ಬೆಂಗಳೂರು: ಅಡ್ವೈಸರ್ ಮಾಸ ಪತ್ರಿಕೆ, ಸಂಗೀತ್ ನೃತ್ಯ ಭಾರತಿ ಅಕಾಡೆಮಿ ಮತ್ತು ಕರ್ನಾಟಕ ಇಂಜಿನೀಯರ್ಸ್ ಅಕಾಡೆಮಿ ರವರ ಸಂಯುಕ್ತಾಶ್ರಯದಲ್ಲಿ ಸಂವಾದ, ಅಡ್ವೈಸರ್ ನ ನೃತ್ಯ ವಿಶೇಷಾಂಕ ಪತ್ರಿಕೆ ಬಿಡುಗಡೆ ಮತ್ತು ’ನೃತ್ಯ ಸಂಭ್ರಮ’ವೆಂಬ ಸುಂದರ ನೃತ್ಯಗಳ ರಸದೌತಣವನ್ನು ರಸಿಕರಿಗೆ ನೀಡಲು ಬಹಳ ವೈವಿಧ್ಯಮಯವಾಗಿ ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ಕೆ.ಇ.ಎ. ಪ್ರಭಾತ್ ರಂಗಮಂದಿರದಲ್ಲಿ ವಿಶ್ವ ನೃತ್ಯ ದಿನಾಚರಣೆಯನ್ನು ಆಯೋಜಿಸಲಾಗಿತ್ತು.
ಆಧುನಿಕ ದಿನಗಳಲ್ಲಿ ಶಾಸ್ತ್ರೀಯ ನೃತ್ಯವನ್ನು ಉಳಿಸಿ ಬೆಳೆಸುವುದು’ ಎಂಬ ಸಂವಾದಕ್ಕೆ ಹಿರಿಯ ನೃತ್ಯ ಗುರು ಶ್ರೀಮತಿ ರೇವತಿ ನರಸಿಂಹನ್ ರವರು ತಮ್ಮ ವಿದ್ವತ್ಪೂರ್ಣ ಮಂಡನೆಯೊಂದಿಗೆ, ಪಾರಂಪರಿಕ ನೃತ್ಯ ಪದ್ದತಿಗಳನ್ನು ಉಳಿಸಿಕೊಂಡು ಹೋಗಲು ಅನೇಕ ಸೂತ್ರಗಳನ್ನು ನೀಡುವ ಮೂಲಕ ಚಾಲನೆ ನೀಡಿದರು. ಇನ್ನು ಸಂವಾದದಲ್ಲಿದ್ದಂತಹ ಮತ್ತೋರ್ವ ನೃತ್ಯಗುರು ಶ್ರೀಮತಿ ಪದ್ಮ ಹೇಮಂತ್ ರವರು ಮೂಲದ ಸೊಗಡಿಗೆ ಧಕ್ಕೆ ಬಾರದ ರೀತಿಯಲ್ಲಿ ಸಂಯೋಜನೆಗಳಲ್ಲಿ ವಿಭಿನ್ನತೆ, ಸಂಗೀತದಲ್ಲಿ ಹೊಸತನ ತಂದು ವಿದ್ಯಾರ್ಥಿಗಳಿಗೂ, ಪೋಷಕರಿಗೂ ಈ ಕಲೆಯ ಪಾರಂಪರಿಕ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸಿದಲ್ಲಿ ಈ ಕಲೆಯನ್ನು ಉಳಿಸಿ ಬೆಳೆಸಬಹುದೆಂಬ ತಮ್ಮ ಅಭಿಮತವನ್ನಿತ್ತರು.

ಶಿಕ್ಷಣ ತಜ್ಞೆ ಡಾ.ಗೀತಾ ರಾಮಾನುಜಂ ಮಾತನಾಡಿ, ಶಾಸ್ತ್ರೀಯ ನೃತ್ಯಗಳ ಕಲಿಕೆಯ ಹಿಂದಿನ ಮಹತ್ವ, ಉದ್ದಿಶ್ಯ, ಅದರ ವ್ಯಾಪ್ತತೆಯನ್ನು ಯುವ ಪೀಳಿಗೆಗೆ ಮನನಮಾಡಿಸಿ ಕಲೆಯ ನಿಜವಾದ ಶಕ್ತಿಯೇ ಅದು ಕಲಾವಿದನಲ್ಲಿ ಉಂಟು ಮಾಡಬಹುದಾದ ಅಲೌಕಿಕ ಅನುಭೂತಿ ಎಂಬುದನ್ನು ಅರ್ಥಮಾಡಿಸಿದಾಗ ಕಲೆಯ ಉಳಿವು-ಬೆಳೆವು ತಂತಾನೆ ಆಗಿ ಹೋಗುತ್ತದೆಂಬುದನ್ನು ಬಹಳ ಅದ್ಭುತವಾದ, ಸಂದರ್ಭೋಚಿತವಾದ ಉದಾಹರಣೆ ಮತ್ತು ಆಧ್ಯಾತ್ಮಿಕ ಉಲ್ಲೇಖಗಳನ್ನು ನೀಡಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಅನೇಕ ವಿಚಾರವಂತ ನೃತ್ಯಗುರುಗಳು, ಕಲಾರಸಿಕರಿದ್ದ ಸಭೆಯಲ್ಲಿ ನಡೆದ ಈ ವಿಚಾರಗೋಷ್ಟಿ ಬಹಳ ಅರ್ಥಪೂರ್ಣವಾಗಿತ್ತು.

