ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡ 36ಕ್ಕೂ ಹೆಚ್ಚು ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಶಿಕ್ಷಣ ಸಚಿವರ ವೆಬಿನಾರ್ ಸಂವಾದ
ಬೆಂಗಳೂರು: ಕೊರೋನಾ ಸಾಂಕ್ರಾಮಿಕ ಪ್ರಸರಣದ ಈ ಕಾಲಘಟ್ಟದಲ್ಲಿ ಶಾಲೆಗಳನ್ನು ತೆರೆಯುವ ಅವಸರ ಸರ್ಕಾರದ ಮುಂದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.
ಕೊರೋನಾ ಸಾಮಾಜಿಕ ಸಂದರ್ಭದಲ್ಲಿ ತಂತ್ರಜ್ಞಾನಾಧಾರಿತ ಶಿಕ್ಷಣ ಮತ್ತು ಶಾಲಾ ಚಟುವಟಿಕೆಗಳನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಮಂಗಳವಾರ ಶೈಕ್ಷಣಿಕ ವಲಯದಲ್ಲಿ ತೊಡಗಿಸಿಕೊಂಡಿರುವ ಸರ್ಕಾರೇತರ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ನಡೆಸಿದ ವೆಬಿನಾರ್ ಸಂವಾದದಲ್ಲಿ ಮಾತನಾಡಿದ ಅವರು, ಈ ಸಾಮಾಜಿಕ ಪರಿಸ್ಥಿತಿಯಲ್ಲಿ ಮಕ್ಕಳ ಹಿತದೃಷ್ಟಿಯಿಂದ ಅವಸರದಲ್ಲಿ ಶಾಲೆ ತೆರೆಯುವುದಿಲ್ಲವಾದರೂ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳುವಲ್ಲಿ ಎಲ್ಲ ಆಯಾಮಗಳಿಂದಲೂ ಪ್ರಯತ್ನ ಮಾಡಲಾಗುತ್ತದೆ ಎಂದರು.
ವಿವಿಧ ಸರ್ಕಾರೇತರ 36ಕ್ಕೂ ಹೆಚ್ಚು ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ ವೆಬಿನಾರ್‌ನಲ್ಲಿ ಇಂತಹ ಪರಿಸ್ಥಿತಿಯಲ್ಲಿ ಯಾವ ರೀತಿಯಲ್ಲಿ ಮಕ್ಕಳ ಕಲಿಕೆಯ ನಿರಂತರತೆಗೆ ಮಾಡಬಹುದಾದ ಮತ್ತು ತಮ್ಮ ತಮ್ಮ ವ್ಯಾಪ್ತಿಯಲ್ಲಿ ತಾವು ಕೈಗೊಂಡಿರುವ ವಿವಿಧ ಉಪಕ್ರಮಗಳನ್ನು ಆಲಿಸಿದ ಸಚಿವರು ಇಂತಹ ಪರಿಸ್ಥಿತಿ ಇದೇ ಮೊದಲ ಬಾರಿ ಬಂದೆರಗಿರುವುದರಿಂದ ಆ ನಿಟ್ಟಿನಲ್ಲಿ ಮಕ್ಕಳನ್ನು ತಲುಪಲು ಸಾಧ್ಯವಾಗಬಹುದಾದ ಎಲ್ಲ ಪ್ರಯತ್ನಗಳನ್ನು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ ಎಂದರು.
ವಠಾರ ಶಾಲೆ, ಪಡಸಾಲೆ ಶಾಲೆ, ಮನೆಶಾಲೆ, ತಂತ್ರಜ್ಞಾನಾಧಾರಿತ ಶಿಕ್ಷಣ, ಆಕಾಶವಾಣಿ, ಚಂದನ ದೂರದರ್ಶನ ವಾಹಿನಿ, ಖಾಸಗಿ ವಾಹಿನಿ, ಶಿಕ್ಷಣ ಇಲಾಖೆಯ ಚಾನೆಲ್ ಸೇರಿದಂತೆ ಲಭ್ಯವಾಗಬಹುದಾದ ಎಲ್ಲ ಅವಕಾಶವನ್ನೂ ಮುಕ್ತವಾಗಿರಿಸಿಕೊಂಡು ಶಿಕ್ಷಣ ಇಲಾಖೆ ಎಲ್ಲ ಉಪಕ್ರಮಗಳತ್ತಲೂ ಮಕ್ಕಳ ಹಿತದೃಷ್ಟಿಯಿಂದ ಯೋಚಿಸುತ್ತಿದೆ ಎಂದು ಅವರು ಹೇಳಿದರು.
