Read - < 1 minute
ಪ್ರತಿದಿನ ಮೂಲ ಬಾರಿ ಸಂಧ್ಯಾವಂದನೆ ಮಾಡುವುದರಿಂದ ಉಂಟಾಗುವ ವೈಜ್ಞಾನಿಕ ಲಾಭಗಳು ಅನೇಕ. ಇದನ್ನು ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು ಅದ್ಬುತವಾಗಿ ವಿವರಿಸಿದ್ದು, ಅದರ ಪ್ರಮುಖ ಅಂಶಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ.
- ನಿತ್ಯವೂ ಸಂಧ್ಯಾವಂದನೆ ಮಾಡುವುದರಿಂದ ಚಿತ್ತಚಾಂಚಲ್ಯ ದೂರವಾಗಿ ಏಕಾಗ್ರತೆ ಹೆಚ್ಚುತ್ತದೆ.
- ಭಗವಂತನಲ್ಲಿ ಶ್ರದ್ಧೆ, ನಂಬಿಕೆ, ಪ್ರೀತಿ, ಭಕ್ತಿ ಮುಂತಾದ ಭಾವನೆಗಳು ಅಚಲವಾಗಿ ವ್ಯಕ್ತಿ ಆಧ್ಯಾತ್ಮ ಸಾಧನೆಗೆ ಅರ್ಹನಾಗುತ್ತಾನೆ.
- ವ್ಯಕ್ತಿಯ ಅಂತಃಪ್ರೇರಣೆ ಜಾಗೃತವಾಗಿ ಜೀವನದ ಪ್ರತಿಕ್ಷಣದಲ್ಲೂ ಸನ್ಮಾರ್ಗದಲ್ಲಿ ನಡೆಯುವಂತೇ ಪ್ರೇರೇಪಿಸುತ್ತದೆ.
- ಅಂತಃಕರಣದ ಸಂಸ್ಕಾರದಿಂದ ಜನ್ಮಜನ್ಮಾಂತರದ ಅಜ್ಞಾನ ದೂರವಾಗಿ ವ್ಯಕ್ತಿ ಸಂಸ್ಕಾರವಂತನಾಗುತ್ತಾನೆ.
- ಮನುಷ್ಯನ ಕಾಂತಿ ಹಾಗೂ ತೇಜಸ್ಸು ಅಧಿಕವಾಗುತ್ತದೆ.
- ಮಾತಿನಲ್ಲಿ ಮೃದುತ್ವ, ವಿನಯ ಹಾಗೂ ಸತ್ಯ ನೆಲೆಗೊಳ್ಳುತ್ತದೆ.
- ಮನಸ್ಸಿನಲ್ಲಿ ಸದ್ಭಾವನೆ, ಶ್ರೇಷ್ಠ ವಿಚಾರ ಹಾಗೂ ಸಾತ್ವಿಕ ಗುಣಗಳು ಸ್ಥಾನ ಪಡೆಯುತ್ತವೆ.
- ಮನಸ್ಸಿನಲ್ಲಿ ಸಂಕಲ್ಪ ಶಕ್ತಿಯು ಪ್ರಬಲವಾಗುತ್ತದೆ.
- ಶಾಂತಿ, ಸಂತೋಷ, ಕ್ಷಮೆ, ದಯೆ, ಪ್ರೀತಿ ಮುಂತಾದ ಸದ್ಭಾವನೆಗಳು ಮನದಲ್ಲಿ ನೆಲೆಗೊಳ್ಳುತ್ತವೆ.
- ಮನುಷ್ಯನಲ್ಲಿರುವ ಪ್ರಮುಖ ಗುಣ ಅಹಂಕಾರ. ಅಹಂಕಾರದ ಮೂಲರೂಪ ನಾನು. ನಾನು ಎಂಬ ಭಾವನೆ ಬಂದಾಗ ಅಧ್ಯಾತ್ಮಸಾಧನೆ ಸಾಧ್ಯವಿಲ್ಲ. ಸಂಧ್ಯಾವಂದನೆ ನಾನು ಎಂಬ ಅಹಂಕಾರವನ್ನು ದೂರಮಾಡಿ, ವ್ಯಕ್ತಿ ಆಧ್ಯಾತ್ಮಸಾಧನೆ ಮಾಡಲು ಪ್ರೇರೇಪಿಸುತ್ತದೆ.
