ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕರ್ನಾಟಕ ಸಂಗೀತ ಪಿತಾಮಹ ಶ್ರೀಪುರಂದರದಾಸರ ಪ್ರಪ್ರಥಮ ಏಕಶಿಲಾ ವಿಗ್ರಹದ ಪ್ರತಿಷ್ಠಾಪನೆ ಕಾರ್ಯದ ಸಿದ್ಧತೆಗಳು ಬಸವನಗುಡಿಯ ಉತ್ತರಾದಿ ಮಠದ ಆವರಣದಲ್ಲಿ ಭರದಿಂದ ಸಾಗಿದ್ದು, ಜ.20ರಂದು ಲೋಕಾರ್ಪಣೆಗೊಳ್ಳಲಿದೆ.
ಈ ಕುರಿತಂತೆ ಮಾತನಾಡಿರುವ ಶ್ರೀನಿವಾಸ ಉತ್ಸವ ಬಳಗದ ಅಧ್ಯಕ್ಷರಾದ ಟಿ. ವಾದಿರಾಜ್ ಅವರು, ಪುರಂದರದಾಸರ ಪ್ರತಿಮೆ ಸ್ಥಾಪನೆಯ ಮೂಲಕ ಹರಿದಾಸ ಸಾಹಿತ್ಯವನ್ನು ಮತ್ತಷ್ಟು ಪ್ರಚುರ ಪಡಿಸುವ ಉದ್ದೇಶವನ್ನು ಶ್ರೀನಿವಾಸ ಉತ್ಸವ ಬಳಗ ಹೊಂದಿದೆ. ಪುರಂದರದಾಸರ ಮೂರ್ತಿ ಪ್ರತಿಷ್ಠಾಪನೆಯ ನಂತರ ದಾಸರ ದಿವ್ಯ ಸನ್ನಿಧಾನದಲ್ಲಿ ವರ್ಷದುದ್ದಕ್ಕೂ ಪ್ರತಿ ನಿತ್ಯ ಹರಿದಾಸರ ಕೃತಿಗಳನ್ನು ವಿವಿಧ ಗಾಯಕರು, ಗಾಯನ ತಂಡ ಹಾಡಿ ನಾದನಮನ ಸಲ್ಲಿಸಲಿದ್ದಾರೆ. ತನ್ಮೂಲಕ ದಾಸ ಸಾಹಿತ್ಯಕ್ಕೆ ಅಪ್ರತಿಮ ಕೊಡುಗೆ ನೀಡಿದ ಪ್ರಾತಃಸ್ಮರಣೀಯರಾದ ಪುರಂದರದಾಸರ ಮಹತ್ವವನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯುವ ಕಿರುಯತ್ನವಿದಾಗಿದೆ ಎನ್ನುತ್ತಾರೆ.
ಸಾವಿರಾರು ಕೃತಿಗಳನ್ನು ರಚಿಸಿರುವ ಪುರಂದರ ದಾಸರ ತ್ಯಾಗ ನಿಷ್ಠೆ, ಭಕ್ತಿ, ಜ್ಞಾನ, ವೈರಾಗ್ಯ ಹಾಗೂ ನಿಸ್ವಾರ್ಥ ಜೀವನ ಇಂದಿಗೂ ಮನೆಮಾತಾಗಿದೆ. ಈ ಹಿನ್ನೆಲೆಯಲ್ಲಿ ಬಸವನಗುಡಿ ನ್ಯಾಷನಲ್ ಕಾಲೇಜು ಎದುರಿನ ಉತ್ತರಾದಿ ಮಠದ ಶ್ರೀದಿಗ್ವಿಜಯ ಲಕ್ಷ್ಮೀನರಸಿಂಹ ದೇವಸ್ಥಾನದ ಆವರಣದಲ್ಲಿ ಶ್ರೀಪುರಂದರ ದಾಸರ ಪ್ರತಿಮೆ ಜ. 20ರಂದು ಅನಾವರಣಗೊಳ್ಳಲಿದೆ.
