ಕಲ್ಪ ಮೀಡಿಯಾ ಹೌಸ್ | ಪುತ್ತೂರು |
ಆಟೋ ಚಾಲಕನಿಗೆ ಅವಾಚ್ಯವಾಗಿ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ ಆರೋಪದಲ್ಲಿ ಪೊಲೀಸ್ ಇಲಾಖೆಯ ಇಬ್ಬರನ್ನು ಅಮಾನತು ಮಾಡಲಾಗಿದೆ.
ಪುತ್ತೂರು ಸಂಚಾರ ಠಾಣೆಯ ಎ ಎಸ್ ಐ ಚಿದಾನಂದ ರೈ ಹಾಗೂ ಸಿಪಿಐ ಶೈಲ ಎಂ.ಕೆ. ಅಮಾನತುಗೊಂಡ ಇಬ್ಬರು.
ಏನಿದು ಘಟನೆ?
ಪುತ್ತೂರಿಗೆ ಸಮೀಪದ ಕುರಿಯ ಗ್ರಾಮದ ಬಶೀರ್ ಎನ್ನುವವರು ಸಮವಸ್ತ್ರ ಧರಿಸದೆ ಆಟೋ ಚಲಾಯಿಸಿಕೊಂಡು ಬಂದಿದ್ದರು. ಈ ವೇಳೆ ಕರ್ತವ್ಯದಲ್ಲಿದ್ದ ಎ ಎಸ್ ಐ ಚಿದಾನಂದ ರೈ ಹಾಗೂ ಸಿಪಿಐ ಶೈಲ ಎಂ.ಕೆ. ಅವರುಗಳು ಆಟೋ ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ, ಬಶೀರ್ ಆಟೋ ನಿಲ್ಲಿಸದೆ ವೇಗವಾಗಿ ಕಳಿಸಿದ್ದಾರೆ ಎಂದು ಆರೋಪಿಸಲಾಗಿದೆ.ಆಟೋ ಹಿಂದೆ ಚೇಸ್ ಮಾಡಿದ ಇಬ್ಬರು ಪೊಲೀಸರು ಆತನನ್ನು ಹಿಡಿದಿದ್ದಾರೆ. ಈ ವೇಳೆ ಆಟೋ ಚಾಲಕನಿಗೆ ಇಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಘಟನೆಯನ್ನು ಯಾರೋ ಒಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.
ಇದೀಗ ಚಿದಾನಂದ ರೈ, ಎ.ಎಸ್.ಐ ಮತ್ತು ಸಿಪಿಸಿ ಶ್ರೀ ಶೈಲ ಎಂ ಕೆ ರವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ ಎಂದು ಎಸ್ಪಿಅರುಣ್ ಕುಮಾರ್ ತಿಳಿಸಿದ್ದಾರೆ.
ಇನ್ನು ಘಟನೆ ಕುರಿತಂತೆ ಮುಖ್ಯಮಂತ್ರಿಗಳ ಅಧಿಕೃತ ಎಕ್ಸ್ ಖಾತೆಯಿಂದ ಪೋಸ್ಟ್ ಮಾಡಲಾಗಿದ್ದು, ಇಬ್ಬರು ಪೊಲೀಸರ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿತ್ತು ಎಂದು ತಿಳಿಸಲಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಕುರಿಯ ಗ್ರಾಮದಲ್ಲಿ ಆಟೋ ಚಾಲಕರೊಬ್ಬರು ಸಮವಸ್ತ್ರ ಧರಿಸದೆ ಆಟೋ ಚಾಲನೆ ಮಾಡಿದ ಕಾರಣ ಸಂಚಾರಿ ಪೊಲೀಸರು ಮೋಟಾರ್ ವಾಹನ ಕಾಯ್ದೆ ಉಲ್ಲಂಘನೆ ಮಾಡಿ ಆಟೋ ಚಾಲಕನನ್ನು ನಿಂದಿಸಿ, ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಈ ವಿಚಾರ ಮುಖ್ಯಮಂತ್ರಿಯವರ ಕಚೇರಿಯ ಕುಂದುಕೊರತೆ ವಿಭಾಗದ ಗಮನಕ್ಕೆ ಬಂದಿದ್ದು, ವಿಶೇಷ ಕರ್ತವ್ಯಾಧಿಕಾರಿಗಳು ತಕ್ಷಣವೇ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದರು.
ಜನಸ್ನೇಹಿ ಆಡಳಿತ ನೀಡುವುದು ಸರ್ಕಾರದ ಆದ್ಯತೆಯಾಗಿದ್ದು, ಅದರಂತೆ ಹಲ್ಲೆ ಮಾಡಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಕರ್ತವ್ಯದಿಂದ ಅಮಾನತುಗೊಳಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕ್ರಮ ಕೈಗೊಂಡಿರುತ್ತಾರೆ ಎಂದು ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post