ಬೆಂಗಳೂರು: ಸಿನಿಮಾ ವಲಯದಲ್ಲಿ ಅತ್ಯಂತ ಜನಪ್ರಿಯ ಹೆಸರು ಗಳಿಸಿರುವ ಪ್ರಶಾಂತ್ ಸಂಬರಗಿ ಈಗ ರಾಜ್ಯ ಕ್ರೀಡಾ ಲೋಕಕ್ಕೂ ಐತಿಹಾಸಿಕ ಎನ್ನುವಂತಹ ಮಹತ್ವದ ಮೈಲಿಗಲ್ಲಿಗೆ ಕಾರಣೀಬೂತರಾಗಿದ್ದಾರೆ. ಏನು ಆ ಸಾಧನೆ? ಮುಂದೆ ಓದಿ…
ವಿಶ್ವದಾದ್ಯಂತ ಸುಮಾರು ಮೂರು ಕೋಟಿಗೂ ಅಧಿಕ ಕ್ರೀಡಾಪಟುಗಳ ಜೀವನವೇ ಆಗಿರುವ ಪ್ಯಾಡಲ್ ಟೆನ್ನಿಸ್ ಯುರೋಪ್, ಅಮೆರಿಕಾ ಕೆನಡಾ, ದುಬೈ ಹಾಗೂ ಜಪಾನ್ ದೇಶಗಳಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕ್ರೀಡೆಯಾಗಿದ್ದು, ಕೋಟ್ಯಂತರ ಮಂದಿಯನ್ನು ತನ್ನತ್ತ ಸೆಳೆದಿದೆ. ರಾಜ್ಯದ ಮಟ್ಟಿಗೆ ನೋಡುವುದಾದರೆ ಈ ಕ್ರೀಡೆ ನಮ್ಮಲ್ಲಿ ಕಾಲಿಟ್ಟಿರುವುದು ಇದೇ ಮೊದಲು.
ಸದ್ಯ ಕರ್ನಾಟಕ ರಾಜ್ಯ ಪ್ಯಾಡಲ್ ಟೆನ್ನಿಟ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರಶಾಂತ್ ಸಂಬರಗಿಯವರು ಯುರೋಪ್ ಪ್ರವಾಸದಲ್ಲಿದ್ದ ವೇಳೆ ಈ ಕ್ರೀಡೆ ಬಗ್ಗೆ ತಿಳಿದು ಆಸಕ್ತಿಗೊಂಡರು. ಇಂತಹ ಕ್ರೀಡೆಯನ್ನು ನಮ್ಮ ರಾಜ್ಯಕ್ಕೂ ತಂದು, ಜನಪ್ರಿಯಗೊಳಿಸಬೇಕು ಎಂದು ನಿರ್ಧರಿಸಿದರು.
ಬೆಂಗಳೂರಿಗೆ ಹಿಂತಿರುಗಿದ ತತಕ್ಷಣ ಬಿಬಿಎಂಪಿ ಜೊತೆಯಲ್ಲಿ ಸಹಯೋಗ ಮಾಡಿಕೊಂಡು ಸದಾಶಿವ ನಗರದ ವೀರೇಂದ್ರ ಪಾಟೀಲ್ ಪಾರ್ಕ್’ನಲ್ಲಿ ಪೂರ್ವ ಪ್ರಜ್ಞಾ ಲೇಔಟ್ ಎದುರಿನ ಜಾಗದಲ್ಲಿ ಪ್ಯಾಡಲ್ ಟೆನ್ನಿಸ್ ಕೋರ್ಟ್ ಅನ್ನು ನಿರ್ಮಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಾಡಲ್ ಟೆನ್ನಿಸ್ ಕ್ರೀಡೆ ಈಗ ಭಾರತಕ್ಕೂ ಕಾಲಿಟ್ಟು ತನ್ನ ಅಲೆಯನ್ನು ಬೀಸಲು ಪ್ರಾರಂಭಿಸಿದೆ.