ಈ ನಿಟ್ಟಿನಲ್ಲಿ ಶ್ರೀನಿವಾಸ ಉತ್ಸವ ಬಳಗ (ದಾಸ ಸಾಹಿತ್ಯ ಪ್ರಚಾರ ಮಾಧ್ಯಮ) ಹಾಗೂ ಬೆಂಗಳೂರಿನ ಉತ್ತರಾದಿಮಠದ ವತಿಯಿಂದ ಉತ್ತರಾದಿ ಮಠಾಧೀಶ ಪರಮಪೂಜ್ಯ ಶ್ರೀಸತ್ಯಾತ್ಮತೀರ್ಥ ಶ್ರೀಪಾದರ ಪೂರ್ಣಾನುಗ್ರಹದಿಂದ ಶ್ರೀಪುರಂದರದಾಸರ ಬೃಹತ್ ಏಕಶಿಲಾ ಪ್ರತಿಮೆ ಲೋಕಾರ್ಪಣೆ ಮತ್ತು ಪುರಂದರ ಸಪ್ತರಾತ್ರೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಗಳು ಜನವರಿ 20 ರಿಂದ 26ರವರೆಗೆ ಬಸವನಗುಡಿ ಉತ್ತರಾದಿಮಠದ ಆವರಣದಲ್ಲಿ ನಡೆಯಲಿದೆ.
‘ಪುರಂದರದಾಸರ ಕೃತಿಗಳನ್ನು ಮಹತ್ವವನ್ನು ಜನ ಸಾಮಾನ್ಯರಿಗೂ ಮುಟ್ಟಿಸುವ ಉದ್ದೇಶವನ್ನು ನಮ್ಮ ಬಳಗ ಹೊಂದಿದೆ. ಈ ನಿಟ್ಟಿನಲ್ಲಿ ಈಗಾಗಲೇ 9 ಅಡಿ ಎತ್ತರದ (ಪೀಠ ಸೇರಿ ಸುಮಾರು 16 ಎತ್ತರವಿರುವ) ಏಕಶಿಲಾ ಪ್ರತಿಮೆಯನ್ನು ಶಿಲ್ಪಿ ಶಂಕರ್ ಸ್ಥಪತಿ ಸಿದ್ಧಪಡಿಸಿದ್ದಾರೆ ಎನ್ನುತ್ತಾರೆ ವಾದಿರಾಜ್.
ಪುರಂದರದಾಸರ ಪುಣ್ಯದಿನದ ನಿಮಿತ್ತ ಜನವರಿ 20 ರಿಂದ 26ರವರೆಗೆ ಪ್ರತಿದಿನ ಮಧ್ಯಾಹ್ನ 3.30ರಿಂದ ರಾತ್ರಿ 8ರ ವರೆಗೆ (ಭಜನಾ ಗಾಯನ ವಿಶೇಷ ಉಪನ್ಯಾಸ- ಸಾಧಕರಿಗೆ ಹರಿದಾಸ ಸನುಗ್ರಹ ಪ್ರಶಸ್ತಿ ಸನ್ಮಾನ ಮತ್ತು ಹರಿದಾಸ ಕೃತಿಗಳ ಸಂಗೀತ ಆರಾಧನೆ) ಸಪ್ತರಾತ್ರೋತ್ಸವ ಕಾರ್ಯಕ್ರಮಗಳು ನಡೆಯಲಿವೆ.
ಭಕ್ತಿಯ ಮೂಲಕ ಮನುಕುಲವನ್ನು ಉದ್ಧಾರ ಮಾಡಿದ ಕನ್ನಡದ ಹರಿದಾಸರಲ್ಲಿ ಅಗ್ರಮಾನ್ಯರಾದ ಪುರಂದರ ದಾಸರ ನೆನೆಯುವ ಸಾರ್ಥಕ ಪ್ರಯತ್ನ ಮಾಡುತ್ತಿರುವ ಶ್ರೀನಿವಾಸ ಉತ್ಸವ ಬಳಗ ವಿಶಿಷ್ಠ ರೀತಿಯಲ್ಲಿ ಪುರಂದರೋತ್ಸವ’’ವನ್ನು ಆಯೋಜಿಸಿದೆ. ಸರ್ವಕಾಲಿಕ ಸಂಜೀವಿನಿ ಸಾಹಿತ್ಯವೆನಿಸಿದ ಹರಿದಾಸ ಸಾಹಿತ್ಯದ ಚಿಂತನ-ಮಂಥನವು ನಿತ್ಯ ಜೀವನದಿಂದ ಪರಗತಿಗೂ ಸಾಧನವಾಗಿದೆ. ಇದರ ಅಧ್ಯಯನ ಮತ್ತು ಪ್ರಸರಣಕ್ಕೆಂದು ಹುಟ್ಟಿದ ಸಂಸ್ಥೆಯು ಶ್ರೀನಿವಾಸ ಉತ್ಸವ ಬಳಗ. ಕಳೆದ ಹಲವು ವರ್ಷಗಳಿಂದ ಕಲಿಯುಗ ಆರಾಧ್ಯ ದೈವ ತಿರುಮಲೆಯ ಶ್ರೀನಿವಾಸನ ಕಲ್ಯಾಣ ಮಹೋತ್ಸವವನ್ನು ವ್ಯಾಸ ದಾಸ ಸಾಹಿತ್ಯ ಹಾಗೂ ವೇದಮಂತ್ರ ಹರಿದಾಸ ವಾಣಿಯ ಸುಮಧುರ ಸಮ್ಮಿಲನದೊಂದಿಗೆ ಮನೆಮನೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಆಯೋಜಿಸುತ್ತಿದೆ.
