ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನಿಸರ್ಗದ ಹೊಸತನ ಮತ್ತು ಜೀವಂತಿಕೆಯನ್ನು ಪ್ರತಿನಿಧಿಸುವ ಯುಗಾದಿ ಮತ್ತೆ ಬಂದಿದೆ. ರಾಗವನ್ನು ಉದ್ದೀಪಿಸುವ ವಸಂತ ತತ್ವ ಏನು? ಮನುಷ್ಯ ಚೇತನ ಹಳೆಯ ಪೊರೆಗಳನ್ನು ಕಳಚಿಕೊಂಡು ಮಿರಮಿರ ಮಿಂಚಬೇಕಾದರೆ ಏನು ಮಾಡಬೇಕು ಎಂಬುದರ ನೋಟ.
ಜೀವನ ಬೇವು ಬೆಲ್ಲ
ಮಾರ್ಚ್ 18 ಯುಗಾದಿ ಹಬ್ಬ. ಪ್ರಕೃತಿ ನಮಗೆ ನೀಡಿದ ಅದ್ಭುತ ಕೊಡುಗೆಯ ಪ್ರತೀಕವೇ ಯುಗಾದಿ. ಗಿಡ ಮರ ಬಳ್ಳಿಗಳು ಹೊಂಬಣ್ಣದ ಚಿಗುರೆಲೆ ಹೊದ್ದು ಚಿನ್ನಾಟವಾಡುವುದರ ಜತೆಗೆ ಸಮಸ್ತ ಮನುಕುಲಕ್ಕೆ ಸಂತಸ ನೀಡುವ ಸಮಯವೇ ಯುಗಾದಿ. ಯುಗಾದಿ ಸಿಹಿ ಕಹಿಯ ಮಿಶ್ರಣ. ಜೀವನದಲ್ಲಿ ಬರೀ ಸುಖವೇ ಇರಬಾರದು. ದುಃಖವೂ ಇರಬೇಕು.
ನಮಗೆಲ್ಲ ಬರೀ ಸುಖವೇ ಬೇಕು. ಐಶ್ವರ್ಯ, ಸಂಪತ್ತು ಗಳಿಸುವುದರಲ್ಲೇ ಕಾಲಹರಣ ಮಾಡುತ್ತಿರುವ ನಮಗೆ ಜೀವನದ ನೈಜ ಸೌಂದರ್ಯ ಸುಖದ ಪರಿವೇ ಇಲ್ಲ. ಕಷ್ಟ ಎಂದರೆ ಮಾರುದ್ದ ದೂರ ಹೋಗುತ್ತೇವೆ. ವರ್ಷವಿಡೀ ಸುಖವನ್ನೇ ಬಯಸುವ ಭರದಲ್ಲಿ ದುಃಖದ ಮೂಲ ಮರೆತು ಬಿಡುತ್ತೇವೆ. ಅದಯ ತಪ್ಪು. ಕಷ್ಟದ ದಿನಗಳನ್ನು ಕಳೆದ ಪರಿ ನೆನಪಿದ್ದರೆ ಸುಖ ಬಂದಾಗ ಆಗಾಗ ಅದರ ಮೆಲುಕು ಹಾಕಿಕೊಂಡು ಬಾಳಿದರೆ ಮನುಷ್ಯ ಸಮಚಿತ್ತನಾಗಿರುತ್ತಾನೆ.
ಸುಖ ಬಂದಾಗ ಹಿಗ್ಗುವುದು ಕಷ್ಟ ಬಂದಾಗ ಕುಗ್ಗುವುದು ವಾಡಿಕೆ. ಆದರೆ ಇದು ತಪ್ಪು. ಕಷ್ಟವೇ ಬರಲಿ ಸುಖವೇ ಸಿಗಲಿ ಮನಸ್ಥಿತಿ ಎಂದಿಗೂ ಬದಲಾಗಬಾರದು. ಜೀವನಶೈಲಿ ಒಂದೇ ತೆರನಾಗಬೇಕು. ಎಲ್ಲರಿಗೂ ಒಳ್ಳೆಯದಾಗಲಿ ಎನ್ನುವ ಮನೋಭಾವ ಇರಬೇಕು. ಜೀವನದ ಸಮನ್ವಯಸೂತ್ರ ಅಡಗಿರುವುದೇ ಇದರಲ್ಲಿ.ನೋವು ನಲಿವು ಮೇಳೈಸಿದಾಗಲೇ ಬದುಕಿಗೊಂದು ಅರ್ಥ ಬರುತ್ತದೆ. ಬರೀ ಬೆಲ್ಲ ತಿನ್ನುವುದು ಸರಿಯಲ್ಲ. ಬೇವಿನ ರುಚಿಯೂ ಇರಬೇಕು. ಬೇವು ಬೆಲ್ಲ ತಿನ್ನುವುದರಿಂದ ಸದ್ಭಾವನೆ ಬೆಳೆಯುತ್ತದೆ. ಪರಸ್ಪರ ಬಾಂಧವ್ಯ ವೃದ್ಧಿಯಾಗುತ್ತದೆ.
