ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕಳೆದ ಎರಡು ತಿಂಗಳಿನಿಂದ ಮನುಕುಲದ ಯಾವುದೇ ಸಂಬಂಧ-ಸಂದರ್ಭ, ಘಟನೆ, ಸನ್ನಿವೇಷ, ರೀತಿ-ನೀತಿ, ಜೀವನ ಶೈಲಿ, ಪ್ರಚಲಿತ ವಿದ್ಯಮಾನ ಹೀಗೆ ಯಾವ ವಿಷಯವನ್ನೂ ಚರ್ಚಿಸಿದರೂ ಅದರೊಳಗೆ ಅವಿತಿರುವುದು ಕೊರೋನಾ. ಇಂದು ಮೇ 20 ವಿಶ್ವ ಶುಶ್ರೂಷಕರ ದಿನ. ಈ ದಿನಾಚರಣೆಯನ್ನೂ ಸಹ ಕೊರೋನಾ ವೈರಾಣು ಬಿಟ್ಟಿಲ್ಲ. ಈ ನಿಟ್ಟಿನಿಂದಲೇ ಕೊರೋನಾ ವಿಷಯವನ್ನು ಪ್ರಸ್ತಾಪಿಸುವ ಮೊದಲು ವಿಶ್ವ ಶುಶ್ರೂಕರ ದಿನಾಚರಣೆಯ ಕಡೆ ಗಮನ ಹರಿಸೋಣ.
ನೊಂದವರ, ದೀನ-ದಲಿತರ, ಅನಾರೋಗ್ಯ ಪೀಡಿತರ, ಅಸಹಾಯಕರಿಗೆ ಮಾನಸಿಕ ಧೈರ್ಯ ತುಂಬುತ್ತಿದ್ದ ಫ್ಲಾರೆನ್ಸ್ ನೈಟಿಂಗೇಲ್ ಅವರು 12 ಮೇ 1820 ಜನಿಸಿದರು. ಈಕೆ ಶ್ರೀಮಂತ ಕುಟುಂಬದಲ್ಲಿ ಜನಿಸಿದರೂ ಮನುಕುಲದ ಆರೋಗ್ಯ ಸೇವೆಗೆ ತನ್ನ ಸಂಪೂರ್ಣ ಜೀವನವನ್ನು ಮುಡುಪಾಗಿಟ್ಟರು. ಹಾಗಾಗಿ, 1965ರಿಂದ ನೈಟಿಂಗೇಲ್ ಅವರ ಜನ್ಮ ದಿನವನ್ನು ವಿಶ್ವ ಶುಶ್ರೂಷಕರ ದಿನವನ್ನಾಗಿ ಆಚರಿಸಲಾಗುತ್ತದೆ. ನೈಟಿಂಗೇಲ್ ಅವರು ವೃತ್ತಿಯಲ್ಲಿ ಅಂಕಿ-ಅಂಶ ತಜ್ಞೆಯಾದರೂ ವೃದ್ದರ, ಅಪಘಾತಕ್ಕೀಡಾದವರ, ದೀರ್ಘಕಾಲ ಕಾಯಿಲೆಯಿಂದ ಮಲಗಿದಲ್ಲಿಯೇ ಮಲಗಿರುವಂತಹ ರೋಗಿಗಳಿಗೆ ಆರೈಕೆ ಮಾಡಿ ಅವರ ಪಾಲಿನ ಸಾಕ್ಷಾತ್ ದೇವತೆ ಎಂದು ಅನಿಸಿಕೊಂಡರು.