ಶ್ರೀನಿವಾಸ ಉತ್ಸವ ಬಳಗದ ಪರಿಕಲ್ಪನೆ/ರೂವಾರಿ ತಾಯಲೂರು ವಾದಿರಾಜ್‌ರವರು ಆಧ್ಯಾತ್ಮಿಕ ಚಿಂತಕರು, ಟಿಟಿಡಿಯ ದಾಸ ಸಾಹಿತ್ಯ ಪ್ರಾಜೆಕ್ಟ್‌ನ
ಕರ್ನಾಟಕ ವಲಯದ ಸಂಚಾಲಕರಾಗಿ ನಾಡಿನೆಲ್ಲೆಡೆ ಭಕ್ತ ಜನರನ್ನು ಸಂಘಟನೆಗೊಳಿಸುತ್ತ ಅಪಾರ ಅನುಭವದ ಹಿನ್ನೆಲೆಯಲ್ಲಿ ನಮ್ಮ ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಬಾರೋ ಮನೆಗೆ ಗೋವಿಂದಾ ಎಂಬ ವಿನೂತನ ವಿಶಿಷ್ಠ ಬಗೆಯ ಕಾರ್ಯಕ್ರಮ ರೂಪಿಸಿ ನಡೆಸುತ್ತ ಬಂದಿದ್ದಾರೆ.
ಅಲ್ಲದೆ ದಾಸ ಸಾಹಿತ್ಯದ ಕುರಿತು ಗ್ರಂಥ ಪ್ರಕಾಶನ, ವಿಚಾರ ಸಂಕಿರಣ, ಸಿಡಿ ನಿರ್ಮಾಣ ಮಾಡುತ್ತಾ ಎಲೆ ಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತ ದಾಸರ ಸಂದೇಶವನ್ನು ಮನೆ ಮನೆಗೆ ಸಾರುತ್ತಿರುವ ಶ್ರೀನಿವಾಸ ಉತ್ಸವದ ಬಳಗದಿಂದ ಇದೀಗ ನಾಡಿನ ಸಂಸ್ಕೃತಿ, ಸಾಹಿತ್ಯ ಸಂಗೀತ ಪರಂಪರೆಯ ಪ್ರತೀಕವಾಗಿ ಪುರಂದರ ದಾಸರ ಶಿಲಾ ವಿಗ್ರಹವು ನೆಲೆಗೊಳಿಸಬೇಕೆಂಬ ಯೋಜನೆ ಕನಸು ನನಸಾಗುತ್ತಿರುವ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಪ್ರತಿಮೆಯು ನಗರದ ಸಾಂಸ್ಕೃತಿಕ ವಲಯದಲ್ಲಿ ವಿಶೇಷವಾದ ಶೋಭೆಯನ್ನು ತರುವ ಅಪೂರ್ವ ಕೊಡುಗೆಯಾಗುವುದರಲ್ಲಿ ಸಂದೇಹವಿಲ್ಲ ಅದಕ್ಕೆ ಭಕ್ತ ಮಹಾಶಯರ ಬೆಂಬಲ ಅತ್ಯಗತ್ಯ ಎನ್ನುತ್ತಾರೆ ವಾದಿರಾಜ್.
