ಮಗು ಅಪ್ಪಾ ಸೈಕಲ್ ಪಂಕ್ಚರ್ ಆಗಿದೆ ಎಂದರೆ ಅಪ್ಪ ಸೈಕಲ್ ಹಿಡಿದು ಓಡುವುದು ಇಮಾಮ್ ಸಾಬಿಯ ಪಂಕ್ಚರ್ ಷಾಪಿಗೆ. ಬಿರಿಯಾನಿಗೆ ಮಸಾಲೆ ತಗೋ ಬಾ ಅಂತ ಅಮ್ಮಿ ಪುಟ್ಟ ನವಾಜಿಗೆ ಹೇಳಿದರೆ ಅವನು ಓಡುವುದು ಶೆಟ್ಟರ ಅಂಗಡಿ ಕಡೆ. ಎಲ್ಲಿದೆ ನಮ್ಮಲ್ಲಿ ಧರ್ಮಗಳ ಭಯ? ನಮ್ಮ ಜೋಪಡಿಗಳ ಅವರು ಮಾರುವ ದಾರದಲ್ಲಿ ಹೆಣೆದು ಕೊಂಡವರು, ವರ್ಷ ಪೂರ್ತಿ ಬೆಳೆದ ಬೆಳೆಯನ್ನು ಕಣ್ಮುಚ್ಚಿ ನಂಬಿ ಅವರ ಕೈಗೆ ಇತ್ತವರು. ಯಾವತ್ತಾದರೂ ಮುಸ್ಲಿಂರ ಕೈಯಿಂದ ಏನೂ ತೆಗೆದುಕೊಳ್ಳುವುದಿಲ್ಲ ಎಂದು ಶಪಥ ಮಾಡಿರುವುದು ಇದೆಯೇ? ಖಂಡಿತ ಇಲ್ಲ. ಆದರೆ ಇಲ್ಲೊಂದು ಪರದೇಸಿ ಕಂಪೆನಿ ಇದೆ.
ಭಾರತದ ಅನ್ನವನ್ನು ದಶಕಗಳಿಂದ ತಿನ್ನುತ್ತಾ ಬಂದರೂ ಇದಕ್ಕೆ ನಮ್ಮ ನಡುವೆ ವ್ಯತ್ಯಾಸ ಕಾಣಿಸುತ್ತದೆ. ಇದರ ಜಾಹೀರಾತುಗಳಿಗೆಲ್ಲಾ ಅದೇ ಮೂಲ. ಇವನು ಹಿಂದೂ, ಮುಸ್ಲಿಂರ ಬಗ್ಗೆ ಭಯ ಪಡುತ್ತಾನೆ. ಅವನು ಅವರಲ್ಲಿ ಏನೂ ತೆಗೆದುಕೊಳ್ಳುವುದಿಲ್ಲ. ಹಿಂದೂಗಳು ಮುಸ್ಲಿಮರನ್ನು ಎಂದೂ ಪ್ರೀತಿಸಿಯೇ ಇಲ್ಲ ಎನ್ನುವುದು ಈ ಕಾಮಾಲೆ ಕಣ್ಣಿನ ಕಂಪನಿಯ ನೋಟ. ಅರೆ, ಇಫ್ತಾರ್ ಕೂಟವನ್ನು ಹಿಂದೂ ಮಠಗಳು ಆಯೋಜಿಸುತ್ತವೆ. ಇನ್ನು ಬಂಗಾಳದ ದುರ್ಗಾ ಪೂಜೆ, ಗಣೇಶ ಹಬ್ಬಗಳಲ್ಲಿ ಮುಸ್ಲಿಂರು ನಿರಾತಂಕವಾಗಿ ಸೇರುತ್ತಾರೆ. ಎಷ್ಟೋ ಜನ ಗಣೇಶ ಕೂರಿಸುತ್ತಾರೆ ಕೂಡ.
