ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮಲೆನಾಡಿನ ಹೆಬ್ಬಾಗಿಲು ಎಂದಾಕ್ಷಣ ಥಟ್ ಅಂತಾ ನೆನಪಿಗೆ ಬರುವುದು ನಮ್ಮ ಶಿವಮೊಗ್ಗ ದಿನೇ ದಿನೇ ಅತ್ಯಂತ ಸುಂದರವಾಗಿ ಬೆಳೆಯುತ್ತಿರುವ ಸಿಟಿಯು ತನ್ನ ಮಡಿಲಲ್ಲಿ ಸಂಗ್ರಹವಾಗಿರುವ ಕಸದ ರಾಶಿಯನ್ನೇ ಮರೆತು ಬಿಟ್ಟಿದೆ. ಇದಕ್ಕಾಗಿ ಹಸಿ ಕಸ, ಒಣ ಕಸ ಇದನ್ನು ಬೇರ್ಪಡಿಸಿ ಅವರವರ ಮನೆಯಲ್ಲಿಯೆ ಕಸದಿಂದ ಗೊಬ್ಬರವನ್ನು ತಯಾರಿಸುವ ಪೈಪ್ ಕಾಂಪೋಸ್ಟ್ ಯೋಜನೆಗೆ ಮಹಾನಗರ ಪಾಲಿಕೆ ಮುಂದಾಗಿದ್ದು, ಸ್ವಚ್ಚತೆಯ ಕಡೆಗೆ ಮತ್ತೊಂದು ಹೆಜ್ಜೆ ಇದಾಗಿದೆ.
ನಗರದಲ್ಲಿ ಸಂಗ್ರಹವಾಗುವ ಕಸದ ಸಮಸ್ಯೆಗೆ ಮುಕ್ತಿ ನೀಡಲು ಮಹಾನಗರ ಪಾಲಿಕೆಯು ವಿನೂತನ ಪ್ರಯೋಗಕ್ಕೆ ಕೈ ಹಾಕಿದೆ. ನಗರದಲ್ಲಿ ಎಲ್ಲೆಂದರಲ್ಲಿ ಕಸ ಕಂಡು ಬರುತ್ತಿರುವುದರಿಂದ ಇದನ್ನು ವಿಲೇವಾರಿ ಮಾಡಲು ಪಾಲಿಕೆಯು ತೀವ್ರವಾಗಿ ಪ್ರಯತ್ನಿಸುತ್ತಿದ್ದರೂ ಸಮಸ್ಯೆ ಬಗೆಹರಿಯುತ್ತಿರಲಿಲ್ಲ. ಹೀಗಾಗಿ ಪೈಪ್ ಕಾಂಪೋಸ್ಟ್ ಎನ್ನುವ ಹೊಸ ಹೊಸ ಪ್ರಯತ್ನಗಳನ್ನು ಮಾಡುವುದಕ್ಕೆ ಪಾಲಿಕೆಯು ಮುಂದಾಗಿದೆ.
ವ್ಯವಸ್ಥಿತ ಘನ ತ್ಯಾಜ್ಯ ನಿರ್ವಹಣೆಯಿಂದ ಸುತ್ತಮುತ್ತಲಿನ ಪರಿಸರದ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಆರೋಗ್ಯ ಪೂರ್ಣ ವಾತಾವರಣ ನಿರ್ಮಿಸಬಹುದಾಗಿದೆ. ಕೊಳೆತು ಹೋಗುವ ತ್ಯಾಜ್ಯಗಳಾದ ತರಕಾರಿ, ಹೂ, ಹಣ್ಣು ಮೊದಲಾದ ವಸ್ತುಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಉತ್ತಮ ಸಾವಯವ ಗೊಬ್ಬರವನ್ನು ಪಡೆಯುವುದಕ್ಕೆ ಹಾಗೂ ಕಸದ ಸಮಸ್ಯೆಯ ನಿರ್ವಹಣೆಗೆ ಪೈಪ್ ಕಾಂಪೋಸ್ಟ್ ಎಂಬ ಸಾಧನವು ಒಂದು ಉತ್ತಮವಾದ ಪ್ರಯೋಗವೆಂದರೆ ತಪ್ಪಾಗಲಾರದು.
ಪೈಪ್ ಕಾಂಪೋಸ್ಟ್ ಅಳವಡಿಸುವ ವಿಧಾನ…?