1853ರಲ್ಲಿ ರಷ್ಯಾ ಹಾಗೂ ಬ್ರಿಟನ್ ನಡುವೆ ಕ್ರಿಮಿನ್ ಯುದ್ದದ ಸಮಯದಲ್ಲಿ ನುರಿತ ದಾದಿಯರ ತಂಡದ ಮುಖ್ಯಸ್ಥೆಯಾಗಿ ಯುದ್ದದಲ್ಲಿ ಗಾಯಗೊಂಡ ಸೈನಿಕರಿಗೆ ರಾತ್ರಿಯಿಡೀ ಚಿಕಿತ್ಸೆ, ಪಾಲನೆ-ಪೋಷಣೆ ಮಾಡಿದ ಕಾರಣ ಬ್ರಿಟೀಷರು ಲೇಡಿ ಆಫ್ ಲ್ಯಾಂಪ್ ಎಂದು ಕರೆಯುತ್ತಾರೆ. ಈಕೆ ಹುಟ್ಟಿ ಇಂದಿಗೆ 200 ವರ್ಷಗಳು ಕಳೆದಿದೆ. ಹಾಗಾಗಿ ಈ ವರ್ಷವನ್ನು ನೈಟಿಂಗೇಲ್ ಸ್ಮರಣೆಯ ವರ್ಷ ಎಂದು ಘೋಷಣೆ ಮಾಡಲಾಗಿದೆ. ಇವರು ಸುಧೀರ್ಘ 90 ವರ್ಷಗಳ ಜೀವನ ಅವಧಿಯಲ್ಲಿ ಮನುಕುಲದ ಆರೋಗ್ಯ ಸೇವೆಗೆ ಮುಡುಪಾಗಿಟ್ಟದ್ದರಿಂದ ಆಧುನಿಕ ನರ್ಸಿಂಗ್ ಸಂಜಾತೆ ಎಂದು ಕರೆಯುತ್ತಾರೆ.
‘‘ಆರೋಗ್ಯದೆಡೆಗೆ ರಹದಾರಿ ತೋರಿಸುವ ದಾದಿಯರು’’ ಎಂಬ ಈ ವರ್ಷದ ಧ್ಯೇಯ ವಾಕ್ಯವು ವಿಶ್ವದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯದ ಸೌಲಭ್ಯ ದೊರಕಬೇಕು ಎನ್ನುವ ಮೂಲ ಗುರಿಯೊಂದಿಗೆ 2020ರ ವಿಶ್ವ ಶುಶ್ರೂಷಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
Also Read: ನರ್ಸ್‌ಗಳ ಬಗ್ಗೆ ತಾತ್ಸಾರ ಮಾಡುವ ಮುನ್ನ ಈ ಲೇಖನ ಓದಿ, ಅವರ ತ್ಯಾಗ ತಿಳಿಯಿರಿ
https://kalpa.news/read-this-article-on-nurses-and-learn-about-their-sacrifice/
ವಿಶ್ವದಲ್ಲಿ ಸರಿಸುಮಾರು 20 ಮಿಲಿಯನ್ ದಾದಿಯರಿದ್ದು, ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸ್ಸಿನ ಪ್ರಕಾರ ಪ್ರತಿ 1000ಕ್ಕೆ ದಾದಿಯರ ಸಂಖ್ಯೆ 2:3 ಇರಬೇಕು. ಆದರೆ ಭಾರತದಲ್ಲಿ ಈ ಅನುಪಾತವು ಪ್ರತಿ ಸಾವಿರಕ್ಕೆ ದಾದಿಯರ ಸಂಖ್ಯೆ 1:8 ಇದೆ. ಇಂತಹ ಸಂದರ್ಭದಲ್ಲೂ ತಮ್ಮ ಜೀವದ ಹಂಗನ್ನು ತೊರೆದು ಶುಶ್ರೂಷಕರು ಕೊರೋನಾ ರೋಗದ ವಿರುದ್ದ ಹೋರಾಟ ಮಾಡುವ ಅನಿವಾರ್ಯತೆಯಲ್ಲಿ ಸಿಲುಕಿದ್ದಾರೆ. ವಿಶ್ವದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಆರೋಗ್ಯ ಹಾಗೂ ಆರ್ಥಿಕ ಸಂಕಷ್ಟದ ಪರಿಸ್ಥಿತಿ ಎದುರಾಗಿರುವುದರ ಪರಿಣಾಮ ಮನುಷ್ಯ ಕುಲವೆಲ್ಲಾ ಬಳಲುವಂತಾಗಿದೆ.
