ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ರಾಜ್ಯವು ಸಂಕಷ್ಟದಲ್ಲಿರುವ ಈ ಸಮಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯು ಮನೆಯಲ್ಲಿರುವ ಮಕ್ಕಳನ್ನು ತಲುಪಲು ಒಂದು ಯುಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದೆ.
ಈ ಯುಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರ ಮಾಡಲು ಉದ್ದೇಶಿಸಿರುವ ಸಾಮಗ್ರಿಗಳನ್ನು ಇತರೆ ಮಾಧ್ಯಮಗಳಾದ ರೇಡಿಯೋ/ಟಿವಿ/ಇಂಟರ್ ನೆಟ್‌ನಲ್ಲಿಯೂ ಪ್ರಸಾರ ಮಾಡಲು ಸೂಕ್ತವಾಗಿರುವಂತೆ ರೂಪಿಸಲಾಗಿದೆ.
ರಜೆಯ ಕಾರಣ ಮನೆಯಲ್ಲಿರುವ ಮಕ್ಕಳಿಗೆ ಕತೆ, ಹಾಡು, ಚಿತ್ರ ಕಲೆ, ಸಂಗೀತ, ಕಿರು ನಾಟಕ, ಕ್ರಾಫ್ಟ್, ಒಗಟು, ಗಾದೆ, ಮ್ಯಾಜಿಕ್, ಪದಬಂಧ ಇತ್ಯಾದಿಗಳ ಮೂಲಕ ತಲುಪಿ, ಅವರನ್ನು ರಂಜಿಸಲು ಹಾಗೂ ಅವರನ್ನು ತೊಡಗಿಸಿಕೊಳ್ಳಲು ಉದ್ದೇಶಿಸಿದೆ. ಈ ಮಕ್ಕಳ ಯುಟ್ಯೂಬ್ ಚಾನೆಲ್ ಗೆ ’ಮಕ್ಕಳ ವಾಣಿ: ನಲಿಯೋಣ, ಕಲಿಯೋಣ’ ಎಂದು ಹೆಸರಿಸಲಾಗಿದೆ.
ಪ್ರತಿ ದಿನ ಮುಂಜಾನೆ 10.30 ಗಂಟೆಗೆ ಯುಟ್ಯೂಬ್ ಚಾನೆಲ್’ನಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಉದ್ದೇಶಿಸಿದೆ. ಈ ಸಮಯದಲ್ಲಿ ಕಾರ್ಯಕ್ರಮಗಳ ವೀಕ್ಷಣೆ ಮಾಡಲು ಶಿಕ್ಷಕರು ಅಥವಾ ಕುಟುಂಬದ ಸ್ನೇಹಿತರ ಬಳಿ ಇಂಟರ್ ನೆಟ್ ಸಂಪರ್ಕವಿರುವ ಇರುವ ಸ್ಮಾರ್ಟ್ ಫೋನ್ ಅನ್ನು ಮಕ್ಕಳಿಗೆ ನೀಡಲು ಪೋಷಕರಿಗೆ ಮನವಿ ಮಾಡಲಾಗುವುದು.
ಯುಟ್ಯೂಬ್’ನಲ್ಲಿ ಪ್ರಸಾರ ಮಾಡುವ ಸಾಮಗ್ರಿಗಳನ್ನು ಶಿಕ್ಷಕರು, ಶಿಕ್ಷಣಾಸಕ್ತರಿಂದ ಪಡೆಯಲು ಕರೆ ನೀಡಲಾಗಿದೆ. ಸ್ವೀಕೃತದ ಸಾಮಗ್ರಿಗಳನ್ನು ಅವುಗಳ ನಾವೀನ್ಯತೆ, ಸೂಕ್ತತೆ ಹಾಗೂ ಸಮಂಜಸತೆಯ ಬಗ್ಗೆ ಪರಿಶೀಲಿಸಿ, ಪ್ರಸಾರ ಮಾಡುವ ಕುರಿತ ನಿರ್ಧಾರವನ್ನು ತೆಗೆದುಕೊಳ್ಳಲು ಸಂಪಾದಕ ಮಂಡಳಿಯನ್ನು ರಚಿಸಲಾಗಿದೆ. ಎಲ್ಲಾ ವಯೋಮಾನದ ಗುಂಪುಗಳಿಗೆ ಸರಿಹೊಂದುವಂತೆ ಪ್ರಾರಂಭದಲ್ಲಿ ಅರ್ಧ ಗಂಟೆ ನಂತರದ ದಿನಗಳಲ್ಲಿ ಪ್ರತಿ ದಿನ ಒಂದು ಗಂಟೆಯಂತೆ ಕಾರ್ಯಕ್ರಮವನ್ನು ಶಾಲೆಗಳು ಪುನರಾರಂಭ ಆಗುವವರೆಗೆ ಪ್ರಸಾರ ಮಾಡಲು ಯೋಜನೆ ರೂಪಿಸಲಾಗಿದೆ.
