ಕಲ್ಪ ಮೀಡಿಯಾ ಹೌಸ್ | ತುರುವೇಕೆರೆ |
ಹಿಂಸಾಚಾರ, ದ್ವೇಷದಿಂದ ಮಾನಸಿಕವಾಗಿ ವಿಭಜನೆಯಾಗುತ್ತಿರುವ ಭಾರತವನ್ನು ಒಗ್ಗೂಡಿಸುವುದೇ ಭಾರತ ಜೋಡೋ ಯಾತ್ರೆಯ ಪ್ರಮುಖ ಉದ್ದೇಶ ಎಂದು ರಾಹುಲ್ ಗಾಂಧಿ Rahul Gandhi ಹೇಳಿದರು.
LIVE: Press briefing | Bharat Jodo Yatra | Turuvekere | Karnataka https://t.co/R90Y2XMAiF
— Rahul Gandhi (@RahulGandhi) October 8, 2022
ಭಾರತ ಐಕ್ಯತಾ ಯಾತ್ರೆ ಭಾಗವಾಗಿ ತುಮಕೂರಿನ ತುರುವೇಕೆರೆಯಲ್ಲಿ ರಾಹುಲ್ ಗಾಂಧಿ ಅವರು ಮಾಧ್ಯಮಗಳ ಜತೆ ಸಂವಾದ ನಡೆಸಿದರು. ‘ಭಾರತವನ್ನು ಒಂದುಗೂಡಿಸುವುದು ಭಾರತ ಜೋಡೋ ಯಾತ್ರೆಯ ಪ್ರಮುಖ ಉದ್ದೇಶವೇ ಹೊರತು, 2024ರ ಚುನಾವಣೆ ನಮ್ಮ ಗುರಿಯಲ್ಲ. ಆರ್ಥಿಕ ಅಸಮಾನತೆ ಮೂಲಕ ಕೆಲವರು ದೇಶದ ಶ್ರೀಮಂತರಾದರೆ, ಬಹುತೇಕರು ಬಡವರಾಗುತ್ತಿರುವುದರ ವಿರುದ್ಧ. ಸಣ್ಣ ಹಾಗೂ ಮಧ್ಯಮ ಉದ್ಯಮಗಳು ಕುಸಿಯುತ್ತಿದ್ದು, ಕೆಲ ಉದ್ಯಮಿಗಳ ಬಳಿ ದೇಶದ ಸಂಪತ್ತು ಸೇರುತ್ತಿರುವುದರ ವಿರುದ್ಧ. ಆರ್ಥಿಕ ಕುಸಿತ ಹಾಗೂ ನಿರುದ್ಯೋಗ ಹೆಚ್ಚಾಗುತ್ತಿರುವುದರ ವಿರುದ್ಧ. ಬೆಲೆ ಏರಿಕೆಯಿಂದ ಜನ ಸಾಮಾನ್ಯರ ಬದುಕು ದುಸ್ಥರವಾಗಿದ್ದು, ಜನಸಾಮಾನ್ಯರ ಗಂಭೀರ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತುವುದು ಈ ಯಾತ್ರೆಯ ಪ್ರಮುಖ ಉದ್ದೇಶ’ ಎಂದರು.
ಸಂವಾದದಲ್ಲಿ ಮಾಧ್ಯಮದವರ ಪ್ರಶ್ನೆಗೆ ರಾಹುಲ್ ಗಾಂಧಿ ಅವರ ಉತ್ತರ ಹೀಗಿದೆ:
ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ದಕ್ಷಿಣ ರಾಜ್ಯಗಳಿಗೆ ಗೌರವ ನೀಡದೇ ಕಡೆಗಣಿಸಲಾಗುತ್ತಿದೆ:
‘ನಾನು ಸಂಸತ್ತಿನ ಭಾಷಣದಲ್ಲಿ ಭಾರತವನ್ನು ಸಂವಿಧಾನಿಕ ರಾಜ್ಯಗಳ ಒಕ್ಕೂಟ ದೇಶ ಎಂದು ಹೇಳಿದ್ದೆ. ನಮ್ಮ ದೇಶದ ಎಲ್ಲ ಭಾಷೆ. ರಾಜ್ಯಗಳು, ಸಂಪ್ರದಾಯಗಳು ಸಮಾನ ಪ್ರಾಮುಖ್ಯತೆ ಹೊಂದಿದ್ದು, ಎಲ್ಲರಿಗೂ ಸಮಾನ ಪ್ರಾದಾನ್ಯತೆ ಸಿಗಬೇಕು’ ಎಂದರು.
