ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಅಂಬೇಡ್ಕರ್ ಅವರ ಪ್ರತಿಮೆಗಳನ್ನು ಸ್ಥಾಪಿಸುತ್ತಾ ಮೂರ್ತಿ ಪೂಜಕರಾಗದೆ ಅವರ ವಿಚಾರಧಾರೆ, ಹೋರಾಟ, ಆಶಯಗಳ ಅನುಷ್ಠಾನ ಮೂಲಕ ಎಲ್ಲಾಜಾತಿಯ ಬಡವರ, ಶೋಷಿತರ ಏಳಿಗೆಗೆ ದುಡಿಯುತ್ತಾ ವಿಚಾರ ಪೂಜಕರಾಗುವುದೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ನಾವು ಸಲ್ಲಿಸಬಹುದಾದ ನಿಜ ಗೌರವ ಎಂದು ಪತ್ರಕರ್ತ ಎನ್. ರವಿಕುಮಾರ್ ಟೆಲೆಕ್ಸ್ ಅವರು ಕರೆ ನೀಡಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಶಾಖೆಯ ಆಶ್ರಯದಲ್ಲಿ ಇಂದು ಆಯೋಜಿಸಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 63 ನೇ ಪರಿನಿರ್ವಾಣ ದಿನದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಅಂಬೇಡ್ಕರ್ ಈ ದೇಶದ ಎಲ್ಲಾ ಜಾತಿಯ ಬಡವರ ಮಹಾಬೆಳಕು ಆಗಿದ್ದಾರೆ. ಮಹಿಳೆಯರ, ಕಾರ್ಮಿಕರು, ರೈತರ ಹೀಗೆ ಎಲ್ಲಾ ವರ್ಗಗಳ ಹಿತಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದು, ಅವರು ಕೊಟ್ಟ ಸಂವಿಧಾನದ ಫಲವೇ ಇಂದು ಎಲ್ಲರೂ ಹಕ್ಕುಗಳನ್ನು ಪಡೆಯುವಂತಾಗಿದೆ. ಭಾರತದ ಸಂವಿಧಾನ ಎಲ್ಲಾ ಧರ್ಮಗಳಿಗಿಂತಲೂ ಶ್ರೇಷ್ಠವಾಗಿದ್ದು ಅದನ್ನು ಇಂದು ಇಲ್ಲವಾಗಿಸುವ ಎಲ್ಲಾ ಸಂಚು ನಡೆದಿದೆ. ಅಂಬೇಡ್ಕರ್ ಸಂವಿಧಾನ ಉಳಿಯದೆ ಭಾರತದ ಉಳಿವಿಲ್ಲ. ಭಾರತಕ್ಕೆ ಬೇಕಾಗಿರುವುದು ರಾಮ ಸಂವಿಧಾನವಲ್ಲ. ಭೀಮ ಸಂವಿಧಾನ, ಮನು ಸಂವಿಧಾನಕ್ಕಿಂತ ಮಾನವತೆಯ ಸಂವಿಧಾನ ಮುಖ್ಯ ಇಂತಹ ಮಾನವೀಯ ಸಂವಿಧಾನವನ್ನು ಉಳಿಸಿಕೊಳ್ಳಲು ಎಲ್ಲರೂ ಹೋರಾಟ ಮಾಡಬೇಕಿದೆ ಎಂದರು.
ಶಿಕ್ಷಣದಿಂದಲೇ ಉನ್ನತಿ ಸಾಧ್ಯ, ಇದನ್ನು ಅಂಬೇಡ್ಕರ್ ಅವರು ಸಾಧಿಸಿ ತೋರಿಸಿದ್ದಾರೆ. ದಲಿತರು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸುವ ಮೂಲಕ ಮುಖ್ಯವಾಹಿನಿಯಲ್ಲಿ ಸಾಧನೆಗೈಯ್ಯುವಂತೆ ಮಾಡಬೇಕು. ಮೀಸಲಾತಿ ಫಲ ಉಂಡವರು ದಲಿತ ಸಮುದಾಯದಲ್ಲಿ ಇನ್ನೂ ಕಷ್ಟದಲ್ಲಿರುವವರಿಗೆ ನೆರವು ನೀಡುವ ಮೂಲಕ ಈ ಸಮಾಜದ ಋಣ ತೀರಿಸಬೇಕು. ಅಂಬೇಡ್ಕರ್ ಎಂದರೆ ಅನ್ನ. ನೀರು, ಗಾಳಿಯೂ ಆಗಿದ್ದಾರೆ. ಅವರ ವಿಚಾರ ಧಾರೆಗಳನ್ನು, ಅವರು ಎಳೆದು ತಂದ ವಿಮೋಚನಾ ರಥವನ್ನು ಮುನ್ನಡೆಸುವ ಮೂಲಕ ಎಲ್ಲರೆದೆಲ್ಲಿ ಅಂಬೇಡ್ಕರ್ ಅವರನ್ನು ತುಂಬಬೇಕು ಎಂದ ಎನ್. ರವಿಕುಮಾರ್ ಟೆಲೆಕ್ಸ್ ಅವರು ಯಾವ ಮನುಷ್ಯರನ್ನು ಮನುಷ್ಯರಂತೆ ಕಾಣದ ಯಾವ ವಿಭಜನಾ ಸಿದ್ದಾಂತದ ವಿರುದ್ದ ಅಂಬೇಡ್ಕರ್ ಜೀವಮಾನದುದ್ದಕ್ಕೂ ಹೋರಾಡಿದರೂ ಅದೇ ಸಿದ್ದಾಂತವಾದಿಗಳು ಇಂದು ಅಂಬೇಡ್ಕರ್ ಅವರನ್ನು ಹೊತ್ತು ಮರೆವಣಿಗೆ ಹೊರಟಿದ್ದಾರೆ. ಇದು ಅಪಾಯಕಾರಿ. ಇಂತಹ ಕೋಮುಶಕ್ತಿಗಳಿಂದ ಅಂಬೇಡ್ಕರ್ ಅವರನ್ನು ಉಳಿಸಿಕೊಳ್ಳಬೇಕಾಗಿದೆ ಎಂದರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಎಲ್ಐಸಿಯ ಪ್ರಬಂಧಕರಾದ ಶ್ರೀಮತಿ ನಾಗರತ್ನ, ಡಿಎಸ್ ಎಸ್ ಜಿಲ್ಲಾ ಸಂಘಟನಾ ಸಂಚಾಲಕರಾದ ಶಿವಕುಮಾರ್ ಆಸ್ತಿ, ಪಳನಿರಾಜ್, ಎ.ಡಿ. ಆನಂದ, ಮಂಜುನಾಥ್, ಸ್ಪಂದನ ಚಂದ್ರು, ರಂಗಸ್ವಾಮಿ ಉಪಸ್ಥಿತರಿದ್ದರು.
ಜಿಲ್ಲಾ ಸಂಚಾಲಕರಾದ ಟಿ.ಎಚ್. ಹಾಲೇಶಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
Get in Touch With Us info@kalpa.news Whatsapp: 9481252093
Discussion about this post