ಕಲ್ಪ ಮೀಡಿಯಾ ಹೌಸ್ | ಕೇರಳ |
ಇಲ್ಲಿನ ಬೇಕಲ್ ಗೋಕುಲಂ ಗೋಶಾಲೆಯಲ್ಲಿ ಪ್ರತಿ ವರ್ಷ ದೀಪಾವಳಿಯ ಉತ್ಸವ ಬಹಳ ವಿಶೇಷ. ಅಂತೆಯೇ, ಈ ವರ್ಷದ ಉತ್ಸವ ಹದಿಮೂರು ದಿವಸ ವರುಣನ ಮಳೆಯ ಝರಿಯ ನಡುವೆ ನಡೆದಿದ್ದು ವಿಶೇಷ.
ದೇವರ ನಾಡಿನಲ್ಲಿ ಸಂಗೀತದ ನವರಸದ ಝರಿ ಎಲ್ಲರನ್ನೂ ನಂದಗೋಕುಲಕ್ಕೆ ಕೊಂಡೊಯ್ದ ಅನುಭವ. ನಿರಾತಂಕವಾಗಿ ಗಾನಸುಧೆಯಲ್ಲೇ ಲಯಿಸಿರುವ ಇಲ್ಲಿನ ಗೋವುಗಳು ನಿಜಕ್ಕೂ ಧನ್ಯ. ಇಡೀ ದಿನ ಅನವರತ ಸಂಗೀತದ ಸುರಿಮಳೆ ಇದಕ್ಕೆ ಈ ಬಾರಿ ಪೂರಕ.
ಕಛೇರಿಗಳನ್ನು ನಡೆಸಿಕೊಟ್ಟವರು ನಮ್ಮ ನಾಡಿನ ಹೆಸರಾಂತ ಕಲಾವಿದರಿಂದ ಹಿಡಿದು ಉದಯೋನ್ಮುಖ ಪ್ರತಿಭೆಗಳವರೆಗೂ ಎಲ್ಲ ಕಲಾವಿದರೂ ಗೋಪೂಜೆಯನ್ನು ಮಾಡಿ ಕಾರ್ಯಕ್ರಮವನ್ನು ನಡೆಸಿಕೊಡುವುದು ಇಲ್ಲಿಯ ಕ್ರಮ. ಈ ಕಾರ್ಯಕ್ರಮಕ್ಕೆ ಕಲಾವಿದರನ್ನು ಆಹ್ವಾನಿಸುವುದರಿಂದ ಹಿಡಿದು, ವೇಳಾಪಟ್ಟಿಗಳ ಆಯೋಜನೆ, ಸಭೆಯ ವಿನ್ಯಾಸ ಹಾಗೂ ಪೂರ್ವ ಸಿದ್ಧತೆಗಳು, ಎಲ್ಲ ಕಲಾವಿದರು ಹಾಗೂ ಪರಿವಾರದವರಿಗೆ ಊಟ ಹಾಗೂ ವಸತಿ ಸೌಕರ್ಯ ಒದಗಿಸುವ ಹೊಣೆ, ಬರುವ ಎಲ್ಲ ರಸಿಕ ಬಂಧುಗಳಿಗೂ (ಸಾವಿರ ಸಂಖ್ಯೆಯ ಜನಸ್ತೋಮ) ಊಟ ಉಪಹಾರಗಳ ವ್ಯವಸ್ಥೆ ಹೀಗೆ ಪ್ರತಯೊಂದು ವಿಚಾರವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿರುವುದು ಉತ್ಸವದ ಯಶಸ್ಸಿನ ಹೆಗ್ಗಳಿಕೆ ಅವರದ್ದು.
ಇನ್ನು, ಇವೆಲ್ಲದರೊಂದಿಗೆ ದೀಪಾವಳಿಯ ಆಚರಣೆ, ಗೋವುಗಳ ಪಾಲನೆ, ಇತ್ಯಾದಿ. ಒಂದು ಕಾರ್ಯಕ್ರಮದ ಸಮರ್ಪಕ ಆಚರಣೆಗೆ ಅತ್ಯುತ್ತಮ ತಂಡ ಅವಶ್ಯಕ. ಇಂತಹ ತಂಡವನ್ನು ನಿರ್ಮಿಸಿ ಅದಕ್ಕೆ ಮಾರ್ಗದರ್ಶನ ನೀಡುತ್ತಿರುವವರು ಬೇಕಲ್ ಗೋಕುಲಂ ಗೋಶಾಲೆಯ ಸಂಸ್ಥಾಪಕರಾದ ಶ್ರೀ ವಿಷ್ಣುಪ್ರಸಾದ್ ಹೆಬ್ಬಾರ್ ಹಾಗೂ ಶ್ರೀಮತಿ ನಾಗರತ್ನ ಹೆಬ್ಬಾರ್ ದಂಪತಿಗಳು.
