ಅತುಲಾವೃಷ್ಟಿರತ್ಯುಗ್ರಂ ಡಾಮರಂ ಕೀಟಗೇ ಗುರೌ
ವಿಶಾಖಾಯಾಂ ಚ ರಧಾಯಾಂ ಸಸ್ಯಸಂ ಭವತಿ ಮದ್ಯಮಂ
ಮಧ್ಯಮೈವ ಭವೇದ್ವರ್ಷಾ ವರ್ಷಂ ತದಪಿ ಮಧ್ಯಮಂ
ಗುರೋಜ್ಯೇಷ್ಟಾಮೂಲ ಚಾರೇ ಮಾಸದ್ವಯೇ ನ ವರ್ಷಣಂ
ಪರತಃ ಖಂಡ ವೃಷ್ಟಿಃ ಸ್ಯಾನೃಪಾಣಾಂ ದಾರುಣೋ ರಣಃ॥
ನಾಷ್ಟ್ರಾಡಾಮಸ್ 400 ವರ್ಷಗಳ ಹಿಂದೆಯೇ ಹಾಗೆ ಹೇಳಿದ್ದ, ಹೀಗೆ ಹೇಳಿದ್ದ ನಿಖರ ಭವಿಷ್ಯ ಹೇಳಿದ್ದ ಎಂದು ಒಂದಷ್ಟು ಬಂಡಲ್ ಸೇರಿಸಿ ದೃಶ್ಯ ಮಾಧ್ಯಮಗಳಲ್ಲಿ ತೋರಿಸುತ್ತಿದ್ದುದನ್ನು ನೋಡಿದ್ದೇವೆ. ಅವನೂ ಇದೇ ತರಹ ಅವನ ಭಾಷೆಯಲ್ಲಿದ್ದ ವಾಕ್ಯಗಳನ್ನು ಹೇಳಿರಬಹುದಷ್ಟೆ. ಆದರೆ ಅದಕ್ಕಿಂತಲೂ ನಿಖರವಾಗಿ ಪರಾಶರ ಮುನಿಗಳು ಸಾವಿರಾರು ವರ್ಷಗಳ ಹಿಂದೆಯೇ ಬರೆದಿದ್ದರು. ಅವರಿಗಿಂತಲೂ ಪೂರ್ವದಲ್ಲಿ ಯಾರ್ಯಾರು ಹೇಳಿದ್ದರೋ ಗೊತ್ತಿಲ್ಲ. ಅಂತೂ ಇದರ ಮೂಲ ಪುರುಷ ಬ್ರಹ್ಮದೇವರು.
28 ನೆಯ ಮಹಾಯುಗದ, ವೈವಸ್ವತ ಮನ್ವಂತರದ, 2018 ನೆಯ ಇಸವಿ ಕಲಿಯುಗದ ಪ್ರಥಮ ಪಾದದಲ್ಲಿ, 18699337ನೆಯ ದಿನದ ವಿಲಂಬಿ ಸಂವತ್ಸರದ, ಅಶ್ವಯುಜ ಶುಕ್ಲ ತೃತೀಯ, ಸೂರ್ಯೋದಯದ ನಂತರದ 28 ಘಳಿಗೆಯಲ್ಲಿ ಗುರುವು ವಿಶಾಖ ನಕ್ಷತ್ರದ ನಾಲ್ಕನೆಯ ಚರಣ ಪ್ರವೇಶಿಸುತ್ತಾನೆ ಎಂದು ಸಾವಿರಾರು ವರ್ಷಗಳ ಹಿಂದೆಯೇ ಹೇಳಿದ್ದಾರೆ. ಅಂದರೆ 11.10.2019 ನೆಯ ತಾರೀಕು ಸುಮಾರು ಸಂಜೆ 5 ಘಂಟೆಯ ಹೊತ್ತಿಗೆ ಗುರು ವೃಶ್ಚಿಕ ರಾಶಿಯಲ್ಲಿ ಉದಯಿಸುತ್ತಾನೆ ಎಂದರ್ಥ.
ವೃಶ್ಚಿಕ ಗುರು ಫಲ-
30° ದೂರವನ್ನು ಗುರುವು ಸಾಮಾನ್ಯವಾಗಿ, ನೈಸರ್ಗಿಕ ವೇಗದಲ್ಲಿ ಕ್ರಮಿಸಲು ತೆಗೆದುಕೊಳ್ಳುವ ಕಾಲ 12 ತಿಂಗಳು. ಆದರೆ ಈ ಸಲದ ವೃಶ್ಚಿಕ ರಾಶಿ ಸಂಚಾರವು ಕೇವಲ ಐದು ತಿಂಗಳು ಮಾತ್ರ. ಐದು ತಿಂಗಳಲ್ಲಿ ಧನುರಾಶಿ ಪ್ರವೇಶಿಸಿ ಮತ್ತೆ ವಕ್ರನಾಗಿ ವೃಶ್ಚಿಕಕ್ಕೆ ಬರುತ್ತಾನೆ. ಎಷ್ಟು ವೇಗದಲ್ಲಿ ವೃಶ್ಚಿಕ ರಾಶಿಯನ್ನು ಮುಗಿಸುತ್ತಾನೋ ಅಷ್ಟೇ ವೇಗದಲ್ಲಿ ಮತ್ತೆ ವಕ್ರನಾಗಿ ಹಿಂದೆಯೂ ಬರುತ್ತಾನೆ. ಈ ಗುರುವಿನ ಚಾರವು ಅತಿಚಾರವಾಗುತ್ತದೆ. ಇದು ಕ್ಷಿಪ್ರ, ಕ್ಷಿಪ್ರ ಫಲಕ್ಕೆ ಕಾರಣವೂ ಆಗುತ್ತದೆ.
