ನಾವು ಎಲ್ಲೇ ಇರಲಿ, ಹೇಗೆ ಇರಲಿ, ಎಷ್ಟೇ ಬೆಳೆದಿರಲಿ, ಅದೇಷ್ಟೇ ಹಾಳಗಿರಲಿ, ಸಮಾಜದ ಎಂತಹ ವ್ಯಕ್ತಿಯಾದರೂ ಸರಿಯೇ ನಮಗೆ ನಮ್ಮ ಮನೆ, ಬಾಲ್ಯದ ಬದುಕು ಅನುಭವಿಸಲು ಅವಕಾಶ ಮಾಡಿಕೊಟ್ಟ ಆ ನಮ್ಮ ಸಮಾಜವನ್ನು, ಅಂದಿನ ದಿನಮಾನಗಳಲ್ಲಿ ನಾಲ್ಕಕ್ಷರ ಕಲಿಯಲು ಪೂರಕ ವೇದಿಕೆ ಮಾಡಿಕೊಟ್ಟ ಶಾಲೆಯನ್ನು, ಅಂದು ತಿದ್ದಿ ತೀಡಿ ಬುದ್ದಿ ಹೇಳಿಕೊಟ್ಟ ಗುರುಗಳನ್ನು, ಸಮಾಜದ ಜೊತೆಗೆ ಗುರುತಿಸಿಕೊಳ್ಳುವ ಹಂತದಲ್ಲಿನ ಆ ಗೆಳೆತನವನ್ನ ಮರೆಯಲು ಸಾಧ್ಯವೆ..?
ನಮ್ಮೂರಿನ ಒಂದು ನೆನಪು
ನನ್ನದು ಭದ್ರಾವತಿ ಅರಹತೋಳಲು ಎಂಬ ಗ್ರಾಮ. ಅಂದಿನ ನಮ್ಮ ಬಾಲ್ಯದ ಅವಧಿಯಲ್ಲಿ ಸಿಮೀತತೆ ಎನ್ನುವಷ್ಟು ಮನೆಗಳಿದ್ದವು, ಬಹುತೇಕ ಕೂಡು ಕುಟುಂಬಗಳೇ ಜಾಸ್ತಿ. ಸಾಲಾಗಿ ದೇವಸ್ಥಾನಗಳು, ಅದೇ ಅಂಗಳದಲ್ಲಿ ಶಿಶುವಿಹರ, ಕಂಡುಬರುತ್ತಿತ್ತು. ಬಾಲ್ಯದ ಬದುಕಲ್ಲಿ ಒಂದಿಷ್ಟು ಹೊಸತನ ಸೃಷ್ಟಿಸಿದ್ದ ನಮ್ಮೂರ ಸಮಾಜ ಹಾಗೂ ನಾ ಕಲಿತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೆನಪೇ ನಮ್ಮ ಇಂದಿನ ಈ ದಿನದ, ಈ ಕ್ಷಣದ ಬದುಕಿಗೆ ಒಂದು ಭದ್ರ ತಳಪಾಯ ಎನ್ನಬೇಕಾಗುತ್ತದೆ.
ಅಂದಿನ ಬದುಕು ಹಾಗೂ ಕಲಿಕೆಗೆ ಅದೇಷ್ಠೇ ವರ್ಷವಾದರೂ ಆಂತರಿಕ ತೃಪ್ತಿ ಮಹಾದಾನ ಸಿಗುವುದು ಅಲ್ಲಿ ಸಹಜವೇ ಆಗಿದೆ. ನಮ್ಮೂರು ಅಂದಿನ ಶಿಶುವಿಹಾರ ಮುಗಿಸಿದ ಗಳಿಗೆಯಲ್ಲೇ ಶಾಲೆಗೆ ಪಾದಾರ್ಪಣೆ ಮಾಡಿದ ಕ್ಷಣವನ್ನು ನನ್ನ ಹಿರಿಯರು ಬಿಚ್ಚಿಡುವುದು ಬಹುತೇಕ ಸಂತಸದ ಸಂಗತಿ. ವಯೋಸಹಜ ತುಂಟತನಗಳ ಬಗ್ಗೆ ಮನದಾಳದ ಖುಷಿಗಳನ್ನು ಕೆದಕುವ ಆ ಮಾತುಗಳು ನಿಜಕ್ಕೂ ಈಗ ಬರಹಕ್ಕೊಂದು ಸ್ಪೂರ್ತಿಯಾಗುತ್ತಿದೆ.