ಈ ಎಲ್ಲ ಸಾಮೂಹಿಕವಾದ ಪ್ರಯತ್ನಗಳು ಗಟ್ಟಿ ರೂಪ ಪಡೆದು ವಿಕೇಂದ್ರಿಕೃತ ಕಲಿಕೆಯು ಮಕ್ಕಳಿಗೆ ಉಪಯುಕ್ತವಾಗುವ ರೀತಿಯಲ್ಲಿ ನಮ್ಮ ಪ್ರಯತ್ನಗಳು ಇರಬೇಕೆನ್ನುವ ಅಭಿಪ್ರಾಯಗಳು ನಾವು ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಬಹುದಾದ ನಿರ್ಣಯಗಳಿಗೆ ಒಂದು ಸ್ಪಷ್ಟ ದಿಕ್ಕನ್ನು ಮೂಡಿಸಿವೆ. ಈ ಎಲ್ಲ ಸಲಹೆಗಳನ್ನು ಕ್ರೂಢೀಕರಿಸಿ ದಾಖಲಿಸಿ ಆಯಾ ಸಂದರ್ಭ, ಆಯಾ ಪ್ರದೇಶಕ್ಕನುಗುಣವಾಗಿ ಜಾರಿಯಲ್ಲಿಡುವ ಬಗ್ಗೆಯೂ ಚಿಂತನೆ ನಡೆಸಲಾಗುವುದು ಎಂದು ಅಭಿಪ್ರಾಯಪಟ್ಟರು.
ಅಜೀಂ ಪ್ರೇಮ್‌ಜಿ ಪ್ರತಿಷ್ಠಾನ, ಗ್ರಾಮ್ಸ್ , ಅಕ್ಷರ ಫೌಂಡೇಷನ್, ಯೂನಿಸೆಫ್, ಶಿಕ್ಷಣ, ಸಿಇಇ (ವಾಷ್ ಪ್ರೋಗ್ರಾಂ), ಪೋರ್ತ್ ಫೌಂಡೇಷನ್, ಪ್ರಥಮ್, ಪ್ರಜಾಯತ್ನ, ಅಗಸ್ತ್ಯೆ ಫೌಂಡೇಷನ್, ಲೆಂಡ್ ಎ ಹ್ಯಾಂಡ್ ಇಂಡಿಯಾ, ವೈಟ್‌ಫೀಲ್ಡ್ ರೆಡಿ ಸಮೃದ್ಧಿ ಟ್ರಸ್ಟ್, ಇಂಡಿಯನ್ ಲಿಟ್ರೆಸಿ ಪ್ರಾಕ್ಟ್, ಬಿಜಿವಿಎಸ್, ಎಸ್‌ಟಿಐಆರ್, ಏಕ್ ಸ್ಟೆಪ್-ದೀಕ್ಷಾ, ರೂಂ ಟು ರೀಡ್ ಇಂಡಿಯಾ ಟ್ರಸ್ಟ್, ಗ್ರಾಮ್, ಐ.ಎಲ್.ಪಿ. ಸೇರಿದಂತೆ ಹಲವಾರು ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಸಂವಾದದಲ್ಲಿ ಭಾಗವಹಿಸಿದ ಎಲ್ಲ ಸಂಸ್ಥೆಗಳ ಹಿತದೃಷ್ಟಿಯೂ ನಮ್ಮ ಮಕ್ಕಳೇ ಪ್ರಮುಖವಾಗಿದ್ದರಿಂದ ಅವರನ್ನು ಈ ಪರಿಸ್ಥಿತಿಯಲ್ಲಿ ಕಲಿಕೆಯಲ್ಲಿ ತೊಡಗಿಸಿಕೊಳ್ಳುವಲ್ಲಿ ಎಲ್ಲ ರೀತಿಯ ಸಾಧ್ಯತೆಗಳನ್ನು ಕ್ರೋಢೀಕರಿಸಿಕೊಂಡು ಅವಕಾಶವಾಗುವ ಯಾವುದೇ ಸೌಲಭ್ಯದ ಮೂಲಕವಾಗಲಿ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಾರಂಭಿಸಲು ಸರ್ಕಾರ ಮುಂದಾಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಸಂವಾದದಲ್ಲಿ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು, ಹಿರಿಯ ಶಿಕ್ಷಣ ತಜ್ಞರಾದ ಎಂ.ಕೆ. ಶ್ರೀಧರ್, ಡಾ. ಗುರುರಾಜ ಖರ್ಜಗಿ, ಡಾ. ವಿ.ಪಿ. ನಿರಂಜನಾರಾಧ್ಯ, ಪ್ರಾಥಮಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ಶಿಕ್ಷಣ ಇಲಾಖೆ ಆಯುಕ್ತ ಡಾ. ಕೆ.ಜಿ. ಜಗದೀಶ್, ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಯೋಜನಾಧಿಕಾರಿ ದೀಪಾ ಚೋಳನ್ ಭಾಗವಹಿಸಿದ್ದರು.