ಮನೆಯಲ್ಲಿ ಪ್ರತಿದಿನ ಸಂಗ್ರಹವಾಗುವ ಅಡುಗೆ ತ್ಯಾಜ್ಯ, ಹಣ್ಣಿನ ಸಿಪ್ಪೆ ಇತ್ಯಾದಿ ಹಸಿ ಕಸವನ್ನು ಕಸದ ಗಾಡಿಗೆ ನೀಡದೆ, ಮನೆಯ ಆವರಣದಲ್ಲಿ ಅಳವಡಿಸಲಾಗುವ ಪೈಪ್‌ನಲ್ಲಿ ಪ್ರತಿದಿನ ತುಂಬಿಸಿ ಗೊಬ್ಬರವನ್ನಾಗಿ ಪರಿವರ್ತಿಸುವ ವಿಧಾನವೇ ಪೈಪ್ ಕಾಂಪೋಸ್ಟ್.
ಪೈಪ್ ಕಾಂಪೋಸ್ಟ್ ತಯಾರಿಗೆ 6 ಅಡಿ ಉದ್ದದ ಪೈಪ್ ಒಂದು ಅಡಿ ಜಾಗ ಸಾಕು. ಇಷ್ಟು ಪ್ರಮಾಣದ ವಸ್ತುಗಳಿಂದಲೇ ಮನೆ ಬಳಿಯೇ ಕೈತೋಟಕ್ಕೆ ಬೇಕಾಗುವ ಗೊಬ್ಬರ ಉತ್ಪಾದಿಸಬಹುದಾಗಿದೆ.
ಮೊದಲಿಗೆ 1 ಅಡಿ ಗುಂಡಿ ತೆಗೆದು 6 ಅಡಿ ಪೈಪ್‌ನ್ನು 1 ಅಡಿ ಗುಂಡಿ ಒಳಗೆ ಹಾಕಿ ಭದ್ರಪಡಿಸಬೇಕು. ನಂತರ ಅದಕ್ಕೆ ಒಂದು ಕೆಜಿ ಬೆಲ್ಲ, ಸಗಣಿ ನೀರು ಹಾಕಿದರೆ ಮುಗಿಯಿತು, ಅರ್ಧ ಕೆಲಸ ಮುಗಿದಂತೆ. ಪ್ಲಾಸ್ಟಿಕ್ ಹೊರತುಪಡಿಸಿ ಮನೆಯಲ್ಲಿ ಪ್ರತಿದಿನ ಉತ್ಪಾದನೆಯಾಗುವ ಭೂಮಿಯಲ್ಲಿ ಕರಗುವ ಎಲ್ಲ ಉತ್ಪನ್ನ ಮತ್ತು ಅಡುಗೆ ತ್ಯಾಜ್ಯ ಹಾಗೂ ಹಣ್ಣಿನ ಸಿಪ್ಪೆ ಸೇರಿದಂತೆ ಹಸಿ ತ್ಯಾಜ್ಯವನ್ನು ಇದರಲ್ಲಿ ಹಾಕಬಹುದು. ವಾರಕ್ಕೆ ಒಂದು ಬಾರಿ ಬೊಗಸೆ ಮಣ್ಣು, ಒಂದು ತಂಬಿಗೆ ನೀರು ಹಾಕಿ ಮುಚ್ಚಳ ಮುಚ್ಚಿದರೆ ಸಾಕು. ಗೊಬ್ಬರ ತನ್ನಷ್ಟಕ್ಕೆ ತಾನೇ ಉತ್ಪತ್ತಿ ಆಗುತ್ತದೆ. ಸಾರ್ವಜನಿಕರು ತಮ್ಮ ಕುಟುಂಬದ ಸದಸ್ಯರನ್ನು ಗಮನದಲ್ಲಿಟ್ಟುಕೊಂಡು ಕಸ ಉತ್ಪಾದನೆಯ ಸಾಮರ್ಥ್ಯಕ್ಕೆನುಗುಣವಾಗಿ ಪೈಪ್ ಕಾಂಪೋಸ್ಟ್ ಘಟಕ ಅಳವಡಿಸಿಕೊಳ್ಳಬಹುದಾಗಿದೆ.
