ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸುಂದರ ಕಲಾ ಜಗತ್ತಿನಲ್ಲಿ ಈಗ ತಾನೆ ಮಿನುಗುತ್ತಾ ತನ್ನಲ್ಲಿರುವ ಪ್ರತಿಭೆ ಎಂಬ ಬೆಳಕನ್ನು ಎಲ್ಲೆಡೆ ಪಸರಿಸುತ್ತಿರುವ ನಕ್ಷತ್ರ ವಿನ್ಯಾಸ್ ಮಧ್ಯ.
ಸಂಗೀತವೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಪುಟ್ಟ ಮಗುವಿನಿಂದ ಹಿಡಿದು ವಯಸ್ಸಾಗುವರಗೆ ಸಂಗೀತವನ್ನು ಇಷ್ಟಪಡುವವರೇ ಜಾಸ್ತಿ…ಅಲ್ಲವೇ… ಹಾಗೆ ಇಲ್ಲೊಬ್ಬ ಸಂಗೀತಪ್ರಿಯ ಸಂಗೀತವನ್ನು ಹೃದಯಕ್ಕೆ ಅಪ್ಪಿಕೊಂಡು ಉಸಿರಿಗೆ ಹತ್ತಿರವಾಗಿಸಿಕೊಂಡು ಪ್ರೀತಿಸುತ್ತಿರುವವರು.
1996ರ ಜುಲೈ 11ರಂದು ಸುರತ್ಕಲ್ ಸನಿಹದ ಮಧ್ಯ ಎಂಬಲ್ಲಿ ಕೇಶವ್-ಶಕುಂತಲಾ ದಂಪತಿಗಳ ಪ್ರಿಯ ಪುತ್ರನಾಗಿ ಜನಿಸಿದ ವಿನ್ಯಾಸ್ ಸಂಗೀತ ಲೋಕದ ಕೂಸು. ಇವರ ಪ್ರೀತಿಯ ತಂಗಿ ಯುಕ್ತ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸುರತ್ಕಲ್’ನ ವಿದ್ಯಾದಾಯಿನಿ ಶಾಲೆಯಲ್ಲಿ ಮುಗಿಸಿ, ಪಿಯುಸಿಯನ್ನು ಗೋವಿಂದದಾಸ್ ಕಾಲೇಜಿನಲ್ಲಿ, ಡಿಗ್ರಿ ಮಂಗಳೂರಿನ ಕೆನರಾ ಕಾಲೇಜಿನಲ್ಲಿ, ಎಂಕಾಂ ಸ್ನಾತಕೋತ್ತರ ಪದವಿಯನ್ನು ಮಂಗಳೂರು ಹಂಪನಟ್ಟೆಯ ಯುನಿವರ್ಸಿಟಿ ಕಾಲೇಜಿನಲ್ಲಿ ಮುಗಿಸಿದರು.
ಇವರು ಸಕಲಕಲಾವಲ್ಲಭ ಎಂದರೆ ತಪ್ಪಾಗಲಾರದು. ಸಂಗೀತ ಸಂಯೋಜನೆ, ಹಾಡುಗಾರಿಕೆ, ಚಿತ್ರಕಲೆ, ಮೇಕಪ್, ಫೋಟೋಗ್ರಾಫಿ, ಚೆಂಡೆ, ಎಲ್ಲದರಲ್ಲೂ ಎತ್ತಿದ ಕೈ. ಸಾಧಿಸಬೇಕೆಂದು ಹೊರಟವನಿಗೆ ಛಲ, ಉತ್ಸಾಹ ಜೊತೆಗೊಂದಿಷ್ಟು ಅದೃಷ್ಟವಿದ್ದರೆ ಎಂತಹದ್ದನ್ನು ಸಾಧಿಸಬಲ್ಲ ಎಂಬುದಕ್ಕೆ ಇವರೇ ಉದಾಹರಣೆ.
ಒಂದನೆಯ ತರಗತಿಯಿಂದಲೇ ಸಂಗೀತವನ್ನು ಅಭ್ಯಸಿಸಿದ್ದ ಇವರು, ಹಲವಾರು ವೇದಿಕೆಗಳಲ್ಲಿ ಪ್ರದರ್ಶನಗಳನ್ನು ಕೊಟ್ಟು ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.
ತನ್ನ 18ನೆಯ ವಯಸ್ಸಿನಲ್ಲಿ ಬೆಳ್ಳಿ ಬೆಟ್ಟು ಭದ್ರಕಾಳಿ ದೇವಸ್ಥಾನದ ಗೀತೆಯೊಂದನ್ನು ಹಾಡಿದರು. ಅಲ್ಲಿಂದ ಶುರುವಾಯಿತು ಇವರ ಸಂಗೀತ ಪಯಣ. ಇಂದಿಗೆ ಸುಮಾರು 150ಕ್ಕೂ ಹೆಚ್ಚು ಹಾಡುಗಳನ್ನು ಕಲಾ ಜಗತ್ತಿಗೆ ನೀಡಿದ್ದಾರೆ.