ಭಾರತದಲ್ಲೇ ಮೊದಲ ಕೋರ್ಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸದಾಶಿವನಗರದ ಪ್ಯಾಡಲ್ ಟೆನ್ನಿಸ್ ಕೋರ್ಟನ್ನು ಉಪಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹಾಗೂ ಮಲ್ಲೇಶ್ವರಂ ಕ್ಷೇತ್ರದ ಶಾಸಕರಾದ ಡಾ. ಅಶ್ವತ್ಥ್ ನಾರಾಯಣ್ ಅವರು ಇತ್ತೀಚೆಗೆ ಉದ್ಘಾಟಿಸಿದರು.
ಈ ಕುರಿತಂತೆ ಮಾತನಾಡಿರುವ ಸಂಘದ ಅಧ್ಯಕ್ಷೆ ಸ್ನೇಹ ಅಬ್ರಹಾಂ ಸೆಹಗಲ್, ಹೊಸ ಕ್ರೀಡೆಯನ್ನು ಕಲಿಯುವಲ್ಲಿ ಜನರ ಆಸಕ್ತಿಯನ್ನು ನೋಡಿ ನಮಗೆ ಆಶ್ಚರ್ಯವಾಗಿದೆ. ಕರ್ನಾಟಕದಲ್ಲಿ ಪ್ಯಾಡಲ್ ಟೆನ್ನಿಸನ್ನು ಜನಪ್ರಿಯಗೊಳಿಸುವುದು ನಮ್ಮ ಮುಖ್ಯ ಉದ್ದೇಶ ಎಂದರು.
ವಿಶ್ವ ಪ್ಯಾಡಲ್ ಟೆನ್ನಿಸ್ ಪಂದ್ಯಾವಳಿಗೆ ಬಾಲ್ ಪೂರೈಕೆದಾರರಾದ ಬಾಬೊಲಾಟ್ ಕಂಪನಿ ಇಂಡಿಯನ್ ಪೆಡಲ್ ಫೆಡರೇಶನ್ ಜೊತೆಗೆ ಪಾಲುದಾರರಾಗಿ ತನ್ನ ಕೈ ಜೋಡಿಸಿದೆ.
ಕೋರ್ಟ್ ನಿರ್ಮಾಣವಾದ ಹಿನ್ನೆಲೆಯಲ್ಲಿ ಈಗ ಜನವರಿ 26 ಹಾಗೂ 27 ರಂದು ರಾಷ್ಟಮಟ್ಟದ ಪಾಡಲ್ ಕ್ರೀಡೆ ಆಯೋಜಿಸಲಾಗಿದೆ. ಈಗಾಗಲೇ ಸಂಘದ ವೆಬ್’ಸೈಟಲ್ಲಿ ನೊಂದಣಿ ಆರಂಭವಾಗಿದೆ. ಆಸಕ್ತ ಕ್ರೀಡಾಪಟುಗಳು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದ್ದು, ಈ ಪಂದ್ಯಾವಳಿಯ ವಿಜೇತರು ಅಂತಾರಾಷ್ಟಿಯ ಮಟ್ಟದಲ್ಲಿ ನಡೆಯುವ ಪಂದ್ಯಕ್ಕೆ ಅರ್ಹರಾಗಿರುತ್ತಾರೆ.
ಇನ್ನು, ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿ ಜನರಿಗೆ ಪ್ಯಾಡಲ್ ಟೆನಿಸನ್ನು ಪರಿಚಯಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದ್ದು, ಜಿಲ್ಲಾ ಮಟ್ಟದ ಸ್ಪರ್ಧೆ ಏರ್ಪಡಿಸುವುದು, ಆಟೋಟೋದ ನಿಯಮಗಳ ಬಗ್ಗೆ ಪ್ರತಿಯೊಂದು ಕ್ಲಬ್’ಗಳಿಗೆ ಮಾಹಿತಿ ನೀಡುವ ಉದ್ದೇಶ ಹೊಂದಿದೆ.