ರೂಪದರ್ಶಿ, ಗಾಯಕಿ, ನಟಿ, ನೃತ್ಯ ಕಲಾವಿದೆ ಕುಮಾರಿ ಶೀತಲ್ ಹೇಮಂತ್ ರವರ ಸುಂದರ ವರ್ಣಮಯ ಮುಖಪುಟಹೊತ್ತ ಈ ವಿಶೇಷ ಸಂಚಿಕೆಯಲ್ಲಿ ಕಲೆಯಲ್ಲಿಯೇ ತಮ್ಮ ಜೀವನವನ್ನು ಕಂಡುಕೊಂಡಂಥಹ ನೃತ್ಯ ಗುರುಗಳ ಸಂದರ್ಶನಗಳು, ನೃತ್ಯ ಮತ್ತು ಅದಕ್ಕೆ ಪೂರಕವಾದ ಕಲಾರಂಗಗಳ ಕುರಿತಾದ ಅನೇಕ ವಿದ್ವನ್ಮಣಿಗಳ ಅನುಭವದ ಮೂಸೆಯಿಂದ ಅಕ್ಷರರೂಪದಲ್ಲಿ ಬಿಂಬಿತವಾದ ಸಂಗ್ರಹಯೋಗ್ಯ ಲೇಖನಗಳು, ನೃತ್ಯ ಪರಂಪರೆಯನ್ನು ಉಳಿಸಿಬೆಳೆಸುವತ್ತ ಶ್ರಮಿಸುತ್ತಿರುವ ಅನೇಕ ನೃತ್ಯರಂಗದ ಹಿರಿಯ ಚೇತನಗಳ ಕುರಿತಾದ ಮಾಹಿತಿ, ನೃತ್ಯಕ್ಷೇತ್ರದ ಯುವ ಪ್ರತಿಭೆಗಳನ್ನು ಪರಿಚಯಿಸುವ ಲೇಖನಗಳ ಮಹಾಪೂರವೇ ಇದ್ದು ನೃತ್ಯಾಸಕ್ತರಿಗಷ್ಟೇ ಅಲ್ಲದೆ ಸಾಮಾನ್ಯ ಓದುಗರಿಗೂ ಈ ನೃತ್ಯಕಲೆಯನ್ನು ಪರಿಚಯಿಸುವ ವಿನಮ್ರ ಪ್ರಯತ್ನವನ್ನು ನೃತ್ಯ ಗುರು ಶ್ರೀಮತಿ ಪದ್ಮ ಹೇಮಂತ್ ರವರು ಬಹಳ ಶ್ರದ್ದೆಯಿಂದ ಮಾಡಿದ್ದಾರೆ.

ಸಮಾರಂಭದಲ್ಲಿ ನೃತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಗಣನೀಯ ಸೇವೆಗಾಗಿ ಗುರು ಶ್ರೀವತಿ ರೇವತಿ ನರಸಿಂಹನ್ ರವರನ್ನು ಸನ್ಮಾನಿಸಲಾಯಿತು. ಇನ್ನು ಈ ನೃತ್ಯ ಸಂಚಿಕೆಯ ಸಂಪೂರ್ಣ ಜವಾಬ್ದಾರಿ ಹೊತ್ತು ಯಶಸ್ವಿಯಾಗಿ ಪೂರೈಸಿಕೊಟ್ಟ ಬಹುಮುಖ ಪ್ರತಿಭೆಯ ಗುರು ಶ್ರೀಮತಿ ಪದ್ಮ ಹೇಮಂತ್ ರವರಿಗೆ ಅವರು ಕಲಾರಂಗಕ್ಕೆ ನೀಡುತ್ತಿರುವ ಸೇವೆಯನ್ನು ಗುರುತಿಸಿ ಅಡ್ವೈಸರ್ ಪತ್ರಿಕೆಯವರು ತಮ್ಮ ಸಂಸ್ಥೆಯ ವತಿಯಿಂದ ’ನೃತ್ಯ ಕಲಾ ಉತ್ತುಂಗ’ ಎಂಬ ಬಿರುದನ್ನು ನೀಡಿ ಗೌರವಿಸಿದರು.








Discussion about this post