ನವದೆಹಲಿ: ಪುಲ್ವಾಮಾ ದಾಳಿಯ ಹಿನ್ನೆಲೆಯಲ್ಲಿ ಭಾರತಕ್ಕೆ ಕನಿಷ್ಠ ಸಾಂತ್ವನ ಹೇಳುವ ಸೌಜನ್ಯವನ್ನೂ ಸಹ ತೊರದ ಪಾಕಿಸ್ಥಾನದ ವಿರುದ್ಧ ಕಟು ಟೀಕೆ ವ್ಯಕ್ತಪಡಿಸಿರುವ ಭಾರತ ಸರ್ಕಾರ, ಭಯೋತ್ಪಾದನೆ ಪಾಕಿಸ್ಥಾನದ ನರಮಂಡಲವಿದ್ದಂತೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.
ಪುಲ್ವಾಮಾ ದಾಳಿಯ ಬಗ್ಗೆ ಪುರಾವೆ ಕೊಡಿ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕೇಳಿದ್ದಾರೆ. ಇದೊಂದು ಕೇವಲ ನೆಪ ಮಾತ್ರ. ಹಿಂದೆ 26/11ರ ಮುಂಬಯಿ ದಾಳಿ ಬಗ್ಗೆ ಕಂತೆ ಕಂತೆ ಪುರಾವೆಗಳನ್ನು ಕೊಟ್ಟರೂ ಅದರ ತನಿಖೆಯನ್ನು ಕಳೆದ ಹತ್ತು ವರ್ಷಗಳಿಂದ ಪಾಕಿಸ್ಥಾನ ತಳ್ಳುತ್ತಾ ಬಂದಿದೆ. ಇದೇ ರೀತಿ ಪಠಾಣ್‌ಕೋಟ್ ದಾಳಿಯ ಪುರಾವೆ ನೀಡಿದರೂ ಪಾಕಿಸ್ಥಾನ ಏನೂ ಮಾಡಿಲ್ಲ. ಈಗ ಮತ್ತೆ ಪುರಾವೆ ಕೇಳುತ್ತಿದೆ ಎಂದು ಟೀಕೆ ಮಾಡಿದೆ.
ಇನ್ನು, ಭಯೋತ್ಪಾದನೆ ವಿಚಾರದಲ್ಲಿ ಪಾಕಿಸ್ಥಾನ ಅಂತಾರಾಷ್ಟ್ರೀಯ ಸಮುದಾಯವನ್ನು ದಾರಿ ತಪ್ಪಿಸುವ ತನ್ನ ತಂತ್ರವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿರುವ ಭಾರತ ಸರ್ಕಾರ, ಮುಂಬರುವ ಸಾರ್ವತ್ರಿಕ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಭಯೋತ್ಪಾದಕ ದಾಳಿ ಕುರಿತ ಭಾರತದ ಪ್ರತಿಕ್ರಿಯೆ ಪ್ರಚಾರದ ರೀತಿ ಇದೆ ಎಂಬ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ ವಿಷಾದಕರ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
Discussion about this post