ವ್ಯಕ್ತಿಯೊಬ್ಬ ಶಕ್ತಿಯಾಗಿ ನಿಲ್ಲುವುದು, ತನ್ನಲ್ಲಿರುವ ಸಾಮರ್ಥ್ಯಕ್ಕೆ ತಾನೇ ಬಣ್ಣ ಹಂಚಿಕೊಂಡಾಗ. ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಬೆಳೆದು ನಿಲ್ಲಬೇಕೆಂಬ ಹಠ ತೊಟ್ಟರೆ ಅದೆಷ್ಟೇ ಕಠಿಣವಾಗಿರುವ ಸವಾಲುಗಳಿಗೂ ಎದೆಗುಂದದೆ ಮುನ್ನಡೆಯ ಹೆಜ್ಜೆ ಇಟ್ಟು, ಬದುಕಿನ ಕನಸಿಗೆ ಬಣ್ಣ ಹಚ್ಚಿಕೊಂಡು ರಂಗುರಂಗಿನ ರಂಗೋಲಿಯೊಳಗೆ ಚಂದಿರನಂತೆ ಹೊಳೆಯುತ್ತಿದ್ದಾರೆ.
ಇದೆಲ್ಲದಕ್ಕೂ ಆಸಕ್ತಿ ಎಂಬ ಉಮೇದುಗಾರಿಕೆ ಬೇಕು, ಛಲವೆಂಬ ಗುಣ ರಕ್ತದೊಳಗಿರಬೇಕು. ಅದೆಲ್ಲದಕ್ಕಿಂತ ಸ್ವಾರ್ಥ ಬಿಟ್ಟು ಎಲ್ಲರನ್ನೂ ಪ್ರೀತಿಸುವ ಗುಣದ ಮನ ನಮ್ಮೊಳಗಿರಬೇಕು.
ಇವೆಲ್ಲ ಗುಣದೊಳಗೆ ನುಸುಳಿ ಸದ್ಗುಣಗಳಿಗೆ ಹೆಗಲಾಗಿ, ಕಲಾವಿದರ ಪಾಲಿಗೆ ಪ್ರೋತ್ಸಾಹಕರಾಗಿ, ರಂಗಮಂಟಪದೊಳಗೆ ಕಲಾವಿದನಾಗಿ, ಕಾರ್ಯಕ್ರಮದಲ್ಲಿ ಉತ್ತಮ ನಿರೂಪಕನಾಗಿ, ಸಂಘದೊಳಗೆ ಉತ್ತಮ ನಾಯಕನಾಗಿ, ಮಿತ್ರರ ಜೊತೆಗೆ ಓರ್ವ ಉತ್ತಮ ಸ್ನೇಹಿತನಾಗಿರುವ ಸಕಲ ಕಲೆಯಲ್ಲೂ ಪಳಗಬೇಕೆಂಬ ಹುಮ್ಮನಸಿನ ಪ್ರತಿಭೆಯೇ ಸುಧಾಕರ್ ಬನ್ನಂಜೆ.
ಇವರ ತಂದೆ ತಿರುಮಲೆ ಗುತ್ತು ಅಚ್ಚಣ್ಣ ಭಂಡಾರಿ ತಾಯಿ ಸುಶೀಲಾ ಬನ್ನಂಜೆ. ಹೆಂಡತಿ ಮಮತಾ, ಮಕ್ಕಳು ಪ್ರಾರ್ಥನ್, ಪ್ರೇರಣ್.
ಇವರ ಅಭಿನಯ 4ನೆಯ ತರಗತಿಯಲ್ಲಿದ್ದಾಗಲೇ ಆರಂಭವಾಯಿತು. ಭೂಲೋಕದಲ್ಲಿ ನಾರದ ಎಂಬ ಏಕಪಾತ್ರಾಭಿನಯ ಇವರದ್ದೇ ಕಲ್ಪನೆ. 5ನೆಯ ತರಗತಿಯಲ್ಲಿ ದಲ್ಲಾಳಿ ಶೀನಣ್ಣ ನಾಟಕ ಬರೆದರು. ಈ ಮೂಲಕ ರಂಗಭೂಮಿಯ ಮೇಲಿನ ಆಸಕ್ತಿ ಮುಂದುವರೆಯಿತು.