ಹಳತು-ಹೊಸತರ ಸಮ್ಮಿಳನ
ನಮ್ಮ ಹಿರಿಯರು ಈ ಹಬ್ಬಕ್ಕೆ ಬೇವು ಬೆಲ್ಲ ತಿನ್ನುವ ರೂಢಿ ಹಾಕಿದ್ದು ಸುಮ್ಮನೇ ಅಲ್ಲ. ಕಷ್ಟ-ಸುಖಗಳ ಸಂಯೋಜನೆಯ ದ್ಯೋತಕವಾಗಿ ಹಬ್ಬದ ಆಚರಣೆ ಜಾರಿಗೆ ತಂದಿದ್ದಾರೆ. ನಾವು ಹೊಸದನ್ನು ಪಡೆದಾಗ ಹಳೆಯದನ್ನು ಮರೆತುಬಿಡುತ್ತೆವೆ. ಹೊಸತನ್ನು ಪಡೆಯುವಲ್ಲಿ ಹಳೆಯದರ ಪಾಲು ಪ್ರಮುಖ. ಹಳತು-ಹೊಸತು ಎರಡನ್ನೂ ಸಮಾನವಾಗಿ ಅಳವಡಿಸಿಕೊಂಡು ನಡೆದಾಗ ಆತ್ಮಸಿದ್ಧಿ ಸಿಗುತ್ತದೆ. ಜಗತ್ತಿನ ಯಾವ ವಸ್ತುಗಳೂ ಸ್ವತಂತ್ರವಲ್ಲ, ನಾನೂ ಅಪೂರ್ಣ, ಇಡೀ ಜಗತ್ತೇ ಅಪೂರ್ಣ. ಪೂರ್ಣ ಒಂದೇ ಅದು ದೇವರು. ಪೂರ್ಣಮದಃ, ಪೂರ್ಣಮಿದಂ. ಬದುಕಿನಲ್ಲಿ ತೆರೆಗಳಿರಬೇಕು. ಆ ತೆರೆಗಳು ಬಂದಾಗ ಅವುಗಳನ್ನು ಎದುರಿಸುವ ಶಕ್ತಿ ನಮ್ಮದಾಗಬೇಕು. ಯುಗಾದಿಯ ಈ ಶುಭ ಸಂದರ್ಭದಲ್ಲಿ ಸಿಹಿ-ಕಹಿಗಳ ಮೆಲುಕು ಹಾಕುತ್ತ ನೋವು ನಲಿವುಗಳನ್ನು ಮರೆಯದೇ ಮಳೆ ನೀರಿನ ಹನಿಯಂತೆ ಬದುಕಿದರೆ ನಮ್ಮ ಜೀವನ ಸಾರ್ಥಕ.