ಪಿಎಫ್ಐ ನಿಷೇಧ ಹಾಗೂ ಪಿಎಫ್ ಐಗೆ ಪ್ರೋತ್ಸಾಹ ನೀಡಿದ್ದೇ ಕಾಂಗ್ರೆಸ್ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, ‘ದೇಶದಲ್ಲಿ ಯಾರೇ ದ್ವೇಷ ಹಬ್ಬಿಸಿ ಅಶಾಂತಿ ಸೃಷ್ಟಿಸಿದರೂ ಅವರು ಯಾವುದೇ ಸಮುದಾಯದವರಾದರೂ ಅವರನ್ನು ನಾವು ವಿರೋಧಿಸುತ್ತೇವೆ’ ಎಂದು ತಿಳಿಸಿದರು.
ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯಲ್ಲಿ ಯಾರೇ ಆಯ್ಕೆಯಾದರೂ ಗಾಂಧಿ ಕುಟುಂಬದ ರಿಮೋಟ್ ಕಂಟ್ರೋಲ್ ಆಗಿರುತ್ತಾರೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, ‘ನಮ್ಮ ಪಕ್ಷದಲ್ಲಿ ಚುನಾವಣೆ ನಡೆಯುತ್ತಿದ್ದು, ಇದರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಈ ಸ್ಥಾನಕ್ಕೆ ಇಬ್ಬರು ಸ್ಪರ್ಧಿಸಿದ್ದು, ಇಬ್ಬರೂ ಸಮರ್ಥ ಹಾಗೂ ವಿಭಿನ್ನ ನಾಯಕರು. ಅವರು ಯಾರ ನಿಯಂತ್ರಣದಲ್ಲೂ ಕೆಲಸ ಮಾಡುವುದಿಲ್ಲ’ ಎಂದು ಸ್ಪಷ್ಟನೆ ನೀಡಿದರು.
ಭಾರತ ವಿಭಜನೆಗೆ ನೀವು ಕಾರಣರಾಗಿದ್ದು ಭಾರತ ಜೋಡೋ ಯಾತ್ರೆ ಮಾಡುವುದೇಕೆ?
‘ಬ್ರಿಟೀಷರ ವಿರುದ್ಧ ಹೋರಾಡಿ, ಜೈಲುವಾಸ ಅನುಭವಿಸಿದ ಮಹಾತ್ಮಾ ಗಾಂಧಿ, ನೆಹರೂ, ಸರ್ದಾರ್ ಪಟೇಲ್ ಹಾಗೂ ಇತರರು ಕಾಂಗ್ರೆಸಿಗರು. ಆರ್ ಎಸ್ಎಸ್ ನವರು ಬ್ರಿಟೀಷರ ಪರವಾಗಿ ನಿಂತಿದ್ದರು. ಸಾರ್ವಕರ್ ಅವರು ಬ್ರಿಟೀಷರಿಂದ ಆರ್ಥಿಕ ನೆರವು ಪಡೆಯುತ್ತಿದ್ದರು. ಈ ದೇಶಕ್ಕೆ ಸ್ವಾಂತಂತ್ರ್ಯ, ಪ್ರಜಾಪ್ರಭುತ್ವ, ಸಂವಿಧಾನ, ಹಸಿರು ಕ್ರಾಂತಿ ತಂದಿದ್ದು ಕಾಂಗ್ರೆಸ್. ಆದರೆ ಬಿಜೆಪಿ ಈಗ ದ್ವೇಷವನ್ನು ಸೃಷ್ಟಿಸಿ ದೇಶ ವಿಭಜಿಸುತ್ತಿದ್ದಾರೆ. ಈ ಯಾತ್ರೆ ಕೇವಲ ನಾನು ಮಾಡುತ್ತಿಲ್ಲ. ದೇಶದ ಲಕ್ಷಾಂತರ ಜನ ಈ ಯಾತ್ರೆ ಮಾಡುತ್ತಿದ್ದಾರೆ. ಬಿಜೆಪಿಯ ದ್ವೇಷ ರಾಜಕಾರಣ, ಬೆಲೆ ಏರಿಕೆ, ನಿರುದ್ಯೋಗ, ಆರ್ಥಿಕ ಅಸಮಾನತೆ ಕುರಿತು ಜನ ಬೇಸತ್ತಿದ್ದಾರೆ. ಹೀಗಾಗಿ ಜನ ಯಾತ್ರೆ ನಡೆಸುತ್ತಿದ್ದಾರೆ’ ಎಂದರು.