ಇವರ ನಾಟಕ ರಂಗದ ಗುರುಗಳು ಎಂ.ಕೆ. ಅಣ್ಣಯ್ಯ ಪೂಜಾರಿ ಮಾಸ್ಟರ್ ಮತ್ತು ಶ್ರೀಪತಿ ಕಲ್ಕೂರು ಮಾಸ್ಟರ್. ಈವರೆಗೂ ಇವರು 64 ತುಳು, 28 ಕನ್ನಡ ನಾಟಕಗಳ ರಚಿಸಿ ನಿರ್ದೇಶಿಸಿ, ಸಾವಿರಕ್ಕೂ ಮಿಕ್ಕಿ ಅಭಿನಯ ಮಾಡಿದ್ದಾರೆ.
ಕರಿಮಣಿ ಸರ, ಮಾಜಂದಿ ಕುಂಕುಮ, ನೆರೆಲ್ ದಾಂತಿ ಮರ, ಕಾಲಚಕ್ರ, ಕಡಲಪ್ಪೆ ಬಾಲೆಲು, ಒಂಜೇ ನೆತ್ತೆರ್ ಬಂಗಾರ ಬಿಸತಿ, ಕರ್ಲನೆತ್ತೆರ್, ಎಂಕ್ ಮದಿಮೆ ಆವೊಡು ಹಾಗೂ ಕನ್ನಡದಲ್ಲಿ ಪ್ರಕೃತಿ, ಕಾಮರುಪಿ, ಎಬಿಸಿ ಬ್ಯಾಂಕ್ ಅಮರ್ ಅಶೋಕ್, ರಾಣಿ ಅಬ್ಬಕ್ಕ ಪ್ರಮುಖವಾದವು.
5ನೆಯ ತರಗತಿಯಲ್ಲಿ ಇರುವಾಗ ಯಕ್ಷಗಾನ ಅಭ್ಯಾಸ ಶುರುವಾಯಿತು. ಭಾಗವತ ಕೆ. ನಾರಾಯಣ ಶೆಟ್ಟಿ, ಅಮ್ಮುಂಜೆ ನಾಗೇಶ್ ನಾಯಕ್ ಗುರುಗಳು. ಮಾರ್ಗೋಳಿ ಗೋವಿಂದ ಶೇರೆಗಾರ್ ಅವರಿಂದ ಬಡಗು, ಕರ್ನುರು ಕೊರಗಪ್ಪ ರೈಗಳಿಂದ ತೆಂಕು ಕುಣಿತ ಕಲಿತರು. ಮಲ್ಪೆ ಶಂಕರನಾರಾಯಣ ಸಾಮಗ, ಶೇಣಿ ಗೋಪಾಲಕೃಷ್ಣ ಭಟ್, ಪೊಲ್ಯ ದೇಜಪ್ಪ ಶೆಟ್ಟಿ, ರಾಮದಾಸ್ ಸಾಮಗ, ಮಟ್ಟು ಸುಬ್ಬರಾವ್, ಸೀತಾನದಿ ಗಣಪಯ್ಯ ಶೆಟ್ಟರ ಜೊತೆ ತಾಳಮದ್ದಳೆಗಳಲ್ಲಿ ಬಾಲ ಕಲಾವಿದನಾಗಿ ಅರ್ಥ ಹೇಳಿದ ಹಿರಿಮೆ ಇವರದು.
ಬನ್ನಂಜೆ ಶ್ರೀಮಹಾಲಿಂಗೇಶ್ವರ ಯಕ್ಷಗಾನ ಮಂಡಳಿಯ ಸ್ಥಾಪಕ ಸದಸ್ಯರಾಗಿದ್ದು, ಅಮೃತೇಶ್ವರಿ, ಸಾಲಿಗ್ರಾಮ, ಕರ್ನಾಟಕ, ಪುತ್ತೂರು, ಸುಬ್ರಹ್ಮಣ್ಯ ಮೇಳಗಳಲ್ಲಿ ಅತಿಥಿ ಕಲಾವಿದನಾಗಿ ವೇಷ ಧರಿಸಿದ್ದು, ದೆಹಲಿಯ ಸ್ಟೇಟ್ ಮನ್ ಪತ್ರಿಕೆ ಯಕ್ಷಗಾನದ ಪ್ರತಿಭಾವಂತ ಬಾಲ ಕಲಾವಿದ ಎಂದು ಗುರುತಿಸಿತ್ತು.