ಪ್ರತಿ ಮೂರು ತಿಂಗಳಿಗೊಮ್ಮೆ ಇದರಿಂದ ಉತ್ಕೃಷ್ಟ ಗೊಬ್ಬರ ಸಿಗುವುದರಲ್ಲಿ ಯಾವುದೇ ಅನುಮಾನವೇ ಬೇಡ. ಪಾಲಿಕೆಯ ಕಸ ಸಂಗ್ರಹ ವಾಹನಕ್ಕೆ ಕಾಯುವುದು ಇದರಿಂದ ತಪ್ಪುತ್ತದೆ ಹಾಗೂ ಉತ್ತಮವಾದ ಗೊಬ್ಬರ ಮನೆ ಬಳಿಯೇ ತಯಾರಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಕಸವನ್ನು ಎಲ್ಲೆಂದರಲ್ಲಿ ಎಸೆಯುವುದು ತಪ್ಪುತ್ತದೆ. ಈಗಾಗಲೇ ವಿವಿಧ ಜಿಲ್ಲೆಗಳಲ್ಲಿ ಪೈಪ್ ಕಾಂಪೋಸ್ಟ್’ನ ಪ್ರಯೋಗ ಮಾಡಲಾಗುತ್ತಿದ್ದು, ಇದರಿಂದ ಉತ್ತಮ ಫಲಿತಾಂಶ ಬಂದಿದೆ. ಹೀಗೆ ಉತ್ಪತ್ತಿಯಾಗುವ ಗೊಬ್ಬರ ಉತ್ಕೃಷ್ಟವಾಗಿದ್ದು, ಇದು ಕೈತೋಟ ಮತ್ತು ರಸ್ತೆ ಬದಿಯಲ್ಲಿ ಬೆಳೆಯುವ ಮರಗಳಿಗೆ ಉತ್ತಮ ಗೊಬ್ಬರವಾಗುತ್ತದೆ.
ಈ ಕಸ ಕೆಲವೇ ತಿಂಗಳುಗಳಲ್ಲಿ ಸಾವಯವ ಗೊಬ್ಬರವಾಗಿ ಪಡೆಯಬಹುದಾಗಿದೆ. ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಕಾಂಪೋಸ್ಟ್’ನ ಗೊಬ್ಬರ ಸಹಾಯವಾಗುವುದು. ಗಿಡಗಳಿಗೆ ಬಳಸುವ ಕೀಟನಾಶಕಗಳಿಂದ ಹಲವಾರು ಕಾಯಿಲೆಗಳು ಬರುತ್ತದೆ. ಅದ್ದರಿಂದ ನಮ್ಮ ಮನೆಯ ಕೈತೋಟದಲ್ಲಿ ಬೆಳೆಯುವ ಗಿಡಗಳಿಗೆ ಗೊಬ್ಬರ ಹಾಕಲು ಇರುವ ಮತ್ತೊಂದು ಮಾರ್ಗವೆಂದರೆ ಅದು ಪೈಪ್ ಕಾಂಪೋಸ್ಟ್‌ನ ಗೊಬ್ಬರ. ಇದು ನೀವು ಬೆಳೆದ ಹಣ್ಣು ಮತ್ತು ತರಕಾರಿಗಳನ್ನು ಹಾಳು ಮಾಡುವ ಅಪಾಯವನ್ನು ಕಡಿಮೆ ಮಾಡುತ್ತದೆ. ಅದರಲ್ಲೂ ಕಾಂಪೋಸ್ಟ್ ಗೊಬ್ಬರವು ವಾಣಿಜ್ಯ ಉದ್ದೇಶಗಳಿಗಾಗಿ ತಯಾರಿಸಲಾಗುವ ಗೊಬ್ಬರವೆಂದೇ ಹೇಳಬಹುದು.
ಕೈ ತೋಟಗಳನ್ನು ಬೆಳೆಸಲು ನಾವು ಬಳಸುವ ಮಣ್ಣಿನಲ್ಲಿ ತರಕಾರಿಗೆ ಅಗತ್ಯವಾಗಿರುವ ಪೋಷಕಾಂಶಗಳು ಇಲ್ಲದೆ ಇರಬಹುದು. ಆದ್ದರಿಂದಲೆ ಈ ಮಣ್ಣಿಗೆ ನಾವು ಗೊಬ್ಬರದ ರೂಪದಲ್ಲಿ ಪೋಷಕಾಂಶಗಳನ್ನು ಒದಗಿಸಬೇಕಾಗಿ ಬರುತ್ತದೆ. ಅದರಲ್ಲೂ ಮಣ್ಣಿಗೆ ಪೋಷಕಾಂಶಗಳನ್ನು ಮತ್ತು ಸಾವಯವ ಅಂಶಗಳು ತುಂಬಿರುವಂತಹ ಗೊಬ್ಬರಗಳನ್ನು ಬಳಕೆ ಮಾಡಿ ಬೆಳೆದ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವುದರಿಂದ ಆರೋಗ್ಯದಲ್ಲಿ ಯಾವುದೇ ರೀತಿಯ ಸಮಸ್ಯೆಯು ಕಂಡುಬರುವುದಿಲ್ಲ. ಹಾಗೂ ಸುತ್ತಮುತ್ತಲಿನ ವಾತಾವರಣವು ಕೂಡ ಸ್ವಚ್ಛವಾಗಿ ಕಾಪಾಡಬಹುದು.