ಮೈ ಮನ ಪುಳಕಗೊಳಿಸುತ್ತದೆ.
ಊರಿನ ದ್ವಾರಬಾಗಿಲ ಗಡಿಯಲ್ಲೇ ಒಂದು ವಿಶಾಲವಾದ ಆವರಣದಲ್ಲಿ ನಾ ಕಲಿತ ಶಾಲೆಗೀಗಾ ನೂರರ ಸಂಭ್ರಮ. ಅಂದಿನ ದಿನಮಾನಗಳಲ್ಲಿ ನಮಗೊಂದು ವ್ಯವಸ್ಥಿತ ಕಲಿಕೆಯ ಕೊಠಡಿ ದಕ್ಕಿದ್ದು ಪುಣ್ಯವೆಂದುಕೊಳ್ಳಬೇಕು. ನೂರರ ಆರಂಭದಲ್ಲಿ ಊರ ಗದ್ದಿಗೇಶ್ವರ, ಆಂಜನೇಯ ಹಾಗೂ ಬಸವಣ್ಣನ ದೇವಸ್ಥಾನದಲ್ಲಿ ಶಾಲೆ ನಡೆದ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಹಿರಿಯರು ಹೇಳುತ್ತಾರೆ.
ಬರಹದ ಹಂಬಲ ಹೊಂದಿರುವ ಈ ಮನ ಒಂದನೇ ತರಗತಿಯ ಪ್ರವೇಶ ಹೇಗಿರಬಹುದೆಂಬ ಕಲ್ಪನೆ ಹಿಡಿದು ಒಂದಿಷ್ಟು ಹಿರಿಯರ ಜೊತೆ ಮಾತನಾಡಿದಾಗ ಸಿಗುವ ರೋಚಕ ಘಟನೆಗಳು ಈಗಲೂ ಮೈಮನ ಪುಳಕಗೊಳ್ಳುವಂತೆ ಮಾಡುತ್ತದೆ. ಶಾಲೆಗೆ ಹೋಗದೇ ತಪ್ಪಿಸಿಕೊಳ್ಳಲು ನಮ್ಮೂರ ತೇರಾ ಮನೆಯಲ್ಲಿ ಬಚ್ಚಿಕೊಂಡು ಬಡಿಸಿಕೊಂಡದ್ದನ್ನು ನೆನಪಿನಾಳಕ್ಕೆ ತರುವ ಪ್ರಯತ್ನವಷ್ಟೇ ಈ ಬರಹ.
ನನ್ನ ತಂದೆ ಪಕ್ಕದೂರಿನ ಶಾಲೆಯಲ್ಲಿ ಶಿಕ್ಷಕರು. ನನಗೆ ನಮ್ಮ ಊರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಒಂದನೇ ತರಗತಿಗೆ ಸೇರಿಸಿದರು. ಶಿಶುವಿಹಾರದ ಅಭ್ಯಾಸವಿದ್ದರಿಂದ ಶಾಲೆಗೆ ಹೋಗದೇ ತಪ್ಪಿಸಿಕೊಂಡರೇ ಬಡಿಯುವ ನಮ್ಮೂರ ಹಿರಿಯರ ಬೆದರಿಕೆ ಇದ್ದುದರಿಂದ ಕಲಿಕೆ ಒಂದಿಷ್ಟು ಸುಲಭ ಹಾಗೂ ಸುಲಲಿತ ಎನಿಸತೊಡಗಿತ್ತು. ಅಂದಿನ ದಿನಮಾನಗಳಲ್ಲಿನ ನೆನಪುಗಳನ್ನು ಕಷ್ಟಪಟ್ಟು ಹುಡುಕಿದಾಗ ಇಷ್ಟವಾಗುವ ಒಂದಿಷ್ಟು ಪಾತ್ರಗಳ ಬಗ್ಗೆ ನಿಮ್ಮೊಂದಿಗೆ ಮನಬಿಚ್ಚಿ ಹಂಚಿಕೊಳ್ಳಬೇಕೆನಿಸುತ್ತದೆ.
