ಬೆಂಗಳೂರು: ಮೊನ್ನೆ ನಿಧನರಾದ ರಾಜಕಾರಣಿ, ಹಿರಿಯ ನಟ ಅಂಬರೀಶ್ ಹಾಗೂ ನಿನ್ನೆ ಕೊನೆಯುಸಿರೆಳೆದ ಕೇಂದ್ರದ ಮಾಜಿ ಸಚಿವ ಸಿ.ಕೆ. ಜಾಫರ್ ಷರೀಫ್ ಅವರ ಅಂತ್ಯಸಂಸ್ಕಾರಗಳು ಇಂದು ಮಧ್ಯಾಹ್ನ ನಡೆಯಲಿದ್ದು, ಇದಕ್ಕಾಗಿ ಸಕಲ ಸಿದ್ದತೆ ನಡೆದಿದೆ.
ಶನಿವಾರ ಕೊನೆಯುಸಿರೆಳೆದ ಅಂಬರೀಶ್ ಅವರ ಪಾರ್ಥಿವ ಶರೀರವನ್ನು ನಿನ್ನೆ ಮಂಡ್ಯದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು. ಾಜಕೀಯ, ಚಿತ್ರರಂಗ ಸೇರಿದಂತೆ ವಿವಿಧ ಕ್ಷೇತ್ರಗಳ ನಾನಾ ಗಣ್ಯರು, ಮಹನೀಯರು, ಮಠಾಧೀಶರು, ಲಕ್ಷಾಂತರ ಅಭಿಮಾನಿಗಳು, ಹಿತೈಷಿಗಳು, ಬೆಂಬಲಿಗರು, ಸ್ನೇಹಿತರು ಭಾನುವಾರ ಅಂತಿಮ ನಮನ ಸಲ್ಲಿಸಿದರು.
ಇಂದು ಅಂಬರೀಶ್ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲಾಗಿದ್ದು, ಮಧ್ಯಾಹ್ನ 2 ಗಂಟೆ ವೇಳೆಗೆ ಅಂತ್ಯಸಂಸ್ಕಾರ ನಡೆಯಲಿದೆ. ನಗರದ ಹೊರ ವರ್ತುಲ ರಸ್ತೆಯ ಕಂಠೀರವ ಸ್ಟುಡಿಯೋದ ಆವರಣದಲ್ಲಿ ವರನಟ ಡಾ.ರಾಜ್ ಕುಮಾರ್ ಅವರ ಸಮಾಧಿ ಪಕ್ಕದಲ್ಲಿಯೇ ಅಂತ್ಯಸಂಸ್ಕಾರ ಒಕ್ಕಲಿಗೆ ಸಂಪ್ರದಾಯದಂತೆ ನೆರವೇರಲಿದೆ. ಸಂಸ್ಕಾರಕ್ಕೆ ಮೂರುವರೆ ಅಡಿ ಎತ್ತರದ ಕಟ್ಟೆಯನ್ನು ನಿರ್ಮಾಣ ಮಾಡಲಾಗಿದೆ. ಒಕ್ಕಲಿಗರ ಸಂಪ್ರದಾಯದ ಪ್ರಕಾರ ಅಂಬಿ ಪುತ್ರ ಅಭಿಷೇಕ್ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಲಿದ್ದಾರೆ.
ಅಂತ್ಯಕ್ರಿಯೆಗೆ ಬೇಕಾದ ನೀಲಗಿರಿ, ಉಣಸೆ, ಹತ್ತಿ, ಸಾರ್ವೆ, ಗಂಧದ ಕಡ್ಡಿಗಳನ್ನು ಸಿದ್ಧ ಮಾಡಲಾಗಿದೆ. ಇದರ ಜತೆಗೆ ಜಿಲ್ಲಾಧಿಕಾರಿ 13 ಕೆಜಿ ಗಂಧದ ಚಕ್ಕೆ ತರಲಿದ್ದು, ಒಟ್ಟಾರೆ 2.5 ಟನ್ ಕಟ್ಟಿಗೆ, 10 ಕೆಜಿ ಕೊಬ್ಬರಿ, 5 ಕೆಜಿ ಕರ್ಪೂರ, 50 ಕೆಜಿ ತುಪ್ಪದ ಜತೆಗೆ ಒಂದು ಚೀಲ ಹಸುವಿನ ಭರಣಿಯನ್ನು ಅಂತ್ಯಕ್ರಿಯೆಗೆ ಬಳಸಲಾಗುತ್ತದೆ.
