ಬೆಂಗಳೂರು: ಇಂದಿನ ಕಾಲಮಾನದಲ್ಲಿ ರಾಮಾಯಣ ಎಳೆಯ ಮನಸ್ಸುಗಳನ್ನು ಮುಟ್ಟಬೇಕಾದ ಅತ್ಯಗತ್ಯವಿದೆ ಎಂದು ಸಚಿತ್ರ ರಾಮಾಯಣ 3 ಭಾಷೆಯ ಪ್ರಧಾನ ಸಂಪಾದಕರು, ಶತಾಯುಷಿ, ನಡೆದಾಡುವ ನಿಘಂಟು ನಾಡೋಜ ಪ್ರೊ. ಜಿ. ವೆಂಕಟಸುಬ್ಬಯ್ಯ ಹೇಳಿದರು.
ಶ್ರೀ ಜಯರಾಮ ಸೇವಾ ಮಂಡಳಿ ವತಿಯಿಂದ ಸುವರ್ಣ ಮಹೋತ್ಸವದ ಅಂಗವಾಗಿ ಜಯನಗರ 8ನೆಯ ಬಡಾವಣೆಯ ಶ್ರೀಜಯರಾಮ ಸೇವಾ ಮಂಡಳಿ ಆವರಣದ ಪ್ರೊ.ಜಿ.ವಿ. ಶತಮಾನೋತ್ಸವ ಕಲಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ನೂತನ ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಮಾಯಣ ಎಳೆಯ ಮನಸ್ಸುಗಳನ್ನು ಅದರಲ್ಲೂ ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಮುಟ್ಟಬೇಕಾದ ಅಗತ್ಯ ಇಂದು ಹೆಚ್ಚಾಗಿದೆ. ಹಲವು ಪುಟಗಳಲ್ಲಿ ಹೇಳುವುದನ್ನು ಒಂದು ಚಿತ್ರದಲ್ಲಿ ಮನಮುಟ್ಟುವಂತೆ ಹೇಳುವ ಪ್ರಯತ್ನ ಈ ಕೃತಿಯಲ್ಲಿ ನಡೆದಿದೆ. ಮರ್ಯಾದಾ ಪುರುಷೋತ್ತಮ ಶ್ರೀರಾಮನ ವ್ಯಕ್ತಿತ್ವ ಪರಿಚಯದೊಂದಿಗೆ ರಾಮರಾಜ್ಯದ ಪರಿಕಲ್ಪನೆ. ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಈ ಕೃತಿಯ ಮೂಲಕ ಆಗುತ್ತಿರುವುದು ಸ್ತುತ್ಯಾರ್ಹ ಅಭಿಪ್ರಾಯಪಟ್ಟರು.
ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಎನ್. ಕುಮಾರ್ ಮಾತನಾಡಿ, ಭಾರತದ ಸಾಂಸ್ಕೃತಿಕ ಚರಿತ್ರೆಯಲ್ಲಿ ಸಂಸ್ಕೃತ ಭಾಷೆಯಲ್ಲಿ ರಚಿತವಾಗಿರುವ ಸಾಹಿತ್ಯರಾಶಿಗೆ ಅಪಾರವಾದ ಪ್ರಾಧಾನ್ಯವಿದೆ. ವೇದಮಂತ್ರಗಳಿಂದ ಹಿಡಿದು ಉಪನಿಷತ್ತುಗಳು ಬ್ರಾಹ್ಮಣಗಳು ಮುಂತಾದ ಗ್ರಂಥಗಳಲ್ಲಿ ಮಾನವ ಜೀವನವನ್ನು ಅಂತರಂಗ ಬಹಿರಂಗಗಳಿಂದ ಪರಿಶೀಲಿಸಿ ಒಂದು ವ್ಯವಸ್ಥೆಗೆ ಏರ್ಪಡಿಸಿದ ಕಾರ್ಯ ನೆರವೇರಿದೆ ಎಂದರು.
ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೋತಿಷ್ಯ, ಕಲ್ಪ ಎಂಬ ವೇದಾಂಗಗಳಿಂದ ಮಾನವನ ತಿಳಿವಳಿಕೆ ಚೆನ್ನಾಗಿ ವೃದ್ಧಿ ಹೊಂದಿದೆ. ಅದಾದ ಬಳಿಕ ನಮ್ಮ ಇತಿಹಾಸಗಳಿಂದ ರಾಮಾಯಣ ಮತ್ತು ಮಹಾಭಾರತಗಳು ನಮ್ಮರಾಷ್ಟ್ರದ ಪ್ರಾಚೀನ ಮಾನವಜೀವನ ಹೇಗಿತ್ತು ಎಂಬುದರ ಚಿತ್ರವನ್ನು ಭವ್ಯವಾಗಿ ನಿರೂಪಿಸಿವೆ. ಈ ಗ್ರಂಥಗಳನ್ನು ಎಷ್ಟು ಸಲ ಓದಿದರೂ ನಮ್ಮ ಹಿಂದಿನವರ ಬಗ್ಗೆ ಹೊಸ ಹೊಸ ವಿವರಗಳು ದೊರಕುತ್ತಿವೆ. ಈ ಗ್ರಂಥಗಳು ಸದಾ ನವೀನವಾಗಿರುವ ಸತ್ವವನ್ನು ಪಡೆದಿವೆ. ಇವು ನಮ್ಮಅತ್ಯಂತ ಪ್ರಾಚೀನ ಸಾಹಿತ್ಯ ಗ್ರಂಥಗಳು. ಇವುಗಳಲ್ಲಿ ಅಡಗಿರುವ ನಮ್ಮ ಪ್ರಾಚೀನ ಸಂಸ್ಕೃತಿಯು ಎಷ್ಟು ವೈವಿಧ್ಯಮಯವಾಗಿತ್ತು ಎಂಬ ಬಗ್ಗೆ ಪಾಶ್ಚಾತ್ಯರೂ ಪೌರಸ್ತ್ಯರೂ ಮಾಡಿರುವ ಸಂಶೋಧನೆಗಳು ಆಶ್ಚರ್ಯಕರವಾಗಿವೆ ಎಂದರು.
ಶ್ರೀ ಜಯರಾಮ ಸೇವಾ ಮಂಡಳಿಯ ಅಧ್ಯಕ್ಷ ಆರ್.ಎನ್. ಸ್ವಾಮಿ ಮಾತನಾಡಿ, ರಾಮಾಯಣ ಒಂದು ಮಹಾ ಕಾವ್ಯ. ಭಾರತೀಯರ ಪವಿತ್ರಗ್ರಂಥ. ಅದರಲ್ಲಿ ನಮ್ಮ ಸಮಾಜದ ಸಂಸ್ಕೃತಿ. ಧರ್ಮ ಸೂಕ್ಷ್ಮಗಳು, ಮಾನವೀಯ ಸಂಬಂಧಗಳು, ನೈತಿಕ ಮೌಲ್ಯಗಳು, ವಿಚಾರಧಾರೆ ಎಲ್ಲ ಅಡಗಿವೆ. ರಾಮಾಯಣ ಅಧ್ಯಯನ ಮಕ್ಕಳ ಪರಿಪೂರ್ಣ ವ್ಯಕ್ತಿತ್ವ ಬೆಳವಣಿಗೆಗೆ ಸಹಕಾರಿ. ಇಂದಿನ ವಿದ್ಯಾಭ್ಯಾಸದ ಪಠ್ಯ ಪುಸ್ತಕಗಳಲ್ಲಿ ಈ ಅಧ್ಯಯನಕ್ಕೆ ಅವಕಾಶವಿಲ್ಲದಿರುವುದರಿಂದ. ‘‘ಸಚಿತ್ರ ರಾಮಾಯಣ ದರ್ಶನ ಆ ಕೊರತೆಯನ್ನು ನೀಗುವುದರಲ್ಲಿ ಸಹಾಯಕಾರಿ. ಸನಾತನ ಧರ್ಮದಲ್ಲಿ ನಂಬಿಕೆಯಿರುವ ಪೋಷಕರು ಈ ಸದಾವಕಾಶವನ್ನು ಬಳಸಿಕೊಳ್ಳುವರೆಂದು ಭಾವಿಸಿದ್ದೇವೆ ಎಂದರು.
