ಸಾಮಾನ್ಯವಾಗಿ ನಮ್ಮ ಕುಟುಂಬದ ಹಿರಿಯರನ್ನು ನೀವು ಗಮನಿಸಿದ್ದರೆ ’ಸಾಯುವುದರ ಒಳಗೊಮ್ಮೆ ಕಾಶಿ ಯಾತ್ರೆ ಮಾಡಬೇಕು, ಗಯಾದಲ್ಲಿ ಪಿಂಡ ಪ್ರದಾನ ಮಾಡಬೇಕು’ ಎಂದು ಹೇಳುತ್ತಿರುತ್ತಾರೆ. ಯಾಕೆ ಈ ರೀತಿ ಹೇಳುತ್ತಾರೆ ಎಂದು ನೋಡಿದರೆ ಅದರ ಹಿಂದೆ ಒಂದಷ್ಟು ಸತ್ಯಗಳಿವೆ.. ಮುಂದೆ ಓದಿ…
ಪದ್ಮ ಪುರಾಣದ ಪ್ರಕಾರ ನೋಡುವುದಾದರೆ ಗಯಾದಲ್ಲಿ ಪಿತೃಗಳಿಗೆ ಪಿಂಡದಾನ ಮಾಡುವುದರಿಂದ ಅವರಿಗೆ ಸ್ವರ್ಗ ಲೋಕ ಪ್ರಾಪ್ತಿಯಾಗುವುದು ನಿಶ್ಚಿತ ಎಂಬ ಉಲ್ಲೇಖವಿದೆ. ಇದರೊಂದಿಗೆ ಹಿಂದೂ ಸಂಸ್ಕೃತಿಯಲ್ಲಿ ಗಯಾಕ್ಕೆ ಯಾಕಿಷ್ಟು ಮಹತ್ವವನ್ನು ನೀಡಲಾಗಿದೆ? ಎಲ್ಲಿದೆ ಈ ಗಯಾ? ಇದರ ಕುರಿತು ಮುಂದೆ ಓದಿ…
ಬಿಹಾರ ರಾಜ್ಯದಲ್ಲಿ ಹರಿಯುವ ಫಲ್ಗು ನದಿಯ ತಟದಲ್ಲಿರುವ ಗಯಾ ಪುರಾಣ ಪ್ರಸಿದ್ಧ ನಗರವಾಗಿದೆ.
ಹುಟ್ಟಿದ ಮಕ್ಕಳಲ್ಲಿ ಒಬ್ಬನಾದರೂ ಗಯದಲ್ಲಿ ಶ್ರಾದ್ಧಮಾಡಿ ತನ್ನ ತಂದೆಗೆ ಸ್ವರ್ಗ ಪ್ರಾಪ್ತಿಯಾಗುವಂತೆ ಮಾಡಬೇಕೆಂದು ರಾಮಾಯಣದಲ್ಲಿ ಹೇಳಿದೆ.
ಈ ಕ್ಷೇತ್ರದಲ್ಲಿ ಶ್ರಾದ್ಧ ನಡೆಸಿದವನ ವಂಶದ ನೂರು ಜನ ಪಿತೃಗಳಿಗಲ್ಲದೆ ಅವನಿಗೂ ಶಾಶ್ವತ ಸ್ವರ್ಗ ಪ್ರಾಪ್ತಿಯಾಗುತ್ತದೆಂದು ಪುರಾಣದಿಂದ ತಿಳಿಸುತ್ತದೆ. ಈ ನಂಬಿಕೆಗೆ ಹಿನ್ನಲೆಯಾಗಿರುವ ಕಥೆ ಗಯ ಮಹಾತ್ಮ್ಯೆಯಲ್ಲಿ ಹೀಗಿದೆ:
ವಿಷ್ಣುವಿನ ಪರಮ ಭಕ್ತನಾದ ಗಯನೆಂಬ ಅಸುರ ಒಮ್ಮೆ ಕೋಲಾಹಲ ಪರ್ವತದ ಮೇಲೆ ಕಠಿಣ ತಪಸ್ಸನ್ನಾಚರಿಸಿದ. ಇದರಿಂದ ದೇವತೆಗಳೆಲ್ಲ ಖಿನ್ನರಾಗಿ ವಿಷ್ಣು ಮಹೇಶ್ವರರ ಬಳಿಗೆ ಹೋದರು. ವಿಷ್ಣು ದೇವತೆಗಳೊಡನೆ ಗಯಕ್ಕೆ ಬಂದು ಗಯ ಪರಿಶುದ್ಧನೆಂಬ ವಿಚಾರ ತಿಳಿದು, ಅವನನ್ನು ಸ್ಪರ್ಶಿಸಿದವರು ವೈಕುಂಠವನ್ನು ಸೇರಲಿ ಎಂಬುದಾಗಿ ವರ ನೀಡಿದ. ಅಂದಿನಿಂದ ಜನ ಗಯನನ್ನು ಸ್ಪರ್ಶಿಸಿ ಸ್ವರ್ಗಲಾಭ ಪಡೆಯತೊಡಗಿದರು. ಇದರಿಂದ ಯಮನ ರಾಜ್ಯ ಬರಿದಾಗಿ ಅವನಿಗೆ ಕೆಲಸವಿಲ್ಲದಂತಾಯಿತು.