ಪಕ್ಷದಲ್ಲಿನ ಆಂತರಿಕ ತಿಕ್ಕಾಟ ಹಾಗೂ ಮುಂದೆ ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರು?:
‘ರಾಜ್ಯ ಕಾಂಗ್ರೆಸ್ ನಲ್ಲಿ ಯಾವುದೇ ತಿಕ್ಕಾಟವಿಲ್ಲ. ನಮ್ಮ ಪಕ್ಷ ಸರ್ವಾಧಿಕಾರಿ ಮನಸ್ಥಿತಿಯ ಪಕ್ಷವಲ್ಲ. ನಮ್ಮಲ್ಲಿ ಎಲ್ಲರ ಅಭಿಪ್ರಾಯ, ಭಾವನೆಗೆ ಅವಕಾಶವಿದೆ. ನಮ್ಮಲ್ಲಿ ಚರ್ಚೆಗೆ, ವಿಭಿನ್ನ ದೃಷ್ಟಿಕೋನಕ್ಕೆ ಅವಕಾಶವಿದೆ. ಆದರೆ ಚುನಾವಣೆಯಲ್ಲಿ ಗೆಲ್ಲಲು ಎಲ್ಲ ನಾಯಕರು ಒಟ್ಟಾಗಿ ಕೆಲಸ ಮಾಡಲಿದ್ದಾರೆ. ನಮ್ಮಲ್ಲಿ ಹಲವು ಸಮರ್ಥ ನಾಯಕರಿದ್ದು, ಪಕ್ಷ ಚುನಾವಣೆಯಲ್ಲಿ ಗೆದ್ದ ನಂತರ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಿ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಾಗುವುದು’ ಎಂದು ತಿಳಿಸಿದರು.
ಮುಂಬರುವ ರಾಜ್ಯ ಚುನಾವಣೆಯಲ್ಲಿ ಬಹುಮತ ಬರದಿದ್ದರೆ ಕಾಂಗ್ರೆಸ್ ಪಕ್ಷವು ಜೆಡಿಎಸ್ ಜತೆ ಕೈ ಜೋಡಿಸುತ್ತದೆಯೇ?
‘ಈ ಪ್ರಶ್ನೆಗೆ ಅಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕರು ಸಮರ್ಥ ಉತ್ತರ ನೀಡುತ್ತಾರೆ. ನನ್ನ ಪ್ರಕಾರ ಕಾಂಗ್ರೆಸ್ ಪಕ್ಷ ಮುಂಬರುವ ಚುನಾವಣೆಯಲ್ಲಿ ಬಹುಮತದೊಂದಿಗೆ ಗೆಲುವು ಸಾಧಿಸಲಿದೆ. ಈ ಯಾತ್ರೆಯ ಅನುಭವದಲ್ಲಿ ವಿವಿಧ ವರ್ಗದ ಜನರ ಜತೆಗಿನ ಚರ್ಚೆಯಲ್ಲಿ ಬಿಜೆಪಿ ಸರ್ಕಾರದ 40% ಕಮಿಷನ್ ಭ್ರಷ್ಟಾಚಾರ, ಬೆಲೆ ಏರಿಕೆ, ನಿರುದ್ಯೋಗ ವಿಚಾರವಾಗಿ ನಾಗರೀಕರು ಬೇಸತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷ ಬಹುಮತದಲ್ಲಿ ಅಧಿಕಾರಕ್ಕೆ ಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಎನ್ಇಪಿ ವಿರೋಧಿಸುತ್ತಿರುವುದೇಕೆ?
