ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಆನೆಗೊಂದಿ ಇದು ಗಂಗಾವತಿ ತಾಲೂಕಿನ ಒಳ್ಳೆಯ ಪ್ರವಾಸಿ ತಾಣವಾಗಿದೆ ಮತ್ತು ಕೊಪ್ಪಳ ಜಿಲ್ಲೆಯ ಐತಿಹಾಸಿಕ ಸ್ಥಳವಾಗಿದೆ. ವಿಜಯನಗರದ ಅರಸರು ತುಂಗಭದ್ರಾ ಎಡದಂಡೆ ಕಾಲುವೆ ಬಳಿ ಗಜಪಂಕ್ತಿ ಎನ್ನುವ ಹೆಸರಿನ ಸ್ಥಳವಿದ್ದು ಅ ಜಾಗದಲ್ಲಿ ಆನೆಗಳನ್ನು ಕಟ್ಟುತ್ತಿದ್ದರು, ರಾಮಾಯಾಣ ಕಾಲದಲ್ಲಿ ಆನೆಗೊಂದಿ ಎಂಬುದು ಕಿಷ್ಕಿಂದ ಎಂಬ ಹೆಸರಿನಿಂದ ಕೂಡಿದ್ದು, ವಾಲಿ ಮತ್ತು ಸುಗ್ರೀವರ ರಾಜಧಾನಿಯಾಗಿದೆ.
ಹಂಪಿ ಮತ್ತು ಆನೆಗುಂದಿ ವಿಜಯನಗರ ಕಾಲದಲ್ಲಿ ಅತ್ಯಂತ ಶ್ರೀಮಂತಿಕೆಯಿಂದ ಮೆರೆದಿದ್ದು ಕ್ರಿಶ 1565 ರಲ್ಲಿ ನಡೆದ ರಕ್ಕಸ ತಂಗಡಗಿ ಕಾಳಗದಲ್ಲಿ ಮುಸ್ಲಿಂ ರಾಜರುಗಳು ಧಾಳಿಗೆ ಒಳಪಟ್ಟು ಪತನಗೊಂಡಿತು. ನಂತರ ಕ್ರಿ.ಶ 1776ರಲ್ಲಿ ಈ ಸ್ಥಳವು ಟಿಪ್ಪು ಸುಲ್ತಾನನ ಆಡಳಿತ ಒಳಪಟ್ಟಿತ್ತು.
ಆನೆಗೊಂದಿಯು ತುಂಗಭದ್ರಾ ನದಿಯ ದಡದಲ್ಲಿ ಇದ್ದು, ಸುತ್ತಲು ದೊಡ್ಡ ದೊಡ್ಡ ಬಂಡೆಗಳು ಪರ್ವತವು ಆನೆಗುಂದಿ ಹತ್ತಿರವಿದ್ದು ವಾನರಸೇನಾದೇವ ಹನುಮಂತನು ಇಲ್ಲಿಯೇ ಹುಟ್ಟಿದನೆಂಬ ಪ್ರತೀತಿಯಿದೆ. ರಾಮಾಯಾಣದಲ್ಲಿ ಈ ಸ್ಥಳವು ಕಿಷ್ಕಿಂದೆಯಾಗಿದ್ದು, ವಾಲಿ ಮತ್ತು ಅವನ ತಮ್ಮ ಸುಗ್ರೀವ ಹುಟ್ಟಿದ ಸ್ಥಳವು ಆಗಿತೆಂಬ ಪ್ರತೀತಿ ಇದೆ.
ಗಗನ ಮಹಲ್ ಹತ್ತಿರ ತಳವಾರ ಘಟ್ಟ ಇದ್ದು, ತುಂಗಭದ್ರಾ ಮತ್ತೊಂದು ದಡವನ್ನು ದಾಟಿದಾಗ ವಿಶ್ವಪ್ರಸಿದ್ದ ಹಂಪೆಯನ್ನು ತಲುಪಬಹುದು. ಈ ಹಿಂದೆ ಆನೆಗೊಂದಿ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ನಂತರ ದಿನಗಳಲ್ಲಿ ಹಂಪಿಯನ್ನು ರಾಜಧಾನಿಯಾಗಿ ಮಾಡಲಾಯಿತು.