ವೈದ್ಯರುಗಳು ಚಿಕಿತ್ಸೆಯ ವಿಧಾನವನ್ನು ಮಾರ್ಗದರ್ಶಿಸುತ್ತಾರೆ. ಆದರೆ, ರೋಗಿಯ ಕಾಯಿಲೆ ವಾಸಿ ಮಾಡುವಲ್ಲಿ, ಮಾನಸಿಕ ಧೈರ್ಯ ತುಂಬುವಲ್ಲಿ ಶುಶ್ರೂಷಕರ ಪಾತ್ರ ಮಹತ್ವದ್ದು. ಮಾನವೀಯ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಎಷ್ಟೋ ಬಾರಿ ರೋಗಿಯ ಕುಟುಂಬ ಸದಸ್ಯರು ಹಾಗೂ ಸಂಬಂಧಿಗಳು ರೋಗಿಯ ಸ್ಥಿತಿಯನ್ನು ನೋಡಿ ಅಸಹ್ಯ ಪಟ್ಟುಕೊಂಡು ಅನಾಥರನ್ನಾಗಿಸುವ ಸಂದರ್ಭಗಳು ಬರುತ್ತವೆ. ಆದರೆ, ನಿಜವಾದ ಶುಶ್ರೂಷಕರಾದವರು ಎಂದಿಗೂ ರೋಗಿಯನ್ನು ಆಲಸ್ಯದಿಂದಾಗಲಿ, ಅಸಹ್ಯದಿಂದಾಗಲೀ ನೋಡದೇ ಕಾಯಿಲೆ ಗುಣಮುಖವಾಗಲು ಬೇಕಾದ ಚಿಕಿತ್ಸಾ ವಿಧಾನವನ್ನು ಅನುಸರಿಸಿ ಗುಣಮುಖರಾಗಲು ಶ್ರಮಿಸುತ್ತಾರೆ.
ಒಮ್ಮೆ ಯೋಚಿಸಿ, ಎಷ್ಟೋ ಕುಟುಂಬಸ್ಥರೋ, ನೆಂಟರೋ ಯಾರಾದರೂ ಹಾಸಿಗೆ ಹಿಡಿದು, ರೋಗ ಮಾರಕವಾಗಿದ್ದ ಸಂದರ್ಭದಲ್ಲಿ ಹೇಸಿಗೆ ಮಾಡಿಕೊಂಡರೆ ತೆಗೆಯಲು ಹಿಂದೆ ಮುಂದೆ ನೋಡುತ್ತಾರೆ. ಅಪಘಾತದಲ್ಲಿ ತೀವ್ರವಾಗಿ ಹಾನಿಯಾಗಿದ್ದೋ, ಸುಟ್ಟು ಕರಕಲಾದ ದೇಹವೋ ಯಾವುದೇ ಪರಿಸ್ಥಿತಿಯಿದ್ದರೂ ಅಸಹ್ಯ ಪಟ್ಟುಕೊಳ್ಳದೇ ಶುಶ್ರೂಷೆ ಮಾಡುವ ನರ್ಸ್‌ಗಳು ದೇವರ ಸಮಾನ ಎಂದರೆ ಅತಿಶಯೋಕ್ತಿಯಲ್ಲ.
ಜೊತೆಗೆ ಪೋಷಕರು ಬಂದರೂ ಬಾರದಿದ್ದರೂ ತಾಯಿಯಾಗಿ, ಅಕ್ಕನಾಗಿ, ತಂಗಿಯಾಗಿ ಶುದ್ದ ಸೇವಾ ಮನೋಭಾವದಿಂದ ಆತ್ಮೀಯವಾಗಿ ಚಿಕಿತ್ಸೆಯನ್ನು ರೋಗಿಗೆ ನೀಡಿ ಆರೋಗ್ಯವಂತರನ್ನಾಗಿ ಮಾಡುವ ಶ್ರೇಷ್ಠ ವೃತ್ತಿ ಈ ಶುಶ್ರೂಷಕರದ್ದು. ವೈದ್ಯ ನೀಡುವ ಔಷಧಿಗಿಂತ ದಾದಿಯರು ನೀಡುವ ಶುಶ್ರೂಷೆ ರೋಗ ವಾಸಿಯಾಗಲು ಪ್ರಮುಖ ಪಾತ್ರ ವಹಿಸುತ್ತದೆ. ರೋಗಿಗೆ ಸಂಬಂಧಪಟ್ಟ ಯಾವುದೇ ಚಾಕರಿಯಾಗಲಿ ತಾಯಿಯಂತೆ ನಿಸ್ವಾರ್ಥ ಮನಸ್ಸಿನಿಂದ ಆರೈಕೆ ಮಾಡಿ ಸಂಪೂರ್ಣ ಆರೋಗ್ಯವಂತರನ್ನಾಗಿಸುತ್ತಾರೆ.