‘ಇದು ನಮ್ಮ ದೇಶದ ಮೌಲ್ಯ, ಇತಿಹಾಸಕ್ಕೆ ಧಕ್ಕೆಯಾಗಿದ್ದು, ಇದು ಅಧಿಕಾರ ಹಾಗೂ ಶಿಕ್ಷಣ ಕ್ಷೇತ್ರವನ್ನು ಒಂದು ವರ್ಗಕ್ಕೆ ನೀಡುವ ಪ್ರಯತ್ನವಾಗಿದೆ. ಹೀಗಾಗಿ ಕಾಂಗ್ರೆಸ್ ಈ ಶಿಕ್ಷಣ ನೀತಿಯನ್ನು ವಿರೋಧಿಸುತ್ತದೆ’ ಎಂದರು.
Also read: ಭಾರತೀಯ ವಾಯುಸೇನೆ ದಿನಾಚರಣೆ: ಮಾಜಿ ಸೈನಿಕರಿಗೆ ಶಿವಮೊಗ್ಗದಲ್ಲಿ ಸನ್ಮಾನ
ಕಾಂಗ್ರೆಸ್ ನಾಯಕರು ಬೇಲ್ ಮೇಲೆ ಹೊರಗಿದ್ದು, ಆದರೂ ಸರ್ಕಾರದ ವಿರುದ್ಧ ಹೇಗೆ 40% ಕಮಿಷನ್ ಆರೋಪ ಮಾಡುತ್ತಿರಿ ಎಂದು ಕೇಳಿದ ಪ್ರಶ್ನೆಗೆ, ‘ಬಿಜೆಪಿ ಹಾಗೂ ಆರ್ ಎಸ್ ಎಸ್ ದೇಶದ ಸಂವಿಧಾನಿಕ ಸಂಸ್ಥೆಳನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ. ರಾಜಕೀಯ ವಿರೋಧಿಗಳನ್ನು ಮಟ್ಟ ಹಾಕಲು ಈ ಸಂಸ್ಥೆಗಳ ದುರ್ಬಳಕೆ ಆಗುತ್ತಿದೆ. ಇವುಗಳನ್ನು ಬಳಸಿಕೊಂಡು ಚುನಾಯಿತ ಸರ್ಕಾರಗಳನ್ನು ಕೆಡವಲಾಗುತ್ತಿದೆ’ ಎಂದು ತಿಳಿಸಿದರು.
ಕಳೆದೊಂದು ತಿಂಗಳಲ್ಲಿ ಈ ಯಾತ್ರೆ ಅನುಭವ ಹೇಗಿದೆ? ಯಾತ್ರೆಯಿಂದ ನಿಮ್ಮಲ್ಲಿ ಏನಾದರೂ ಬದಲಾವಣೆ ಆಗಿದೆಯೇ?
