ಶ್ರೀನಗರ: ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ಪಾಕಿಸ್ಥಾನ, ಉಗ್ರರು ಹಾಗೂ ಅವುಗಳನ್ನು ಬೆಂಬಲಿಸುವವರ ವಿರುದ್ಧ ಸಮರ ಸಾರಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ಥಾನ ಹಾಗೂ ಐಎಸ್’ಐ ಜೊತೆ ಸಂಪರ್ಕ ಹೊಂದಿರುವ ಹಿನ್ನೆಲೆಯಲ್ಲಿ ಪ್ರತ್ಯೇಕತಾವಾದಿಗಳಿಗೆ ನೀಡಿದ್ದ ಭದ್ರತೆಯನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಂಡಿದೆ.
ಪಾಕಿಸ್ತಾನ ಹಾಗೂ ಅದರ ಗುಪ್ತಚರ ಸಂಸ್ಥೆ ಐಎಸ್’ಐ ಪರವಾಗಿ ಕೆಲಸ ಮಾಡುತ್ತಿರುವ ಪ್ರತ್ಯೇಕತಾವಾದಿಗಳಿಗೆ ನೀಡಲಾಗಿರುವ ಭದ್ರತೆಯನ್ನು ಹಿಂಪಡೆಯಲು ಸರ್ಕಾರ ಯೋಚನೆ ಮಾಡುತ್ತಿದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ತಿಳಿಸಿದ್ದರು. ಇಂದು ಇದನ್ನು ಕಾರ್ಯಗತಗೊಳಿಸಿದ್ದು, ಈ ಮೂಲಕ ಪ್ರತೀಕಾರಕ್ಕೆ ಕೇಂದ್ರ ಸರ್ಕಾರ ನಾಂದಿ ಹಾಡಿದೆ.
ಕಾಶ್ಮೀರ ಭೇಟಿ ವೇಳೆ ಮಾತನಾಡಿದ್ದ ರಾಜನಾಥ್ ಸಿಂಗ್, ಪಾಕಿಸ್ಥಾನ ಹಾಗೂ ಐಎಸ್’ಐಯಿಂದ ಹಣವನ್ನು ತೆಗೆದುಕೊಳ್ಳುವ ಅಂಶಗಳು ಕೇಳಿಬಂದಿದ್ದು, ಭದ್ರತೆಯನ್ನು ಪರಿಶೀಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದಿದ್ದರು.
ಪಾಕಿಸ್ತಾನದ ಐಎಸ್ ಐ ಹಾಗೂ ಉಗ್ರ ಸಂಘಟನೆಗಳೊಂದಿಗೆ ಜಮ್ಮ- ಕಾಶ್ಮೀರದಲ್ಲಿನ ಕೆಲವರು ಸಂಪರ್ಕದಲ್ಲಿರುವ ಅಂಶ ತಿಳಿದುಬಂದಿದೆ. ಆದರೆ, ಅವರ ಯೋಜನೆಯನ್ನು ಸರ್ಕಾರ ಬುಡಮೇಲು ಮಾಡಲಿದೆ ಎಂದವರು ಹೇಳಿದ್ದರು.

















