ಕಲ್ಪ ಮೀಡಿಯಾ ಹೌಸ್ | ಉಡುಪಿ/ಬೆಂಗಳೂರು |
ಉಡುಪಿಯ ಉತ್ತಮ ವಿದ್ವಾಂಸರು, ವಾಗ್ಮಿಗಳು, ಲೇಖಕರು, ಸಂಶೋಧಕರು, ಚಿಂತಕರು, ಸದಾ ಅನುಸಂಧಾನಪ್ರಿಯರೂ, ಸದಾಚಾರ ನಿಷ್ಠರೂ, ಸಾಧಕರೂ ಆದ ವಿದ್ವಾಂಸರಾದ ಶ್ರೀ ಸಗ್ರಿ ರಾಘವೇಂದ್ರಾಚಾರ್ಯ ಉಪಾಧ್ಯಾಯರು ಉಪನ್ಯಾಸ ನೀಡಿ ಕೆಲವೇ ನಿಮಿಷದಲ್ಲಿ ಹೃದಯಾಘಾತಕ್ಕೆ ಒಳಗಾಗಿ ಇಂದು ಹರಿಪಾದ ಸೇರಿದ್ದು, ಇವರ ನಿಧನಕ್ಕೆ ವಿವಿಧ ಮಠಾಧೀಶರು ಆಚಾರ್ಯರ ಕೊಡುಗೆಯನ್ನು ಸ್ಮರಿಸಿದ್ದಾರೆ.
ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥರು
ಸಗ್ರಿ ರಾಘವೇಂದ್ರ ಉಪಾಧ್ಯಾಯರ ನಿಧನದ ಸುದ್ದಿ ತಿಳಿದು ತುಂಬಾ ಖೇದವಾಯಿತು ಎಂದು ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ #Pejawara Shri Vishwaprasanna Thirtha ಶ್ರೀಪಾದಂಗಳವರು ಉಪಾಧ್ಯಾಯರ ಸೇವೆ ಸ್ಮರಿಸಿದ್ದಾರೆ.
ಈ ಕುರಿತಂತೆ ಮತನಾಡಿರುವ ಗುರುಗಳು, ನಮ್ಮ ಗುರುಗಳ ಬಳಿಯಲ್ಲಿ ವಿದ್ಯಾಭ್ಯಾಸ ನಡೆಸಿ, ಅವರೊಂದಿಗೇ ಶ್ರೀಮಠದಲ್ಲಿ ಸೇವೆ ಸಲ್ಲಿಸಿದ್ದಾರೆ. ಸಂಸ್ಕೃತ ಪಾಠಶಾಲೆಯಲ್ಲಿ ಅನವರತ ಸೇವೆ ಸಲ್ಲಿಸಿರುವ ಆಚಾರ್ಯರ ಕೊಡುಗೆ ಅನನ್ಯವಾಗಿದೆ. ಪ್ರವಚನಕಾರರಾಗಿ, ಕೃತಿಕಾರರಾಗಿ ಅವರು ಸಮಾಜದಲ್ಲಿ ದೊಡ್ಡ ಸೇವೆ ಸಲ್ಲಿಸಿದ್ದಾರೆ. ಸಾರಸ್ವತ ಲೋಕಕ್ಕೆ, ಅದರಲ್ಲಿ ಮಧ್ವ ಸಮಾಜದ ಸಾಹಿತ್ಯಕ್ಕೆ ಅವರ ಕೊಡುಗೆ ಮಹತ್ವವಾದುದು ಎಂದರು.
ಉಪಾಧ್ಯಾಯರ ಆತ್ಮಕ್ಕೆ ಸದ್ಗತಿ ದೊರೆಯಲಿ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.
ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥರು
ಉತ್ತಮ ವಿದ್ವಾಂಸರು, ವಾಗ್ಮಿಗಳು, ಲೇಖಕರು, ಸಂಶೋಧಕರು, ಚಿಂತಕರು, ಸದಾ ಅನುಸಂಧಾನಪ್ರಿಯರೂ, ಸದಾಚಾರ ನಿಷ್ಠರೂ, ಸಾಧಕರೂ ಆದ ವಿದ್ವಾಂಸರಾದ ಶ್ರೀ ಸಗ್ರಿ ರಾಘವೇಂದ್ರಾಚಾರ್ಯ ಉಪಾಧ್ಯಾಯ ಇವರ ಆಕಸ್ಮಿಕ ನಿಧನ ತೀವ್ರ ವಿಷಾದಕರವಾದದ್ದು ಎಂದು ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಸಗ್ರಿ ಉಪಾಧ್ಯಾಯರ ಕೊಡಗೆಯನ್ನು ಸ್ಮರಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಗುರುಗಳು, ಸಗ್ರಿ ರಾಘವೇಂದ್ರ ಉಪಾಧ್ಯಾಯರು ಮಾಡಿದ ವಾಙ್ಮಯ ಸೇವೆ ತುಂಬ ಅಪರೂಪವಾದದ್ದು. ಸರ್ವಮೂಲಾದಿಗಳಲ್ಲಿ ಇರುವ ಸೂಕ್ಷ್ಮವಾದ ವಿಚಾರಗಳನ್ನು ಹೆಕ್ಕಿ ತೆಗೆದು ಲೇಖನದ ಮೂಲಕ ಸಮಾಜಕ್ಕೆ ನೀಡುವ ಅವರ ಕೌಶಲ ಮಾಧ್ವಸಮಾಜಕ್ಕೆ ದೊಡ್ಡ ಆಸ್ತಿಯಾಗಿತ್ತು ಎಂದರು.
ತಮ್ಮ ವಾಕ್ ಕುಸುಮಗಳ ಮೂಲಕ ಶ್ರೀಕೃಷ್ಣಮುಖ್ಯಪ್ರಾಣರ ವಿಶೇಷ ಆರಾಧನೆಯನ್ನು ನಿರಂತರವಾಗಿ ಮಾಡಿದವರು. ಅಂತಹ ಸುಜೀವಕ್ಕೆ ಭಗವಂತ ಉತ್ತಮವಾದ ಸದ್ಗತಿಯನ್ನು ನೀಡಲಿ ಎಂದು ನಮ್ಮ ಉಪಾಸ್ಯಮೂರ್ತಿಗಳಾದ ಶ್ರೀಮೂಲರಾಮ ದಿಗ್ವಿಜಯ ರಾಮವೇದವ್ಯಾಸ ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದಿದ್ದಾರೆ.
ಸೋಸಲೆ ಮಠದ ಶ್ರೀ ವಿದ್ಯಾಶ್ರೀಶ ತೀರ್ಥರು
ಆಧ್ಯಾತ್ಮಿಕ ಹಾಗೂ ಧಾರ್ಮಿಕ ಸಾಹಿತ್ಯ ಕ್ಷೇತ್ರಕ್ಕೆ ಸಗ್ರಿ ರಾಘವೇಂದ್ರ ಉಪಾಧ್ಯಾಯರ ಕೊಡುಗೆ ಅನನ್ಯವಾದುದು ಎಂದು ಸೋಸಲೆ ಮಹಾಸಂಸ್ಥಾನದ ಪೀಠಾಧೀಶರಾದ ಶ್ರೀ ವಿದ್ಯಾಶ್ರೀಶ ತೀರ್ಥ ಶ್ರೀಪಾದಂಗಳವರು ಸ್ಮರಿಸಿದ್ದಾರೆ.
ಈ ಕುರಿತಂತೆ ಮಾತನಾಡಿದ ಗುರುಗಳು, ಮಧ್ವ ಪ್ರಪಂಚಕ್ಕೆ ಸಗ್ರಿ ಉಪಾಧ್ಯಾಯರ ಕೊಡುಗೆ ಅಪಾರವಾಗಿದೆ. ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ತೀಡುವ ಪೂಜ್ಯ ಆಚಾರ್ಯರ ತತ್ವವಾದ ಲೇಖನ ಸದಾ ಸಂಗ್ರಾಹ್ಯ…..ಭೂಯಿಷ್ಠಾಂ ತೇ ನಮ ಉಕ್ತಿಂ ವಿಧೇಮ…. ಸಂಗ್ರಹ ಯೋಗ್ಯವಾಗಿದೆ ಎಂದರು.