‘ನಾನು ಸದಾ ಕೆಲವು ಸಿದ್ಧಾಂತದ ಪರವಾಗಿ ನಿಂತಿದ್ದೇನೆ. ಅದು ಬಿಜೆಪಿ ಹಾಗೂ ಆರ್ ಎಸ್ಎಸ್ ಸಹಿಸಿಕೊಳ್ಳಾಗುತ್ತಿಲ್ಲ. ಕಳೆದ ಹಲವು ವರ್ಷಗಳಿಂದ ಸಾವಿರಾರು ಕೋಟಿ ಖರ್ಚು ಮಾಡಿ ನನ್ನ ಬಗ್ಗೆ ತಪ್ಪು ಅಭಿಪ್ರಾಯ ಸೃಷ್ಟಿಸಲು ಮಾಧ್ಯಮಗಳನ್ನು ಬಳಸಲಾಗಿದೆ. ಈ ಪ್ರಯತ್ನ ಹೀಗೆ ಮುಂದುವರಿಯಲಿದೆ. ಆದರೆ ಜನ ನನ್ನ ಬಗ್ಗೆ ಸತ್ಯವನ್ನು ಅರಿಯಲು, ಈ ಯಾತ್ರೆ ಮುಖ್ಯವಾಗಿದೆ. ನಾನು ರಾಜಕೀಯ ವ್ಯವಸ್ಥೆಯಲ್ಲಿ ರಾಜಕೀಯ ವರ್ಗ ಹಾಗೂ ನಾಗರೀಕರ ಮಧ್ಯೆ ಇರುವ ಅಂತರವನ್ನು ನೋಡಿದ್ದೇನೆ. ನನ್ನ ಪರಿಕಲ್ಪನೆ ಪ್ರಕಾರ ರಾಜಕೀಯ ನಾಯಕರು ರಸ್ತೆಯಲ್ಲಿ ಹೋಗಿ ಜನರನ್ನು ಭೇಟಿಯಾಗಿ ಅವರಿಗೆ ಹತ್ತಿರವಾಗಬೇಕು. ಇದೊಂದು ವಿಭಿನ್ನ ಪ್ರಯತ್ನ. ಜನರ ಜತೆಗಿನ ಚರ್ಚೆಯಲ್ಲಿ ನೋವಿನ ವಿಚಾರ ಚರ್ಚೆಯಾಗಬೇಕು. ನನ್ನ ಜನರ ಜತೆ ಮಾತನಾಡುವಾಗ ಅವರ ನೋವು ನನಗೆ ಅನುಭವವಾಗಬೇಕು ಎಂಬುದು ಈ ಯಾತ್ರೆಯ ಉದ್ದೇಶ. ಈ ವಿಚಾರದಲ್ಲಿ ನನಗೆ ದೊಡ್ಡ ಅನುಭವವಾಗಿದೆ. ರಸ್ತೆಯಲ್ಲಿ ಸಾಗುವಾಗ ಜನರ ಜತೆ ಮಾತನಾಡುವಾಗ ಹೆಚ್ಚು ಆಪ್ತವಾಗಿ ಮಾತನಾಡಬಹುದು. ಆಗ ನಾವು ಅವರ ಮಾತನ್ನು ಹೆಚ್ಚಾಗಿ ಆಲಿಸಬಹುದು. ಹೀಗಾಗಿ ನನಗೆ ಇದೊಂದು ಕಲಿಕೆಯ ಮಾರ್ಗವಾಗಿದೆ. ಯಾತ್ರೆ ಆರಂಭವಾಗಿ ಕೇವಲ 31 ದಿನಗಳಾಗಿದ್ದು, ಇದು ಇನ್ನು ಆರಂಭಿಕ ಹಂತ. ಆದರೆ ಈ ರೀತಿಯ ಮಾತುಕತೆಯಿಂದ ಆಗುವ ಅನುಕೂಲದ ಬಗ್ಗೆ ಅರಿವಾಗಿದೆ. ನಾನು ಮಾಧ್ಯಮಗಳ ಮೂಲಕ ಜನರ ಜತೆ ಮಾತನಾಡುವಾಗ ಕ್ಯಾಮೆರಾದ ಹಿಂದೆ ಇಚ್ಛಾಶಕ್ತಿಗಳಿರುತ್ತವೆ. ಆದರೆ ನೇರವಾಗಿ ಮಾತನಾಡುವಾಗ ಯಾವುದೇ ಇಚ್ಛಾಶಕ್ತಿ ಅಡ್ಡಬರುವುದಿಲ್ಲ. ಬೇರೆಯವರಂತೆ ಜನರಿಂದ ಅಂತರ ಕಾಯ್ದುಕೊಂಡು ಕಾರು, ವಾಹನಗಳು, ಮಾಧ್ಯಮಗಳ ಮೂಲಕ ಹೋಗಬಹುದು. ಆದರೆ ಆ ಮಾರ್ಗಕ್ಕಿಂದ ಈ ಮಾರ್ಗ ಜನರಿಗೆ ಹತ್ತಿರವಾಗಲು ಸುಲಭವಾಗಿದೆ. ನಾನು ತಪಸ್ಸಿನಲ್ಲಿ ನಂಬಿದ್ದೇನೆ. ನಮ್ಮ ಜನರಲ್ಲಿ ಅಪಾರವಾದ ದೂರದೃಷ್ಟಿಯಿದ್ದು, ನಮ್ಮ ರಾಜಕೀಯ ವ್ಯವಸ್ಥೆಯಿಂದ ಅದು ವ್ಯರ್ಥವಾಗುತ್ತಿದೆ. ಈ ವ್ಯವಸ್ಥೆಯಿಂದ ಜನ ತಮ್ಮ ಯಶಸ್ಸಿಗೆ ಬೇಕಾದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಯಾತ್ರೆಗೆ ಎಲ್ಲ ವರ್ಗದ ಜನರ ಬೆಂಬಲ ಸಿಗುತ್ತಿದೆ’ ಎಂದರು.