ಯಾವ ಕಂಪನಿಯ ಬಗ್ಗೆ ಎಂದು ತಲೆಯಲ್ಲಿ ಹಾದು ಹೋಗಿರಬಹುದು. ಇದೇನು ಮೊದಲ ಬಾರಿಯಲ್ಲ. ಜೀವನ ಪೂರ್ತಿ ಯಾವ ಸಂಸ್ಥೆಯ ಉತ್ಪನ್ನಗಳಿಗೆ ಮನೆ ಮನಗಳಲ್ಲಿ ಜಾಗ ಕೊಟ್ಟೆವೋ ಅದು ಪದೇ ಪದೇ ನಮ್ಮ ನಂಬಿಕೆಗಳ ಕೆಣಕುತ್ತಲೇ ಇದೆ. ಹಿಂದೂಸ್ಥಾನ್ ಯುನಿಲಿವರ್ ಲಿಮಿಟೆಡ್.. ಹೆಸರಿನಲ್ಲೇ ಹಿಂದೂಸ್ಥಾನ, ನೋಡುವವರಿಗೆ ಅಪ್ಪಟ ದೇಸೀ ಅನ್ನಿಸುವಂತದ್ದು. 1933 ರ ಅವಧಿಯಲ್ಲಿ ಭಾರತದಲ್ಲಿ ಆರಂಭವಾದ ಆಂಗ್ಲೋ ಡಚ್ ಕಂಪೆನಿ. ಮುಂಬೈ ಇದರ ಕೇಂದ್ರ ಕಚೇರಿ. ವೀಲ್, ಕ್ವಾಲಿಟಿ ವಾಲ್ಸ್ ಐಸ್ ಕ್ರೀಂ, ಲೈಫ್ ಬಾಯ್, ಪಿಯರ್ಸ್, ಲಕ್ಸ್, ಹಮಾಮ್, ರೆಕ್ಸೋನಾ, ಬ್ರೂ, ಥ್ರೀ ರೋಸಸ್, ತಾಜ್ ಮಹಲ್, ಪೆಪ್ರೋಡೆಂಟ್, ಕ್ಲೋಸ್ ಅಪ್, ಪಾಂಡ್ಸ್, ಫೇರ್ ಅಂಡ್ ಲವ್ಲೀ, ಲ್ಯಾಕ್ಮೆ, ಸನ್‌ಸಿಲ್ಕ್, ಡೊಮೆಕ್ಸ್, ಕಂಫರ್ಟ್, ರಿನ್ ಮತ್ತು ಅನ್ನಪೂರ್ಣ ಹಿಟ್ಟು ಹಾಗೂ ಉಪ್ಪು ಇತ್ಯಾದಿ ಹೀಗೆ ಅನೇಕ ಉತ್ಪನ್ನಗಳು. ಇಂತಿಪ್ಪ ಲಿವರ್ ಬ್ರದರ್ಸ್ ಕಂಪೆನಿ ಕುಲಕ್ಕೆ ಕೊಡಲಿ ಪೆಟ್ಟು ಅನ್ನುವ ಹಾಗೆ ಅದೇಕೋ ಏನೋ ಈಗ ಭಾರತಕ್ಕೆ ತಿರುಗಿ ಬಿದ್ದಿದೆ. ಇದರ ಜಾಹೀರಾತುಗಳಿಗೆಲ್ಲಾ ಹಿಂದೂ ಮುಸ್ಲಿಂ ವೈರುಧ್ಯ ಎನ್ನುವುದು ವಿಷಯವಾಗಿ ಬಿಟ್ಟಿದೆ. ಈ ಎಲ್ಲಾ ಘಟನೆಗಳು ಅದನ್ನೇ ದೃಢೀಕರಿಸುತ್ತದೆ.
2014 ರ ರೆಡ್ ಲೆಬಲ್ ಜಾಹೀರಾತು: ವೃದ್ಧ ದಂಪತಿಗಳು ತಮ್ಮ ಮನೆಯ ಬೀಗ ಕೈಯನ್ನು ಮರೆತಿರುತ್ತಾರೆ. ಆಗ ಬರುವ ಮುಸ್ಲಿಂ ಮಹಿಳೆ ತಮ್ಮ ಮನೆಗೆ ಬಂದು ಕಾಯಲು ಹೇಳುತ್ತಾಳೆ. ಆದರೆ ಹಿಂದೂ ದಂಪತಿ ತಮ್ಮಲ್ಲಿನ ಇಸ್ಲಾಂ ಭಯದ ಕಾರಣ ಅವರ ಮನೆಗೆ ಹೋಗಲು ಮೊದಲಿಗೆ ಹಿಂಜರಿಯುತ್ತಾರೆ.