ಪೈಪ್ ಕಾಂಪೋಸ್ಟ್ ಉಪಯೋಗ…?
ಪ್ರತಿಯೊಬ್ಬರು ಕೂಡ ಪೈಪ್ ಕಾಂಪೋಸ್ಟ್ ಬಳಕೆ ಮಾಡುವುದರಿಂದ ವಾತಾವರಣದಲ್ಲಿ ಇರುವಂತಹ ತ್ಯಾಜ್ಯಗಳ ನಿರ್ಮೂಲನೆಗೆ ಸಹಾಯಕವಾಗಿದೆ. ಹಾಗೂ ಸರಳ ರೀತಿಯಲ್ಲಿ ಕಸ ನಿರ್ವಹಣೆ ಮಾಡಬಹುದಾಗಿದೆ. ಇದರಿಂದ ಸಹಜವಾಗಿ ಆರೋಗ್ಯ ಪೂರ್ಣ ಪರಿಸರ ನಿರ್ಮಾಣ ಸಾಧ್ಯವಾಗಲಿದೆ. ಅತ್ಯಂತ ಕಡಿಮೆ ಜಾಗ ಮತ್ತು ಕಡಿಮೆ ವೆಚ್ಚದ ಯೋಜನೆ ಇದಾಗಿದ್ದು, ನಗರ ಮತ್ತು ಗ್ರಾಮಾಂತರ ಪ್ರದೇಶಗಳ ಕಸ ವಿಲೇವಾರಿ ಸಮಸ್ಯೆಯನ್ನು ಬಹುತೇಕ ಪರಿಹರಿಸಬಹುದು. ಉತ್ತಮ ಗುಣಮಟ್ಟದ ಸಾವಯವ ಗೊಬ್ಬರ ಪಡೆದು ಕೈ ತೋಟಗಳಿಗೆ ಬಳಸಿಕೊಳ್ಳಬಹುದು.
ನಗರದಲ್ಲಿ ಸಂಗ್ರಹವಾಗುವ ಕಸದ ಸಮಸ್ಯೆಗೆ ಪೈಪ್ ಕಾಂಪೋಸ್ಟ್ ಒಂದು ಉತ್ತಮ ಸಾಧನವೆಂದು ಭಾವಿಸಬೇಕಾಗಿದೆ. ಈ ಪೈಪ್ ಕಾಂಪೋಸ್ಟ್ ಘಟಕಗಳಿಂದ ತ್ಯಾಜ್ಯ ಪ್ರಮಾಣ ಇಳಿಕೆ ಮಾಡುವುದರ ಜೊತೆಗೆ ಉತ್ತಮವಾದ ಪರಿಸರವನ್ನು ನಿರ್ಮಾಣ ಮಾಡಬಹುದಾಗಿದೆ. ಹಾಗೂ ಫಲವತ್ತಾದ ಗೊಬ್ಬರಕ್ಕೆ ಪೈಪ್ ಕಾಂಪೋಸ್ಟ್ ಒಂದು ಉತ್ತಮವಾದ ಸಾಧನ ಎಂದು ಹೇಳಬಹುದು.
-ಕೆ.ಬಿ. ಶಿವಕುಮಾರ್, ಜಿಲ್ಲಾಧಿಕಾರಿಗಳು, ಶಿವಮೊಗ್ಗಮೊದಲ ಹಂತದಲ್ಲಿ ಎಲ್ಲಾ ಸರ್ಕಾರಿ ವಸತಿಗೃಹಗಳಲ್ಲಿ ಪೈಪ್ ಕಾಂಪೋಸ್ಟ್ ಘಟಕಗಳನ್ನು ಅಳವಡಿಸಲಾಗಿದೆ. ಕೆಲವು ಲೇಔಟ್‌ಗಳ ಎಲ್ಲಾ ಮನೆಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಪೈಪ್ ಕಾಂಪೋಸ್ಟ್ ಘಟಕಗಳನ್ನು ಅಳವಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇದನ್ನು ಆಂದೋಲನದ ರೀತಿಯಲ್ಲಿ ಇಡೀ ಶಿವಮೊಗ್ಗ ನಗರದಲ್ಲಿ ಅನುಷ್ಠಾನಗೊಳಿಸಲಾಗುವುದು.
-ಚಿದಾನಂದ ವಟಾರೆ, ಆಯುಕ್ತರು, ಶಿವಮೊಗ್ಗ ಮಹಾನಗರ ಪಾಲಿಕೆ
Get in Touch With Us info@kalpa.news Whatsapp: 9481252093
Discussion about this post