ಚೀನಾದಿಂದ ದೇಶದ ಗಡಿ ಅತಿಕ್ರಮಣವಾಗುತ್ತಿದ್ದು ದೇಶದ ವಿದೇಶಾಂಗ ನೀತಿ ಬಗ್ಗೆ ಕೇಳಿದ ಪ್ರಶ್ನೆಗೆ, ‘ಈ ಪಾದಯಾತ್ರೆ ಸಂದರ್ಭದಲ್ಲಿ ನಾನು ಯುವಕರ ಜತೆ ಮಾತನಾಡುವಾಗ ನಾನು ಅವರಿಗೆ ನೀವು ಏನು ಮಾಡುತ್ತಿದ್ದೀರಾ ಎಂದು ಸರಳ ಪ್ರಶ್ನೆ ಕೇಳಿದೆ. ಅವರು ಶಾಲೆ, ಪದವಿ ಹಾಗೂ ವಿವಿಧ ಹಂತದ ವಿದ್ಯಾಭ್ಯಾಸ ಮಾಡುತ್ತಿರುವುದಾಗಿ ತಿಳಿಸಿದರು. ನಂತರ ನಿಮಗೆ ಕೆಲಸ ಸಿಗುತ್ತದೆಯೇ ಎಂದು ಕೇಳಿದೆ ಅವರು ಇಲ್ಲ ಎಂದರು. ರೈತರು, ಮಧ್ಯಮ ವರ್ಗದ ಜನರ ಜತೆ ಮಾತನಾಡಿದಾಗ ಅವರು ಬೆಲೆ ಏರಿಕೆ ಬಗ್ಗೆ ಮಾತನಾಡುತ್ತಾರೆ. ಹೀಗಾಗಿ ಈ ವಿಚಾರಗಳ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ಇನ್ನು ಚೀನಾ ಸೇನೆ ಭಾರತ ಗಡಿಯೊಳಗೆ ಅತಿಕ್ರಮಣ ಮಾಡಿದೆ. ಆದರೆ ಸರ್ಕಾರ ಸಂಸತ್ತಿನಲ್ಲಿ ಇದರ ಚರ್ಚೆಗೆ ಅವಕಾಶ ನೀಡಲು ನಿರಾಕರಿಸುತ್ತಾರೆ. ಪ್ರಧಾನಮಂತ್ರಿಗಳೇ ದೇಶದ ಗಡಿಯಲ್ಲಿ ಯಾವುದೇ ಅತಿಕ್ರಮಣ ಆಗಿಲ್ಲ ಎಂದು ಹೇಳುತ್ತಾರೆ. ದೇಶದ ಪ್ರಧಾನಿ ಈ ರೀತಿ ಕೊಟ್ಟಾಗ ಚೀನಾದವರಿಗೆ ಬೆಂಬಲ ನೀಡದಂತಾಗುತ್ತದೆ’ ಎಂದು ವಾಗ್ದಾಳಿ ನಡೆಸಿದರು.