- ಪ್ರಾತಃಕಾಲದ ಸಂಧ್ಯಾವಂದನೆ ರಾತ್ರಿಯ ಪಾಪಗಳನ್ನು ನಾಶಗೊಳಿಸುತ್ತದೆ.
- ಮಧ್ಯಾಹ್ನದ ಸಂಧ್ಯಾವಂದನೆ ಪ್ರಾತಃಕಾಲದಿಂದ ಮಧ್ಯಾಹ್ನದವರೆಗೆ ಮಾಡಿದ ಪಾಪಗಳನ್ನು ನಾಶಗೊಳಿಸುತ್ತದೆ
- ಸಾಯಂಕಾಲದ ಸಂಧ್ಯಾವಂದನೆ ಮಧ್ಯಾಹ್ನದಿಂದ ಸಂಜೆಯವರೆಗೆ ಮಾಡಿದ ಪಾಪಗಳನ್ನು ನಾಶಗೊಳಿಸುತ್ತದೆ.
- ಹಾಗಾಗಿ ನಿತ್ಯ ಸಂಧ್ಯಾವಂದನೆಯನ್ನು ಮಾಡುವವನು ಪಾಪಗಳಿಂದ ವಿಮುಕ್ತನಾಗಿರುತ್ತಾನೆ.
- ಸಂಧ್ಯಾವಂದನೆಯಿಂದ ದೈಹಿಕ ಆರೋಗ್ಯ ಸ್ಥಿರವಾಗಿರುತ್ತದೆ. ಸಂಧ್ಯಾವಂದನೆಯಲ್ಲಿ ಮಾಡುವ ಪ್ರಾಣಾಯಾಮ ಹಲವು ರೋಗಗಳನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ವಿಷ್ಣುಪುರಾಣದಲ್ಲಿ ಔರ್ವ ಎಂಬ ಋಷಿ ಸಗರರಾಜನಿಗೆ ತಿಳಿಸುತ್ತಾನೆ.
- ಹೇ ಸಗರರಾಜ, ಬುದ್ಧಿವಂತನಾದ ಮನುಷ್ಯ ಪ್ರಾತಃಸಂಧ್ಯೋಪಾಸನೆ ಹಾಗೂ ಸಾಯಂಸಂಧ್ಯೋಪಾಸನೆಯನ್ನು ಪ್ರತಿನಿತ್ಯ ತಪ್ಪದೇ ಮಾಡಿ ಪಾಪಗಳಿಂದ ವಿಮುಕ್ತನಾಗುತ್ತಾನೆ. ಸಂಧ್ಯಾಕಾಲದಲ್ಲಿ ಯಾರು ಸಂಧ್ಯಾವಂದನೆಯನ್ನು ಮಾಡದೇ ಮಲಗಿರುತ್ತಾರೋ ಅಥವಾ ಅನ್ಯಕಾರ್ಯಗಳಲ್ಲಿ ಮಗ್ನರಾಗಿರುತ್ತಾರೋ ಅಂತವರು ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಾಗುತ್ತದೆ. ಆದ್ದರಿಂದ ಹೇ ರಾಜ.. ಪ್ರಾತಃಕಾಲೀನ ಹಾಗೂ ಸಾಯಂಕಾಲದ ಸಂಧ್ಯಾವಂದನೆಯನ್ನು ತಪ್ಪದೇ ಮಾಡಬೇಕು. ಇದರಿಂದ ಮನುಷ್ಯ ಉತ್ತರೋತ್ತರ ಶ್ರೇಯಸ್ಸನ್ನು ಪಡೆಯುತ್ತಾನೆ.
(ವಿಷ್ಣುಪುರಾಣ, ತೃತೀಯ ಅಂಶ – 11-102,103)ಹಾಗಾಗಿ ಸಂಧ್ಯಾವಂದನೆ ನಿತ್ಯ ನೈಮಿತ್ತಿಕ ಕರ್ಮಗಳಲ್ಲೊಂದಾಗಿದೆ. ಅದನ್ನು ತಪ್ಪದೇ ಆಚರಿಸುವುದು ನಮ್ಮ ಕರ್ತವ್ಯ
ಸಂಗ್ರಹ ಲೇಖನ: ಕೃಷ್ಣ ಪ್ರಸನ್ನ ಆಚಾರ್, ದಾವಣಗೆರೆ
Discussion about this post