ಸಂವಾದದಲ್ಲಿ ವ್ಯಕ್ತವಾದ ಅಭಿಪ್ರಾಯಗಳು ಕೆಳಕಂಡಂತಿವೆ:
- ಯೂ-ಟ್ಯೂಬ್, ವಾಟ್ಸಪ್ ಸೇರಿದಂತೆ ಯಾವುದರ ಮೂಲಕವೇ ಆದರೂ ಮಕ್ಕಳು ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಮಕ್ಕಳು ಹೆಚ್ಚು ದಿನ ಐಡಲ್ ಆಗಿ ಇರುವಂತಾಗಬಾರದು. ನೇರ ಪ್ರಸಾರ, ರೆಕಾರ್ಡೆಡ್ ಪಾಠದ ಮಾದರಿಯ ತರಗತಿಗಳೂ ಆಗಬಹುದು.
- ಶಾಲೆಗಳ ಗ್ರಂಥಾಲಯಕ್ಕೆ ದಿನಬಿಟ್ಟು ದಿನ ಮಕ್ಕಳು ಬಂದು ಪಾಠ ಪಡೆದು ಅದನ್ನು ಓದಿ ಮತ್ತೊಂದು ದಿನ ಬಂದು ಅದನ್ನು ಒಪ್ಪಿಸುವುದು. ಈ ಹಂತದಲ್ಲಿ ಸಿಲೆಬಸ್ ಮುಖ್ಯವಲ್ಲ, ಕಲಿಕೆಯ ಅಂತರವನ್ನು ನಿವಾರಿಸುವುದು ಮುಖ್ಯವಾಗಬೇಕು. ಅದಕ್ಕಾಗಿ ಪಠ್ಯೇತರ ಚಟುವಟಿಕೆಗಳೇ ಆದರೂ ಸರಿ. ಅವುಗಳನ್ನೇ ಕಲಿಸುವ ಪ್ರಯತ್ನ ನಡೆಯಬೇಕು.
- ಪ್ರಸ್ತುತ ಶೈಕ್ಷಣಿಕ ವರ್ಷ ಮತ್ತು ಮುಂದಿನ ಶೈಕ್ಷಣಿಕ ವರ್ಷದ ಪಠ್ಯದ ಕುರಿತು ಒಂದು ಹೈಬ್ರಿಡ್ ಪ್ಲಾನ್ ಮಾಡಿ ಮಕ್ಕಳನ್ನು ತಲುಪುವುದೊಳಿತು. ಸಮುದಾಯ ಆಧಾರಿತ ಕೇಂದ್ರಗಳು, ನೆರೆಹೊರೆ ಮಕ್ಕಳ ಗುಂಪು, ಗ್ರಾಮದಲ್ಲಿರುವ ಶಿಕ್ಷಕರು, ಶಿಕ್ಷಕ ಪದವೀಧರರು, ಶಿಕ್ಷಕ ತರಬೇತಿ ಪಡೆದವರು, ಸ್ವಯಂ ಸೇವಕರನ್ನು ಈ ಹಂತದಲ್ಲಿ ಬಳಸಿಕೊಳ್ಳಬೇಕು.
- ಇಂತಹ ಪ್ರಯತ್ನ ಜಾರಿಯಲ್ಲಿ ಆಯಾ ಗ್ರಾಮ ಪಂಚಾಯ್ತಿ ಸದಸ್ಯರು, ಅಧಿಕಾರಿಗಳನ್ನು ಬಳಸಿಕೊಂಡು ಪರಿಣಾಮಕಾರಿಯಾಗಿ ಹೆಜ್ಜೆ ಇಡಬೇಕು.
- ಕೋವಿಡ್ ಒಂದು ಅವಕಾಶವೆಂದು ಪರಿಗಣಿಸಿ ಆ ಸಮಯದಲ್ಲಿ ಮಕ್ಕಳನ್ನು ಕೇವಲ ಪಠ್ಯಕ್ಕೆ ಸೀಮಿತಗೊಳಿಸದೇ ಇತರೆ ಚಟುವಟಿಕೆಗಳಲ್ಲಿ ತೊಡಗಿಸಲು ಮುಂದಾಗಬೇಕು.
- ತಂತ್ರಜ್ಞಾನಾಧಾರಿತ ಶಿಕ್ಷಣ ನೀಡುವಾಗ ಅದು ಮಕ್ಕಳಿಗೆ ಸಮರ್ಪಕಾಗಿ ತಲುಪುತ್ತಿದೆಯೇ ಇಲ್ಲವೇ ಎಂಬ ಬಗ್ಗೆ ಮಾನಿಟರ್ ಮಾಡುವ ವ್ಯವಸ್ಥೆ ಸಹ ಮುಖ್ಯವಾಗುತ್ತದೆ.