ಕನಕಗಿರಿ ಇದು ಗಂಗಾವತಿ ತಾಲೂಕಿನ ಮತ್ತೊಂದು ಪ್ರವಾಸಿ ತಾಣವಾಗಿದ್ದು ಈ ಸ್ಥಳವು ಸಹ ಐತಿಹಾಸಿಕ ಹಿನ್ನಲೆಯನ್ನು ಹೊಂದಿದ್ದು, ಗಂಗಾವತಿ-ಲಿಂಗಸೂರು ರಸ್ತೆಯಲ್ಲಿದ್ದು ಗಂಗಾವತಿಯಿಂದ 13 ಮೈಲಿ ದೂರದಲ್ಲಿದೆ,
ಕನಕಗಿರಿ ಎಂಬ ಪದದ ಅರ್ಥವು ಗುಡ್ಡಗಳ ದೇವರು ಮತ್ತು ಇದರ ಪುರಾತನ ಹೆಸರು ಸ್ವರ್ಣಗಿರಿ ಆಗಿತ್ತು. ಇದು ಮೌರ್ಯ ಸಮ್ರಾಜ್ಯದ ದಕ್ಷಿಣ ಭಾಗದ ಆಡಳಿತ ಕೇಂದ್ರವಾಗಿತ್ತು. ಇದು ಕನಕ ಮುನಿ ಎನ್ನುವ ತಪಸ್ವಿಗಳು ತಪಗೈದ ಸ್ಥಳವಾಗಿದೆ. ಈ ಸ್ಥಳದಲ್ಲಿ ಹಲವಾರು ದೇವಾಲಯಗಳು ಸ್ಥಾಪಿಸ್ಪಟ್ಟಿದ್ದು, ಇದರಲ್ಲಿ ಕನಕಚಾಲ ಪತಿ ದೇವಾಲಯವು ತುಂಬ ಪ್ರಸಿದ್ದಿಯಾಗಿದೆ. ಈ ದೇವಾಲಯದಲ್ಲಿ ವಿಜಯನಗರದ ಕಾಲದ ದಕ್ಷಿಣ ಭಾರತ ಶಿಲ್ಪ ವೈಭವವನ್ನು ಕಾಣಬಹುದು, ಸುಂದರವಾದ ಏಕಶಿಲಾ ಕೆತ್ತನೆಯ ಕಂಬಗಳು, ಆಕರ್ಷಕವಾದ ಗೋಪುರದ ವಿನ್ಯಾಸ ಮತ್ತು ಮತ್ತು ಗೋಡೆಗಳು, ಕಪ್ಪು ಶಿಲೆಯಿಂದ ಕೆತ್ತನೆಗೊಂಡ ರಾಜ ರಾಣಿಯರ ಸುಂದರ ಮೂರ್ತಿಗಳು, ಕಟ್ಟಿಗೆಯಿಂದ ತಯಾರಿಸಲಾದ ದೇವತೆಗಳ ಮೂರ್ತಿಗಳು ಇತ್ಯಾದಿ ದೃಶ್ಯ ವೈಭವವನ್ನು ಕಾಣಬಹುದು. ಕಣ್ಣಿದ್ದವರು ಕನಕಗಿರಿ ನೋಡಬೇಕು, ಕಾಲಿದ್ದವರು ಹಂಪಿಯನ್ನು ಸುತ್ತಾಡಬೇಕು ಎಂಬ ನಾಣ್ಣುಡಿ ಇದೆ.