ಶಾಲೆಯಲ್ಲಿ ನನಗೆ ಅತ್ಯಂತ ವಿಶೇಷ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದು, ಅಂದಿನ ಶಾಲೆಯ ನೌಕರ ಜಾವನ್ ನಿಂಗಣ್ಣ. ಶಾಲೆಯ ಆರಂಭಕ್ಕೆ, ಅಂತ್ಯಕ್ಕೆ, ಊಟಕ್ಕೆ ಬೆಲ್ಲು ಬಾರಿಸುತ್ತಿದ್ದ ನಿಂಗಣ್ಣ. ನಮ್ಮನ್ನು ಇಡೀ ದಿನ ಶಾಲೆಯೊಳಗೆ ಕೂಡಿಡಲು ಸರ್ಪಗಾವಲಾಗಿ ಬಾಗಿಲಲ್ಲಿಯೇ ನಿಂತಿರುತ್ತಿದ್ದ ಆ ಸನ್ನಿವೇಶವನ್ನು ಮತ್ತೆ ಮತ್ತೆ ಚಿತ್ರಣ ರೂಪದಲ್ಲಿ ಸೃಷ್ಠಿಸಿಕೊಳ್ಳುವ ಅಗತ್ಯ ಇದೇ ಎನಿಸುತ್ತದೆ. ಅಂದಿನ ದಿನಗಳಲ್ಲಿ ಇದೇ ನಿಂಗಣ್ಣ, ಶಾಲೆಗೆ ಬರದ ಅದೇಷ್ಟೋ ಒಂದನೇ ತರಗತಿ ಹುಡುಗರನ್ನು ಬೀದಿ ಬೀದಿಗೆ ತೆರಳಿ ಹೊತ್ತುಕೊಂಡು ಶಾಲೆಗೆ ಹೋಗುತ್ತಿದ್ದರಂತೆ (ನನ್ನನ್ನೂ ಸಹ ಶಾಲೆಗೆ ಹೊತ್ತುಕೊಂಡು ಹೋದ ಬಗ್ಗೆ ನಮ್ಮಮ್ಮ ಹೇಳುತ್ತಾರೆ).
ಈ ನಿಂಗಣ್ಣನ ಮಾಸಲು ಬಿಳಿಕಚ್ಚೆ, ಉದ್ದತೋಳಿನ ಅಂಗಿ, ಸಾದಾರಣ ಕಪ್ಪು ಬಣ್ಣ, ಊದ್ದ ಮೂಗು, ನಕ್ಕಿದ್ದಕ್ಕಿಂತ ಬೆದರಿಸಿದ್ದೇ ಹೆಚ್ಚು ಎನ್ನುವಂತಹ ಮನೋಭೂಮಿಕೆ ಮೂಡಲು ಅಂದಿನ ದಿನದ ಕಲಿಕೆಯ ಸನ್ನಿವೇಶಗಳನ್ನು ಇಂಚಿಂಚೂ ಬಿಡದೇ ಏಕಾಂತತೆಯಲ್ಲಿ ಕೆದಕಿದಾಗ ಕಾಡಿದ್ದೇನ್ನಬಹುದು.
ಅದೇ ರೀತಿ ಅಂದು ನಮ್ಮಗೆಲ್ಲಾ ಒಂದನೇ ತರಗತಿಗೆ ಪಾಠ ಮಾಡುತ್ತಿದ್ದ ಚೆನ್ನಯ್ಯ (ಚನ್ನಾರಾಧ್ಯ ಅವರು) ಹೇಗಿರಬಹುದೆಂಬ ಸ್ಪಷ್ಟ ಅಕೃತಿ ಗೋಚರವಾಗದಿದ್ದರೂ ಕಚ್ಚೆ ಪಂಜೆ, ಬಿಳಿ ಅಂಗಿ, ಅದರ ಮೇಲೊಂದು ಕಪ್ಪುಕೋಟು, ಕೈಲ್ಲೊಂದು ಉದ್ದನೇಯ ಕೋಲು… ಹಾಗೇ ಬೋರ್ಡಿನ ಮೇಲೆ ಬರೆದು ಹೇಳುತ್ತಿದ್ದರೆನ್ನಲಾದ ಅ ಆ ಇ ಈಗಳು ಒಂದಿಷ್ಟು ಕಾಡಿದಂತೆ ಕನವರಿಸಿದಂತೆ. ಅವರು ನಮ್ಮ ಒಂದನೇ ತರಗತಿಯ ಅವಧಿಯಲ್ಲಿ ನಿವೃತ್ತರಾಗಿದ್ದರು ಎನ್ನಲಾಗುತ್ತಿದೆ.
