ನಾವು ನಿತ್ಯ ಪೀಠದಲ್ಲಿ ಮಾಡುವ ಪೂಜೆ ತತ್ವಾಭಿಮಾನಿ ದೇವತೆಗಳನ್ನು ಕುರಿತು ಮಾಡುವ ಯಜ್ಞವಾದರೆ, ಶ್ರಾದ್ಧ- ಪಿತೃದೇವತೆಗಳನ್ನು ಕುರಿತು ಮಾಡುವ ಯಜ್ಞ. ನಮ್ಮಲ್ಲಿ ಅನೇಕರಿಗೆ ಒಂದು ತಪ್ಪು ಕಲ್ಪನೆ ಇದೆ. ಶ್ರಾದ್ಧ ದೇಹ ತ್ಯಾಗ ಮಾಡಿದ ಜೀವಕ್ಕೆ’ ಎಂದು. ಆದರೆ ಇದು ಸರಿಯಲ್ಲ. ಶ್ರಾದ್ಧ ಸ್ಥೂಲ ದೇಹವನ್ನು ತ್ಯಜಿಸಿ ಸೂಕ್ಷ್ಮ ಶರೀರದಲ್ಲಿರುವ ಜೀವವನ್ನು ನಿಯಂತ್ರಿಸುವ ಪಿತೃದೇವತೆಗಳಿಗೆ’ ಮಾಡುವಂತದ್ದು.
ವಿಶೇಷವಾಗಿ ಹತ್ತು ಮಂದಿ ವಿಶ್ವೇದೇವತೆಗಳು(ಕ್ರತು, ದಕ್ಷ, ವಾಸು, ಸತ್ಯ, ಕಾಮ, ಕಾಲ, ಧುರಿ, ಲೋಚನ, ಪುರೂರವ ಆರ್ದ್ರವ); ಇವರಲ್ಲಿ ಪುರೂರವ ಮತ್ತು ಆರ್ದ್ರವರದ್ದು ಪಿತೃಗಣದ ನಿಯಮನ ಮಾಡತಕ್ಕಂತಹ ಖಾತೆ. ಪಿತೃದೇವತೆಗಳ ಗಣ ಹತ್ತು(ನೂರು ಮಂದಿ ಪಿತೃಗಳಲ್ಲಿ ಇವರು ಪ್ರಧಾನರು): ಯಮ, ಸೋಮ, ಕವ್ಯವಾಹ(ಇವರು ಮೂವರು ಪಿತೃಪತಿಗಳು), ಸೋಮಸದರು, ಅಗ್ನಿಷ್ವಾತ್ತರು, ಬಹಿರ್ಷದರು, ಸೋಮಪರು, ಹವಿರ್ಭುಜರು, ಅಜ್ಯಪರು, ಸುಕಾಲಿಗಳು.
ನಾವು ಪಿಂಡ ಹಾಕುವುದು ಜೀವದ ಹಸಿವು ನೀಗಲಿಕ್ಕೆ ಅಲ್ಲ. ನಮ್ಮ ಹಿರಿಯರು ಸ್ವರ್ಗಕ್ಕೆ ಅಥವಾ ನರಕಕ್ಕೆ ಹೋಗುವುದು ಅವರು ಮಾಡಿದ ಕರ್ಮಫಲದಿಂದ ಹೊರತು ನಾವು ಹಾಕಿದ ಶ್ರಾದ್ಧದಿಂದಲ್ಲ. ಶ್ರಾದ್ದ ಏಕೆಂದರೆ ಪಿತೃದೇವತೆಗಳ ಸ್ವಾದೀನದಲ್ಲಿರುವ ಜೀವ ಯಾವುದೋ ದುರಿತದ ಪ್ರಭಾವದಿಂದ ದಾರಿಯಲ್ಲಿ ತಡೆಯನ್ನು ಎದುರಿಸಬೇಕಾಬಹುದು. ಆ ಸಮಯದಲ್ಲಿ ಅದನ್ನು ನಿವಾರಣೆ ಮಾಡುವ ಕರ್ಮಾನುಷ್ಠಾನ ಆ ಸೂಕ್ಷ್ಮ ಶರೀರದಲ್ಲಿ ಇರುವುದಿಲ್ಲ. ಅದಕ್ಕೋಸ್ಕರ ಅಂತಹ ಪ್ರತಿಬಂಧಕಗಳಿಂದ ಅವರನ್ನು ಪಾರು ಮಾಡಿ ಮುಂದೆ ಸಾಗಲು ನೆರವು ಕೋರಿ ಮಾಡುವ ಪಿತೃದೇವತೆಗಳ ಪೂಜೆಯೇ ಶ್ರಾದ್ಧ. ಒಟ್ಟಾರೆ ಇದು ಹಿರಿಯರು ಸತ್ತ ದಿನದ ನೆನಪು, ಅವರಿಗೆ ಕೃತಜ್ಞತೆ ಮತ್ತು ಪಿತೃದೇವತೆಗಳ ಪೂಜೆ.
