ಶಿಕ್ಷಣ ಎನ್ನುವುದು ವಿದ್ಯಾರ್ಥಿಗಳ ಅರ್ಹತೆಗಳಿಗನುಗುಣವಾಗಿ ಉಣಬಡಿಸುವಂತಾಗಿದ್ದರೆ ಬಹುಶಃ ಎಲ್ಲಾ ಕ್ಷೇತ್ರಗಳಲ್ಲೂ ಭಾರತೀಯ ವಿದ್ಯಾರ್ಥಿಗಳು ಸಾಧನೆಗೈಯಲು ಸಾಧ್ಯವಾಗುತ್ತಿತ್ತು.
ಬದಲಾಗಿ ಶಿಕ್ಷಣ ವ್ಯವಸ್ಥೆಯು ಯಾವುದೇ ಪರೀಕ್ಷೆಗಳಿಗೆ ಪ್ರತಿಭಾನ್ವಿತ ವಿದ್ಯಾರ್ಥಿಯ ಆಯ್ಕೆಯ ಮಾನದಂಡವು ಡೊನೇಶನ್ ಆಧಾರಿತವಾಗಿ ಅವಕಾಶವನ್ನು ಕಲ್ಪಿಸುವಂತೆ ತೋರುತ್ತಿದೆ.
ನಮಗೆಲ್ಲ ತಿಳಿದಿರುವಂತೆ ಪ್ರಾಥಮಿಕ ಶಿಕ್ಷಣವು ವಿದ್ಯಾರ್ಥಿಯ ಜೀವನದಲ್ಲಿ ಭವಿಷ್ಯದ ಅಡಿಪಾಯವಿದ್ದಂತೆ. ಈ ಹಂತದಲ್ಲಿ ನೂರಾರು ಸಮಸ್ಯೆಗಳಿದ್ದು ಅವುಗಳಿಗೆ ಪರಿಹಾರವನ್ನು ದಶಕಗಳ ಹಿಂದೆಯೇ ಕಂಡುಕೊಳ್ಳಬೇಕಿತ್ತಾದರೂ, ಎಲ್ಲಿ ಶಿಕ್ಷಿತ ಸಮಾಜ ನಿರ್ಮಾಣವಾದರೆ ನಮ್ಮ ಕೈಗಳಿಗೆ ಕೆಲಸ(ಅಧಿಕಾರ) ಇಲ್ಲವಾಗುತ್ತದೆಂಬ ದುರುದ್ದೇಶದಿಂದ ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ಮಹತ್ತರ ಬದಲಾವಣೆ ತರಲು ಸಾಧ್ಯವಾಗಲಿಲ್ಲವೇನೋ ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ!
ಶಿಕ್ಷಣವನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಹೀರಿಕೊಳ್ಳುವಷ್ಟು ಸುಲಲಿತವಾಗಿ ಶಿಕ್ಷಕರು ಭೋದಿಸುಂತಾಗಬೇಕು.
ನಾನು ಗಮನಿಸಿದಂತೆ, ಶಿಕ್ಷಕರು ತಮ್ಮ ಸಂಘಟನೆಯ ಮೂಲಕ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸುವಷ್ಟು ಸಮರ್ಥರಾಗಿದ್ದಾರೆಯೇ ಹೊರತು ಯಾವುದೇ ಅನಕ್ಷರಸ್ಥ ವಿದ್ಯಾರ್ಥಿಯನ್ನು ವಿದ್ಯಾವಂತನಾಗಿ ರೂಪಿಸುವಷ್ಟು ಸಮರ್ಥರಲ್ಲ ಎಂಬುದು ದುರ್ದೈವವೇ ಸರಿ.
ಇನ್ನು ಪೋಷಕರಿಗೆ ಸಂಬಂಧಿಸಿದಂತೆ ಯಾವುದೇ ವಿದ್ಯಾರ್ಥಿಯು ದಿನನಿತ್ಯದ ಅಭ್ಯಾಸಕ್ಕೆ ಒಗ್ಗಿಕೊಂಡಿರುವನೋ ಇಲ್ಲವೋ ಎಂದು ಗಮನಿಸುವಷ್ಟು ಜವಾಬ್ದಾರಿಯುತ ತಂದೆ – ತಾಯಿಯಾಗುವಲ್ಲಿ ಸೋತಿದ್ದಾರೆ ಎಂಬುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಇದಕ್ಕೆ ಕಾರಣ ಏನಿರಬಹುದು ಎಂದು ಯೋಚಿಸಿ ನೋಡಿದರೆ ನಮ್ಮ ಯೋಚನೆಗಳನ್ನು ಮೀರಿ ಕಾರಣಗಳು ಸಿಗುತ್ತವೆಂಬುದು ಅನಕ್ಷರಸ್ಥ ಸಮಾಜ ನಿರ್ಮಾಣವಾಗುವಲ್ಲಿ ಪ್ರಮುಖ ಕಾರಣವಾಗಿದೆ.
ಒಟ್ಟಾರೆಯಾಗಿ ಶಿಕ್ಷಣವು ಕೇವಲ ಇಲಾಖೆಯ, ಶಾಲಾ ಸಿಬ್ಬಂದಿಯ ಅಥವಾ ಪೋಷಕರ ಜವಾಬ್ದಾರಿಯಲ್ಲ. ಸಂಪೂರ್ಣ ಸಮಾಜವು ಶಿಕ್ಷಣದ ಜವಾಬ್ದಾರಿಯನ್ನು ಸಮರ್ಥವಾಗಿ ಎದುರಿಸಲು ಸಿದ್ಧರಾದರೆಂದರೆ ಆ ಕ್ಷಣದಿಂದಲೇ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುವುದು.
ಇಲ್ಲದಿದ್ದರೆ ಸಮಾಜದಲ್ಲಿ ನಡೆಯುವ ಎಲ್ಲ ತಪ್ಪುಗಳನ್ನು ಅವರ ಮೇಲೆ ಇವರು, ಇವರ ಮೇಲೆ ಅವರು ಹೀಗೆ ಪ್ರತ್ಯಾರೋಪ ಮಾಡುತ್ತಾ ಸಾಗುತ್ತಾರೆ. ಎಲ್ಲ ಅಧಿಕಾರಗಳು ಕೆಲವೇ ವಂಶಗಳಿಗೆ ಸೀಮಿತವಾಗಿ ಅವರೇ ಅನುಭವಿಸುವಂತಾಗುತ್ತದೆ.
ಹಾಗಾಗಿ ಎಲ್ಲವನ್ನೂ ಪ್ರಶ್ನಿಸುವಷ್ಟು ಸುಶಿಕ್ಷಿತ ಸಮಾಜ ನಿರ್ಮಾಣವಾಗಬೇಕಾದರೆ ಪ್ರತಿಯೊಬ್ಬರು ಶಿಕ್ಷಣಸ್ಥರಾಗುವುದು ಅತ್ಯಂತ ಮಹತ್ವದ ಸಂಗತಿಯಾಗಿದೆ.
Discussion about this post