ಗಂಭೀರವಾದ ಧ್ವನಿಯಲ್ಲಿ ಉಪನ್ಯಾಸ ಮಾಡುತ್ತಲೇ ಕೋದಂಡ ರಾಮಚಂದ್ರದೇವರ ಸನ್ನಿಧಾನದಲ್ಲಿ,ಪರಮ ವೈಷ್ಣವರ ಸಮ್ಮುಖದಲ್ಲಿ ಕೊನೆಯುಸಿರೆಳೆದ ಆಚಾರ್ಯರ ಬದುಕಿನ ಫಲಿತಾಂಶ ಸಿಕ್ಕಿದೆ. ಜನ್ಮಲಾಭಃ ಪರಃ ಪುಂಸಾಂ ಅಂತೇ ನಾರಾಯಣ ಸ್ಮತಿಃ ಎಂದು ಗುರುಗಳ ಸ್ಮರಿಸಿದ್ದಾರೆ.
ಮಾಧ್ವ ಸಿದ್ಧಾಂತದ ಅತಿ ದೊಡ್ಡ ಪಂಡಿತರಲ್ಲಿ ಒಬ್ಬರಾದ, ಆಚಾರ-ವಿಚಾರಗಳಲ್ಲಿ ನಿಷ್ಠೆಯನ್ನಿಟ್ಟಿದ್ದ, ಆಳವಾದ ಅಧ್ಯಯನ-ಆಧ್ಯಾಪನದಲ್ಲಿ ತೊಡಗಿದ್ದ, ಸಂಗ್ರಹ ಸಗ್ರಿ ಎಂದು ಪ್ರಸಿದ್ದರಾಗಿರುವ ಪಂ. ಶ್ರೀ ಸಗ್ರಿ ರಾಘವೇಂದ್ರ ಉಪಾಧ್ಯಾಯರು ಅಗಲಿದ್ದು ನಮ್ಮ ಇಡೀ ಸಮುದಾಯಕ್ಕೆ ಆಘಾತವಾಗಿದೆ. ಅವರಿಗೆ ಸದ್ಗತಿ ದೊರೆಯಲೆಂದು, ತಮ್ಮ ಉಪಾಸ್ಯ ಮೂರ್ತಿಯಾದ ಶ್ರೀ ಮೂಲ ಗೋಪಾಲ ಕೃಷ್ಣ ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದಿದ್ದಾರೆ.
ಭಂಡಾರಕೇರಿ ಮಠದ ಶ್ರೀವಿದ್ಯೇಶ ತೀರ್ಥ ಶ್ರೀಪಾದರು
ಸಗ್ರಿ ರಾಘವೇಂದ್ರ ಉಪಾಧ್ಯಾಯರ ಅಗಲಿಕೆ ವಿದ್ವತ್ ಪ್ರಪಂಚಕ್ಕೆ ಅಪಾರವಾದ ನಷ್ಟ ಎಂದು ಭಂಡಾರಕೇರಿ ಮಠದ ಶ್ರೀವಿದ್ಯೇಶ ತೀರ್ಥ ಶ್ರೀಪಾದಂಗಳವರು ಸ್ಮರಿಸಿದ್ದಾರೆ.
ಈ ಕುರಿತು ಮಾತನಾಡಿರುವ ಗುರುಗಳು, ಎಲ್ಲ ಮಠಗಳಿಗೂ ಅಪಾರವಾದ ಸೇವೆ, ಸಾರಸ್ವತ ಲೋಕಕ್ಕೆ ಅನನ್ಯ ಕೊಡುಗೆಯನ್ನು ಉಪಾಧ್ಯಾಯರು ನೀಡಿದ್ದಾರೆ ಎಂದರು.
ಕಳೆದ ವರ್ಷದ ಮೈಸೂರಿನಲ್ಲಿ ನಡೆದ ವೇದವ್ಯಾರ ರಾಷ್ಟ್ರೀಯ ಜಯಂತಿಯಲ್ಲಿ ಉಪಾಧ್ಯಾಯರಿಗೆ ಜೀವಮಾನದ ಸಾಧನೆ ಪ್ರಶಸ್ತಿಯನ್ನು ನೀಡಿದನ್ನು ಗುರುಗಳು ಸ್ಮರಿಸಿದ್ದಾರೆ.