ಅಂದಿನ ದಿನಮಾನಗಳಲ್ಲಿನ ಗಣಿತ ಶಿಕ್ಷಕರು ಹಾಗೂ ಗೆಳೆಯನ ತಂದೆ ಶಂಕರಪ್ಪ ಮಾಸ್ಟರ್ ಸ್ಪಷ್ಟವಾಗಿ ಕಾಣತ್ತಾರೆ. ಬಿಳಿ ಜುಬ್ಬ, ಪೈಜಾಮ್ ಹಾಕಿಕೊಂಡು ಗಣಿತ ಪಾಠ ಮಾಡುತ್ತಿದ್ದ ಶಂಕರಪ್ಪ ಐದೋ ಅಥವಾ ಆರನೇ ತರಗತಿಯಲ್ಲಿ ಅರ್ಧದಿನ ನಮ್ಮನ್ನು ಒಂಟಿ ಕಾಲ ಮೇಲೆ ನಿಲ್ಲಿಸಿದ್ದು ಮತ್ತೇಲ್ಲೋ ನೆನಪಾಗುತ್ತದೆ.
ಅದೇ ಬಗೆಯಲ್ಲಿ ನಮಗೆ ತಿದ್ದಿ ತೀಡಿದ ಸುಶೀಲಮ್ಮ, ಅರುಣಾಚಲ, ಕರೆ ಬೀರನಹಳ್ಳಿ ಕೃಷ್ಣಪ್ಪ, ಬಸಪ್ಪ, ದೇವೋಜಿರಾವ್, ರಾಘವೇಂದ್ರರಾವ್, ಮಹೇಶ್ವರಪ್ಪ ಸೇರಿದಂತೆ ಹಲವರನ್ನು ಇಂದಿನ ಈ ಶತಮಾನದ ಸಂಭ್ರಮದಲ್ಲಿ ಸ್ಮರಿಸುವುದು, ಗೌರವಿಸುವುದು ನನ್ನಂತಹ ಸಾವಿರಾರು ವಿದ್ಯಾರ್ಥಿಗಳ ಪಾಲಿಗೆ ಪುಣ್ಯದ ಕೆಲಸವೇ ಹೌದು.
ಒಟ್ಟಾರೆ ನನ್ನ ಈ ಶಾಲೆಗೆ ನೂರಾರ ಸಂಭ್ರಮ. ನಮ್ಮೂರಲ್ಲಿ ನನ್ನದೇ ಎನ್ನುವಂತಹ ವಾತಾವರಣ ಸೃಷ್ಠಿಸಿದ ಗೆಳೆಯರ ಬಳಗ, ಅಂದು ಆಡುತ್ತಿದ್ದ ಬುಗುರಿ, ಚಿನ್ನಿದಾಂಡು, ಬಟ್ಟೆಬಾಲಿನ ಕ್ರಿಕೆಟ್, ಮರಕೋತಿ ಆಟ, ಕೈಮರದ ಬಳಿಯ ಚಾಲನ್‌ಬಳಿ ಆಡುತ್ತಿದ್ದ ಈಜಾಟ, ದಿನದ ಹಗಲಿಡಿ ಮನೆಗೆ ಕಾಣಿಸಿಕೊಳ್ಳದಿದ್ದ ಕ್ಷಣಗಳು ನಿಜಕ್ಕೂ ಅಪರೂಪದ ಅವಿಸ್ಮರಣೀಯ ಬಾಲ್ಯದ ಗಳಿಗೆ ಎಂದುಕೊಳ್ಳುತ್ತೇನೆ. ಇಂತಹ ಎಲ್ಲಾ ನೆನಪುಗಳನ್ನು ಮತ್ತೆ ಮೂಡಿಸಿದ ಅರಹತೋಳಲಿನ ನಮ್ಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಕದ ಸಂಭ್ರಮದಲ್ಲಿ ಎಲ್ಲ ಗುರು ಹಿರಿಯರನ್ನು, ನಮ್ಮೂರಿನ ಎಲ್ಲಾ ಹಿರಿಯರನ್ನು, ಸಹಪಾಠಿಗಳಾಗಿ ಜೊತೆಗೆ ಹೆಜ್ಜೆ ಹಾಕಿದ ಹಿರಿಯ, ಕಿರಿಯ ಎಲ್ಲಾ ಸ್ನೇಹಿತರನ್ನು ಪ್ರೀತಿಯಿಂದ ಆತ್ಮೀಯವಾಗಿ ವಂದಿಸುತ್ತೇನೆ.
ವಿಶೇಷ ಲೇಖನ: ಎಸ್.ಕೆ. ಗಜೇಂದ್ರಸ್ವಾಮಿ, ಹಿರಿಯ ಪತ್ರಕರ್ತರು, ಶಿವಮೊಗ್ಗ
Discussion about this post