ಗಣೇಶೋತ್ಸವದ ಜಾಹೀರಾತು: ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಮತ್ತೆ ಧಾರ್ಮಿಕತೆಯ ಕೆಣಕುವ ಕಂಪನಿಯ ಮತ್ತೊಂದು ಜಾಹೀರಾತು ಬರುತ್ತದೆ. ಒಬ್ಬ ಹಿಂದೂ ವ್ಯಕ್ತಿ ಗಣೇಶ ವಿಗ್ರಹವನ್ನು ಕೊಳ್ಳಲು ಒಂದು ಅಂಗಡಿಗೆ ತೆರಳುತ್ತಾನೆ. ಅಲ್ಲಿ ಅಂಗಡಿಯ ಮಾಲಿಕ ಗ್ರಾಹಕನಿಗಿಂತಲೂ ಚೆನ್ನಾಗಿ ಗಣಪತಿ ದೇವರ ವರ್ಣಿಸುತ್ತಾನೆ. ಗ್ರಾಹಕ ಇನ್ನೇನು ಮೂರ್ತಿ ಖರೀದಿಸಬೇಕು ಆಗ ಆ ಅಂಗಡಿಯ ಮಾಲಿಕ ಮುಸ್ಲಿಂ ಎಂದು ಗೊತ್ತಾಗುತ್ತದೆ. ಆಗ ಆತನಲ್ಲಿಯ ಇಸ್ಲಾಂ ಭಯ ಅವನನ್ನು ತಡೆ ಹಿಡಿಯುತ್ತದೆ.
ಸರ್ಫ್ ಎಕ್ಸೆಲ್ ಜಾಹೀರಾತು: ಇದೇ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಮತ್ತೊಂದು ಜಾತ್ಯತೀತ ಜಾಹೀರಾತು. ಇದರಲ್ಲಿ ಮುಸ್ಲಿಂ ಹುಡುಗನಿಗೆ ಮಸೀದಿಗೆ ಹೋಗಬೇಕಾಗಿರುತ್ತದೆ. ಆದರೆ ಹೋಳಿ ಹಬ್ಬದ ಬಣ್ಣದ ಭಯ ಅವನಿಗೆ. ಅವನ ಹಿಂದೂಭಯವೇ ಈ ಜಾಹೀರಾತಿನ ಬಂಡವಾಳ. ಅವನನ್ನು ಹಿಂದೂ ಬಾಲಕಿ ರಕ್ಷಿಸುತ್ತಾಳೆ..!
ರೆಡ್ ಲೆಬಲ್ ಜಾಹೀರಾತು: ಇದು ಮತ್ತೊಂದು ವಿಚಿತ್ರ. ಕೋಟ್ಯಾನುಕೋಟಿ ದೇವರುಗಳು, ಸಾವಿರಾರು ಧರ್ಮಗಳು, ನೂರಾರು ಭಾಷೆಗಳು ಇದು ಭಾರತ. ನಾವು ಈಶಾನ್ಯ ಭಾರತೀಯರನ್ನು ಅಪಹಾಸ್ಯ ಮಾಡುತ್ತೇವೆ ಎಂದು ಸಾರುವ ಜಾಹೀರಾತು. ಒಬ್ಬಳು ಈಶಾನ್ಯ ಭಾರತೀಯ ಯುವತಿಯನ್ನು ವಿದೇಶಿಗಳು ಎಂದು ಅಂದುಕೊಳ್ಳುವ ಭದ್ರತಾ ಸಿಬ್ಬಂದಿ ಅವಳಿಂದ ಪಾಸ್‌ಪೋರ್ಟ್ ಕೇಳುವುದು ಇದರ ಸಾರ.
