ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಆಗಸ್ಟ್’ನಲ್ಲಿ ನಡೆದ 2023-24ನೇ ಸಾಲಿನ ಕೆಪಿಎಸ್’ಸಿ ಗೆಜೆಟೆಡ್ ಪ್ರೊಬೇಷನರ್ಸ್ #KPSCGazettedProbationers ಪೂರ್ವಭಾವಿ ಪರೀಕ್ಷೆಯಲ್ಲಿ ಭಾರಿ ಎಡವಟ್ಟುಗಳು ಕಂಡು ಬಂದ ನಂತರ ಅಭ್ಯರ್ಥಿಗಳ ಆಕ್ರೋಶಕ್ಕೆ ಮಣಿದು ನಿನ್ನೆ ನಡೆಸಲಾದ ಮರುಪರೀಕ್ಷೆಯಲ್ಲಿ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ಎಡವಟ್ಟುಗಳ ಮೇಲೆ ಎಡವಟ್ಟುಗಳು ಮಾಡಿದ್ದು, ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ಭವಿಷ್ಯ ಡೋಲಾಯಮಾನವಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ #RAshok ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಕಿಡಿ ಕಾರಿರುವ ಅವರು, ಭಾಷಾಂತರದಲ್ಲಿ ಲೋಪ ದೋಷ, ಒಎಂಆರ್ ಶೀಟ್ ಮತ್ತು ನೋಂದಣಿ ಸಂಖ್ಯೆ ಅದಲು ಬದಲು, ಕೆಲವೆಡೆಗಳಲ್ಲಿ 45 ನಿಮಿಷ ತಡವಾಗಿ ಪರೀಕ್ಷೆ ಆರಂಭ ಹೀಗೆ ಸಾಲು ಸಾಲು ಎಡವಟ್ಟುಗಳಿಂದ ಕೂಡಿದ್ದ ಭಾನುವಾರದ ಮರುಪರೀಕ್ಷೆ ಮತ್ತೊಮ್ಮೆ ಅಭ್ಯರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದೆ ಎಂದಿದ್ದಾರೆ.
Also Read>> ಜೋಗ ಪ್ರವೇಶ ದ್ವಾರ ನಿರ್ಬಂಧ | ಈ ಎಲ್ಲಾ ಸ್ಥಳಗಳಿಂದ ಜಲಪಾತ ವೀಕ್ಷಣೆಗೆ ಅವಕಾಶ
ಮರುಪರೀಕ್ಷೆಗೆ ನೋಂದಣಿ ಮಾಡಿಕೊಂಡ 2.109 ಲಕ್ಷ ಅಭ್ಯರ್ಥಿಗಳ ಪೈಕಿ ಕೇವಲ 1.005 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದಾರೆ. ಆಗಸ್ಟ್’ನಲ್ಲಿ ನಡೆದ ಪರೀಕ್ಷೆಯಲ್ಲಿ ಶೇ.62.52% ರಷ್ಟಿದ್ದ ಹಾಜರಾತಿ, ಮರುಪರೇಕ್ಷೆಯಲ್ಲಿ ಶೇ.47.7%ಕ್ಕೆ ಕುಸಿದಿರುವುದು ಅಭ್ಯರ್ಥಿಗಳು ರಾಜ್ಯ ಸರ್ಕಾರದ ಮೇಲೆ, ಕೆಪಿಎಸ್’ಸಿ ಮೇಲೆ ನಂಬಿಕೆ ಕಳೆದುಕೊಂಡಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಕಿಡಿ ಕಾರಿದ್ದಾರೆ.

ಆಗಸ್ಟ್’ನಲ್ಲಿ ನಡೆದ ಪೂರ್ವಭಾವಿ ಪರೀಕ್ಷೆಯ ಎಡವಟ್ಟುಗಳಿಗೆ, ಲೋಪ ದೋಷಗಳಿಗೆ ಕಾರಣರಾದ ಪರೀಕ್ಷಾ ನಿಯಂತ್ರಕರ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ ಅದೇ ಹುದ್ದೆಯಲ್ಲಿ ಮುಂದುವರೆಸಿದ್ದೀರಿ. ಕಾರ್ಯದರ್ಶಿಗಳನ್ನು ಮಾತ್ರ ಎತ್ತಂಗಡಿ ಮಾಡಿದ್ದೀರಿ. ತಮ್ಮ ಸರ್ಕಾರದ ರಾಜಕೀಯ ಹಸ್ತಕ್ಷೇಪ, ಸ್ವಜನಪಕ್ಷಪಾತ, ಭ್ರಷ್ಟಾಚಾರವೇ ಪದೇ ಪದೇ ಈ ಎಡವಟ್ಟುಗಳು ಮರುಕಳಿಸುತ್ತಿರುವುದಕ್ಕೆ ಮೂಲ ಕಾರಣ ಎಂದು ಕಿಡಿ ಕಾರಿದ್ದಾರೆ.
ಕೆಪಿಎಸ್ಸಿ ಸಂಸ್ಥೆ ಈ ರೀತಿ ನಂಬಿಕೆ ಕಳೆದುಕೊಂಡು, ಹೆಸರು ಕೆಡಸಿಕೊಂಡರೆ ಉತ್ತಮ ಅಭ್ಯರ್ಥಿಗಳನ್ನ, ಪ್ರತಿಭಾವಂತ ಯುವಕರನ್ನ ಸರ್ಕಾರಿ ಸೇವೆಯತ್ತ ಆಕರ್ಷಿಸುವುದು ಹೇಗೆ ಸಾಧ್ಯ? ಆಡಳಿತಕ್ಕೆ ಹೊಸ ರಕ್ತ ಬರದಿದ್ದರೆ ಆಡಳಿತವನ್ನು ಚುರುಕುಗೊಳಿಸುವುದು ಹೇಗೆ? ಯುವ ಜನಾಂಗ ಸಾರ್ವಜನಿಕ ಸೇವೆಗೆ ಬರದಿದ್ದರೆ ಆಡಳಿತಕ್ಕೆ ಹೊಸ ಚೈತನ್ಯ ತುಂಬಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.

ಅಭ್ಯರ್ಥಿಗಳ ಹಿತದೃಷ್ಟಿಯಿಂದ, ಆಡಳಿತದ ಹಿತದೃಷ್ಟಿಯಿಂದ ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಲಿ, ಕೆಪಿಎಸ್ಸಿಯಲ್ಲಿ ಆಮೂಲಾಗ್ರ ಬದಲಾವಣೆ ತರುವ ಮೂಲಕ ಇಡೀ ನೇಮಕಾತಿ ವ್ಯವಸ್ಥೆಗೆ ಹೊಸ ಕಾಯಕಲ್ಪ ನೀಡಲಿ ಎಂದು ಅಭ್ಯರ್ಥಿಗಳ ಪರವಾಗಿ ಆಗ್ರಹಿಸುತ್ತೇನೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post