ಜ. 20ರಂದು ಬೆಳಿಗ್ಗೆ 9.00ಕ್ಕೆ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಪೂಜ್ಯ ರಾಮಾಚಾರ್ಯ ಕಟ್ಟಿ ಮತ್ತು ರಂಗಾಚಾರ್ಯ ಗುತ್ತಲ್ ರವರಿಂದ ಪುರಂದರದಾಸರ ಪ್ರತಿಮೆಗೆ ಧಾರ್ಮಿಕ ವಿಧಿವಿಧಾನಗಳು 10.00 ಗಂಟೆಗೆ ಸಭಾ ಕಾರ್ಯಕ್ರಮ ಶಿಲ್ಪಕಲಾ ಭೂಷಣ ಜಿ. ಶಂಕರ್ ಸ್ತಪತಿ ಮತ್ತು ಪ್ಮರಂದರ ದಾಸರ ವಿಗ್ರಹ ವಿನ್ಯಾಸಕ ವಿಶ್ವವಿಖ್ಯಾತ ಕುಂಚ ಕಲಾವಿದ ಡಾ. ಜಿ. ಜಗದೀಶ್‌ರವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಸತ್ಯಾಧ್ಯಾನಾಚಾರ್ಯ ಕಟ್ಟಿ, ವಿದ್ಯಾಧೀಶಾಚಾರ್ಯ ಗುತ್ತಲ್, ರಾಜಾ ವಾದೀಂದ್ರ ಆಚಾರ್ಯ, ಡಾ. ಅರಳುಮಲ್ಲಿಗೆ ಪಾರ್ಥಸಾರಥಿ, ಡಾ. ಎಂ.ಆರ್.ವಿ. ಪ್ರಸಾದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಂಜೆ 5.00ಕ್ಕೆ ಆರಾಧನಾ ಮಹೋತ್ಸವದ ಉದ್ಘಾಟನೆಯನ್ನು ಗಾನ ಕಲಾ ಭೂಷಣ ಡಾ. ಆರ್.ಕೆ. ಪದ್ಮನಾಭ ಮಾಡಲಿದ್ದು ಸಮಾಜ ಸೇವಕ ಪತ್ತಿ ಎ. ಶ್ರೀಧರ್‌ರವರಿಗೆ ವಿಶೇಷ ಸನ್ಮಾನ ಮತ್ತು ಮುಳಬಾಗಿಲಿನ ಪುರಂದರದಾಸ ಆರಾಧನ ಮಹೋತ್ಸವ ಸಮಿತಿಯ ರಾಜಾರಾವ್ ಮತ್ತು ಸಂಗೀತ ವಿದುಷಿ ಡಾ. ಮೈಸೂರು ನಾಗಮಣಿ ಶ್ರೀನಾಥ್ ರವರಿಗೆ ಹರಿದಾಸ ಅನುಗ್ರಹ ಪ್ರಶಸ್ತಿ ಅಭಿನಂದನಾ ಕಾರ್ಯಕ್ರಮದಲ್ಲಿ ದಾಸ ಸಾಹಿತ್ಯ ಸಂಶೋಧಕ ಡಾ. ಅನಂತಪದ್ಮನಾಭ ರಾವ್ ಮತ್ತು ಹಿರಿಯ ಶಿಕ್ಷಣ ತಜ್ಞ ಡಾ. ಕೆ.ಎಸ್. ಸಮೀರಸಿಂಹ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ನಂತರ ವಿದ್ವಾನ್ ಆರ್.ಕೆ. ಪದ್ಮನಾಭ ರವರ ನೇತೃತ್ವದಲ್ಲಿ ಪುರಂದರ ದಾಸರ ಕೀರ್ತನೆಗಳ ಗೋಷ್ಠಿ ಗಾಯನ ನಡೆಯಲಿದೆ.
ಜ.21 ಮಧ್ಯಾಹ್ನ 3.30ಕ್ಕೆ ಕೆ.ಆರ್. ಪುರಂ ಹರಿದಾಸ ಸಂಘದ ಅಧ್ಯಕ್ಷ ಡಾ. ಹ.ರ ನಾಗರಾಜ ದಾಸರಿಂದ ಪುರಂದರ ವೈಭವ ನಾಮಸಂಕೀರ್ತನೆ ಮತ್ತು ಉಪನ್ಯಾಸ, ಸಂಜೆ 5.00ಕ್ಕೆ ವಿದುಷಿ ಶ್ರೀಮತಿ ದೀಪಿಕಾ ಮಾಧವ್ (ಪಾಂಡುರಂಗಿ) ಮತ್ತು ಶ್ರೀವಾರಿ ಫೌಂಡೇಷನ್‌ನ ಎಸ್. ವೆಂಕಟೇಶ ಮೂರ್ತಿರವರಿಗೆ ಹರಿದಾಸ ಅನುಗ್ರಹ ಪ್ರಶಸ್ತಿ ನಂತರ ಡಾ. ಆರ್.ಎಂ.ವಿ. ಪ್ರಸಾದ್ ಮತ್ತು ವೃಂದದಿಂದ ಹರಿದಾಸ ವಾಣಿ ಆಯೋಜಿಸಿದೆ.