ಪ್ರತಿ ವರ್ಷವು ಫಾಲ್ಗುಣ ಮಾಸದಲ್ಲಿ ಶ್ರೀ ಕನಕಚಾಲಪತಿ ದೇವರ ಜಾತ್ರ ಮಹೋತ್ಸವವು ವಿಜೃಂಭಣೆಯಿಂದ ಜರುಗುವುದು. ಜಾತ್ರೆಯ ಸಮಯದಲ್ಲಿ ದೇಶ-ವಿದೇಶಗಳಿಂದ ಅಸಂಖ್ಯಾತ ಜನ ಸಮೂಹ ಸೇರಲ್ಪಡುವವು.
ಆನೆಗೊಂದಿಯ ಹತ್ತಿರದಲ್ಲಿ ಪಂಪಾ ಸರೋವರ, ಅಂಜಾನಾದ್ರಿ ಬೆಟ್ಟ, ಆನೆಸಾಲು, ಗಗನ ಮಹಲ್, ರಂಗನಾಥ ದೇವಾಲಯ, ದುರ್ಗದೇವಿ ದೇವಾಲಯ, ಜೈನಬಸದಿ, 64 ಕಂಬದ ಮಂಟಪ, ಆಂಜನೇಯ ದೇವಾಲಯ, ನವವೃಂದಾವನ, ಗವಿ ರಂಗನಾಥ ದೇವಾಲಯ, ಆಶ್ರಮ, ಹುಚ್ಚಪ್ಪಯ್ಯನ ಮಠ, ಸೂರ್ಯನಾರಾಯಣ ದೇವಾಲಯ, ಚಿಂತಾಮಣಿ ದೇವಾಲಯ, ತುಂಗಭದ್ರ ನದಿಯ ತೀರ ಇತ್ಯಾದಿಗಳನ್ನು ಕಾಣಬಹುದು.
ನವವೃಂದಾವನ ನದಿ ತೀರ
ಒಂಭತ್ತು ಯತಿಗಳು ವಾಸವಾಗಿರುವ /ವೃಂದಾವನಸ್ಥರಾಗಿರುವ ಸ್ಥಳ ಎಂದರೆ ನವವೃಂದಾವನ ಇಲ್ಲಿನ ನಡುಗಡ್ಡೆಯಲ್ಲಿ ಶ್ರೀ ಪದ್ಮನಾಭತೀರ್ಥರು, ಶ್ರೀ ಕವೀಂದ್ರ ತೀರ್ಥರು, ಶ್ರೀ ವಾಗೀಶ ತೀರ್ಥರು, ಶ್ರೀ ರಘುವರ್ಯ ತೀರ್ಥರು, ಶ್ರೀ ವ್ಯಾಸರಾಯರು, ಶ್ರೀ ಸುಧೀಂದ್ರ ತೀರ್ಥರು, ಶ್ರೀಶ್ರೀನಿವಾಸತೀರ್ಥರು ಮತ್ತು ಶ್ರೀ ರಾಮತೀರ್ಥರ ಮೂಲ ವೃಂದಾವನಗಳಿವೆ.
ಪ್ರತಿ ತಿಂಗಳು ಮತ್ತು ಹಬ್ಬ ಹರಿದಿನಗಳಲ್ಲಿ ಸಂಭ್ರಮದಿಂದ ಕಾರ್ಯಕ್ರಮ ನಡೆಯುತ್ತದೆ. ಇಲ್ಲಿ ಉತ್ತರಾಧಿಕಾರಿ ಮಠ ಮತ್ತು ಶ್ರೀ ರಾಘವೇಂದ್ರ ಸ್ವಾಮಿ ಮಠದ ಭಕ್ತರಿಂದ ಆರಾಧನಾ ಕಾರ್ಯಕಲಾಪ ನಡೆಯುತ್ತದೆ.