ಕೃಷ್ಣ ಹೇಳುತ್ತಾನೆ ಸ್ವಧಾ ಅಹಮ್ ಎಂದು. ಮಂತ್ರಗಳು ವಿಳಾಸದಂತೆ, ಸ್ವಾಹ’ ತತ್ವಾಭಿಮಾನಿ ದೇವತೆಗಳಿಗಾದರೆ ಸ್ವಧಾ’ ಪಿತೃದೇವತೆಗಳಿಗೆ. ನನ್ನ ಮುಖೇನವೇ ಶ್ರಾದ್ಧ ಪಿತೃದೇವತೆಗಳಿಗೆ ಸಲ್ಲುವುದು ಎನ್ನುತ್ತಾನೆ ಕೃಷ್ಣ.
ತತ್ವಾಭಿಮಾನಿದೇವತೆಗಳು ಮತ್ತು ಪಿತೃದೇವತೆಗಳ ನಂತರ ಮನುಷ್ಯರು. ಮನುಷ್ಯರ ಮುಖ್ಯವಾದ ಆಹಾರ ಓಷಧಿ’. ಫಲ ಕೊಟ್ಟು ಸಾಯುವ ಗಿಡವನ್ನು ಸಂಸ್ಕೃತದಲ್ಲಿ ಓಷಧಿ’ ಎನ್ನುತ್ತಾರೆ. ಆ ಗಿಡದ ಪ್ರಸವವೇ ಅದರ ಸಾವು. ಮನುಷ್ಯ ತಿನ್ನುವ ದವಸಧಾನ್ಯ ಎಲ್ಲವೂ ಓಷಧಿಗಳು. ಇಂತಹ ಓಷಧಿಗಳ ಸಮುದಾಯವೇ ಔಷಧಿ. ಕೃಷ್ಣ ಹೇಳುತ್ತಾನೆ ಅಹಮ್ ಔಷಧಮ್ ಎಂದು. ನಾವು ತಿನ್ನುವ ದವಸ ಧಾನ್ಯ ಸಲ್ಲುವುದು ಕೂಡಾ ವೈಶ್ವಾನರನಾಗಿ ಒಳಗೆ ಕುಳಿತಿರುವ ಭಗವಂತನಿಗೆ. ಔಷಧ ಕೊಡತಕ್ಕವ, ಅದರಿಂದ ರೋಗ ನಿವಾರಿಸುವವ, ಹಸಿವು ನಿವಾರಿಸಿ ರಕ್ಷಣೆ ಮಾಡುವವ ಭಗವಂತ.
ನಾವು ಬೇರೆ ಬೇರೆ ಮಂತ್ರಗಳಿಂದ ಆಹುತಿಯನ್ನು ಕೊಡುತ್ತೇವೆ. ಈ ಹಿಂದೆ ಹೇಳಿದಂತೆ ಮಂತ್ರ ವಿಳಾಸವಿದ್ದಂತೆ. ಕೊಡುವ ಆಹುತಿ ಎಲ್ಲವೂ ಭಗವಂತನಿಗೆ ಸೇರುವುದಾದರೆ ಬೇರೆಬೇರೆ ವಿಳಾಸವೇಕೆ? ಕೃಷ್ಣ ಹೇಳಿದ ಬೇರೆ ಬೇರೆ ವಿಳಾಸದಲ್ಲಿರುವ ನನಗೆ ಎಂದು! ಭಗವಂತ ಏಕ ಆದರೆ ಆತನ ರೂಪ ಅನೇಕ. ನಾವು ಯಾವ ಮಂತ್ರದಿಂದ ಕಳುಹಿಸಿದರೂ ಕೂಡಾ-ಅದು ಸೇರುವುದು ಎಲ್ಲಾ ಮಂತ್ರದಿಂದ ವಾಚ್ಯನಾದ, ಸರ್ವಶಬ್ದವಾಚ್ಯ ಭಗವಂತನನ್ನು. ಹೀಗೆ ಬೇರೆ ಬೇರೆ ಶಕ್ತಿ ರೂಪವನ್ನು ಬೇರೆ ಬೇರೆ ದೇವತಾ ಪ್ರತೀಕದಲ್ಲಿ ಪೂಜಿಸಿದರೂ ಕೂಡಾ ಪ್ರತಿಯೊಂದು ನಾಮವೂ ಸಹ ಅಂತತಃ ಭಗವಂತನನ್ನೇ ಹೇಳುತ್ತದೆ. ಎಲ್ಲವುದರ ಸಾರವೂ ಭಗವಂತ. ಇದಕ್ಕೆ ಉತ್ತಮ ಉದಾಹರಣೆ ತೆಂಗಿನಕಾಯಿ. ಸಿಪ್ಪೆ ಸಹಿತವಾಗಿರುವ ತೆಂಗಿನಕಾಯಿ ಉರಿಯುವ ಬೆಂಕಿಯಂತೆ; ಸಿಪ್ಪೆಯೊಳಗಿನ ಕಾಯಿ ಬೆಂಕಿಯ ಅಂತರ್ಯಾಮಿ ಅಗ್ನಿ ದೇವತೆಯಂತೆ; ಚಿಪ್ಪಿನ ಒಳಗಿನ ಕೊಬ್ಬರಿ ಅಗ್ನಿ ದೇವತೆಯೊಳಗಿನ ಭಗವಂತನಂತೆ. ಇಲ್ಲಿ ನಾವು ಎಲ್ಲವನ್ನೂ ಕರೆಯುವುದು ತೆಂಗಿನಕಾಯಿ ಅಥವಾ ಅಗ್ನಿ ಎಂತಲೆ. ಹೇಗೆ ನಿಜವಾದ ತೆಂಗಿನಕಾಯಿ ಒಳಗಿನ ಸಾರವೋ ಹಾಗೇ ನಿಜವಾದ ಅಗ್ನಿ ಅಂತತಃ ಅಂತರ್ಯಾಮಿ ಭಗವಂತ. ಈ ಶ್ಲೋಕದಲ್ಲಿ ಕೃಷ್ಣ ಇದನ್ನೇ ಅಹಮ್ ಅಗ್ನಿಃ ಎಂದಿರುವುದು.
ಕೃಷ್ಣ ನಾವು ಆಹುತಿಯಾಗಿ ಕೊಡುವ ಒಂದು ಪ್ರಮುಖ ವಸ್ತುವನ್ನು ಉದಾಹರಣೆಯಾಗಿ ತೆಗೆದುಕೊಂಡು ಹೇಳುತ್ತಾನೆ ಅಹಮ್ ಏವ ಆಜ್ಯಮ್ ಎಂದು. ಆಜ್ಯ ಎಂದರೆ ತುಪ್ಪ. ಆಜ್ಯದಲ್ಲಿ ದೇವತೆಗಳನ್ನು ತಣಿಸುವ ವಿಶಿಷ್ಟ ಶಕ್ತಿ ಇದೆ. ಆಜ್ಯದಲ್ಲಿ ವಿಶಿಷ್ಟ ಶಕ್ತಿಯಾಗಿ ನಾನಿದ್ದೇನೆ ಎನ್ನುವ ಕೃಷ್ಣ ನಾನೇ ಹೋಮದ ಹವಿ (ಅಹಮ್ ಹುತಮ್) ಎನ್ನುತ್ತಾನೆ.
ಹವಿಸ್ಸು ಎಂದರೆ ಭಗವಂತನಿಗೆ ಅರ್ಪಿಸುವ ಹೋಮ ದ್ರವ್ಯ. ಆ ಹವಿಸ್ಸಿನಲ್ಲಿ ವಿಶೇಷ ಶಕ್ತಿ ಇರುವುದು ಆ ಭಗವಂತನಿಂದ. ನಾವು ಅರ್ಪಿಸುವ ಹವಿಸ್ಸು ಎಂದೂ ವ್ಯರ್ಥವಲ್ಲ. ಅಗ್ನಿಗೆ ಅರ್ಪಿಸಿದ ಹವಿಸ್ಸು ಅಗ್ನಿಯಿಂದ ಹೊರ ಹೊಮ್ಮುವ ಏಳು ಬಣ್ಣಗಳ ಮುಖೇನ ವಾತಾವರಣದಲ್ಲಿನ ಸೂರ್ಯ ಕಿರಣದೊಂದಿಗೆ ಸೇರಿ ಸಮಾಜಕ್ಕೆ ಫಲವನ್ನು ಕೊಡುತ್ತದೆ. ಹವಿರ್ಭಾಗವನ್ನು ಸ್ವೀಕರಿಸುವ ಭಗವಂತ ಹವಿರ್ಹರಿಃ . ನಾವು ಯಾವುದೇ ನಾಮವನ್ನುಚ್ಚರಿಸಿ ಹವಿಸ್ಸನ್ನು ಅರ್ಪಿಸಿದರೂ ಅದು ಸೇರುವುದು ಸರ್ವಶಬ್ದ ವಾಚ್ಯನಾದ ಭಗವಂತನನ್ನು. ಸರ್ವ ದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ. ಭಗವಂತ ಎಲ್ಲಾ ಶಬ್ದಗಳಿಂದ ವಾಚ್ಯನಾದವನು. ಆದ್ದರಿಂದ ಯಾವ ಶಬ್ದವನ್ನು ಹೇಳಿದರೂ ಅದು ಸೇರುವುದು ಅವನನ್ನೇ. ಹೀಗೆ ಹವಿಸ್ಸನ್ನು ಸ್ವೀಕರಿಸಿ ಭಕ್ತರ ಪಾಪವನ್ನು ಪರಿಹರಿಸುವ ಭಗವಂತ ಹವಿರ್ಹರಿಃ
ಈ ಶ್ಲೋಕವನ್ನು ಇನ್ನೊಂದು ಆಯಾಮದಲ್ಲಿ ನೋಡಿದರೆ, ಇಲ್ಲಿ ಬರುವ ಒಂದೊಂದು ಶಬ್ದವನ್ನು ಭಗವಂತನಲ್ಲಿ ಅನುಸಂಧಾನ ಮಾಡು ಎನ್ನುವ ಸಂದೇಶವನ್ನು ಕಾಣುತ್ತೇವೆ.
