ಕಲ್ಪ ಮೀಡಿಯಾ ಹೌಸ್ | ಮೈಸೂರು |
ಭಾರತದ ಉಕ್ಕಿನ ಮನುಷ್ಯ ಎಂದೇ ಪ್ರಸಿದ್ಧರಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ಆಚರಿಸಲಾಗುವ ರಾಷ್ಟ್ರೀಯ ಏಕತಾ ದಿನವನ್ನು (National Unity Day) ನೈಋತ್ಯ ರೈಲ್ವೆಯ ಮೈಸೂರು ವಿಭಾಗದಲ್ಲಿ (SWR Mysuru) ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್ ಅವರು ರೈಲ್ವೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ರಾಷ್ಟ್ರೀಯ ಏಕತಾ ದಿನದ ಪ್ರತಿಜ್ಞಾವಿಧಿ ಬೋಧಿಸಿದರು. ದೇಶದ ಏಕತೆ, ಸಮಗ್ರತೆ ಮತ್ತು ಭದ್ರತೆಯನ್ನು ಕಾಪಾಡುವ ಜತೆಗೆ ರಾಷ್ಟ್ರೀಯ ಐಕ್ಯತೆಯನ್ನು ಬಲಪಡಿಸುವ ಸಂಕಲ್ಪವನ್ನು ಎಲ್ಲರೂ ಕೈಗೊಂಡರು.
SWR Mysuru: ಏಕತೆಗಾಗಿ ಓಟ ಆಯೋಜನೆ
ರಾಷ್ಟ್ರೀಯ ಏಕತೆ, ಸಹೋದರತ್ವ ಮತ್ತು ಸೌಹಾರ್ದತೆಯ ಮಹತ್ವವನ್ನು ಸಾರುವ ಉದ್ದೇಶದಿಂದ ವಿಭಾಗದಲ್ಲಿ ‘ಏಕತೆಗಾಗಿ ಓಟ’ (Run for Unity) ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
Also Read>> ಸರ್ದಾರ್ ಪಟೇಲ್ ಜಯಂತಿ: ಹುಬ್ಬಳ್ಳಿ ರೈಲ್ವೆ ವಿಭಾಗದಲ್ಲಿ ‘ಏಕತೆಗಾಗಿ ಓಟ’
ಕಾರ್ಯಕ್ರಮದಲ್ಲಿ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶಮ್ಮಾಸ್ ಹಮೀದ್, ವಿವಿಧ ಶಾಖೆಗಳ ಅಧಿಕಾರಿಗಳು, ರೈಲ್ವೆ ಸಿಬ್ಬಂದಿ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಸದಸ್ಯರು ಉತ್ಸಾಹದಿಂದ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ರಾಷ್ಟ್ರೀಯ ಏಕತೆ, ಸಮಗ್ರತೆ ಮತ್ತು ಸಹೋದರತ್ವದ ಮೌಲ್ಯಗಳನ್ನು ಪ್ರತಿಯೊಬ್ಬರೂ ಎತ್ತಿಹಿಡಿಯಬೇಕು ಎಂದು ಕರೆ ನೀಡಿತು. ದೇಶದ ಎಲ್ಲ ಭಿನ್ನಾಭಿಪ್ರಾಯಗಳನ್ನು ಮೀರಿ ಒಗ್ಗಟ್ಟಿನಿಂದ ನಿಂತು ಬಲಿಷ್ಠ, ಶಾಂತಿಯುತ ಹಾಗೂ ಏಕತೆಯ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂಬ ಸಂದೇಶವನ್ನು ಸಾರಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