ಅಯ್ಯಪ್ಪ, ಪರಶುರಾಮ, ಅರ್ಜುನ, ಸುಧನ್ವ, ಶ್ರೀಕೃಷ್ಣ, ಕರ್ಣ ಮಹಿಷಾಸುರ, ಭಸ್ಮಾಸುರ, ಶ್ವೇತಕುಮಾರ, ಯಮ ಹೀಗೆ ಯಕ್ಷಗಾನದಲ್ಲಿ ನಾನಾ ಪಾತ್ರ ಮಾಡಿದ್ದಾರೆ.
ಅಭಿನಯ ಮತ್ತು ಎಲ್ಲ ತರಹದ ಕಲೆಗಳಿಗೂ ಜೀವ ತುಂಬಬಲ್ಲ ಸಕಲ ಕಲೆಯಲ್ಲೂ ಪಳಗಿರುವ ಕಲಾವಿದ ಇಂದು ಸಾವಿರಾರು ಅಭಿಮಾನಿಗಳನ್ನು ಸೃಷ್ಠಿಸಿಕೊಂಡಿದ್ದಾರೆ. ಯಕ್ಷಗಾನ, ರಂಗಭೂಮಿಗೆ ತಮ್ಮದೇ ರೀತಿಯಲ್ಲಿ ಕೊಡುಗೆ ನೀಡಿರುವ ಸರಳ ಸಜ್ಜನ ವ್ಯಕ್ತಿತ್ವದ ಸಕಾರಮೂರ್ತಿ, ಬೆಂಗಳೂರು ದೂರದರ್ಶನಕ್ಕೆ ಹಲವಾರು ಧಾರಾವಾಹಿ ನಿರ್ದೇಶನ ಮಾಡಿದ್ದಾರೆ.
ಇದರೊಂದಿಗೆ ನಾಗರಿಕ, ಅಪ್ಪನ ಗಂಟು, ಭಾವನ, ನೀ ನಡೆವ ಹಾದಿಯಲ್ಲಿ, ವಂದನಾ, ಗುರು ದೇವೋ ಭವ, ಹೀಗೆ ಹಲವು ಧಾರಾವಾಹಿಗೆ ಸಂಭಾಷಣೆ ಬರೆದ ಇವರು, ಈ ಟಿವಿಗೆ ಕಿರುಚಿತ್ರ, ಜೀ ಟಿವಿಗೆ, ಉದಯ ಟಿವಿಗೆ ಕಸ್ತೂರಿ ಟಿವಿಗೆ ಧಾರಾವಾಹಿ ನಿರ್ದೇಶಕರಾಗಿ ದುಡಿದಿದ್ದಾರೆ.
ಚಲನಚಿತ್ರ ರಂಗದಲ್ಲಿ ಸಹ ಇವರ ಅಪಾರ ಸಾಧನೆ ಇದೆ. ಹೀಗೊಂದು ಪ್ರೇಮಕಥೆ, ಧರ್ಮ ಯೋಧರು, ದೇರ್ವೆ, ನಾನು ಹೇಮಂತ್ ಅವಳು ಸೇವಂತಿ, ಪ್ರೇರಣೆ, ರಣರಣಕ, ಗಂಟ್ ಕಲ್ವೆರ್ ಚಿತ್ರಗಳಿಗೆ ಕಥೆ ಸಂಭಾಷಣೆ ಸಾಹಿತ್ಯ ಬರೆದು ನಿರ್ದೇಶಿಸಿದ್ದಾರೆ. ಹೀಗೊಂದು ಪ್ರೇಮಕಥೆ, ಧರ್ಮಯೋಧರ ಚಿತ್ರಗಳ ನಾಯಕ ಇವರೇ.
