ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಇತಿಹಾಸದಲ್ಲೇ ಅತ್ಯಂತ ಪೈಶಾಚಿಕ ಕೃತ್ಯ ಎಂದಾಗಿರುವ ಇಂದು ನಡೆದ ಉಗ್ರರ ದಾಳಿಗೆ ವೀರಸ್ವರ್ಗ ಸೇರಿದ ಯೋಧರ ಸಂಖ್ಯೆ 44ಕ್ಕೆ ಏರಿಕೆಯಾಗಿದೆ.
ಕಾಶ್ಮೀರದ ಇತಿಹಾಸದಲ್ಲೇ ಮೊದಲು ಎನ್ನುವಂತೆ ಉಗ್ರರು ಯುರೋಪ್ ರಾಷ್ಟ್ರಗಳಲ್ಲಿ ನಡೆಯುತ್ತಿದ್ದ ಮಾದರಿಯಲ್ಲಿ ಕಾರಿನಲ್ಲಿ ಸ್ಫೋಟಕ ತುಂಬಿಸಿ ನಡೆಸಿದ ಆತ್ಮಾಹುತಿ ದಾಳಿಯನ್ನು ಉಗ್ರರು ಭಾರತದಲ್ಲಿ ನಡೆಸಿದ್ದಾರೆ. ಇದು ಉರಿ ದಾಳಿಯ ಬಳಿಕ ಭದ್ರತಾ ಪಡೆಗಳನ್ನು ಗುರಿಯಾಗಿಸಿ ನಡೆಸಿದ ಭೀಕರ ದಾಳಿಯಾಗಿದೆ.
ಗೋರಿಪುರ ಪ್ರದೇಶದ ಹೆದ್ದಾರಿಯಲ್ಲಿ ಸಾಗುತ್ತಿದ್ದ ಸಿಆರ್‌ಪಿಎಫ್ ವಾಹನಗಳ ಸಾಲನ್ನು ಗುರಿ ಇರಿಸಿ ಆತ್ಮಾಹುತಿ ದಾಳಿಕೋರನೊಬ್ಬ ಸ್ಫೋಟಕ ತುಂಬಿದ ಕಾರನ್ನು ಗುದ್ದಿಸಿದ್ದಾನೆ. ಪರಿಣಾಮವಾಗಿ ಸೇನಾ ವಾಹನ ಛಿದ್ರ ಛಿದ್ರವಾಗಿದ್ದು ಈವರೆಗೂ 44 ಯೋಧರು ವೀರಸ್ವರ್ಗ ಸೇರಿದ್ದಾರೆ.
ಯುರೋಪ್ ರಾಷ್ಟಗಳಲ್ಲಿ ಸಾಮಾನ್ಯವಾಗಿ ಉಗ್ರರು ಅನುಸರಿಸುವ ಮಾದರಿಯಲ್ಲಿ ಭಾರತದ ಮಟ್ಟಿಗೆ ಇದೇ ಮೊದಲ ಬಾರಿಗೆ ದಾಳಿ ನಡೆಸಲಾಗಿದೆ. ಸ್ಫೋಟದ ತೀವ್ರತೆ ಎಷ್ಟಿತ್ತು ಎಂದರೆ ಹಲವು ಯೋಧರ ದೇಹಗಳು ಛಿದ್ರ ಛಿದ್ರವಾಗಿದ್ದು, ಗುರುತು ಹಿಡಿಯುವದೇ ಕಷ್ಟವಾಗಿ ಪರಿಣಮಿಸಿದೆ. ಸ್ಫೊÃಟದ ತೀವ್ರತೆಗೆ ಯೋಧರ ದೇಹಗಳು ನೂರಾರು ಮೀಟರ್’ಗಳಷ್ಟು ದೂರ ಹಾರಿಹೋಗಿವೆ.
ಪಾಕ್ ಮೂಲದ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತಿದ್ದು, ಆತ್ಮಾಹುತಿ ದಾಳಿಕೋರ ಪುಲ್ವಾಮಾದ ಕಾಕಪೋರಾ ನಿವಾಸಿ ಅದಿಲ್ ಅಹ್ಮದ್ ಎನ್ನುವವನಾಗಿದ್ದು ಕೃತ್ಯ ಎಸಗುವ ಮುನ್ನ ವಿಡಿಯೋವನ್ನೂ ಮಾಡಿಟ್ಟಿದ್ದಾನೆ.
2,547 ಯೋಧರು ಜಮ್ಮವಿನಿಂದ ಶ್ರೀನಗರದತ್ತ 70 ವಾಹನಗಳಲ್ಲಿ ತೆರಳುತ್ತಿದ್ದ ಸಮಯವನ್ನು ಕಾದು ದಾಳಿ ನಡೆಸಲಾಗಿದೆ. ಮಧ್ಯಾಹ್ನ ಸುಮಾರು 3.20 ರ ವೇಳೆಗೆ ಘೋರ ದಾಳಿ ನಡೆದಿದೆ.
Discussion about this post