ವಿಷ್ಣು ಪ್ರಸಾದವರು ನಾಡಿನ ಹೆಸರಾಂತ ಜ್ಯೋತಿಷಿಗಳು. ಡಾ.ನಾಗರತ್ನ ಹೆಬ್ಬಾರ್ ಲಂಡನ್ನಿನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವೀಧರರು. ನಮ್ಮ ನಾಡಿನ ಶ್ರೇಷ್ಠ ಕಲೆಗಳಾದ ಸಂಗೀತ ನೃತ್ಯಗಳ ಬೆಳವಣಿಗೆಗೆ ಶ್ರಮಿಸುತ್ತಿರುವ ಈ ದಂಪತಿಗಳ ಸೇವೆ ಶ್ಲಾಘನೀಯ, ಅನುಕರಣೀಯವಾದುದು.
2021ರಿಂದ ಬೇಕಲ್ ಗೋಕುಲಂ ಗೋಶಾಲೆಯ ಪರಂಪರ ವಿದ್ಯಾಪೀಠ, ದೀಪಾವಳಿಯಲ್ಲಿ ಗೋಪೂಜೆ ಹಾಗೂ ಸಂಗೀತೋತ್ಸವಗಳನ್ನು ಪ್ರಾರಂಭಿಸಿದೆ.

ಸಂಗೀತ ಕಲಾನಿಧಿ, ಪದ್ಮವಿಭೂಷಣ, ವಿ.ಟಿ.ವಿ.ಗೋಪಾಲಕೃಷ್ಣ, ಭರತನಾಟ್ಯದ ಮೇರು ಕಲಾವಿದರಾದ ಪದ್ಮವಿಭೂಷಣ ಗುರು ಡಾ. ಪದ್ಮ ಸುಬ್ರಹ್ಮಣ್ಯಮ್, ಡ್ರಮ್ಸ್ ಮಾಂತ್ರಿಕರಾದ ಪದ್ಮಶ್ರೀ, ಕಲೈಮಾಮಣಿ ಡಾ. ಶಿವಮಣಿ, ಸಂಗೀತ ವಿದ್ಯಾನಿಧಿ ಮಾನ್ಯ ಡಾ.ವಿದ್ಯಾಭೂಷಣರು, ಭಾಗವಹಿಸಿ ಕಾರ್ಯಕ್ರಮ ನೀಡಿದ್ದು ಯುವ ಕಲಾವಿದರಿಗೆ ಸ್ಫೂರ್ತಿದಾಯಕವಾಗಿತ್ತು.
ವಿ.ಅಭಿಷೇಕ್ ರಘುರಾಮ್, ಬೆಂಗಳೂರು ಸಹೋದರರು, ವಿ.ಪಟ್ಟಾಬಿರಾಮ ಪಂಡಿತ್, ಚಿತ್ರವೀಣ ಗಣೇಶ್, ವೀಣಾ ವಿದ್ವಾಂಸರುಗಳಾದ ಶ್ರೀ ಎ. ಅನಂತಪದ್ಮನಾಭ, ವಿದುಷಿ ಶ್ರೀಮತಿ ಜಯಲಕ್ಷ್ಮಿ ಶೇಖಋ, ವಿ.ಆರ್.ಕೆ.ಪದ್ಮನಾಭ, ಶ್ರೀ ರಾಜೇಶ್ ವೈದ್ಯ, ವಿ.ಕಣ್ಣನ್ ಬಾಲಕೃಷ್ಣನ್, ವಿ.ಮುಡಿಗೊಂಡಾನ್ ರಮೇಶ್, ವಿ.ಯೋಗವಂದನ, ಬೋನಾಲ ಶಂಕರ ಪ್ರಕಾಶ್, ವಿ.ಸುಕನ್ಯ ರಾಮಗೋಪಾಲ್, ವಿ. ಚೆಂಕೊಟ್ಟೆ ಹರಿಹರ ಸುಬ್ರಹ್ಮಣ್ಯಂ ತಂಡ, ವಿ. ಶಿವಶ್ರೀ ಸ್ಕಂದ ಪ್ರಸಾದ್ ಮುಂತಾದ ಸಂಗೀತದ-ನೃತ್ಯದ ದಿಗ್ಗಜರುಗಳಿಂದ ಹಿಡಿದು ಉದಯೋನ್ಮುಖ ಕಲಾವಿದರವರೆಗೂ ಅನೇಕ ಕಛೇರಿಗಳು ನಡೆಯಿತು.
