತಿ ನಿಭಾಯಿಸಲು ವಿವಿಧ ಇಲಾಖೆ ಮತ್ತು ಸಂಘ ಸಂಸ್ಥೆಯ ಸಹಯೋಗದಲ್ಲಿ ತಂಡಗಳನ್ನು ರಚಿಸಲು ಉದ್ದೇಶಿಸಲಾಗಿದೆ. ಪ್ರವಾಹ ಪರಿಸ್ಥಿತಿಯ ಮೇಲೆ ಸದಾ ಕಾಲ ನಿಗಾ ವಹಿಸಲಾಗುವುದು ಎಂದು ತಿಳಿಸಿದರು.
ತುಂಗಭದ್ರಾ ಜಲಾಶಯದ ಎಡ ದಂಡೆಯ ಮುಖ್ಯ ಕಾಲುವೆ ಒಡೆದು ಅಪಾರ ಪ್ರಮಾಣದ ಹಾನಿಯಾಗಿರುವುದಕ್ಕೆ ಪರಿಹಾರ ಸಿಗಬೇಕು ಮತ್ತು ಕಾಲುವೆ ಒಡೆದಿರುವುದರ ಬಗ್ಗೆ ತನಿಖೆಯಾಗಬೇಕು. ಪ್ರತಿ ವರ್ಷವೂ ಈ ಭಾಗದಲ್ಲಿ ಕಾಲುವೆಗಳ ದುರಸ್ಥಿಕಾರ್ಯ ನಡೆಯುತ್ತಿದ್ದು ಸರಿಯಾಗಿ ಸರಿಪಡಿಸದೆ ನೀರನ್ನು ಹರಿಸುವುದರಿಂದ ಈ ಸಮಸ್ಯೆಗಳು ಉಲ್ಭಣವಾಗುತ್ತಿದೆ ಎಂದು ಆರೋಪಿಸಲಾಗಿದ್ದು, ಜನರು, ರೈತರು ಈ ಬಗ್ಗೆ ಎಚ್ಚೆತ್ತುಕೂಂಡು ಅಧಿಕಾರಿಗಳನ್ನು ಪ್ರಶ್ನೆಸಬೇಕು. ಈ ಪ್ರವಾಹ ತಿಳಿಯಾದ ತಕ್ಷಣ ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೂಳ್ಳಬೇಕೆಂದು ಜನರು ಅಭಿಪ್ರಾಯಪಟ್ಟಿದ್ದಾರೆ.
ವರದಿ: ಮುರಳೀಧರ್ ನಾಡಿಗೇರ್
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
Discussion about this post