ಶಿಕ್ಷಕರು ಅಥವಾ ಶಿಕ್ಷಣಾಸಕ್ತರು ಸೃಜಿಸುವ ವಿಷಯವು ಹೊಸದಾಗಿದ್ದು, ಮಕ್ಕಳಲ್ಲಿ ಆಸಕ್ತಿ, ಕುತೂಹಲ ಹುಟ್ಟಿಸುವಂತಿರಬೇಕು ಹಾಗೂ ಅವರನ್ನು ತೊಡಗಿಸುವಂತಹ ಕೆಲವು ಚಟುವಟಿಕೆಗಳನ್ನೂ ಸಹ ಸಿದ್ಧಪಡಿಸಬಹುದು. ಸಿದ್ಧಪಡಿಸುವ ಸಾಮಗ್ರಿಗಳು ತರಗತಿಗಳ ಪಾಠಗಳು ಅಥವಾ ಪಠ್ಯಕ್ರಮಕ್ಕೆ ಸಂಬಂಧಿಸಿರುವ ಅಗತ್ಯತೆ ಇಲ್ಲ. ದೃಕ್ ಶ್ರವಣ ಸಾಮಗ್ರಿಯಾಗಿ ಪ್ರಸಾರ ಮಾಡಬಹುದಾದ ಯಾವುದೇ ಸಾಮಗ್ರಿಯನ್ನು ನೀವು ಸಿದ್ಧಪಡಿಸಬಹುದು. ಉದಾಹರಣೆಗೆ ಕಥಾವಾಚನ, ಪುಸ್ತಕ ಪರಿಚಯ ಓದು, ಪ್ರಯೋಗಗಳು/ಚಟುವಟಿಕೆಗಳು/ಮ್ಯಾಜಿಕ್ ಇತ್ಯಾದಿಗಳ ವಿವರಣೆಯುಕ್ತ ಪ್ರದರ್ಶನ, ಗಾದೆಗಳು, ಒಗಟುಗಳು, ಓರೆಗಾಮಿ, ಇತ್ಯಾದಿ. ಇಲ್ಲಿ ನೀಡಿರುವುದು ಕೆಲವು ಉದಾಹರಣೆಗಳು ಮಾತ್ರ. ಕಲ್ಪನಾ ಶಕ್ತಿ, ಸೃಜನಶೀಲತೆಗಳಿಗನುಗುಣವಾಗಿ ಮಕ್ಕಳಿಗೆ ಸೂಕ್ತ ಹಾಗೂ ಸಮಂಜಸವೆನಿಸುವ ಯಾವುದೇ ಸಾಮಗ್ರಿಯನ್ನು ಸಿದ್ದಪಡಿಸಬಹುದಾಗಿದೆ.
ಸೃಜಿಸಿದ ಸಾಮಗ್ರಿಯನ್ನು ವೀಕ್ಷಿಸಲು ಉತ್ಸಾಹ, ಆಸಕ್ತಿಗಳನ್ನು ತೋರಿಸುತ್ತಾರಾ ಮತ್ತು ಅಂತಹುದೇ ಕಾರ್ಯಕ್ರಮಗಳನ್ನು ಮತ್ತೆ ನೋಡಲು ಇಚ್ಚಿಸುತ್ತಾರಾ ಎಂಬುದೇ ಸಿದ್ಧಪಡಿಸಿದ ಸಾಮಗ್ರಿಗಳು ಪ್ರಸಾರಕ್ಕೆ ಅರ್ಹವಿವೆ ಎಂಬುದನ್ನು ನಿರ್ಧರಿಸಬಲ್ಲವು. ಈ ಅಂಶಗಳನ್ನು ಆಧಾರಿಸಿ ವಿಡಿಯೋಗಳನ್ನು ಸಲ್ಲಿಸಲು ಮಾನ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು ಹಾಗೂ ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣದ ಮೂಲಕ ಕೋರಲಾಗಿದೆ.
ಶಿಕ್ಷಕರು, ಶಿಕ್ಷಣಾಸಕ್ತರು ಹಾಗೂ ಶಿಕ್ಷಣ ಕುರಿತಂತೆ ಕೆಲಸ ನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳಿಂದ ಅಭೂತಪೂರ್ವ ಎನಿಸುವಷ್ಟು ಸ್ಪಂದನೆ ದೊರೆತಿದೆ. ಸ್ವೀಕೃತವಾದ ಸಾಮಗ್ರಿಗಳನ್ನು ಸಂಪಾದಕ ಮಂಡಳಿಯು ಗಮನಿಸಿ, ಸೂಕ್ತವಾದವುಗಳನ್ನು ಆಯ್ಕೆ ಮಾಡಿ, ಯುಟ್ಯೂಬ್ ಚಾನಲ್’ನಲ್ಲಿ ಪ್ರಸಾರ ಮಾಡಲು ಸಿದ್ಧಗೊಳಿಸಲಾಗಿದೆ.
ಈ ಚಾನೆಲ್ ಗೆ ಅಧಿಕ ಪ್ರಮಾಣದಲ್ಲಿ ಎಲ್ಲರೂ ಚಂದಾದಾರರಾಗಲು ಕೋರಿದೆ. ಇದರ ಲಿಂಕ್ ಈ ಕೆಳಗಿನಂತಿದೆ.
https://www.youtube.com/channel/UCDaVbK0F5b7y4hgSZrTwZNg
ಮಕ್ಕಳ ವಾಣಿ ಯುಟ್ಯೂಬ್ ಚಾನೆಲ್ ಗೆ ಮಕ್ಕಳೂ ಸೇರಿದಂತೆ ಎಲ್ಲರೂ ಸೂಕ್ತವಾದ 5 ರಿಂದ 6 ನಿಮಿಷಗಳ ವಿಡಿಯೋಗಳನ್ನು ಞ್ಝ್ಞಜಿಃಜಞಜ್ಝಿ.್ಚಟಞಗೆ ಅಥವಾ ವಾಟ್ಸಪ್ ಅಥವಾ ಟೆಲಿಗ್ರಾಂ (ಸಂಖ್ಯೆ: 9449432614)ಮೂಲಕ ಕಳುಹಿಸಲು ಶಿಕ್ಷಕರು ಹಾಗೂ ಶಿಕ್ಷಣಾಸಕ್ತರಿಗೆ ವಿನಂತಿಸಿದೆ.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
Get in Touch With Us info@kalpa.news Whatsapp: 9481252093
Discussion about this post