ವಿ.ಎಸ್.ವಿ.ಸಹನ, ಶ್ರೀ ರಮಣ ಬಾಲಚಂದರ್, ಕು.ಚಾರುಲತ ಚಂದ್ರಶೇಖರ್, ಪಾವನ ಆಚಾರ್ಯ ಮತ್ತು ತಂಡ, ಸ್ನೇಹ ಗೋಮತಿ, ವೈ.ಜಿ.ಶ್ರೀಲತಾ ನಿಕ್ಷಿತ್, ವಿ. ಎಮನಿ ಲಲಿತ ಕೃಷ್ಣ, ವಿ.ಪೂರ್ಣ ಕೃಷ್ಣ, ಮುಂತಾದ ವೈಣಿಕರಿಂದ ಸುಶ್ರಾವ್ಯವಾದ ವೀಣಾನಾದದ ವೈಭವವಾದರೆ, ವಿ. ಪರೂರ್ ಎಂ.ಎ. ಕೃಷ್ಣಸ್ವಾಮಿ, ವಿ. ಅನಂತ ಬಾಲ ಸುಬ್ರಹ್ಮಣ್ಯ, ವಿ.ಅನಂತಲಕ್ಷ್ಮಿ, ವಿ. ವಿಟ್ಟಲ್ ರಾಮಮೂರ್ತಿ, ವಿ.ಬಿ. ಅನಂತಕೃಷ್ಣ, ಶ್ರೇಯ ಅನಂತ್, ಮುಂತಾದ ಘನ ವೈಲಿನ್ ವಾದನದ ಸುನಾದ ಹರಿಯುತ್ತಿರಲು, ವಿ. ಜಯಂತ್, ವಿ. ಶ್ರುತಿ ಸಾಗರ್, ವಿ. ಚಂದನ್ ಕುಮಾರ್ ಮತ್ತು ಅನೇಕ ಸುಮಧುರ ವೇಣುನಾದ ಮೊಳಗುತ್ತಿರಲು, ಮ್ಯಾಂಡೊಲಿನ್, ನಾದಸ್ವರ, ಸ್ಯಾಕ್ಸೊಫೋನ್, ಕೀಬೋರ್ಡ್, ಘಟತರಂಗ, ಕಛೇರಿಗಳು, ಎಂಬತ್ತಕ್ಕೂ ಮೀರಿ ಉತ್ತಮ ಹಾಡುಗಾರಿಕೆ ಕಛೇರಿಗಳು, ಅನೇಕ ನೃತ್ಯ ಕಾರ್ಯಕ್ರಮಗಳು, ಸಮೂಹ ಗಾಯನ, ಭಜನೆ, ನಾಮ ಸಂಕೀರ್ತನೆ, ಹಿಂದುಸ್ತಾನಿ ಗಾಯನ, ಇವೆಲ್ಲಕ್ಕೂ ಉತ್ತಮ ವೈಲಿನ್, ಮೃದಂಗ, ಖಂಜಿರ, ಮೋರ್ಸಿಂಗ್ ವಾದ್ಯಗಳ ಸಹಕಾರ, ಹೀಗೆ ಈ ಸಂಗೀತ ಝರಿಯು ಎಲ್ಲರ ಮನ ತಣಿಸಿತು. ಪ್ರತಿದಿನ ಪ್ರೇಕ್ಷಕರ ಸಂಖ್ಯೆ ಏಳೆಂಟು ಸಾವಿರ ಮೀರಿತ್ತು.
ಕಿಕ್ಕಿರಿದ ಜನಸ್ತೋಮ ಸಂತಸದಿಂದ ಮಾಡುತ್ತಿದ್ದ ಕರತಾಡನ ಮುಗಿಲುಮುಟ್ಟಿತು. ಮೀರಾಬಾಯಿಯ ಭಜನ್ ‘ಪಗಗುಂಗುರು’ ವರ್ಣಕ್ಕೆ ಅಳವಡಿಸಿದ ಅದ್ಭುತ ಪ್ರಸ್ತುತಿ ಇವರ ಕಾರ್ಯಕ್ರಮದ ಮುಖ್ಯ ಬಂಧ. ಈ ನೃತ್ಯಕ್ಕೆ ಮೊದಲು ಇವರ ಶಿಷ್ಯರಾದ ಮಹತಿ ಕಣ್ಣನ್ ಹಾಗೂ ರಮ್ಯ ವೆಂಕಟರಾಮನ್ ಪ್ರಕೃತಿಯಿಂದ ಪರ ಎಂಬ ಶೀರ್ಷಿಕೆಯಡಿ ಅತ್ಯುತ್ತಮ ನೃತ್ಯ ಪ್ರದರ್ಶನ ನೀಡಿದರು.