- ಸದ್ಯದ ಪರಿಸ್ಥಿತಿಯಲ್ಲಿ ಶಾಲೆಗಳು ಆರಂಭಿಸುವ ಸಾಧ್ಯತೆಗಳು ಇಲ್ಲದಿರುವ ಹಿನ್ನೆಲೆಯಲ್ಲಿ ಲಭ್ಯವಿರುವ ಸಂಪನ್ಮೂಲಗಳ ಆಧಾರದಲ್ಲಿ ವಿಕೇಂದ್ರೀಕರಣಗೊಳಿಸಿ ಮಕ್ಕಳ ಹಿತದೃಷ್ಟಿಯಿಂದ ಪರ್ಯಾಯ ಕಲಿಕಾ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಮುಂದಾಗಬೇಕು.
- ತಜ್ಞರ ಅಭಿಪ್ರಾಯಗಳೇನೇ ಇರಲಿ, ಒಟ್ಟಾರೆ ನಾಡಿನ ಮಕ್ಕಳ ಹಿತದೃಷ್ಟಿಯಿಂದ ಕಲಿಕಾ ಚಟುವಟಿಕೆಗಳನ್ನು ಆರಂಭಿಸುವುದು ಒಳ್ಳೆಯದು.
- ಮಕ್ಕಳು ಶೈಕ್ಷಣಿಕ ಚಟವಟಿಕೆಯಿಂದ ಹೆಚ್ಚು ದಿನಗಳು ವಿಮುಖವಾಗುವುದು ಅಷ್ಟು ಉಚಿತವಲ್ಲವಾದ್ದಾರಿಂದ ಯಾವುದಾದರೂ ರೀತಿಯಿಂದ ಅವರಿಗೆ ತರಗತಿಗಳು ತಲುಪುವಂತಾಗಬೇಕು. ಕೊರೋನಾ ಪರಿಸ್ಥಿತಿ ತಿಳಿಗೊಳ್ಳುವುದು ತಡವಾಗಬಹುದಾದರೂ ಶಾಲೆಗಳು ಇಲ್ಲವೇ ಕಲಿಕೆ ಒಮ್ಮೆ ಶುರುವಾದರೆ ಸಮಸ್ಯೆಗಳು ಒಂದು ಹಂತಕ್ಕೆ ಪರಿಹಾರ ದೊರೆಯಬಹುದು.
- ಪ್ರಯತ್ನಗಳತ್ತಲೇ ನಾವು ಚಿಂತಿಸುತ್ತಾ ಕೂರುವ ಬದಲು ಅವುಗಳನ್ನು ಜಾರಿಗೆ ತಂದು ಮಕ್ಕಳನ್ನು ತಲುಪುವುದಕ್ಕೆ ಮೊದಲ ಆದ್ಯತೆ ನೀಡಬೇಕಾದ ಅಗತ್ಯ ಹೆಚ್ಚಾಗಿದೆ.
- ಆಯಾ ಪರಿಸ್ಥಿತಿಯಲ್ಲಿ ಲಭ್ಯವಿರುವ ಯಾವುದೇ ಅವಕಾಶ ಇಲ್ಲವೇ ಸೌಲಭ್ಯವನ್ನೂ ಈ ಸಂದರ್ಭದಲ್ಲಿ ಬಳಸಿಕೊಳ್ಳುವುದು ಒಳ್ಳೆಯದು. ಪ್ರಸ್ತುತ ಸಂದರ್ಭದಲ್ಲಿಯೂ ಗ್ರಾಮಗಳಲ್ಲಿ ಮಕ್ಕಳು ತಮ್ಮ ಶಾಲೆ ಬಳಿಯೇ ಬಂದು ದಿನಂಪ್ರತಿ ಆಟವಾಡುತ್ತಿದ್ದಾರೆ. ಮಕ್ಕಳಿಗೆ ಶಾಲಾ ತರಗತಿಗಳೇ
- ಅಚ್ಚುಮೆಚ್ಚು. ಸುರಕ್ಷಿತ ವಾತಾವರಣವೆಂದು ಕಂಡುಬಂದ ಕಡೆಗಳಲ್ಲಿ ಶಾಲಾ ತರಗತಿಗಳನ್ನೇ ಪ್ರಾರಂಭಿಸಿದರೆ ತಪ್ಪೇನು ಇಲ್ಲ.
- ಆಯಾ ಪ್ರದೇಶದಲ್ಲಿ ಆಯಾ ನೆಲೆಯಲ್ಲಿ ಸಾಧ್ಯವಾಗಬಹುದಾದ ಆವಕಾಶಗಳನ್ನು ಬಳಸಿಕೊಳ್ಳಲು ಸರ್ಕಾರ ಮುಂದಾಗಬೇಕು
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
Get In Touch With Us info@kalpa.news Whatsapp: 9481252093
Discussion about this post