ಜ.22 ಮಧ್ಯಾಹ್ನ 3.30ಕ್ಕೆ ವಿವಿಧ ಭಜನಾ ಮಂಡಳಿಗಳಿಂದ ಪುರಂದರ ದಾಸರ ಕೃತಿಗಳ ಗಾಯನ ಸಂಜೆ 5.00ಕ್ಕೆ ವಿದ್ವಾನ್ ಕಲ್ಲಾಪುರ ಪವಮಾನಾಚಾರ್ಯ ರವರಿಂದ ವಿಶೇಷ ಉಪನ್ಯಾಸ, ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಮತ್ತು ವಿದುಷಿ ಮಾಲತಿ ಮಾಧವಾಚಾರ್ಯ ಅವರಿಗೆ ಹರಿದಾಸ ಅನುಗ್ರಹ ಪ್ರಶಸ್ತಿ ಅಭಿನಂದನಾ ಕಾರ್ಯಕ್ರಮ ನಂತರ ಆಕಾಶವಾಣಿಯ ಹಿರಿಯ ಕಲಾವಿದೆ ವಿದುಷಿ ಡಾ. ಆರ್. ಚಂದ್ರಿಕಾ ಮತ್ತು ವೃಂದದಿಂದ ಹರಿದಾಸ ಝೇಂಕಾರ ನಡೆಸಿ ಕೊಡುವರು.
ಜ.23 ಸಂಜೆ 5.ಕ್ಕೆ ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿಯವರಿಂದ ವಿಶೇಷ ಉಪನ್ಯಾಸ, ಮಕ್ಕಳ ತಜ್ಞ ಡಾ. ಆರ್. ಪದ್ಮನಾಭ ರಾವ್, ಹೃದ್ರೋಗ ತಜ್ಞ ಡಾ. ವೇಣುಗೋಪಾಲ ರಾವ್ ಮತ್ತು ಸ್ತ್ರೀ ರೋಗ ತಜ್ಞೆ ಡಾ. ವರ್ಣ ವಿ. ರಾವ್ ರವರಿಗೆ ಹರಿದಾಸ ಅನುಗ್ರಹ ಪ್ರಶಸ್ತಿ ಪ್ರದಾನ ನಂತರ ವಿದ್ವಾನ್ ಎಸ್. ಶಂಕರ್ ಮತ್ತು ತಂಡದಿಂದ ಹರಿದಾಸ ನಮನ ಏರ್ಪಡಿಸಿದೆ.
ಜ. 24 (ಪುಷ್ಯ ಹುಳ ಅಮವಾಸ್ಯೆ ಪುರಂದರ ದಾಸರ ಪುಣ್ಯ ದಿನ) ಸಂಜೆ 5.00ಕ್ಕೆ ಪಂಡಿತ ವಿದ್ಯಾಧೀಶಾಚಾರ್ಯ ಗುತ್ತಲ್ ಅವರಿಂದ ವಿಶೇಷ ಉಪನ್ಯಾಸ ಡಿಆರ್’ಡಿಒ ವೈಮಾನಿಕ ಶಾಸ್ತ್ರ ಪರಿಣತ ಡಾ. ಪಿ. ರಘೋತ್ತಮ ರಾವ್ ಮತ್ತು ಮುಂಬೈನ ಹಿರಿಯ ವಕೀಲ ಹಾಗೂ ನಾರಾಯಣ ಅಮೃತ ಫೌಂಡೇಷನ್ ಸ್ಥಾಪಕ ಎನ್.ಆರ್. ರಾವ್‌ರವರಿಗೆ ಹರಿದಾಸ ಅನುಗ್ರಹ ಪ್ರಶಸ್ತಿ ನಂತರ ವಿದ್ವಾನ್ ಎಚ್.ಎಸ್. ಸುಧೀಂದ್ರ ಮತ್ತು ಎಸ್. ಜಯಚಂದ್ರ ರಾವ್ ನೇತೃತ್ವದಲ್ಲಿ ಸುಸ್ವರಾಲಯ ಕಾಲೇಜ್ ಆಫ್ ಮ್ಯೂಸಿಕ್ ಹಾಗೂ ಕಾಂಚನ ಶ್ರೀಲಕ್ಷ್ಮೀ ನಾರಾಯಣ ಮ್ಯೂಸಿಕ್ ಆಕಾಡೆಮಿಕ್ ಟ್ರಸ್ಟ್ ಸಹಯೋಗದಲ್ಲಿ ಕಾರ್ಯಕ್ರಮದ ಪ್ರಧಾನ ಘಟ್ಟವಾದ ಅಹೋರಾತ್ರಿ (ರಾತ್ರಿ 7.30 ಮರುದಿನ ಬೆಳಿಗ್ಗೆ 6.30ರವರೆಗೆ ) ಸಂಗೀತಸಭಾದಲ್ಲಿ ಅನೇಕ ಹಿರಿ-ಕಿರಿಯ ಗಾಯಕ ಗಾಯಕಿರು ಭಾಗವಹಿಸುವರು.