ಪಲಿಮಾರು ಮಠದ ಶ್ರೀವಿದ್ಯಾಶ್ರೀಶ ತೀರ್ಥ ಶ್ರೀಗಳು
ಸಗ್ರಿ ರಾಘವೇಂದ್ರ ಉಪಾಧ್ಯಾಯರು ದೊಡ್ಡ ಸಾಧಕರು ಹಾಗೂ ಲೇಖಕರಾಗಿದ್ದು, ಎಲ್ಲ ಕ್ಷೇತ್ರಗಳಲ್ಲಿ ಅವರ ಸಾಧನೆ ಇದೆ. ಇಂತಹ ಹಿರಿಯ ವಿದ್ವಾಂಸರ ವಿಯೋಗ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ ಉಂಟುಮಾಡಿದೆ ಎಂದು ಉಡುಪಿ ಪಲಿಮಾರು ಮಠದ ಶ್ರೀ ವಿದ್ಯಾಶ್ರೀಶ ತೀರ್ಥ ಶ್ರೀಪಾದಂಗಳವರು ಸ್ಮರಿಸಿದ್ದಾರೆ.
ಉಪಾಧ್ಯಾಯರ ಅಗಲಿಕೆ ಹಿನ್ನೆಲೆಯಲ್ಲಿ ಮಾತನಾಡಿರುವ ಗುರುಗಳು, ವಿಷ್ಣು ಸಹಸ್ರನಾಮದ ಕುರಿತಾಗಿ ಮೂರು ಸಂಪುಟಗಳ ದೊಡ್ಡ ಗ್ರಂಥವನ್ನು ಉಪಾಧ್ಯಾಯರು ಬರೆದಿದ್ದಾರೆ. ವಿಷ್ಣು ಸಹಸ್ರನಾಮದ ಬಗ್ಗೆ ಎಷ್ಟು ಚಿಂತನೆ ನಡೆಸಬಹುದು ಎಂಬುದಕ್ಕೆ ಸಗ್ರಿ ಅವರ ಪುಸ್ತಕ ಉಪಯುಕ್ತವಾದುದು ಎಂದರು.
ಎಲ್ಲ ಸ್ವಾಮೀಜಿಗಳ ಪ್ರವಚನವನ್ನು ಸಂಗ್ರಹಿಸಿ, ಲೇಖನ ರೂಪಕ್ಕೆ ಕ್ರೋಢೀಕರಿಸಿ, ಗ್ರಂಥ ರೂಪದಲ್ಲಿ ಪ್ರಕಾಶನ ಮಾಡಿರುವುದು ಉಪಾಧ್ಯಾಯರ ಸಾಧನೆಗಳಲ್ಲೊಂದು. ಮೀನು ಸದಾಕಾಲ ನೀರಿನಲ್ಲೇ ಇರುವಂತೆ ತಮ್ಮ ಜೀವಮಾನದಾದ್ಯಂತ ಉಪಾಧ್ಯಾಯರು ಸದಾಕಾಲ ಅಧ್ಯಯನ, ಬರವಣಿಗೆ ಹಾಗೂ ಸಾಹಿತ್ಯ ಕೃಷಿಯಲ್ಲೇ ತೊಡಕೊಂಡಿರುತ್ತಿದ್ದರು ಎಂದರು.
ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಿತೀಡುವ ಕುರಿತಾಗಿ ಗ್ರಂಥಗಳನ್ನು ರಚಿಸಿದ್ದಾರೆ. ಎಲ್ಲ ಧಾರ್ಮಿಕ ಮಾಸಿಕಗಳಲ್ಲಿ ಸಗ್ರಿ ಅವರ ಲೇಖನಗಳ ಇರುತ್ತಿದ್ದವರು ಎಂದರೆ ಅವರ ಚಿಂತನೆಗಳು ಸದಾಕಾಲ ಜೀವಂತ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದರು.
ಪ್ರಮುಖವಾಗಿ ಪ್ರವಚನದ ಮೂಲಕವೇ ಆತ್ಮಾರ್ಪಣೆ ಮಾಡಿದ್ದಾರೆ ಎಂದರೆ ಅವರ ಸಾರ್ಥಕತೆ, ದೇವರ ಅನುಗ್ರಹ ಅವರ ಮೇಲೆ ಎಷ್ಟಿದೆ ಎಂಬುದನ್ನು ಸಾಕ್ಷಿಯಾಗಿದೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post