ಕುಂಭಮೇಳದ ಜಾಹೀರಾತು: ವಯೋವೃದ್ಧ ತಂದೆ ತಾಯಿಯರನ್ನು ಹೆಗಲ ಮೇಲೆ ಹೊತ್ತು ಪುಣ್ಯ ಕ್ಷೇತ್ರ ತೋರಿದ ಶ್ರವಣ ಕುಮಾರನ ನಾಡಿದು, ಪೂರ್ವಜರ ಮುಕ್ತಿಗೆ ಗಂಗೆ ಹರಿಸಿದ ಭಗೀರಥನ ಭಾರತವಿದು. ತಂದೆಯ ಮಾತಿಗೆ ತಲೆಬಾಗಿ ವನವಾಸ ಮಾಡಿದ ಶ್ರೀರಾಮನ ಭಾರತವಿದು. ಆದರೆ ಈ ರೆಡ್ ಲೆಬಲ್ ಕಂಪನಿಗೆ ಕಾಣುವುದೇ ಬೇರೆ. ಜಗತ್ತಿನ ಅತಿ ದೊಡ್ಡ ಧಾರ್ಮಿಕ ಕಾರ್ಯಕ್ರಮ ಕುಂಭಮೇಳದ ಸಮಯ. ಮಾರ್ಚ್ ತಿಂಗಳಲ್ಲಿ ರೆಡ್ ಲೆಬಲ್’ನ ಮತ್ತೊಂದು ಜಾಹೀರಾತು ಬರುತ್ತದೆ. ಜಗತ್ತೇ ಕುಂಭಮೇಳವನ್ನು ಕೊಂಡಾಡುತ್ತಿದ್ದರೆ ಈ ಅನಿಷ್ಟ ಕಂಪನಿ ಕುಂಭಮೇಳ ಹಿಂದೂಗಳು ವೃದ್ಧರನ್ನು ತ್ಯಜಿಸಿ ಬರುವ ಸ್ಥಳವಲ್ಲವೇ? ಎನ್ನುತ್ತದೆ. ಈ ಜಾಹೀರಾತಿನಲ್ಲಿ ವೃದ್ಧ ತಂದೆಯನ್ನು ಒಬ್ಬ ಮಗ ಕುಂಭಮೇಳದ ಜನಸಂದಣಿಯಲ್ಲಿ ಬಿಟ್ಟು ಬರುವ ದೃಶ್ಯವಿತ್ತು. ಕುಂಭಮೇಳ ರೆಡ್ ಲೆಬಲ್’ನ ಲೇವಡಿಯ ವಿಷಯ.
ಇಂತಹ ಜಾಹೀರಾತುಗಳಿಗೆ ಕೆಲವರು ಕೊಡುವ ಸಮಜಾಯಿಷಿ ಏನು ಗೊತ್ತೇ? ಅವು ಕೇವಲ ನಮ್ಮ ಬದುಕಿನ ಕತೆಗಳಿಂದ ಪ್ರೇರಿತ ಸತ್ಯ ಘಟನೆಗಳು ಎಂದು. ಅಲ್ಲಾ ಸ್ವಾಮಿ, ನಂಬಿಕೆಗಳು ಎಂತಿದ್ದರೂ ನಂಬಿಕೆಗಳು. ಅದನ್ನು ಪ್ರಶ್ನಿಸುವ ಈ ಕಂಪೆನಿಯ ಸಾಚಾತನ ನೋಡೋಣ.
ಸರ್ಫ್ ಎಕ್ಸೆಲ್ ವಿವಾದ: 2016ರ ಜೂನ್ ತಿಂಗಳಲ್ಲಿ ಒಂದು ಜಾಹೀರಾತು ಬಿಡುಗಡೆಯಾಗುತ್ತದೆ. ಅದರ ಪ್ರಕಾರ ಸರ್ಫ್ ಎಕ್ಸೆಲ್ ಪ್ಯಾಕುಗಳ ಒಳಗೆ 10/10 ಎಂಬ ಒಂದು ಬಟ್ಟೆಯ ತುಣುಕು ಇರುತ್ತದೆ. ಅದು ಯಾರಿಗೆ ಸಿಗುತ್ತದೆಯೋ ಅವರ ಮಕ್ಕಳಿಗೆ 500000 ರೂ.ಗಳನ್ನು ನೀಡಲಾಗುತ್ತದೆ ಎನ್ನಲಾಗಿತ್ತು. ಅದರಂತೆ ದೆಹಲಿಯ ಪ್ರಮೋದ್ ಗುಪ್ತಾ ಎಂಬುವವರು ಈ ತುಣುಕು ದೊರೆತು ಕಂಪನಿಯ ಸಂಪರ್ಕಿಸಿದರೆ ಇದರಲ್ಲಿ ವಿಶಿಷ್ಟ ಕೋಡ್ ಇಲ್ಲ. ಹಾಗಾಗಿ ನಿಮಗೆ ಐದು ಲಕ್ಷಗಳ ಬಹುಮಾನ ದೊರೆಯುವುದಿಲ್ಲ ಎನ್ನುತ್ತದೆ. ಆಗ ಆ ವ್ಯಕ್ತಿ ಕೋರ್ಟ್ ಮೆಟ್ಟಿಲೇರಬೇಕಾಗುತ್ತದೆ.