ಸಂಪೂರ್ಣ ರಾಮಾಯಣ ದರ್ಶನದ ದರ್ಪಣ
ಒಂದುಚಿತ್ರ ನೂರು ಪದಗಳಿಗೆ ಸಮ. ಎಲ್ಲರೂ ಒಪ್ಪುವ ಹೇಳಿಕೆ. ಈ ಹೇಳಿಕೆಯ ಆಧಾರದಲ್ಲಿಜಯರಾಮ ಸೇವಾ ಮಂಡಳಿ ತನ್ನ ಸುವರ್ಣ ಸಂಭ್ರಮದ ವ್ಯಾಪ್ತಿಯಲ್ಲಿ ವರ್ಣಮಯ, ಪ್ರಕಾಶಮಯ ಚಿತ್ರಗಳ ವಿಶಿಷ್ಟ ಕೋಶವನ್ನು ಹೊರತಂದಿದೆ. ಈ ಚಿತ್ರಪಟ ಸಂಪೂರ್ಣವಾಗಿ ರಾಮಾಯಣ ದರ್ಶನದ ದರ್ಪಣ. ರಾಮಾಯಣದ ಎಂಟು ಕಾಂಡಗಳ ಎಲ್ಲಾ ಪ್ರಮುಖ ಸನ್ನಿವೇಶ ಘಟನೆ ಹಾಗೂ ಸಂಭವಿಸಿದ ಪ್ರಕರಣಗಳ ಸಾರವನ್ನು ಹಿಡಿಯಾಗಿ ಚಿತ್ತಾಕರ್ಷಕ ಹೊತ್ತಿಗೆಯಲ್ಲಿ ಮುದ್ರಣಗೊಳ್ಳಲಿದೆ. ಅತ್ಯಾಧುನಿಕ ತಂತ್ರಜ್ಞಾನದ ಸದುಪಯೋಗದೊಂದಿಗೆ, ರಾಮಾಯಣದ ದೀರ್ಘ ಓದಿಗೆ ಹಿರಿದರ್ಥವನ್ನು ಚಿತ್ರಗಳು ಕಿರಿದರ್ಥದಲ್ಲಿ ಸ್ಮರಿಸುತ್ತದೆ. ಭಾವ, ಭಾವನೆ, ಅಭಿವ್ಯಕ್ತಿ, ವರ್ಣಸಂಯೋಜನೆ ಹಾಗೂ ಚಿತ್ರಕಲೆಯ ಎಲ್ಲಾ ತತ್ವಗಳನ್ನು ಆಧರಿಸಿ, ಹಿರಿಯ ವಿದ್ವಾಂಸರಾದ ನಾಡೋಜ ಜಿ. ವೆಂಕಟಸುಬ್ಬಯ್ಯನವರ ಮಾರ್ಗದರ್ಶನದಲ್ಲಿ ಪ್ರಕಟಗೊಂಡಿದೆ. ಖ್ಯಾತ ವಿದ್ವಾಂಸರಾದ ಡಾ. ವನಿತ ರಾಮಸ್ವಾಮಿಯವರು ಈ ಸಂಪುಟದ ಸಂಪಾದಕರಾಗಿ ಶ್ರಮಿಸಿದ್ದಾರೆ ಎಂದು ಮಂಡಳಿಯ ಪರವಾಗಿ ಕಾರ್ಯದರ್ಶಿ ಎಸ್.ಕೆ. ಗೋಪಾಲಕೃಷ್ಣ ತಿಳಿಸಿದ್ದಾರೆ.
Discussion about this post