ಕಳೆದ ಎರಡು ವರುಷಗಳ ಹಿಂದೆ ಜಮೀನಿನ ಮಾಲೀಕತ್ವ ವಿವಾದದ ಹಿನ್ನೆಲೆಯಲ್ಲಿ ಹೈಕೋರ್ಟ್ ನ್ಯಾ. ಕೃಷ್ಣ ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ, ರಾಯರ ಮಠ ಹಾಗೂ ಉತ್ತರಾದಿಮಠದವರಿಗೆ ಶ್ರೀ ಪದ್ಮನಾಭ ತೀರ್ಥರ ತಲಾ ಒಂದುವರೆ ದಿನದವರೆಗೆ ಆರಾಧನಾ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ನ್ಯಾಯಾಲಯದ ಆದೇಶದಂತೆ ಇಂದು ಭಕ್ತರು ಅರಾಧನಾ ಕಾರ್ಯಕಲಾಪ ಮಾಡುತ್ತಿದ್ದಾರೆ. ಆದರೆ ಭಕ್ತರ ಆಸೆಯಂತೆ ಒಗ್ಗೂಡಿ ಪೂಜೆ ಸಲ್ಲಿಸುವ ಕಾಲ ಬರಲಿ ನ್ಯಾಯಾಲಯಗಳು ಏನೇ ತೀರ್ಪು ನೀಡಲಿ ಅಥವಾ ಬಿಡಲಿ, ಧಾರ್ಮಿಕ ಚಟುವಟಿಕೆಗಳನ್ನು ಎಲ್ಲರೂ ಸೇರಿ ಮಾಡಿದರೆ ಮಾತ್ರ ಅದಕ್ಕೊಂದು ಅರ್ಥಗರ್ಭಿತ. ಭಕ್ತರ ಆಸೆಯಂತೆ ಎರಡು ಮಠಗಳ ಶ್ರೀಗಳು ಒಟ್ಟಿಗೆ ಸೇರಿಕೊಂಡು ಪೂಜೆ ಸಲ್ಲಿಸುವ ಕಾಲ ಬೇಗ ಬರಲಿ’ ಎಂಬುವುದು ನಮ್ಮ ಆಸೆಯಾಗಿದೆ.
ನವವೃಂದಾವವು ತುಂಗಭದ್ರಾ ತಡದಲ್ಲಿ ಇದ್ದು ಸುತ್ತಲೂ ನದಿಯು ಆವರಿಸಿದೆ ಭಕ್ತರು ನವವೃಂದಾವನಕ್ಕೆ ಯತಿಗಳ ದರ್ಶನ ಮಾಡಲು ಹರಸಹಾಸ ಮಾಡಬೇಕಾಗುತ್ತಿತ್ತು. ಅಂದರೆ ನದಿಯ ಮೂಲಕ ಹರಿಗೋಲು ಹಾಕಿಕೊಂಡು ಹೋಗಬೇಕಾದ ಪರಿಸ್ಥಿತಿ ಇತ್ತು. ಇದರಿಂದ ಭಕ್ತರಿಗೆ ತೊಂದರೆಗಿಂತ ಭಯದ ವಾತಾವರಣ ಹೆಚ್ಚಾಗಿರುತ್ತಿತ್ತು. ಇರುವ ಎರಡು ಮೂರು ಹರಿಗೋಲಿನಲ್ಲಿ ಭಕ್ತರು ಹೋಗಬೇಕಾಗುತ್ತಿತ್ತು ಮತ್ತು ಸಂಜೆ ಬೇಗನೆ ವಾಪಾಸು ಬರಬೇಕಾಗುತ್ತಿತ್ತು. ಹೋಗಲು ಬರಲು ಸರಿಯಾದ ವ್ಯವಸ್ಥೆ ಮತ್ತು ಅಪಾಯಕ್ಕೆ ಹೆದರಿ ಭಕ್ತ ಸಮೂಹ ಆಸೆ ಇದ್ದರೂ ಹೋಗಲು ಆಗುತ್ತಿರಲಿಲ್ಲ. ಭಕ್ತರು ಬರುವುದು ಹೆಚ್ಚಾಗಿರುವುದರಿಂದ ಇದಕ್ಕೆ ಸರ್ಕಾರ ಸರಿಯಾದ ವ್ಯವಸ್ಥೆ ಮಾಡಿ ಓವರ್ ಬ್ರಿಡ್ಜ್ ಮಾಡಬೇಕಾಗಿದೆ. ಹಾಗೆಯೆ ಹೆಚ್ಚಿನ ದೀಪದ ವ್ಯವಸ್ಥೆ, ಸಿಸಿ
ಕ್ಯಾಮೆರಾ ಹಾಗೂ ಭದ್ರತಾ ವ್ಯವಸ್ಥೆ ಮಾಡಬೇಕಾಗಿದೆ.