ಫೇರ್ ಅಂಡ್ ಲವ್ಲೀ ವಿವಾದ: ಇದಂತೂ ಕೇಳಲೇ ಬೇಡಿ. ಹಲವು ದಶಕಗಳಿಂದ ಜನರ ಮುಗ್ಧತೆಯನ್ನು ದುರುಪಯೋಗ ಮಾಡಿಕೊಳ್ಳುವ, ಕಾಸು ಗಳಿಸುವ ಪ್ರಕ್ರಿಯೆ. ಫೇರ್ ಅಂಡ್ ಲವ್ಲೀ ವಿಷಯದಲ್ಲಿ 2008 ರಲ್ಲಿ ಒಂದು ವಿವಾದವಾಯಿತು. ಭಾರತದ ಅಸ್ತಮಾದ ರಾಯಭಾರಿ(!) ಪ್ರಿಯಾಂಕ ಚೋಪ್ರಾ ಈ ಜಾಹೀರಾತಿನಲ್ಲಿ ಕಪ್ಪಾದ ಯುವತಿಯಾಗಿದ್ದು, ಆಕೆಯನ್ನು ಯಾರೂ ಮಾತಾಡಿಸುತ್ತಿರುವುದಿಲ್ಲ. ಆಕೆ ಫೇರ್ ಅಂಡ್ ಲವ್ಲೀ ಬಳಸಿದ ನಂತರ ಆಕೆಯನ್ನು ಸೈಫ್ ಆಲಿ ಖಾನ್ ತರಹದ ’ದೊಡ್ಡ’ ನಟನೂ ಮೆಚ್ಚುತ್ತಾರೆ. ಇದರ ವಿರುದ್ಧ ವರ್ಣಭೇದ ನೀತಿಯ ಕೂಗೆದ್ದಿತು. ಬಿಳುಪು ಮಾತ್ರ ಬಣ್ಣ ಎನ್ನುವ ಅರ್ಥದ ಜಾಹೀರಾತನ್ನು ಜನ ತಿರಸ್ಕರಿಸಿದ ನಂತರ ಈಗ ಈ ಕಂಪನಿ ನಿಮ್ಮ ಚರ್ಮಕ್ಕೆ ಹೊಳಪು ತರುತ್ತೇವೆ ಎನ್ನುತ್ತಾ ಹಳೇ ರಾಗವನ್ನೇ ಹಾಡುತ್ತಿದೆ. ಹಾಗಾದರೆ ಕಪ್ಪು ಬಣ್ಣದಲ್ಲಿ ಹುಟ್ಟುವುದು ತಪ್ಪೇ? ಕಂದು ಬಣ್ಣದ ಏಷ್ಯಾದ ಜನರನ್ನು ಬಹುಶಃ ಬೆಳ್ಳಗೆ ಹೊಳೆಯುವಂತೆ ಮಾಡಲು ಬಹುಶಃ ಈ ಆಂಗ್ಲ ಕಂಪನಿ ಜವಾಬ್ದಾರಿ ತೆಗೆದುಕೊಂಡಿರಬೇಕು.
ಕೊಡೈಕೆನಾಲ್ ಪಾದರಸ ವಿವಾದ: 2001 ರಲ್ಲಿ ಕೊಡೈಕೆನಾಲ್‌ನಲ್ಲಿಯ ಎಚ್’ಯುಎಲ್’ನ ಥರ್ಮಾಮೀಟರ್ ಕಂಪನಿಯ ವಿರುದ್ಧ ಪರಿಸರ ಮಾಲಿನ್ಯದ ಆರೋಪ ಕೇಳಿಬಂದಿತು. ಈ ಕಂಪನಿ ಪಾದರಸಯುಕ್ತ ವಸ್ತುಗಳನ್ನು ನೀರಿನ ಮೂಲಗಳಿಗೆ, ಯಾವುದೇ ಹೆಚ್ಚಿನ ಶುದ್ಧೀಕರಣ ಮಾಡದೆ ವ್ಯಾಪಾರಿಗಳಿಗೆ ಮಾರುವುದನ್ನು ಖಂಡಿಸಿ ಬೆಂಗಳೂರಿನ ಡಾ. ದೀಪಕ್ ಮಾಲ್ಘನ್ ಅವರು ಪ್ರತಿಭಟಿಸಿದರು. ಕೊನೆಗೂ ಹತ್ತು ವರ್ಷಗಳ ನಂತರ 2010 ರಲ್ಲಿ ಕಂಪನಿ ನ್ಯಾಯಾಲಯದಲ್ಲಿ ಒಪ್ಪಿಕೊಂಡಿತು.