ವಿಷ್ಣುವರ್ಧನ್ ಹಾಗೂ ಅನಂತಕುಮಾರ್ ಅವರ ಅಂತ್ಯಸಂಸ್ಕಾರ ವಿಧಿವಿಧಾನಗಳನ್ನು ನಡೆಸಿಕೊಟ್ಟಿದ್ದ ಖ್ಯಾತ ವೈದಿಕ ಭಾನುಪ್ರಕಾಶ್ ಶಿಷ್ಯರ ತಂಡದಿಂದ ಅಂತಿಮ ವಿಧಿವಿಧಾನ ನೆರವೇರಲಿದೆ. ಭಾನುಪ್ರಕಾಶ್ ಅಮೆರಿಕದಲ್ಲಿರುವುದರಿಂದ ಶಿಷ್ಯರಿಗೆ ಫೋನ್ ಮೂಲಕ ಮಾರ್ಗದರ್ಶನ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಅಂತ್ಯಕ್ರಿಯೆ ವೀಕ್ಷಣೆಗೆ ಒಟ್ಟಾರೆ 6000 ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಗಣ್ಯರಿಗಾಗಿ ಪ್ರತ್ಯೇಕ 1 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಮತ್ತು ಅಭಿಮಾನಿಗಳಿಗಾಗಿ ಐದು ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ.
ದೊಡ್ಡ ಎಲ್ಇಡಿ ಸ್ಕ್ರೀನ್ ಗಳನ್ನು ಹಾಕಲಾಗಿದೆ. ಅಂತ್ಯಕ್ರಿಯೆ ನಡೆಯುವ ಸ್ಥಳದಲ್ಲಿ ಸಿಸಿಟಿವಿಗಳ ಅಳವಡಿಸಿದೆ. ಕಂಠೀರವ ಸ್ಟುಡಿಯೋ ಸುತ್ತಾ ಬ್ಯಾರಿಕೇಡ್ ಮತ್ತು 15 ಸಾವಿರ ಪೋಲೀಸರಿಂದ ಬಿಗಿ ಭದ್ರತೆ ಕೈಗೊಂಡಿದೆ.
ಇಂದು ಜಾಫರ್ ಷರೀಫ್ ಅಂತ್ಯಕ್ರಿಯೆ
ಇನ್ನು, ನಿನ್ನೆ ನಿಧನರಾದ ಕೇಂದ್ರದ ಮಾಜಿ ಸಚಿವ ಸಿ.ಕೆ. ಜಾಫರ್ ಷರೀಫ್ ಅವರ ಅಂತ್ಯಕ್ರಿಯೆಯೂ ಸಹ ಇಂದು ಜರುಗಲಿದೆ.
ಬೆಂಗಳೂರಿನ ಖುದ್ದುಸ್ ಸಾಬ್ ಖಬರಸ್ತಾನದಲ್ಲಿ ಮಧ್ಯಾಹ್ನ 1.30ರ ವೇಳೆಗೆ ಅಂತ್ಯಕ್ರಿಯೆ ನಡೆಯಲಿದ್ದು, ಇದಕ್ಕಾಗಿ ಸಿದ್ದತೆ ನಡೆದಿದೆ.
ಸಕಲ ಸರ್ಕಾರಿ ಗೌರವಗಳೊಂದಿಗೆ ಷರೀಫ್ ಅಂತ್ಯಕ್ರಿಯೆ ನಡೆಯಲಿದ್ದು, ಗಣ್ಯರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲಿದ್ದಾರೆ.
Mysuru Job Alert : Project Assistant Vacancy, 22,000 Salary, Apply by Oct 10
Kalpa Media House | Mysuru | Applications have been invited for one Project Assistant post for the Optical Sensing Biotechnology...
Read moreDetails