ಅನಂತರ ವಿಷ್ಣುವಿನ ಸಲಹೆಯಂತೆ ಬ್ರಹ್ಮ ಗಯನನ್ನು ಸಮೀಪಿಸಿ ಅವನ ಪವಿತ್ರ ದೇಹದ ಮೇಲೆ ಲೋಕ ಕಲ್ಯಾಣಕ್ಕಾಗಿ ಯಾಗ ಮಾಡಬೇಕೆಂಬ ಸಂಕಲ್ಪವನ್ನು ಅವನಲ್ಲಿ ವಿಜ್ಞಾಪನೆ ಮಾಡಿಕೊಂಡ. ಇದಕ್ಕೆ ಗಯ ಮರುಮಾತನಾಡದೆ ಸಮ್ಮತಿಯನ್ನಿತ್ತ. ಯಾಗಕರ್ಮಗಳನ್ನು ನಡೆಸಲು ಬ್ರಹ್ಮ ಋತ್ವಿಜರಾದ ಮಾನಸಪುತ್ರರನ್ನು ಸೃಷ್ಟಿಸಿದ. ಅವರು ಗಯನ ಶಿರ ಉತ್ತರದ ಕಡೆಗಿರುವಂತೆಯೂ ಪಾದಗಳು ದಕ್ಷಿಣದ ಕಡೆಗಿರುವಂತೆಯೂ ಮಾಡಿ ಅವನ ದೇಹದ ಮೇಲೆ ಯಜ್ಞವನ್ನು ವಿಜೃಂಭಣೆಯಿಂದ ನಡೆಸಿದರು.
ಯಜ್ಞ ಸಮಾರಂಭದ ಕೊನೆಯಲ್ಲಿ ಗಯನ ತಲೆ ಅಲುಗಾಡತೊಡಗಿತು. ವಿಶೇಷವಾದ ಧರ್ಮಶಿಲೆಯೊಂದನ್ನು ತಂದು ಗಯನ ತಲೆಯ ಬಳಿ ಇಡಬೇಕೆಂದು ಆಗ ಬ್ರಹ್ಮ ಯಮನಿಗೆ ಸೂಚಿಸಿದ. ಆದರೂ ಗಯ ನಿಶ್ಚಲನಾಗಲಿಲ್ಲ. ದೇವತೆಗಳೆಲ್ಲ ಶಿಲೆಯ ಬಳಿ ನಿಂತರೂ ತಲೆಯ ಅಲುಗಾಟ ನಿಲ್ಲಲಿಲ್ಲ. ಕೊನೆಗೆ ವಿಷ್ಣುವೇ ಗದಾಧಾರಿಯಾಗಿ ಗಯನ ಶಿರದ ಬಳಿ ಪ್ರತ್ಯಕ್ಷನಾದಾಗ ತಲೆ ಅಲುಗಾಡುವುದು ನಿಂತಿತು. ಮಹಾವಿಷ್ಣುವಿನ ದರ್ಶನ ಲಾಭದಿಂದ ಕೃತಾರ್ಥನಾದ ಗಯ ತನಗೆ ವಿಷ್ಣುವಿನ ಆಜ್ಞೆಯೊಂದೇ ಸಾಕಾಗಿತ್ತೆಂದೂ ನುಡಿದ.
ಗಯನ ಭಕ್ತಿಗೆ ಮೆಚ್ಚಿದ ವಿಷ್ಣು ಅವನಿಗೆ ವರಪ್ರಸಾದವನ್ನು ನೀಡಿ ತಾನೇ ಮೊದಲ್ಗೊಂಡು ಸಮಸ್ತ ದೇವತೆಗಳಿಗೂ ಅವನ ಶಿರದ ಬಳಿ ಶಾಶ್ವತವಾಗಿ ನಿಂತಿರುವಂತಾಗಿ ಆ ಸ್ಥಳ ಗಯನ ಹೆಸರಿನಿಂದ ಶೋಭಿಸಲೆಂದು ಮತ್ತು ಯಾರು ಈ ಸ್ಥಳದಲ್ಲಿ ಪಿತೃಗಳಿಗೆ ಪಿಂಡಪ್ರಧಾನ ಮಾಡುತ್ತಾರೊ ಅವರಿಗೆ ಮೊಕ್ಷ ದೊರಕಲಿ ಎಂದು ಅನುಗ್ರಹಿಸಿದ. ಅಂದಿನಿಂದ ಅದು ಗಯ ಕ್ಷೇತ್ರವೆಂದು ಪ್ರಸಿದ್ಧವಾಯಿತು.
(ಕೃಪೆ: ವಾಟ್ಸಪ್ ಗ್ರೂಪ್)
Discussion about this post