ಟ್ರಿಕ್ಲೋಸನ್ ವಿವಾದ: ಇದೊಂದು ವಿಷ. ನಮ್ಮ ದೈನಂದಿನ ಬದುಕಿನಲ್ಲಿ ನಮ್ಮ ದೇಹದೊಳಗೆ ಸೇರುತ್ತಲೇ ಕಾರ್ಕೋಟಕ ವಿಷ. ಇದು ಥೈರಾಯ್ಡ್ ಹಾರ್ಮೋನ್ ಸಮಸ್ಯೆ ತರಬಹುದು. ಮಕ್ಕಳಿಗೆ ಅಲರ್ಜಿ ಉಂಟು ಮಾಡುವ, ಅಸ್ತಮಾ ತರುವ ಅಂಶಗಳಿರುವ ರಾಸಾಯನಿಕ. ಅನೇಕ ಭಾರತೀಯ ಅಧ್ಯಯನಗಳು ಎಚ್’ಯುಎಲ್ ತನ್ನ ಉತ್ಪನ್ನಗಳಲ್ಲಿ ಈಗಲೂ ಭಾರತದಲ್ಲಿ ಬಳಸುತ್ತಿದೆ ಎಂದು ದೃಢೀಕರಿಸಿವೆ.
ಮತ್ತೊಂದು ವಿಷಯವೆಂದರೆ ಈ ವಿದೇಶಿ ಕಂಪನಿ ಸೋಪುಗಳು, ಟೂಥ್ ಪೇಸ್ಟ್‌ಗಳಲ್ಲಿ ಪ್ರಾಣಿಜನ್ಯ ವಸ್ತುಗಳನ್ನು ಬಳಸಿಯೂ ಸಸ್ಯಾಹಾರಿ ಎಂದು ಮಾರುತ್ತಿರುವ ಆರೋಪವಿದೆ.
ಒಂದಂತೂ ನಿಜ ಈ ಪರ್ದೇಸಿ ಕಂಪನಿಯ ಜಾಹೀರಾತುಗಳಿಂದ ಕಂಡು ಬರುತ್ತಿದೆ. ಜಗತ್ತು ಕುಂಭಮೇಳದ ವೈಭವದತ್ತ, ಐತಿಹಾಸಿಕ ಹಿನ್ನೆಲೆ ನೋಡಿದರೆ ಈ ಎಚ್’ಯುಎಲ್ ಹಿಂದೂಗಳು ವಯೋವೃದ್ಧ ತಂದೆ ತಾಯಿಯರನ್ನು ಬಿಟ್ಟು ಬರುವ ಸ್ಥಳವಲ್ಲವೇ ಎನ್ನುತ್ತದೆ. ಹೋಳಿ ಹಬ್ಬವನ್ನು ಹಿಂದೂ ಮುಸ್ಲಿಂ ಬಾಂಧವರು ಭಾವೈಕ್ಯತೆಯಲ್ಲಿ ಆಚರಿಸುತ್ತಿದ್ದರೆ ಎಚ್‌ಯುಎಲ್ ಅದರಲ್ಲಿ ಹಿಂದೂಫೋಬಿಯಾ ನೋಡುತ್ತದೆ. ಇಫ್ತಾರ್ ಕೂಟವನ್ನು ಆಯೋಜಿಸುವ ಹಿಂದೂಗಳ ನಡುವೆ ಇವರಿಗೆ ಪಕ್ಕದ ಮನೆಗೆ ಹೋಗಲು ಅಂಜುವ ವೃದ್ಧ ದಂಪತಿಗಳು ಕಾಣಿಸುತ್ತಾರೆ.