ಪ್ಯಾಡಲ್ ಟೆನ್ನಿಸ್ ಕ್ರೀಡೆಯ ಪರಿಚಯ
“ಟೆನ್ನಿಸ್ ವಿತ್ ವಾಲ್ಸ್” ಹಾಗೂ “ಸ್ಕ್ವಾಷ್ ಇನ್ ದಿ ಸನ್” ಎಂಬ ಹೆಸರಿನಿಂದಲೂ ಕರೆಯಲ್ಪಡುವ ಈ ಕ್ರೀಡೆಯನ್ನು ಮಹಿಳೆ ಪುರುಷ ಎಂಬ ಬೇಧಭಾವವಿಲ್ಲದೆ ಎಲ್ಲ ವಯೋವರ್ಗದವರೂ ಆಡಬಹುದಾಗಿದೆ. ಸುಲಭವಾಗಿ ಕಲಿಯಬಹುದಾದ ಈ ಕ್ರೀಡೆಯನ್ನು ಗಾಜಿನ ಕೋರ್ಟ್ ಒಳಗೆ ಆಡುತ್ತಾರೆ.
66 ಅಡಿ 33 ಅಡಿಯಷ್ಟು ವಿಸ್ತೀರ್ಣ ಹೊಂದಿರುವ ಪಾಡಲ್ ಟೆನ್ನಿಸ್ ಕೋರ್ಟ್ ಟೆನ್ನಿಸ್ ಕೋರ್ಟ್’ಗಿಂತ ಚಿಕ್ಕದಾಗಿದೆ. ಬಹುಬೇಗನೆ ಕಲಿಯಬಹುದಾದ ಈ ಕ್ರೀಡೆಯನ್ನು ಜಗತ್ತಿನಾದ್ಯಂತ 3 ಕೋಟಿ ಜನರು ಆಡುತ್ತಾರೆ.
ಪ್ಯಾಡಲ್ ಟೆನ್ನಿಸ್ ಆಟದ ನಿಯಮಗಳು:
1. ಪ್ಯಾಡಲ್ ಟೆನ್ನಿಸನ್ನು ಯಾವಾಗಲೂ ಡಬಲ್ಸ್ ಮಾದರಿಯಲ್ಲಿ ಆಡುತ್ತಾರೆ
2. ಕ್ರೀಡೆಯು ಅಂಡರ್ಹ್ಯಾಂಡ್ ಸರ್ವಿಸ್ ಮೂಲಕ ಶುರುವಾಗುತ್ತದೆ ಹಾಗೂ ಎರಡು ಪ್ರಯತ್ನಗಳನ್ನು ಒಳಗೊಂಡಿರುತ್ತದೆ.
3. ಟೆನ್ನಿಸ್ ಆಟದ ಹಾಗೆಯೇ ಇದರಲ್ಲಿ ಬಾಲನ್ನು ಒಮ್ಮೆ ಮಾತ್ರ ಹಿಟ್ ಹಾಗೂ ಬೌನ್ಸ್ ಮಾಡಬಹುದು
4. ಎದುರಾಳಿಯು ಬಾಲನ್ನು ಡೈರೆಕ್ಟ್ ಹಿಟ್ ಮಾಡದೆ ನೆಲದಮೇಲೆ ಬೌನ್ಸ್ ಆದ ಮೇಲಷ್ಟೇ ಹೊಡೆಯಬೇಕು
ಅಂಕಗಳು
1. ಪ್ಯಾಡಲ್ ಟೆನ್ನಿಸ್ಸಿನ ಅಂಕಗಳು ಟೆನ್ನಿಸ್ ಅಂಕಗಳ ಹಾಗೆಯೇ ಇರುತ್ತದೆ (ಉದಾಹರಣೆ: 15/0, 30/0, 40/0, ಅಡ್ವಾಂಟೇಜ್, ಡ್ಯೂಸ್ ಇತ್ಯಾದಿ )
2. ಪ್ಯಾಡಲ್ ಟೆನ್ನಿಸ್ ಗೆಲ್ಲಲು 2 ಸೆಟ್ಟಲ್ಲಿ ಜಯಗಳಿಸಬೇಕು (ಒಂದು ಸೆಟ್ 6 ಪಂದ್ಯಗಳನ್ನು ಒಳಗೊಂಡಿರುತ್ತದೆ )
ಕರ್ನಾಟಕ ರಾಜ್ಯ ಪೆಡಲ್ ಸಂಘ ಸಂಸ್ಥೆ
ಪ್ಯಾಡಲ್ ಟೆನ್ನಿಸನ್ನು ಕರ್ನಾಟಕ ರಾಜ್ಯದಲ್ಲಿ ಖ್ಯಾತಗೊಳಿಸುವುದೇ ಸಂಸ್ಥೆಯ ಮುಖ್ಯ ಗುರಿಯಾಗಿದೆ. ಇದಕ್ಕಾಗಿ ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿ ಪ್ಯಾಡಲ್ ಟೆನ್ನಿಸ್ ಸ್ಪೋರ್ಟ್ಸ್ ಕ್ಲಬ್ ಸ್ಥಾಪಿಸಲು ಉದ್ದೇಶಿಸಿದೆ.
