ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಯಂತಿ ಹಾಗೂ ರಾಷ್ಟ್ರೀಯ ಏಕತಾ ದಿವಸದ ಅಂಗವಾಗಿ ನೈಋತ್ಯ ರೈಲ್ವೆ ಮತ್ತು ಹುಬ್ಬಳ್ಳಿ ವಿಭಾಗದ ವತಿಯಿಂದ ಹುಬ್ಬಳ್ಳಿಯಲ್ಲಿ (SWR Hubballi) ‘ಏಕತೆಗಾಗಿ ಓಟ’ (Run for Unity) ಕಾರ್ಯಕ್ರಮ ಆಯೋಜಿಸಲಾಯಿತು.
ನಗರದ ಕೇಶ್ವಾಪುರ ರಸ್ತೆಯ ಗಾಲ್ಫ್ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮವು ರಾಷ್ಟ್ರೀಯ ಏಕತೆ, ಸಮಗ್ರತೆ, ಅಖಂಡತೆ ಮತ್ತು ಸಹೋದರತ್ವದ ಮೌಲ್ಯಗಳನ್ನು ಉತ್ತೇಜಿಸುವ ಉದ್ದೇಶ ಹೊಂದಿತ್ತು.
ಕಾರ್ಯಕ್ರಮದಲ್ಲಿ ನೈಋತ್ಯ ರೈಲ್ವೆಯ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಎ.ಜಿ. ಶ್ರೀನಿವಾಸ, ಪ್ರಧಾನ ಕಚೇರಿಯ ವಿವಿಧ ವಿಭಾಗಗಳ ಪ್ರಧಾನ ಮುಖ್ಯಸ್ಥರು, ಹುಬ್ಬಳ್ಳಿ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಬೇಲಾ ಮೀನಾ, ಹಿರಿಯ ರೈಲ್ವೆ ಅಧಿಕಾರಿಗಳು, ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ ಹಾಗೂ ರೈಲ್ವೆ ಕ್ರೀಡಾ ಪ್ರತಿನಿಧಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.
SWR Hubballi: ರಾಷ್ಟ್ರೀಯ ಏಕತಾ ಪ್ರತಿಜ್ಞೆ ಸ್ವೀಕಾರ
ಏಕತೆಗಾಗಿ ಓಟದ ಬಳಿಕ ಹುಬ್ಬಳ್ಳಿ ಕೇಶ್ವಾಪುರ ರಸ್ತೆಯಲ್ಲಿರುವ ವಿಭಾಗೀಯ ರೈಲ್ವೆ ಕಚೇರಿ ಆವರಣದಲ್ಲಿ ರಾಷ್ಟ್ರೀಯ ಏಕತಾ ಪ್ರತಿಜ್ಞಾ ವಿಧಿ ಸಮಾರಂಭ ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಬೇಲಾ ಮೀನಾ ಅವರು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ರಾಷ್ಟ್ರೀಯ ಏಕತಾ ಪ್ರತಿಜ್ಞೆ ಬೋಧಿಸಿದರು.
Also Read>> ಶಿವಮೊಗ್ಗದಲ್ಲಿ ಸ್ಟ್ರೋಕ್ ಜಾಗೃತಿ: ಪಾರ್ಶ್ವವಾಯು ಲಕ್ಷಣ ಕಂಡ ತಕ್ಷಣ ಚಿಕಿತ್ಸೆ ಪಡೆಯಲು ವೈದ್ಯರ ಸಲಹೆ
ನಂತರ ಮಾತನಾಡಿದ ಅವರು, ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ನೀಡಿದ ಅಮೂಲ್ಯ ಕೊಡುಗೆಯನ್ನು ಸದಾ ಸ್ಮರಿಸಬೇಕು. ಅವರ ಆದರ್ಶಗಳು ಮತ್ತು ಮೌಲ್ಯಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರತಿಜ್ಞಾ ವಿಧಿ ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಹಿರಿಯ ಅಧಿಕಾರಿಗಳು, ಶಾಖಾಧಿಕಾರಿಗಳು ಹಾಗೂ ರೈಲ್ವೆ ಸಿಬ್ಬಂದಿ ಭಾಗವಹಿಸಿ ರಾಷ್ಟ್ರೀಯ ಏಕತೆ, ಅಖಂಡತೆ ಮತ್ತು ಭದ್ರತೆಯನ್ನು ಕಾಪಾಡುವ ಸಂಕಲ್ಪ ಮಾಡಿದರು.
ಇದೇ ಸಂದರ್ಭದಲ್ಲಿ ಹುಬ್ಬಳ್ಳಿ ರೈಲ್ವೆ ವಿಭಾಗದ ವ್ಯಾಪ್ತಿಯ ವಿವಿಧ ರೈಲ್ವೆ ಕಚೇರಿಗಳು ಹಾಗೂ ನಿಲ್ದಾಣಗಳಲ್ಲಿಯೂ ರಾಷ್ಟ್ರೀಯ ಏಕತಾ ದಿನಾಚರಣೆಯನ್ನು ಆಚರಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