ಕ್ರತುಃ ಭಗವಂತನೇ ಕ್ರತು ಶಬ್ದದ ಮುಖ್ಯಾರ್ಥ. ’ಕ್ರತು’ ಕ್ರಿಯೆ, ಜ್ಞಾನ, ಇತ್ಯಾದಿ ಅರ್ಥವನ್ನು ಕೊಡುತ್ತದೆ. ಕ್ರಿಯಾ ಸ್ವರೂಪ, ಜ್ಞಾನ ಸ್ವರೂಪ ಭಗವಂತ ಕ್ರತುಃ’. ನಮ್ಮಲ್ಲಿ ನಂಬಿಕೆ, ಇಚ್ಛಾಶಕ್ತಿ, ಕ್ರಿಯಾಶಕ್ತಿ ಹಾಗೂ ಅನುಕೂಲತೆ ಕೊಟ್ಟು, ನಮ್ಮ ಹಿಂದೆ ನಿಂತು, ಕ್ರಿಯಾ ಕಲಾಪಗಳನ್ನು ನಡೆಸುವ, ಜ್ಞಾನ ಸ್ವರೂಪನೂ, ಕರ್ಮದ ಕಟ್ಟಿನಿಂದ ನಮ್ಮನ್ನು ಪಾರು ಮಾಡುವನೂ ಆದ ಭಗವಂತ ಕ್ರತುಃ’.
ಯಜ್ಞ -ಯಜ್ಞ ಅಂದರೆ ಎಲ್ಲವನ್ನೂ ತಿಳಿದವನು. ಜ್ಞಾನರೂಪಿಯಾಗಿ ಎಲ್ಲೆಡೆ ಇರುವ ಭಗವಂತ, ಎಲ್ಲಾ ಕ್ರಿಯೆಗಳಿಂದ ಎಲ್ಲರೂ ಆರಾಧಿಸಬೇಕಾದ ಯಜ್ಞದ ಅಂತರ್ಯಾಮಿ.
ಸ್ವಧಾಃ ಎಂದರೆ ತನ್ನನ್ನು ತಾನು ಆದರಿಸಿ ನಿಂತ ಸರ್ವ ನಿಯಾಮಕ. ಭಗವಂತ ಔಷಧಃ’. ಎಂದರೆ ಸಂಸಾರ ತಾಪದಲ್ಲಿ ಬಿದ್ದು ಒದ್ದಾಡುವವ(ಔಷರು)ರಿಗೆ ಆಸರೆ-ಮೋಕ್ಷ ಪ್ರದ.
ಮಂತ್ರಃ ಜ್ಞಾನಪೂರ್ವಕವಾಗಿ ಅನುಸಂಧಾನ ಮಾಡುವವರನ್ನು ರಕ್ಷಣೆ ಮಾಡುವ ಭಗವಂತ ಮಂತ್ರಃ’. ಮಂತ್ರ ನಮ್ಮನ್ನು ರಕ್ಷಣೆ ಮಾಡುವುದು ನಾವು ತಿಳಿದು ಪಠಿಸಿದಾಗ ಮಾತ್ರ. ಇಲ್ಲದಿದ್ದರೆ ಕಿಂಚಿತ್ ಫಲ ಮಾತ್ರ. ಮಹಾಫಲದಿಂದ ವಂಚಿತರಾಗುತ್ತೇವೆ.
ಭಗವಂತ ಎಲ್ಲಕ್ಕಿಂತ ದೊಡ್ಡ ವಸ್ತು ಆದ್ದರಿಂದ ಆತ ಆಜ್ಯಃ. ಚಲಿಸದೇ ಇರುವ ವಸ್ತುವಿಗೆ ಚಲನೆ ಕೊಡುವ ಭಗವಂತ ಅಗ್ನಿಃ. ಎಲ್ಲ ಭಕ್ತರಿಂದ ಆಹುತನಾದ್ದರಿಂದ ಭಗವಂತ ಹುತಃ.
Discussion about this post