ಈ ಯಾತ್ರೆಯಲ್ಲಿ ನಿಮ್ಮ ಉದ್ದೇಶ ಹಾಗೂ ಜನರ ಉದ್ದೇಶ ಹೊಂದಾಣಿಕೆ ಆಗುತ್ತಿದೆಯೇ?
ಖಂಡಿತವಾಗಿಯೂ ಹೊಂದಾಣಿಕೆಯಾಗುತ್ತಿದೆ’ ಎಂದರು.
ರಾಜಸ್ಥಾನದಲ್ಲಿ ಅದಾನಿ ಅವರಿಗೆ ಬಂಡವಾಳ ಹೂಡಿಕೆಗೆ ಅವಕಾಶ ನೀಡಿರುವ ಬಗ್ಗೆ ಕೇಳಿದಾಗ, ‘ಅದಾನಿ ಅವರು ರಾಜಸ್ಥಾನದಲ್ಲಿ 67 ಸಾವಿರ ಕೋಟಿ ಬಂಡವಾಳ ಹೂಡಿಕೆಗೆ ಪ್ರಸ್ತಾವನೆ ನೀಡಿದ್ದಾರೆ. ಯಾವುದೇ ರಾಜ್ಯದ ಮುಖ್ಯಮಂತ್ರಿ ಇದನ್ನು ನಿರಾಕರಿಸುವುದಿಲ್ಲ. ನಿರಾಕರಿಸುವುದು ಸರಿಯೂ ಆಲ್ಲ. ರಾಜಸ್ಥಾನ ಸರ್ಕಾರ ಅದಾನಿಗೆ ವಿಶೇಷ ಆದ್ಯತೆ ನೀಡಿಲ್ಲ. ಅವರ ವ್ಯಾಪಾರ ವ್ಯವಹಾರಕ್ಕೆ ಅನುಕೂಲ ಮಾಡಿಕೊಡಲು ರಾಜಸ್ಥಾನ ಸರ್ಕಾರ ರಾಜಕೀಯ ಅಧಿಕಾರ ದುರ್ಬಳಕೆ ಮಾಡಿಕೊಂಡಿಲ್ಲ. ಆದರೆ ಬಿಜೆಪಿ ಸರ್ಕಾರ ಕೇವಲ ಒಂದಿಬ್ಬರು ವ್ಯಾಪಾರಸ್ಥಿಗೆ ವಿಶೇಷ ಆದ್ಯತೆ ನೀಡಿ ಬೆಳೆಸುತ್ತಿದೆ. ನಾನು ಉದ್ಯಮಿಗಳು ಅಥವಾ ಬೇರೆ ವ್ಯಾಪಾರಸ್ಥರ ವಿರುದ್ಧವಿಲ್ಲ. ದೇಶದಲ್ಲಿ ಕೇಲವರಿಗೆ ಮಾತ್ರ ಆದ್ಯತೆ ನೀಡುವುದು ದೇಶಕ್ಕೆ ಮಾರಕ. ರಾಜಸ್ಥಾನ ಸರ್ಕಾರ ಪ್ರಾಮಾಣಿಕವಾಗಿ ಬಂಡವಾಳ ಹೂಡಿಕೆಗೆ ಅವಕಾಶ ನೀಡಿದ್ದರೆ ಬೆಂಬಲಿಸುತ್ತೇನೆ. ಆದರೆ ಅವರಿಗಾಗಿ ವಿಶೇಷ ಆದ್ಯತೆ ನೀಡಲು ರಾಜಕೀಯ ಅಧಿಕಾರ ದುರ್ಬಳಕೆ ಮಾಡಿದ್ದರೆ ಆಗ ರಾಜಸ್ಥಾನದ ಸರ್ಕಾರದ ವಿರುದ್ಧವೂ ನಿಲ್ಲುತ್ತೇನೆ’ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಎಐಸಿಸಿ ಸಂವಹನ ವಿಭಾಗದ ಮುಖ್ಯಸ್ಥರಾದ ಜೈರಾಮ್ ರಮೇಶ್, ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ಅವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post