ಜ.25 ಸಂಜೆ 5.00ಕ್ಕೆ ಉಡುಪಿ ಪುತ್ತಿಗೆ ವಿದ್ಯಾಪೀಠದ ಪ್ರಾಂಶುಪಾಲ ಡಾ.ಬಿ. ಗೋಪಾಲಾಚಾರ್ಯರಿಂದ ವಿಶೇಷ ಉಪನ್ಯಾಸ, ಡಾ. ಬಿ. ಗೋಪಾಲಾಚಾರ್ಯ ಮತ್ತು ಡಾ. ಹ.ರ.ನಾಗಾರಾಜದಾಸರಿಗೆ ಹರಿದಾಸ ಅನುಗ್ರಹ ಪ್ರಶಸ್ತಿ ಪ್ರದಾನ ನಂತರ ವಿದುಷಿ ಟಿ.ಎಸ್. ರಮಾ ಮತ್ತು ವೃಂದದಿಂದ ಪುರಂದರದಾಸರ ಕೃತಿಗಳ ಗಾಯನ ನಡೆಯಲಿದೆ.
ಜ.26 ಸಮಾರೋಪ ಸಮಾರಂಭ ವ್ಯಾಸಮಧ್ವ ಸಂಶೋಧನಾ ಪ್ರತಿಷ್ಠಾನದ ಸಂಸ್ಥಾಪಕ ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯರಿಂದ ವಿಶೇಷ ಉಪನ್ಯಾಸ ಮುಖ್ಯ ಅತಿಥಿಗಳಾಗಿ ಹಿರಿಯ ಗಾಯಕ ಶಿವಮೊಗ್ಗದ ವಿದ್ವಾನ್ ಎಚ್.ಎಸ್. ಶೃಂಗೇರಿ ನಾಗರಾಜ್ ಭಾಗವಹಿಸಲಿದ್ದಾರೆ. ವಿದುಷಿ ಶ್ರೀಮತಿ ಗಾನಶ್ರೀ ಶ್ರೀನಿವಾಸುಲು ಮತ್ತು ವಿದುಷಿ ಗಾಯತ್ರಿ ಮಯ್ಯರಿಗೆ ಹರಿದಾಸ ಅನುಗ್ರಹ ಪ್ರಶಸ್ತಿ ನಂತರ ಶಿವಮೊಗ್ಗದ ಗುರುಗುಹ ಸಂಗೀತ ಮಹಾವಿದ್ಯಾಲಯ ಮತ್ತು ಬೆಂಗಳೂರಿನ ಅನುಗ್ರಹ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ವಿದ್ವಾನ್ ಎಚ್.ಎಸ್. ಶೃಂಗೇರಿ ನಾಗಾರಾಜ್ ನೇತೃತ್ವದಲ್ಲಿ ನವರತ್ನ ಮಾಲಿಕೆಯ ಗೋಷ್ಠಿ ಗಾಯನ ಕಾರ್ಯಕ್ರಮ ಏರ್ಪಡಿಸಿದೆ. ಕಲಾರಸಿಕರಾದ ಶ್ರೋತೃಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುರಂದರದಾಸರಿಗೆ ನಮಿಸೋಣ ಬನ್ನಿ.
ಹೆಚ್ಚಿನ ಮಾಹಿತಿಗಾಗಿ ಶ್ರೀನಿವಾಸ ಉತ್ಸವ ಬಳಗ ಅಧ್ಯಕ್ಷ ಟಿ. ವಾದಿರಾಜ್(98861 08ವ550/ 90356 18076)ಗೆ ಸಂಪರ್ಕಿಸಬಹುದು.
Get in Touch With Us info@kalpa.news Whatsapp: 9481252093
Discussion about this post