ದೀಪಾವಳಿ ಸಂಗೀತೋತ್ಸವದ ಕಡೆಯ ಕಾರ್ಯಕ್ರಮ ಮರೆಯಲಾಗದ ಡ್ರಮ್ಸ್ ಶಿವಮಣಿಯವರ ‘ಶಿವತರಂಗಂ’. ಡ್ರಮ್ಸ್, ಆಕ್ಟೋಬಾನ್, ಡರ್ಬೂಕಾ, ಉಡುಕ್ಕೆ, ಹೊಸ ವಿನ್ಯಾಸದ ಘಟ, ಖಂಜಿರ, ಶೇಕರ್ಸ್, ಕಿಕ್ ಡ್ರಮ್, ಸ್ನೇರ್ ಡ್ರಮ್ ಗಳು, ಟಾಬೋರ್, ಬಾಸ್ ಡ್ರಮ್, ಸಿಂಬಲ್ಸ್, ಹೀಗೆ ಇಪತ್ತಕ್ಕೂ ಹೆಚ್ಚು ತಾಳವಾದ್ಯಗಳನ್ನು ಬಳಸಿ ನೀಡಿದ ವಿಶೇಷ ಕಾರ್ಯಕ್ರಮ.
ವಿಷ್ಣುಪ್ರಸಾದ್ ಹೆಬ್ಬಾರ್ ಅವರ ವಿಶೇಷ ಪರಿಕಲ್ಪನೆಯ ಅಪರೂಪದ ಕಾರ್ಯಕ್ರಮ ನಂದೀಶಂ , ಉತ್ತಮ ಹೊಸ ಪ್ರಯೋಗ. ಕೇರಳದ ಪ್ರಸಿದ್ಧ ಪಂಚವಾದ್ಯಗಳಾದ ‘ತಿಮಿಲ’, ಮದ್ದಳಂ’, ‘ಇಡಕ್ಕ’, ‘ಲದ್ದಳಂ’, ಕೊಂಬುಗಳೊಂದಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತದ ವಾದ್ಯಗಳಾದ ವೀಣೆ, ವೃಲಿನ್, ಮೃದಂಗ, ಘಟ, ಖಂಜಿರಗಳ ಮೇಳೈಕೆಯ ಮೊದಲ ಪ್ರಯತ್ನವೇ ಅದ್ಭುತ ಯಶಸ್ಸನ್ನು ಕಂಡಿತು.
ಪದ್ಮವಿಭೂಷಣ ವಿ.ಟಿ.ವಿ. ಗೋಪಾಲಕೃಷ್ಣ ಅವರ ರೋಮಾಂಚಕ ಕಛೇರಿ ಸದಾ ಕಿವಿಯಲ್ಲಿ ಮೊಳಗುತ್ತಿರುತ್ತದೆ.ಅಸಾಧಾರಣ ಪಾಂಡಿತ್ಯದಿಂದ ಕೂಡಿದ ಪ್ರಸ್ತುತಿ ವಿ.ಮೂಳಿಕುಲಮ್ ಕೆ.ಆರ್. ಹರಿಕೃಷ್ಣ. ವಿದ್ವತ್ಪೂರ್ಣ ಕಛೇರಿಗಳನ್ನು ನೀಡಿದ ಎಲ್ಲ ಗಣ್ಯ ಕಲಾವಿದರಿಗೆ ಅಭಿನಂದನೆಗಳು ಸಲ್ಲುತ್ತದೆ.
ಕಡೆಯ ದಿನದಂದು ಈ ವರ್ಷದ ಗೋಶಾಲೆಯ ಪುರಸ್ಕಾರಗಳನ್ನು ನೀಡಲಾಯಿತು. ಈ ವರ್ಷದ ಗೌರವಗಳಿಗೆ ಪಾತ್ರರಾದ ಕಲಾವಿದರುಗಳು, ‘ಪರಂಪರ ವಿಭೂಷಣ, ಟಿ.ವಿ.ಗೋಪಾಲಕೃಷ್ಣ, ‘ಪರಂಪರ ಶ್ರೀ’ ಡಾ.ಶಿವಮಣಿ, ‘ಪರಂಪರ ಗುರುರತ್ನ ‘ವಿ.ಎ. ಅನಂತಪದ್ಮನಾಭನ್, ‘ಪರಂಪರ ಯುವ ಪ್ರತಿಭ ‘ ವಿ.ಶಿವಶ್ರೀ ಸ್ಕಂದಪ್ರಸಾದ್, ‘ಪರಂಪರ ಬಾಲ ಪ್ರತಿಭ’, ರಾಘವ್ ಕೃಷ್ಣ, ಮ್ಯಾಂಡೊಲಿನ್.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post