ಈಗಾಗಲೇ ಎಲ್ಲೆಡೆ ಪ್ರಸಿದ್ಧವಾಗಿರುವ ಮಂತ್ರೊದ ಮೂರ್ತಿಯೇ (ಮಾಯೊದ ನಿರೆಲ್) ಮಣ್ಣದ ಮಾಣಿಕ್ಯ ಇವರೇ ಸಂಗೀತ ಸಂಯೋಜನೆ ಮಾಡಿ ಹಾಡಿರುವಂತಹ ಹಾಡುಗಳು.
ವಿ4 ಮೀಡಿಯಾ, ಕಾಮಿಡಿ ಪ್ರೀಮಿಯರ್ ಲೀಗ್, ಐಡಿಸಿ ಥೀಮ್ ಸಾಂಗ್, ಹೀಗೆ ಹಲವಾರು ಕಾರ್ಯಕ್ರಮದ ಹಾಡುಗಳಿಗೆ ಧ್ವನಿಯನ್ನು ಕೊಟ್ಟಿದ್ದಾರೆ. ಈಗಾಗಲೇ ಕನ್ನಡ-ತುಳು ಸೇರಿ ಮೂರು ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ ಮಾಡಿದ್ದಾರೆ. ಅದರಲ್ಲಿ ಒಂದು ಉಮಿಲ್, ಇನ್ನೆರಡು ಚಿತ್ರಗಳು ಸದ್ಯದಲ್ಲೇ ತೆರೆ ಕಾಣಲಿವೆ.
ಇವರು ಸಂಗೀತ ಸಂಯೋಜನೆ ಮಾಡಿದ ಗೀತೆಗಳನ್ನು ವಿಜಯಪ್ರಕಾಶ್, ಹರಿಚಣ್, ಇಂದು ನಾಗರಾಜ್, ಸಂಜಿತ್ ಹೆಗ್ಡೆ, ನಿಹಾಲ್ ತಾವ್ರೋ, ಅರವಿಂದ್ ಬೋಳಾರ್, ಅರ್ಜುನ್ ಕಾಪಿಕಾಡ್ ಇಂತಹ ದಿಗ್ಗಜರು ಹಾಡಿದ್ದಾರೆ.
ಇವರ ಇಷ್ಟೆಲ್ಲಾ ಸಾಧನೆಗೆ ತಂದೆತಾಯಿಗಳ ಆಶೀರ್ವಾದ ಮತ್ತು ಸ್ನೇಹಿತರಾದ ಕೀರ್ತನ್ ಭಂಡಾರಿ, ಸೃಜನ್, ಪ್ರಸಾದ್ ಇರುವಾಯಿಲು, ಇವರುಗಳ ಸಹಕಾರವೇ ಕಾರಣ ಎನ್ನುವ ವಿನ್ಯಾಸ್’ಗೆ ಶರವು ಎಂಬ ಆರ್ಕೆಸ್ಟ್ರಾ ತಂಡವು ಇದೆ. ಹಾಗೆ ಪ್ರಖ್ಯಾತ ಚೆಂಡೆ ತಂಡ ಶಬರಿಯಲ್ಲಿ ಇವರೂ ಕೂಡ ಒಬ್ಬರು.
ತನ್ನ ಧ್ವನಿಯಲ್ಲಿ ಕೇಳುಗರಿಗೆ ಇನ್ನಷ್ಟು ಇಂಪು ನೀಡಬೇಕು. ತನ್ನ ಸಂಗೀತ ಸಂಯೋಜನೆಯಿಂದ ಜನರಿಗೆ ಹೊಸ ಹೊಸ ಮನೋರಂಜನೆ ಸಿಗುವಂತಾಗಬೇಕು. ಕಲಾ ಜಗತ್ತಿನ ಶಿಖರದ ಉತ್ತುಂಗಕ್ಕೇರಬೇಕು ಎಂದು ಹಂಬಲಿಸುತ್ತಿರುವ ಇವರ ಆಸೆಗಳೆಲ್ಲ ಈಡೇರಲಿ ಎಂದು ಪ್ರಾರ್ಥಿಸುತ್ತಾ ಮುಂದೆ ಮತ್ತಷ್ಟು ಯಶಸ್ಸು ಸಿಗಲಿ ಎಂದು ಬಯಸೋಣ.
Get in Touch With Us info@kalpa.news Whatsapp: 9481252093
Discussion about this post