ಜೊತೆಗೆ ಬದಿ ಮತ್ತು ಪೊನ್ನಮ್ಮ ಚಿತ್ರಗಳಲ್ಲಿ ಹಾಸ್ಯ ಪಾತ್ರ ಮಾಡಿದ್ದಾರೆ. ಶಿವರಾಜ್ ಕುಮಾರ್ ಜೊತೆ ಇಂದ್ರ ಧನುಷ್ ಚಿತ್ರದಲ್ಲಿ ಪ್ರಧಾನ ಪಾತ್ರ, ಯಕ್ಷ ಚಿತ್ರದಲ್ಲಿ ನಾನಾ ಪಾಟೇಕರ್, ಯೋಗಿ ಜೊತೆ ಖಳನಾಯಕ ಪಾತ್ರ ಮಾಡಿದ್ದಾರೆ. ತುರ್ಡ, ಬದಿ, ಪೊನ್ನಮ್ಮ, ಕಾರ್ಜಾ, ಐದೊಂದ್ಲ ಐದು, ಕೋಟಿ ಚೆನ್ನಯ, ಬ್ರಹ್ಮ ಶ್ರೀ ನಾರಾಯಣ ಗುರು ಸ್ವಾಮಿ, ಶಾಲೆ ಚಿತ್ರಗಳಿಗೆ ಹಾಡು, ಸಂಭಾಷಣೆ ಬರೆದಿದ್ದಾರೆ.
ನಿರ್ದೇಶಕರಾದ ರಿಚರ್ಡ್ ಕ್ಯಾಸ್ಪಲಿನೋ, ವಿ. ಮನೋಹರ್, ರಮೇಶ್ ಭಾಗವತ್ ರವಿಚಂದ್ರನ್, ಕೋಡ್ಲು ರಾಮಕೃಷ್ಣ, ಆನಂದ ಪಿ. ರಾಜು, ರಾಜಶೇಖರ ಕೋಟ್ಯಾನ್, ವಿ.ಕೆ. ಪ್ರಕಾಶ್ ಹಾಗೂ ನಿರ್ಮಾಪಕ ಶೈಲೇಂದ್ರ ಬಾಬು, ಪ್ರಕಾಶ್, ದಿನೇಶ್ ನಾಯ್ಡು, ಧನರಾಜ್, ವೇದಾವತಿ ಶೆಟ್ಟಿ, ರುದ್ರೇಶ್ ಗೌಡ, ಗಂಗಾಧರ ಬಿರ್ತಿ, ರಾಜಾರಾಂ ಶೆಟ್ಟಿ ಉಪ್ಪಳ, ಕಾರ್ಕಳ ಶೇಖರ ಭಂಡಾರಿ, ಗಿರೀಶ್ ಪೂಜಾರಿ, ಅಮೃತ್ ಶೆಣೈ, ಉದಯಗೌಡ, ಶಂಕರ್, ಅಮಿಶ್ ಚಂದ್ರನಾ, ಸಿಲ್ವೆಸ್ಟರ್ ಕ್ಯಾಸ್ಟಲಿನೋ, ರಿಚರ್ಡ್ ರೆಬೆಲ್ಲೋ, ವೇಣುಗೋಪಾಲ ಶೆಣೈ, ರಮೇಶ್ ಭಾಗವತ್, ದಿವಾಕರ್ ಎನ್. ಬಾಲಕೃಷ್ಣ ಪುನಾ, ಮಮತಾ ಎಸ್.ಬಿ. ಮೋಹನ್ ಕುಮಾರ್ ಅವರನ್ನು ಸದಾ ಸ್ಮರಿಸುತ್ತಾರೆ.
ಸದ್ಯ ಬಿಡುಗಡೆ ಆಗಲಿರುವ ಚಿತ್ರ ರಣರಣಕ ಡಬ್ಬಿಂಗ್ ಹಂತದಲ್ಲಿ ಇದೆ ಗಂಟ್ ಕರ್ಲ್ವೆ. ಈಗಾಗಲೇ ಹೊಸ ಚಿತ್ರದ ಸ್ಕ್ರಿಪ್ಟ್ ಸಿದ್ದವಾಗಿದೆ. ಗಂಟ್ ಕಲ್ವೆರ್ ಬಿಡುಗಡೆ ನಂತರ ಅದು ಪ್ರಾರಂಭ.
