ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲೆಯಲ್ಲಿ ಕೆಲವು ದಿನಗಳಿಂದೀಚೆಗೆ ನಿರಂತರವಾಗಿ ಮಳೆ ಎಡೆಬಿಡದೆ ಸುರಿಯುತ್ತಿದ್ದು, ಸಂಭವಿಸಬಹುದಾದ ಅವಘಡಗಳನ್ನು ನಿಯಂತ್ರಿಸಿ, ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಅರಣ್ಯ, ಮೆಸ್ಕಾಂ ಸೇರಿದಂತೆ ಪ್ರಮುಖ ಇಲಾಖೆಗಳ ಅಧಿಕಾರಿ, ಸಿಬ್ಬಂಧಿಗಳು ಸದಾ ಸನ್ನದ್ಧರಾಗಿರುವಂತೆ ಮಹಾನಗರಪಾಲಿಕೆ ಮೇಯರ್ ಶ್ರೀಮತಿ ಸುವರ್ಣಶಂಕರ್ ಅವರು ಸೂಚಿಸಿದರು.
ಅವರು ಇಂದು ಮಹಾನಗರಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ನೆರೆ, ಮಳೆಹಾನಿ ಸಂದರ್ಭದಲ್ಲಿ ಕೈಗೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ವಿಶೇಷವಾಗಿ ನಗರ ವ್ಯಾಪ್ತಿಯಲ್ಲಿ ಧರೆಗುರುಳುವ ಮರಗಳನ್ನು ತಕ್ಷಣದಲ್ಲಿ ತೆರವುಗೊಳಿಸಲು ಅರಣ್ಯ ಇಲಾಖೆಯ ಅಧಿಕಾರಿಗಳು ಸನ್ನದ್ಧರಾಗಿರುವಂತೆ ಅವರು ಸೂಚಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಹಾನಗರಪಾಲಿಕೆ ಆಡಳಿತದ ಪಕ್ಷದ ಮುಖ್ಯಸ್ಥ ಚನ್ನಬಸಪ್ಪ ಅವರು ಮಾತನಾಡಿ, ಕಳೆದ ಸಾಲಿನಲ್ಲಿ ಘಟಿಸಿದ ಅವಘಡಗಳ ಸಂದರ್ಭದಲ್ಲಿ ಕೈಗೊಂಡ ಪರಿಹಾರ ಹಾಗೂ ರಕ್ಷಣಾ ಕಾರ್ಯಗಳಲ್ಲಿನ ನ್ಯೂನತೆಗಳು ಪುನರಾವರ್ತನೆಯಾಗದಂತೆ ಅಧಿಕಾರಿಗಳು ಗಮನಹರಿಸಬೇಕು. ಈ ಪರಿಹಾರ ಕಾರ್ಯಗಳು ಕೈಗೊಳ್ಳುವ ಸಂದರ್ಭದಲ್ಲಿ ಇಲಾಖೆಗಳ ಅಧಿಕಾರಿಗಳ ನಡುವೆ ಪರಸ್ಪರ ಸಮನ್ವಯತೆ ಇರಬೇಕಾದುದು ಅಗತ್ಯ ಎಂದದರು.
ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ಹಲವು ತಂಡಗಳನ್ನು ರಚಿಸುವ ಅಗತ್ಯವಿದೆ. ಈ ಸಂದರ್ಭದಲ್ಲಿ ಸ್ಥಳೀಯ ಸಂಘ-ಸಂಸ್ಥೆಗಳ ಪ್ರತಿನಿಧಿಗಳ ಸಲಹೆ-ಸಹಕಾರ ಪಡೆಯುವುದನ್ನು ಮರೆಯಬಾರದು. ತುರ್ತು ಅಗತ್ಯಗಳಿಗಾಗಿ ಬೋಟ್, ತೆಪ್ಪ, ಹರಿಗೋಲು ನಡೆಸುವವರು, ಅಗ್ನಿಶಾಮಕ ದಳದ ಸಿಬ್ಬಂಧಿಗಳನ್ನು ಹಾಗೂ ಅಗತ್ಯವಾಗುವ ಪರಿಕರಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕೆಂದರು.
ಅಲ್ಲದೇ ಅಗತ್ಯ ಸಂದರ್ಭದಲ್ಲಿ ಸಂತ್ರಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಹಾಗೂ ಅವರಿಗೆ ನೆರೆ ಪರಿಹಾರ ಕೇಂದ್ರಗಳಿಗೆ ಕರೆದೊಯ್ದು ಸೂಕ್ತ ರಕ್ಷಣೆ ಒದಗಿಸಲು ಸ್ಥಳಗಳನ್ನು ಕಾಯ್ದಿರಿಸಿಕೊಳ್ಳಬೇಕಾದ ಅಗತ್ಯವಿದೆ ಎಂದ ಅವರು, ನಗರದಲ್ಲಿ ಸರಾಗವಾಗಿ ಕೊಳಚೆ ನೀರು ಹರಿದುಹೋಗುವ ಚರಂಡಿ ಹಾಗೂ ರಾಜಾ ಕಾಲುವೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಅವರು ಸಲಹೆ ನೀಡಿದರು.
ತೀವ್ರ ಪ್ರಮಾಣದ ಮಳೆಯಿಂದಾಗಿ ನಗರಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜಿನಲ್ಲಿ ಯಾವುದೇ ವ್ಯತ್ಯಯವಾಗದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಗಮನಹರಿಸುವಂತೆ ಪಾಲಿಕೆ ವಿಪಕ್ಷ ನಾಯಕ ಹೆಚ್.ಸಿ.ಯೋಗೀಶ್ ಅವರು ಹೇಳಿದರು.
ಮೆಸ್ಕಾಂನ ಯಶವಂತನಾಯ್ಕ್ ಅವರು ಸಭೆಗೆ ಮಾಹಿತಿ ನೀಡಿ, ಜವಾಬ್ದಾರಿಯುತ ಅಧಿಕಾರಿಗಳು ಇಂತಹ ತುರ್ತು ಸಂದರ್ಭದಲ್ಲಿ ರಜೆಯ ಮೇಲೆ ತೆರಳದಂತೆ ಇಲಾಖಾಧಿಕಾರಿಗಳಿಂದ ಆದೇಶ ಬಂದಿರುವುದಾಗಿಯೂ ಮಾಹಿತಿ ನೀಡಿದರು.
ಸಭೆಯಲ್ಲಿ ಉಪಮೇಯರ್ ಶ್ರೀಮತಿ ಸುರೇಖಾ ಮುರಳೀಧರ್, ಉಪ ಆಯುಕ್ತ ಪ್ರಮೋದ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಪಾಲಿಕೆ ಅಧಿಕಾರಿ-ಸಿಬ್ಬಂಧಿಗಳು ಉಪಸ್ಥಿತರಿದ್ದರು.
Get In Touch With Us info@kalpa.news Whatsapp: 9481252093
Discussion about this post