ಶಿವಮೊಗ್ಗ: ಮತದಾನದ ಪ್ರಮಾಣವನ್ನು ಹೆಚ್ಚಿಸಲು ಚುನಾವಣಾ ಆಯೋಗ ನಿರಂತರ ಪ್ರಯತ್ನಗಳನ್ನು ಮಾಡುತ್ತಿರುವಂತೆಯೇ, ಜಿಲ್ಲಾಧಿಕಾರಿ ದಯಾನಂದ್ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಹತ್ವದ ಕ್ರಮವೊಂದಕ್ಕೆ ಮುಂದಾಗಿದ್ದಾರೆ.
ಎಪ್ರಿಲ್ 18 ಹಾಗೂ 23 ರಂದು ಮತದಾನದ ದಿನ ಜಿಲ್ಲೆಯಾದ್ಯಂತ ಪ್ರವಾಸಿಗರು ಆಗಮಿಸಿದರೆ ಕೊಠಡಿ ನೀಡದಂತೆ ಹೊಟೇಲ್ ಹಾಗೂ ಲಾಡ್ಜ್’ಗಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.
ಚುನಾವಣೆ ದಿನ ಸಾರ್ವತ್ರಿಕ ರಜೆ ಘೋಷಣೆ ಇರುವುದರಿಂದ ಅನೇಕರು ಮತದಾನ ಮಾಡದೆ ಪ್ರವಾಸ ತೆರಳುತ್ತಾರೆ. ಹೀಗಾದರೆ, ಶೇಕಡಾವಾರು ಮತದಾನ ಕಡಿಮೆಯಾಗಲಿದ್ದು, ಈ ಹಿನ್ನೆಲೆಯಲ್ಲಿ ಕೊಠಡಿ ಕಾಯ್ದಿರಿಸಲು ಬರುವ ಪ್ರವಾಸಿಗರ ವೋಟಿಂಗ್ ಕಾರ್ಡ್ ಹಾಗೂ ಅವರ ಹಾಗೂ ವಿಳಾಸ ಪರಿಶೀಲಿಸಿ ಎಂದು ಸೂಚಿಸಿದ್ದಾರೆ.
ಅಲ್ಲದೇ, ಪ್ರಜಾಪ್ರಭುತ್ವದ ಹಬ್ಬದಂದು ಚುನಾವಣೆಗೆ ಭಾಗವಹಿಸಲು ಅವಕಾಶ ಮಾಡಿ ಕೊಡಿ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿಗೆ ಡಿಸಿ ಕೋರಿದ್ದಾರೆ. ಈ ಬಗ್ಗೆ ಹೋಟೆಲ್, ರೆಸಾರ್ಟ್ ಅವರಿಗೆ ಸೂಚಿಸಿ ಎಂದು ಜಿಲ್ಲಾ ಕಾರ್ಮಿಕರ ಅಧಿಕಾರಿಗೆ ಆದೇಶಿಸಲಾಗಿದೆ.
ಮತದಾನ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ನಾನಾ ರೀತಿಯ ಹರಸಾಹಸ ಪಡುತ್ತಿದ್ದರೂ, ನಿರೀಕ್ಷಿತ ಮಟ್ಟದಲ್ಲಿ ಮತದಾನದ ಪ್ರಮಾಣ ಏರಿಕೆಯಾಗಿಲ್ಲ. ಮತದಾನಕ್ಕಾಗಿ ಸರ್ಕಾರ ರಜೆ ನೀಡಿದರೆ ಹಲವರು ಮತದಾನ ಮಾಡದೇ ಪ್ರವಾಸಕ್ಕೆ ತೆರಳಿ ಮಜಾ ಮಾಡುತ್ತಿದ್ದಾರೆ. ಆ ಮೂಲಕ ತಮ್ಮ ಕರ್ತವ್ಯ ಮರೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಇಂತಹುದ್ದೊಂದು ಕ್ರಮಕ್ಕೆ ಮುಂದಾಗಿದ್ದಾರೆ.
Discussion about this post