ಏನು ಫಲ ನಿರೀಕ್ಷಿಸಬಹುದು?
ಗುರುವಿನ ಈ ಚಾರ ಫಲವು ಭೂಮಿಗೆ ಮಾತ್ರ ಅತಿಯಾದ ಫಲವಾಗುತ್ತದೆ. ನೈಸರ್ಗಿಕ ಲಗ್ನವಾದ ಮೇಷರಾಶಿಗೆ ಅಷ್ಟಮವಾಗುತ್ತದೆ. ಇದು ದೇವತಾ ವಿಚಾರದಲ್ಲಿ ಮಾಡಬಾರದಂತಹ ಕೆಲಸಗಳಿಗೆ ಪ್ರಚೋದನೆಯಾಗುತ್ತದೆ. ನ್ಯಾಯಾಲಯಗಳು ಶಾಸನ ಬದ್ಧವಾಗಿ ನ್ಯಾಯ ನೀಡುವಂತದ್ದು ಆದರೂ ವಿವೇಚನೆ ಇಲ್ಲದ ತೀರ್ಮಾನ ನೀಡಬಹುದು. ಅದರಂತೆ ಪ್ರವಾಹ, ಸುನಾಮಿ, ಭೂಕಂಪನದಂತಹ ಪ್ರಕೃತಿ ವಿಕೋಪಗಳೂ ಉಂಟಾದೀತು.
ಇನ್ನು, ಪ್ರಜೆಗಳ ವಿಚಾರ ನೋಡಿದರೆ ಇವರಲ್ಲೂ ಅತಿಯಾದ ಬುದ್ಧಿವಂತಿಕೆ ಪ್ರಯೋಗವಾದೀತು. ಉದಾಹರಣೆಗೆ ಇಂಜಕ್ಷನ್ ಕೊಡುವ ಕಾಂಪೌಂಡರ್ ವೈದ್ಯನಾದಾನು. ರಾಶಿ ಭವಿಷ್ಯ ಮಾತ್ರ ಕಲಿತ ಜ್ಯೋತಿಷ್ಯನು ಘನ ಪಂಡಿತನಂತೆ ಫಲ ಭಾಗ ಹೇಳಿಯಾನು. ನಿನ್ನೆ ರಾಜಕೀಯಕ್ಕೆ ಇಳಿದ ವ್ಯಕ್ತಿಯು ನಾನೇ ದೊಡ್ಡ ರಾಜಕಾರಣಿ ಎಂದಾನು. ವಾಹನ ಚಾಲಕನು ವಿಮಾನ ಚಾಲಕನಂತಾದಾನು. ಇದೆಲ್ಲ ವೈಪರೀತ್ಯಗಳು. ಇದರ ಫಲವು ಒಂದು ರೀತಿಯ ಸಂಗ್ರಾಮಕ್ಕಿಳಿಯುವಂತೆ ಆದೀತು.
ಇನ್ನೊಂದು ವಿಕೃತಿಯ ಲಕ್ಷಣ ಇದೆ. ಅಸುರ ಎಂದರೆ ಸುರಾಪಾನ ಮಾಡದವನು; ಅ-ಸುರ; ಸುರಾಧಿಪ ಎಂದರೆ ಸುರೆಯ ಅಧಿಪ; ಮೈಸೂರು ಎಂದರೆ ಮಹಿಷಾಸುರನ ಊರು. ಮಹಿಷ+ ಅ+ ಸುರ ಅಂದರೆ ಸುರಾಪಾನ ಮಾಡದ ಹೈನುಗಾರಿಕೋದ್ಯಮಿ, ರಾಕ್ಷಸ ಎಂದರೆ ರಕ್ಷಿಸುವವನು, ಎಂದೆಲ್ಲ ಅರ್ಥ ಅಪಾರ್ಥ ಮಾಡಿ ಹೇಳಿ ಜನರಲ್ಲಿ ಗೊಂದಲ ಮೂಡಿಸುವ ಸಾಹಿತಿಗಳು ಹುಟ್ಟಿಕೊಳ್ಳುತ್ತಾರೆ.