ಭಕ್ತರು ನವವೃಂದಾವನದ ಅರಾಧನಾ ದಿನ ದಡಸೇರಲು ನದಿಯಲ್ಲಿ ಹಾರಿ ಈಜಾಡಿ ಅಪಾಯ ಮತ್ತು ಅವಘಡಕ್ಕೆ ಕಾರಣವಾಗುತ್ತಾರೆ. ಕಳೆದ ಮೂರು ತಿಂಗಳ ಹಿಂದೆ ಹೊಸಪೇಟೆ ಶ್ರೀ ಅನಂತಾಚಾರ್ ಎಂಬ ಭಕ್ತರೂಬ್ಬರು ನದಿಯಲ್ಲಿ ಹಾರಿ ಈಜಾಡಿ ದಡ ಸೇರಲು ಹೋಗಿ ಮರಣ ಹೋಂದಿದ ಘಟನೆ ಕಣ್ಣ ಮುಂದೆ ಇದೆ.
ಈ ಘಟನೆಯ ಹಿನ್ನೆಲೆಯಲ್ಲಿ ಶ್ರೀ ವ್ಯಾಸರಾಜರ ಆರಾದನೆಗೆ ಅನುಕೂಲ ಮಾಡಿಕೊಂಡು ತಾತ್ಕಾಲಿಕ ಸೇತುವೆಯನ್ನು ರಚಿಸಿ ಸುಗಮವಾಗಿ ಭಕ್ತರು ಹಾದುಹೋಗಲು ವ್ಯವಸ್ಥೆ ಮಾಡಲಾಗಿದ್ದು, ಇದು ಎಲ್ಲ ಭಕ್ತರಿಗೂ ಸಂತಸ ತಂದಿದೆ. ಕಾರಣ ಸರ್ಕಾರದಿಂದ ಈ ನವವೃಂದಾವನಕ್ಕೆ ಸುರಕ್ಷಿತವಾಗಿ ಹೋಗಿ ಬರಲು ಶಾಶ್ವತವಾದ ಸೇತುವೆಯ ನಿರ್ಮಾಣ ಮಾಡಲು ಬಯಸಿದ್ದಾರೆ. ಈಗ ಹಾಕಿರುವ ತಾತ್ಕಾಲಿಕ ಸೇತುವೆ ಮಳೆಗಾಲದಲ್ಲಿ ಯಾವುದೇ ಪ್ರಯೋಜನವಾಗುವುದಿಲ್ಲ, ನದಿಯಲ್ಲಿ ನೀರು ಹರಿದರೆ ಪ್ರಯೋಜನವಾಗುವುದಿಲ್ಲ. ಕಾರಣ ತತಕ್ಷಣ ಜಿಲ್ಲಾಡಳಿತ ಇತ್ತ ಗಮನ ಹರಿಸಲು ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಮನವಿ ಮಾಡಿರುತ್ತದೆ.
ಲೇಖನ: ಮುರುಳೀಧರ್ ನಾಡಿಗೇರ್, ಹೊಸಪೇಟೆ
Get in Touch With Us info@kalpa.news Whatsapp: 9481252093
Discussion about this post