ಇನ್ನು ಗಣೇಶ ಮೂರ್ತಿಯ ವಿಷಯ. ನಮ್ಮ ನಡುವಿನ ನೀಚರು ಹೇಳುವುದೇನು ಗೊತ್ತೇ? ಅದು ಒಂದು ವರ್ಷದ ಹಿಂದಿನ ಜಾಹೀರಾತು ಎಂದು. ಅಲ್ಲಾ ಸ್ವಾಮೀ ಅವರಿಗೆ ನಮ್ಮ ಬದುಕನ್ನು ಪ್ರಶ್ನೆ ಮಾಡುವ ಹಕ್ಕು ನೀಡಿದವರಾರು? ದರ್ಗಾಕ್ಕೆ ಹೋಗುವ ಹಿಂದೂಗಳು, ಗಣೇಶನ ಕೂರಿಸುವ ಮುಸಲ್ಮಾನರ ನಡುವೆ ಈ ಕಂಪನಿಗೆ ಗಣೇಶ ವಿಗ್ರಹವನ್ನು ಖರೀದಿಸಲು ಹೋದಾಗ ಇಲ್ಲದ ಇಸ್ಲಾಂ ಭಯ ಕಾಣುತ್ತದೆ.
ಒಂದು ಅಧ್ಯಯನದ ಪ್ರಕಾರ ಪ್ರತಿ ಮೂವರು ಭಾರತೀಯರಲ್ಲಿ ಇಬ್ಬರು ಈ ಅನಿಷ್ಟ ಎಚ್’ಯುಎಲ್’ನ ಉತ್ಪನ್ನಗಳ ಬಳಸುತ್ತಾರೆ. ನಾವು ನಮ್ಮದಲ್ಲದ ದೇಶದ ಸಂಸ್ಥೆಯನ್ನು ಮನಸಾರೆ ನೆಚ್ಚಿಕೊಂಡಿದ್ದೇವೆ, ದಶಕಗಳ ಕಾಲ ಸಲಹಿದ್ದೇವೆ. ಆದರೆ ಅದೇ ಕಂಪನಿಯ ಕಿವಿ ಹಿಂಡುವ ಸಮಯ ಬಂದಿದೆ. ಇಂತಹ ಕಾಮಾಲೆ ಕಣ್ಣುಗಳ ಕಂಪನಿಗಳ ನಮ್ಮ ದೈನಂದಿನ ಬದುಕಿನಲ್ಲಿ ದೂರವಿಡೋಣ. ಎಚ್’ಯುಎಲ್‌ಗೆ ಪಾಠ ಕಲಿಸೋಣ. ಈ ಬ್ರಿಟಿಷ್ ಕಂಪೆನಿಯ ಮಾತು ಕೇಳಿದಾಗೆಲ್ಲಾ ಗುರೂಜಿಯವರ ಒಂದು ಮಾತು ನೆನಪಾಗುತ್ತದೆ ಇಂಗ್ಲೆಂಡಿನ ಎಡ್ವರ್ಡ್ 8 ದೊರೆ ಶ್ರೀಮತಿ ಸಿಂಪ್ಸನ್ ಅವರನ್ನು ಮದುವೆಯಾಗಲು ಹೊರಟಾಗ ಇದೇ ಜಾತ್ಯತೀತ ಬ್ರಿಟೀಷರು ಅವನನ್ನು ರಾಜ ಪಟ್ಟದಿಂದ ಎಳೆದು ಬಿಸುಟ್ಟರು. ಕಾರಣ ಅವಳು ಕ್ಯಾಥೋಲಿಕ್ ಸಮುದಾಯದವಳು ಎಂದು. ಇನ್ನು ಅವರೇನು ನಮಗೆ ಜಾತ್ಯತೀತತೆಯ ಪಾಠ ಮಾಡುತ್ತಾರೆ? ಎಷ್ಟು ಸತ್ಯ ಅಲ್ಲವೇ? ನಮಗೆ ನಮ್ಮ ಬದುಕುಗಳನ್ನು ಕಟ್ಟಿಕೊಳ್ಳುವುದು ಗೊತ್ತು. ಅದಕ್ಕೆ ಯಾರದೋ ಅಪ್ಪಣೆ ಬೇಕಿಲ್ಲ. ನಿಮ್ಮ ಒಂದು ಪುಟ್ಟ ನಿರ್ಧಾರ ಇಂತಹ ನೂರಾರು ಸಂಸ್ಥೆಗಳಿಗೆ ದೊಡ್ಡ ಪಾಠವಾಗಲಿದೆ.
Discussion about this post