ಅತುಲಾವೃಷ್ಟಿರತ್ಯುಗ್ರಂ ಡಾಮರಂ ಕೀಟಗೇ ಗುರೌ ಎಂದು ಇದನ್ನೇ ಸಂಕ್ಷಿಪ್ತವಾಗಿ ಹೇಳಿದ್ದು. ಒಟ್ಟಿನಲ್ಲಿ ಯಾವುದೇ ಗುಣಗಳು ನಿಯಂತ್ರಣ ತಪ್ಪಿ ಅತಿಯಾಗಿ ಬಿಡುವ ಸಾಧ್ಯತೆಗಳು ಹೆಚ್ಚು. ಇಂತಹ ಸ್ಥಿತಿಯು (ಇದಕ್ಕಿಂತಲೂ ಹೆಚ್ಚು) ಸಾವಿರ ವರ್ಷ ಹಿಂದೆ ಮೀನದಿಂದ ಮೇಷ ಸಂಚಾರದಲ್ಲಿ ಆಗಿತ್ತು. ಕೇವಲ 30°ಯನ್ನು ಒಂದೇ ತಿಂಗಳಿನಲ್ಲಿ ಕ್ರಮಿಸಿದ್ದು ಅತ್ಯಂತ ದೊಡ್ಡ ಚಾರ. ಇದರ ಪರಿಣಾಮ ಮೆಕ್ಸಿಕೋ ನಗರದ ಜ್ವಾಲಾಮುಖಿಯು ಇಡೀ ನಗರವನ್ನೇ ಬಲಿತೆಗೆದುಕೊಂಡಿತ್ತು. ಮಹಾಭಾರತದ ಕೃಷ್ಣನ ಅಂತ್ಯಕಾಲದಲ್ಲಿ ಇಂತಹ ಚಾರದ ಪರಿಣಾಮದಿಂದ ಸಸ್ಯಭರಿತವಾದ ಅರಬ್ ರಾಷ್ಟ್ರವು ಮರುಭೂಮಿಯಾಯ್ತು. ಆದರೆ ಈ ಸಲದ ವೃಶ್ಚಿಕ ಚಾರದ ಗುರುವಿನಿಂದ ಅಂತಹದ್ದೇನೂ ಆಗದಿದ್ದರೂ ವಿಕೃತರು ಇನ್ನಷ್ಟು ವಿಕೃತರಾದರೆ, ಸಜ್ಜನರು ಇನ್ನಷ್ಟು ಸಜ್ಜನರಾಗಿ ಮೌನದಿಂದ ಇರಬಹುದು. ದೇಶದ ಒಳಗೆ ಅಂತಃಕಲಹವಾದರೆ, ಗಡಿಯ ವಿಚಾರದಲ್ಲಿ ಸಂಘರ್ಷಗಳಾದೀತು.
ಕೊನೆಯದ್ದಾಗಿ…
ಇದರ ಫಲಗಳು ಈಗಲೇ ಗೋಚರಕ್ಕೆ ಬರುತ್ತಿವೆ. ನ್ಯಾಯಾಲಯಗಳ ಇತ್ತೀಚೆಗಿನ ತೀರ್ಮಾನಗಳು, ಪ್ರಕೃತಿ ವಿಕೋಪಗಳು, ಅಯೋಧ್ಯೆಯನ್ನು ವಿರೋಧಿಸುವ ಜನ ಮತದ ಬೇಟೆಗಾಗಿ ಅದೇ ರಾಮನಿಗೆ ಪೂಜೆ ಮಾಡುವುದು ಇತ್ಯಾದಿ ಸೂಚನೆ (clue) ಕಾಣಬಹುದು. ಇದು ಅತೀಯಾಗಿ(extream) ಹೋಗುವ ಸಾಧ್ಯತೆಗಳಿವೆ.
ಪರಿಹಾರ ಹೇಗೆ? ಏನು?
ಆದಷ್ಟು ಊಹಾಪೋಹಗಳಿಗೆ ಕಿವಿಕೊಡದೆ, ಸಜ್ಜನಿಕೆಯಲ್ಲಿ ಶಾಂತವಾಗಿದ್ದರೆ ಅಪಾಯಗಳು ಕಡಿಮೆ. ಗುರು ಪ್ರೀತ್ಯರ್ಥ ವಿಷ್ಣು, ರುದ್ರದೇವರ ಸೇವೆ, ಗುರುಗಳಾದ ರಾಘವೇಂದ್ರ ಸ್ವಾಮಿಗಳಿಗೆ ವಂದನೆ, ಆಚಾರ್ಯರುಗಳಾದ ಶಂಕರ, ಮಧ್ವ, ರಾಮಾನುಜರ ಸ್ಮರಣೆಗಳನ್ನು ಮಾಡಿದರೆ ಮನಃಶಾಂತಿ ಇದೆ.
-ಪ್ರಕಾಶ್ ಅಮ್ಮಣ್ಣಾಯ,
ಜ್ಯೋರ್ತಿವಿಜ್ಞಾನಂ
Discussion about this post