ಮಂಡ್ಯ: ಈ ಲೋಕಸಭಾ ಕ್ಷೇತ್ರ ಇಡಿಯ ರಾಜ್ಯದಲ್ಲೇ ಹೈವೋಲ್ಟೇಜ್ ಕಣವಾಗಿ ಬದಲಾಗಿದ್ದು, ಒಂದು ರೀತಿಯಲ್ಲಿ ಧರ್ಮಯುದ್ಧದಂತೆಯೇ ಆಗಿದೆ. ಇಂತಹ ಸಂದರ್ಭದಲ್ಲಿ ನಿನ್ನೆ ಪಕ್ಷೇತರ ಅಭ್ಯರ್ಥಿಯಾಗಿ ತಮ್ಮ ಉಮೇದುವಾರಿಕೆ ಸಲ್ಲಿಸಿದ ಸುಮಲತಾ ಅಂಬರೀಶ್, ತಮ್ಮ ಪ್ರಬುದ್ಧ ಮಾತಿನ ಮೂಲಕ ತಾವು ಅಂಬರೀಶ್ ಅವರಿಗೆ ತಕ್ಕ ಪತ್ನಿ ಎಂಬುದನ್ನು ಸಾಬೀತು ಮಾಡಿದ್ದಾರೆ.
ನಾಮಪತ್ರ ಸಲ್ಲಿಸಿ ಆನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಸುಮಲತಾ, ನಾನು ನಿಮ್ಮೂರಿನ ಮಳವಳ್ಳಿ ಹುಚ್ಚೇಗೌಡರ ಸೊಸೆ, ಅಂಬರೀಷ್ ಧರ್ಮಪತ್ನಿ, ಅಭಿಷೇಕ್ ತಾಯಿ, ಈ ಮಣ್ಣಿನ ತಾಯಿ. ಮಂಡ್ಯ ಮಣ್ಣಿನ ಮಗಳಾಗಿ ಜಿಲ್ಲೆಗೆ ಬಂದಿದ್ದೇನೆ ಎಂದು ಮಾತನ್ನು ಆರಂಭಿಸುವ ಮೂಲಕ, ವಲಸಿಗರು ಎಂದು ವಿರೋಧಿಗಳ ಮಾಡಿದ್ದ ಆರೋಪಕ್ಕೆ ಮಾತಿನ ಆರಂಭದಲ್ಲೇ ತಿರುಗೇಟು ನೀಡಿದರು.
ಪ್ರತಿ ಮಾತನ್ನೂ ಸಹ ಅತ್ಯಂತ ಸೂಕ್ಷ್ಮವಾಗಿ ಆಡಿದ ಸುಮಲತಾ, ಅಂಬರೀಶ್ ಅವರಲ್ಲಿದ್ದ ಪ್ರಬುದ್ಧತೆ ತಮ್ಮಲ್ಲೂ ಇದೆ ಎಂಬುದನ್ನು ಸಾಬೀತು ಮಾಡಿದರು. ಎಲ್ಲೂ ಸಹ ಆವೇಶಭರಿತರಾಗಿ ಮಾತನಾಡದ ಅವರು, ಭಾವನಾತ್ಮಕವಾಗಿಯೇ ಹೇಳಬೇಕಾದ ಎಲ್ಲ ವಿಚಾರಗಳನ್ನೂ ಸಹ ಹೊರಹಾಕಿದ್ದಾರೆ.
ಇನ್ನು, ಸುಮಲತಾ ಪರ ನಿಂತಿರುವ ನಟ ದರ್ಶನ್ ಹಾಗೂ ಯಶ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗುತ್ತಿರುವ ವಿಚಾರವನ್ನು ಪ್ರಸ್ತಾಪಿಸಿದ ಸುಮಲತಾ, ದರ್ಶನ್ ಮತ್ತು ಯಶ್ ನನ್ನ ಮನೆಯ ಮಕ್ಕಳು. ಚುನಾವಣೆಗಾಗಿ ಸ್ಪರ್ಧಿಸಿರುವ ತಾಯಿಗೋಸ್ಕರ ಮಕ್ಕಳು ಬರೋದು ತಪ್ಪಾ ಎಂದು ಪ್ರಶ್ನಿಸಿದ ಅವರು, ನೀವಾದರೆ ಮಗನಿಗಾಗಿ ಪ್ರಚಾರ ಮಾಡಬಹುದು, ನನ್ನ ಮಕ್ಕಳು ಬರಬಾರದಾ ಎಂದು ನೇರವಾಗಿ ಸಿಎಂ ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದರು.
ಇದಷ್ಟೇ ಅಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್ ಮತ್ತು ಯಶ್ ವಿರುದ್ಧ ಟೀಕೆಗಳು ಕೇಳಿಬರುತ್ತಿರುವುದಕ್ಕೆ ನನಗೆ ತುಂಬಾ ನೋವಾಗುತ್ತಿದೆ. ಅವರ ಅಭಿಮಾನಿಗಳು ಎಲ್ಲೆಡೆ ಇದ್ದಾರೆ ಎಂಬುದನ್ನು ಮರೆಯಬೇಡಿ ಎಂದು ಚಾಟಿ ಬೀಸಿದರು.
ನಂತರ ಮಾತನಾಡಿದ ನಟ ಯಶ್, ನಾವು ಅಧಿಕಾರದ ಲಾಭಕ್ಕಾಗಿ ಇಲ್ಲಿಗೆ ಬಂದಿಲ್ಲ. ಅಂಬರೀಶ್ ಮನೆಯ ಮಕ್ಕಳಾಗಿ ಅವರ ಋಣ ತೀರಿಸಲು ಬಂದಿದ್ದೇವೆ. ನಾವೇನು ಅಂಟಾರ್ಟಿಕಾ ಅಥವಾ ಪಾಕಿಸ್ಥಾನದಿಂದೇನೂ ಬಂದಿಲ್ಲ. ನಾವು ಸಿನೆಮಾ ಕಲಾವಿದರು. ಮಂಡ್ಯದ ಕಬ್ಬಿನ ಹಾಲು ಕುಡಿದು ಬೆಳೆದಿದ್ದೇವೆ ಎಂದು ತಮ್ಮನ್ನು ಟೀಕಿಸಿದ್ದವರಿಗೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ನಟ ದರ್ಶನ್ ಮಾತನಾಡಿ, ನಾವಿಲ್ಲಿಗೆ ಯಾವುದೇ ಪಕ್ಷವಾಗಿ ಬಂದಿಲ್ಲ. ಪ್ರೀತಿಯಿಂದ ಬಂದಿದ್ದೇವೆ. ನಮ್ಮ ಬಗ್ಗೆ ಯಾರು ಏನೇ ಮಾತನಾಡಲಿ. ನಮಗೆ ಯಾವುದೇ ಕೋಪ, ಬೇಜಾರು ಇಲ್ಲ. ಯಾರಿಗೂ ಏನೂ ಎನ್ನುವುದಿಲ್ಲ. ಇಂದಿನಿಂದ ನಮ್ಮ ಪರೇಡ್ ಶುರುವಾಗಿದೆ. ಒಂದು ತಿಂಗಳ ಕಾಲ ನಿರಂತರವಾಗಿ ನಡೆಯಲಿದೆ ಎಂದರು.







Discussion about this post