ಶಿವಮೊಗ್ಗ: ಬಿಜೆಪಿ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಶಿವಮೊಗ್ಗದಲ್ಲಿ ಇಂದು ಜೆಡಿಎಸ್ ಬಿಜೆಪಿ ಮೈತ್ರಿಕೂಟದ ರ್ಯಾಲಿಯಲ್ಲಿ ಶಕ್ತಿ ಪ್ರದರ್ಶನ ತೋರಿಸಿದ್ದು, ಇದಕ್ಕೆ ಘಟಾನುಘಟಿಗಳು ಸಾಕ್ಷಿಯಾದರು.
ಮೈತ್ರಿ ಪಕ್ಷದ ಅಭ್ಯರ್ಥಿ ಮಧು ಬಂಗಾರಪ್ಪ ಅವರ ನಾಮಪತ್ರ ಸಲ್ಲಿಕೆಗೂ ಮುನ್ನ ನಗರದಲ್ಲಿ ಬೃಹತ್ ಮೆರವಣಿಗೆ ನಡೆಯಿತು. ರಾಮಣ್ಣ ಶ್ರೇಷ್ಠಿ ಪಾರ್ಕ್’ನಿಂದ ಹೊರಟ ರ್ಯಾಲಿಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸಚಿವ ಡಿ.ಕೆ. ಶಿವಕುಮಾರ್, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸೇರಿದಂತೆ ಮೈತ್ರಿ ಪಕ್ಷದ ಘಟಾನುಘಟಿಗಳು ಪಾಲ್ಗೊಂಡಿದ್ದರು.
ಈ ವೇಳೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ಬಿಜೆಪಿ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿ ಹಾಗೂ ಜಿಲ್ಲೆಯ ನೀರಾವರಿ ಯೋಜನೆಗಳು ಕಡೆಗಣನೆಗೆ ಒಳಗಾಗಿದ್ದವು. ಆದರೆ, ನಮ್ಮ ಸರ್ಕಾರದ ವತಿಯಿಂದ ರೈತರ ಹಿತಕ್ಕಾಗಿ ಸುಮಾರು 45 ಸಾವಿರ ಕೋಟಿ ರೂ ಸಾಲಮನ್ನಾ ಮಾಡಿದ್ದೇವೆ. ಹೀಗಾಗಿ, ಮೈತ್ರಿ ಪಕ್ಷದ ಅಭ್ಯರ್ಥಿ ಮಧು ಬಂಗಾರಪ್ಪ ಅವರಿಗೆ ಮತ ನೀಡಿ ಎಂದು ಕೋರಿದರು.
ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಮಧು ಬಂಗಾರಪ್ಪ ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿಗಳಿಗೆ ತಮ್ಮ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ವೇಳೆ ಮಧು ಅವರೊಂದಿಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸಚಿವ ಡಿ.ಕೆ. ಶಿವಕುಮಾರ್, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ್ ಉಪಸ್ಥಿತರಿದ್ದರು.
ನಾಮಪತ್ರ ಸಲ್ಲಿಕೆ ಮಾಡುವ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಕುಬಟೂರಿನ ದ್ಯಾವಮ್ಮ ದೇವಸ್ಥಾನದಲ್ಲಿ ಮಧು ಬಂಗಾರಪ್ಪ ಪೂಜೆ ಸಲ್ಲಿಸಿದರು.
ನಂತರ ಬಂಗಾರ ಧಾಮಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ತಮ್ಮ ತಂದೆ-ತಾಯಿಯ ಪುಣ್ಯಸ್ಥಳಕ್ಕೆ ಭೇಟಿ ನೀಡಿದ, ಆಶೀರ್ವಾದ ಬೇಡಿದರು.
ಇನ್ನು, ಮಧು ಬಂಗಾರಪ್ಪ ಸೊರಬ ಕ್ಷೇತ್ರದ ಹೆಜ್ಜೆ ದೇವಸ್ಥಾನಕ್ಕೆ ನಿನ್ನೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು.
ನಿನ್ನೆ ನಿಸರಾಣಿ, ಬರಗಿ, ತೆಲಗುಂದಿ ಹಾಗೂ ಬೆನ್ನೂರು ಗ್ರಾಮ ಪಂಚಾಯ್ತಿಗಳಲ್ಲಿ ಮಧು ಬಂಗಾರಪ್ಪ ಬಿರುಸಿನ ಪ್ರಚಾರ ನಡೆಸಿದರು. ಕಾಂಗ್ರೆಸ್ ಮುಖಂಡರಾದ ಮಂಜುನಾಥ್ ಭಂಡಾರಿ ಇದ್ದರು.
Discussion about this post