ಪ್ಯಾಡಲ್ ಟೆನ್ನಿಸ್ ಕರ್ನಾಟಕದಲ್ಲಿ ಯಾಕೆ ಬೇಕು?
1. ಪ್ಯಾಡಲ್ ಕ್ರೀಡೆಯು ಯೂರೋಪ್, ಅಮೆರಿಕ ಕೆನಡಾ, ದುಬೈ ಹಾಗೂ ಜಪಾನ್ ದೇಶಗಳಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಹಾಗೂ ಈ ಶತಮಾನದ ಕ್ರೀಡೆ ಎಂದು ಖ್ಯಾತಿಗೊಂಡಿದೆ.
2. ಪ್ಯಾಡಲ್ ಟೆನ್ನಿಸ್ ಎಲ್ಲರೂ ಆಡಬಹುದಾದಂತಹ ಅತ್ಯಂತ ಸುಲಭದ ಕ್ರೀಡೆ ಹಾಗೂ ಈ ಕ್ರೀಡೆಯನ್ನು ಆಡುವುದರಿಂದ ಇನ್ನಷ್ಟು ಬಲಾಢ್ಯರಾಗಬಹುದು.
3. ಭಾರತ ದೇಶದಲ್ಲಿ ಕರ್ನಾಟಕ ಅತ್ಯಂತ ಅಭಿವೃದ್ಧಿ ಹೊಂದುತ್ತಿರುವ ರಾಜ್ಯ. ಐಟಿ ಸಿಟಿ, ಗಾರ್ಡೆನ್ ಸಿಟಿ ಎಂದೇ ಖ್ಯಾತಿಪಡೆದ ಬೆಂಗಳೂರಿನ ಜನಸಂಖ್ಯೆ ದಿನೇ ದಿನೇ ಏರುತ್ತಿದೆ. ಕೆಲಸದ ಒತ್ತಡದಿಂದ ತತ್ತರಿಸಿ ಹೋಗಿರುವ ಜನರಿಗೆ ಇಂತಹ ಕ್ರೀಡೆಯ ಅಗತ್ಯವಿದೆ.
4. ಈಗಿನ ತಾಂತ್ರಿಕಯುಗದಲ್ಲಿ ಜನರಿಗೆ ಯಾವುದಕ್ಕೂ ಸಮಯವಿಲ್ಲ. ಅವರು ಕೆಲಸದ ಒತ್ತಡದಲ್ಲಿ ತಮ್ಮ ಆರೋಗ್ಯದ ಕಡೆ ಕಾಳಜಿ ವಹಿಸುವುದಿಲ್ಲ, ಮನೆಯವರ ಜೊತೆ ಹಾಗೂ ಸ್ನೇಹಿತರೊಡನೆ ಮಾತನಾಡಲೂ ಅವರಿಗೆ ಸಮಯವವಿಲ್ಲ. ಪ್ಯಾಡಲ್ ಟೆನ್ನಿಸ್ ಆಡುವುದರಿಂದ ಗಂಟೆಗೆ 500 ಕ್ಯಾಲೊರಿಸ್ ಇಳಿಸಬಹುದು, ಮನೆಯವರ ಹಾಗೂ ಸ್ನೇಹಿತರ ಜೊತೆ ಇದನ್ನು ಆಡಬಹುದರಿಂದ ಅವರ ಜೊತೆ ಬಾಂಧವ್ಯವು ಚೆನ್ನಾಗಿರುತ್ತದೆ ಹಾಗೂ ಹೊಸಜನರ ಸಂಪರ್ಕವೂ ಆಗುತ್ತದೆ.
Discussion about this post