ಇವರ ಸಾಧನೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಗೌರವಿಸಿವೆ. ಬೆಂಗಳೂರು ತುಳುವರೆಂಕುಲು ಸಂಘಟನೆಯು ಬಲಿಯೇಂದ್ರ ಪುರಸ್ಕಾರ ನೀಡಿ ಗೌರವಿಸಿದೆ.
ಓರ್ವ ಕಲಾವಿದ ಕಲಾ ಪೋಷಕನಾಗಿ ಇನ್ನೊಂದು ಕಲಾವಿದನನ್ನು ಪ್ರೋತ್ಸಾಹಿಸುವುದು ಬಹಳ ವಿರಳ. ಆದರೆ ಕಲಾ ಸೇವೆ ಎಂದರೆ ಬರೇ ಬಣ್ಣ ಹಚ್ಚಿ ತಾನು ಕಲಾವಿದನಾಗಿ ಮಾತ್ರ ಗುರುತಿಸಿಕೊಳ್ಳುವುದಲ್ಲ. ನನ್ನಂತಹ ಕಲಾವಿದರೆಲ್ಲರೂ ಒಂದೇ ಎಂಬ ನಿಟ್ಟಿನಲ್ಲಿ ಪ್ರತಿಯೊಬ್ಬ ಕಲಾವಿದರಿಗೂ ಮುಕ್ತ ಮನಸ್ಸಿನ ನಿಸ್ವಾರ್ಥ ಧ್ಯೇಯದೊಳಗೆ ಕಲಾವಿದರಿಗೆ ತನ್ನದೇ ರೀತಿಯಲ್ಲಿ ಪ್ರೋತ್ಸಾಹವನ್ನು ನೀಡುತ್ತಾ ಬರುತ್ತಿದ್ದಾರೆ. ಜೊತೆಗೆ ಹಲವಾರು ನಾಯಕ ನಾಯಕಿಯರನ್ನು ಕನ್ನಡ ಮತ್ತು ತುಳು ಚಿತ್ರರಂಗಕ್ಕೆ ಪರಿಚಯ ಮಾಡಿದ್ದಾರೆ. ಜೊತೆಗೆ ತಮಗೆ ಆರ್ಥಿಕ ಮತ್ತು ನೈತಿಕವಾಗಿ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ನೆನೆದು ಧನ್ಯವಾದ ಅರ್ಪಿಸುತ್ತಾರೆ.
ಶೂನ್ಯತಾ ಭಾವದೊಳಗಡೆ ಕಲಾವಿದನ ಬದುಕು ಸಾಗುತ್ತಿರಬೇಕು. ಆ ಸಾಗಿದ ಪಯಣದಲ್ಲಿ ಸಾಧನೆಗಳ ಮೆಟ್ಟಿಲುಗಳೇ ಮಾತನಾಡುವಂತಿರಬೇಕು ಎಂಬ ನಾಣ್ಣುಡಿಯಂತೆ ಸರಳ ಸಜ್ಜನಿಕೆಯೊಂದಿಗೆ, ನಿಸ್ವಾರ್ಥ ಮನೋಭಾವದ ವ್ಯಕ್ತಿತ್ವದೊಂದಿಗೆ ಕಲಾ ಜಗತ್ತಿನ ಕಣ್ಮಣಿಯಾಗಿ ಕಲಾರಂಗದಲ್ಲಿ ತನ್ನದೇ ವೈಶಿಷ್ಟ್ಯತೆಯೊಂದಿಗೆ ಕಂಗೊಳಿಸುತ್ತಿದ್ದಾರೆ. ಇವರ ಕಲಾ ಬದುಕಿನ ಪಯಣ ಎನ್ನಷ್ಟು ದೂರ ಸಾಗುತ್ತಿರಲಿ, ಕಲಾ ಮಾತೆಯ ಆಶೀರ್ವಾದ ಅವರ ಮೇಲೆ ಸದಾ ಇರಲಿ ಎಂದು ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ತಂಡ ಶುಭ ಹಾರೈಸುತ್ತದೆ.
ಲೇಖನ: ಅಭಿಷೇಕ್ ನಾಯ್ಕ್ ಮಲೆನಾಡು
Discussion about this post