ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸ್ವರಕ್ಷಣಾ ಕೌಶಲ್ಯ ಪ್ರತಿಯೊಬ್ಬ ಮನುಷ್ಯನಿಗೂ ಬಹಳ ಮುಖ್ಯವಾಗಿದ್ದು, ಎಲ್ಲಾ ಸರ್ಕಾರಿ ಮತ್ತು ಖಾಸಗಿ ಪ್ರೌಢಶಾಲೆ ಮತ್ತು ವಸತಿ ಶಾಲೆಗಳಲ್ಲಿ ಕರಾಟೆ ತರಬೇತಿ ಕಡ್ಡಾಯವಾಗಬೇಕು ಎಂದು ಬಹುಭಾಷಾ ನಟ, 8 ಡಾನ್ ಬ್ಲಾಕ್ ಬೆಲ್ಟ್ ಸುಮನ್ ತಲ್ವಾರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾಟೆ ತರಬೇತಿ ಪಡೆಯುವ ಮೂಲಕ ಮನುಷ್ಯ ತನ್ನನ್ನು ತಾನು ಪ್ರತಿಕೂಲ ಸಂದರ್ಬದಲ್ಲಿ ರಕ್ಷಿಸಿಕೊಳ್ಳಬಹುದಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಹಿಳೆಯರಿಗೆ ಆತ್ಮರಕ್ಷಣಾ ಕಲೆಯ ಅಗತ್ಯವಿದೆ ಎಂದರು.
ಶಾಲಾ ಹಂತದಲ್ಲೇ ಬಾಲಕಿಯರಿಗೆ ಇದನ್ನು ಪೋಷಕರು ಕಲಿಸಬೇಕು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಕಡ್ಡಾಯ ಮಾಡಬೇಕು ಎಂದರು.ಕರಾಟೆ ಕಲಿಕೆಯಿಂದ ಮಾನಸಿಕ ಮತ್ತು ದೈಹಿಕ ಸದೃಢತೆ ಬರುತ್ತದೆ. ಜೀವನದಲ್ಲಿ ಆತ್ಮಸ್ಥೈರ್ಯ ಮತ್ತು ಶಿಸ್ತು ಉಂಟಾಗುತ್ತದೆ. ಮುಖ್ಯವಾಗಿ ದೇಹಕ್ಕೆ ಉತ್ತಮ ವ್ಯಾಯಾಮ ಲಭ್ಯವಾಗುತ್ತದೆ. ಮತ್ತು ದುಶ್ಚಟಗಳು ದೂರವಾಗುತ್ತದೆ ಎಂದರು.
ಇತ್ತೀಚೆಗೆ ಎಲ್ಲಾ ಕಡೆ ಮಾದಕ ವ್ಯಸನ ಹೆಚ್ಚಾಗುತ್ತಿದೆ. ಮಾದಕ ವಸ್ತುಗಳ ಸೇವನೆಯಿಂದ ಆತನ ದೈಹಿಕ ಆರೋಗ್ಯ ಮತ್ತು ಮುಖರ‍್ಯೆ ಬದಲಾಗುವುದು ಮಾತ್ರವಲ್ಲ, ಕುಟುಂಬದ ನೆಮ್ಮದಿ ಮತ್ತು ಪ್ರತಿಷ್ಠೆ ಹಾಳಾಗುತ್ತದೆ. ಪೋಷಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಗಮನಹರಿಸಬೇಕು, ಸರ್ಕಾರ ಈ ನಿಟ್ಟಿನಲ್ಲಿ ಕಠಿಣ ಕಾನೂನು ಕ್ರಮ ಜಾರಿಗೆ ತರಬೇಕು ಎಂದರು.
ಅಮೇರಿಕಾದ ಕರಾಟೆ ಗ್ರ್ಯಾಂಡ್ ಮಾಸ್ಟರ್ ಫೆರಿಎಫ್. ಮೌಲೆ ಮಾತನಾಡಿ, ಭಾರತ ಆರೋಗ್ಯದಲ್ಲಿಯೂ ಸದೃಢವಾಗಿದೆ. ಆರ್ಥಿಕವಾಗಿಯೂ ಸದೃಢವಾಗಿದೆ. ಪ್ರಪಂಚದ ಇತರೆ ರಾಷ್ಟ್ರಗಳ ಮೇಲೂ ಪ್ರಭಾವ ಬೀರುತ್ತಿದೆ. ಎಲ್ಲಾ ರಂಗಗಳಲ್ಲೂ ಭಾರತ ಮುಂದುವರೆದಿದ್ದು, ಕರಾಟೆಯು ಭಾರತವನ್ನು ಆರೋಗ್ಯವಂತರನ್ನಾಗಿಸಿದೆ ಎಂದರು.
ನಾಳೆ ನಗರದ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಆರನೇ ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿ ನಡೆಯಲಿದ್ದು, ಶ್ರೀಲಂಕಾ, ನೇಪಾಳ, ಮಹಾರಾಷ್ಟ್ರ, ಗೋವಾ, ಆಂಧ್ರ ಮತ್ತು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯ ಮತ್ತು ದೇಶಗಳಿಂದ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದು ಶಿವಮೊಗ್ಗ ಕರಾಟೆ ಅಸೋಸಿಯೇಷನ್ನಿನ ಅಧ್ಯಕ್ಷ ವಿನೋದ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಜಯ್ ಲಾವ, ಅಲ್ತಾಫ್ ಪಾಷಾ, ರಾಘವೇಂದ್ರ ಆರ್. ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post