ಕೊರೋನಾ ವೈರಾಣುವಿನ ವಿರುದ್ದದ ಹೋರಾಟದಲ್ಲಿ ನಿಜವಾದ ಸೈನಿಕರು ಶುಶ್ರೂಷಕರೆಂದರೆ ತಪ್ಪಾಗಲಾರದು. ನರ್ಸ್‌ಗಳಿಗೂ ಅಪ್ಪ-ಅಮ್ಮನ ಆರೈಕೆ, ಮಕ್ಕಳ ಪಾಲನೆ ಪೋಷಣೆ, ವೈವಾಹಿಕ ಜೀವನ, ಕೌಟುಂಬಿಕ ಹಾಗೂ ಸಾಮಾಜಿಕ ಸಂಬಂಧಗಳ ನಿರ್ವಹಣೆ ಇದ್ದೇ ಇರುತ್ತದೆ. ಇವೆಲ್ಲವುಗಳನ್ನು ಸರಿದೂಗಿಸಿಕೊಂಡು ಕೊರೋನಾ ರೋಗದಿಂದ ಬಳಲುವವರಿಗೆ ಚಿಕಿತ್ಸೆ ನೀಡುವಾಗ ನಿಸ್ವಾರ್ಥತೆಯಿಂದ ತಮ್ಮ ಜೀವನವನ್ನು ಪಣಕ್ಕಿಟ್ಟು ಶ್ರಮಿಸುವ ಇವರಿಗೆ ಸೂಕ್ತ ಸೌಲಭ್ಯ, ವೇತನ, ಉದ್ಯೋಗ ಭದ್ರತೆ ನೀಡುವ ಅಗತ್ಯತೆ ಇದೆ. ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಪಿಪಿಇ ಕಿಟ್ ಮತ್ತು ಎನ್ 95 ಮಾಸ್ಕ್’ಗಳಂತಹ ಸೂಕ್ತ ಆರೋಗ್ಯ ಕವಚಗಳನ್ನು ನೀಡಬೇಕಿದೆ.
ವೈಯುಕ್ತಿಕ ಬದುಕನ್ನು ತ್ಯಾಗ ಮಾಡಿ ಮನುಕುಲಕ್ಕೆ ಮಾರಿಯಾಗಿ ಕಾಡುತ್ತಿರುವ ಕೊರೋನಾ ವೈರಾಣುವಿನ ಹೋರಾಟದಲ್ಲಿ ನೇರವಾಗಿ ಕಾದಾಡುತ್ತಿರುವವರು ಶುಶ್ರೂಷಕರು. ಈ ವರ್ಗಕ್ಕೆ ಸರ್ಕಾರ ಅವಶ್ಯವಿರುವ ಸೂಕ್ತ ಸೌಲಭ್ಯ ಹಾಗೂ ಆರೋಗ್ಯ ಭದ್ರತೆಯನ್ನು ನೀಡಿ ಅವರುಗಳಿಗೆ ನೈತಿಕ ಬೆಂಬಲ ಹಾಗೂ ಭರಸೆ ನೀಡಬೇಕು. ದಾದಿಯರ ಸೇವೆಯನ್ನು ಹಣದಿಂದಾಗಲಿ, ವಸ್ತುಗಳಿಂದಾಗಲಿ ಮಾಪನ ಮಾಡಲು ಸಾಧ್ಯವಿಲ್ಲ. ಅವರುಗಳ ಸೇವೆ ಮನುಕುಲ ಇರುವವರೆಗೂ ಮರೆಯಲಾರದ್ದು. ವಿಶ್ವ ಎದುರಿಸುತ್ತಿರುವ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಹಗಲಿರುಳು ನಿಸ್ವಾರ್ಥದಿಂದ ಶ್ರಮಿಸುತ್ತಿರುವ ಶುಶ್ರೂಷಕರಿಗೆ ನಮ್ಮದೊಂದು ಸಲಾಂ.
Get in Touch With Us info@kalpa.news Whatsapp: 9481252093
Discussion about this post