ಆದಿ ಅಂತ್ಯಗಳ ಮಧ್ಯೆ ಬದುಕು
ಸುತ್ತಲಿನ ವಸ್ತುಗಳ ಸೌಂದರ್ಯ ಕಂಡಾಗ ಒಂದು ಸಂಗತಿ ವ್ಯಕ್ತವಾಗುತ್ತದೆ. ಸ್ಪಷ್ಟವಾಗುತ್ತದೆ. ಇಲ್ಲಿ ಇರುವ ಪ್ರತಿ ವಸ್ತು ಆರಂಭವಾಗುತ್ತದೆ. ಅಂತ್ಯಗೊಳ್ಳುತ್ತದೆ. ಈ ವಸ್ತು ಯಾವಾಗ ರೂಪುಗೊಂಡಿತು? ಯಾವಾಗ ಮರೆಯಾಯಿತು? ಎಂಬುದನ್ನು ನಿಖರವಾಗಿ, ನಿಶ್ಚಿತವಾಗಿ ಹೇಳಬಹುದು. ಏಕೆ? ಆ ವಸ್ತು ಸೀಮಿತವಾದುದರಿಂದ ಹುಟ್ಟು-ಸಾವು, ಆದಿ-ಅಂತ್ಯಗಳ ಮಧ್ಯದಲ್ಲಿ ಬದುಕು ಇರುವಿಕೆ! ಬದುಕು ಆದಿಯಿಂದ ಹರಿಯಲು ಆರಂಭ. ಅಂತ್ಯದತ್ತ ಅನಂತ ಸತ್ಯದತ್ತ ಬಯಲಿನತ್ತ. ನಮ್ಮ ದೇಹವೂ ಹಾಗೆಯೇ. ಹುಟ್ಟಿ ಬೆಳೆದು ಬಾಳಿ ನಾಶವಾಗುತ್ತದೆ. ಅತಿ ಹೆಚ್ಚೆಂದರೆ ನೂರು ವರುಷಗಳಲ್ಲಿ. ಇಷ್ಟೇ ಯೌವನದ ಏರಿಕೆಯಲ್ಲಿ ಮುಪ್ಪು ಮರಣದ ಭಾವ ಬರದು. ಆಗ ತರುಣ ಕನಸುಗಳು. ಏನು ಬೇಕಾದರೂ ಮಾಡಬಲ್ಲವೆಂಬ ಉಮೇದು! ಅಸಾಧ್ಯ ಎನ್ನುವುದೇ ಕಾಣದು!
ನಮ್ಮ ಹರೆಯದಲ್ಲಿ ಜಗತ್ತನ್ನೇ ಬದಲಾಯಿಸುವ ಕ್ರಾಂತಿಯ ಕನಸು! ದೇಹದಲ್ಲಿ ಕಾವು; ಮನದಲ್ಲಿ ಅಮಿತ ಉತ್ಸಾಹ. ಹುಟ್ಟಿನ ದಂಡೆ ಕಂಡರೂ ಮರಣದ ಆ ದಂಡೆ ಆಗ ಕಾಣದು. ಮಧ್ಯಮ ವಯಸ್ಸಿನ ನಂತರ ಆಚೆಯ ದಡ ಕಾಣತೊಡಗುತ್ತದೆ. ಮರಣದ ಗಾಳಿ ಸುಳಿಯುತ್ತದೆ. ಆಗ ಕನಸುಗಳು ನಿಶ್ಯಕ್ತವಾಗುತ್ತವೆ. ಅಷ್ಟಿಷ್ಟು ಕಂಡು ಮರೆಯಾಗಿ ಹೋಗುತ್ತದೆ. ಎಲ್ಲವೂ ಪ್ರಾರಂಭವಾಗುತ್ತದೆ. ಅಂತ್ಯಗೊಳ್ಳುತ್ತದೆ. ಯಾವಾಗ ಕೊನೆ ಕಾಣಲಿಕ್ಕೆ ಪ್ರಾರಂಭವಾಯಿತೋ ಮೊದಲಿನ ಸಂತಸ, ಉತ್ಸಾಹ, ಕಡಿಮೆ ಆಗುತ್ತದೆ. ಕೊನೆಗೆ ಮನುಷ್ಯನ ಮನಸ್ಸು ಜಗತ್ತಿನಿಂದ ನಿವೃತ್ತಿ ಹೊಂದುವ ಅವಸ್ಥೆಗೆ ಮುಟ್ಟುತ್ತದೆ. ಇದು ದೇಹಕ್ಕೆ ಅನ್ವಯಿಸುತ್ತದೆ. ಸುತ್ತಲಿನ ಪ್ರತಿ ವಸ್ತುವಿಗೂ ಈ ನೀತಿ ಅನ್ವಯಿಸುತ್ತದೆ. ಸುತ್ತಲಿನ ಪ್ರತಿ ವಸ್ತುವಿಗೂ ಈ ನಿಯತಿ ಅನ್ವಯಿಸುತ್ತದೆ. ವಿಶ್ವಕ್ಕೇ ಆದಿ ಇದೆ. ಅಂತ್ಯ ಇದೆ. ಮಧ್ಯದಲ್ಲಿ ಅದು ತೋರುತ್ತದೆ. ಇದು ವಿಶ್ವ ಜೀವನ ಚಿತ್ರ. ಈ ಜೀವನ ಚಿತ್ರದೊಳಗೆ ಯಾವ ತತ್ತ್ವಸಿಲುಕಿಲ್ಲವೋ ಅಂಥ ವಸ್ತುವೇ ದೇವರು. ಅಂದರೆ ಯಾವುದು ಕಾಲದಲ್ಲಿ ರೂಪುಗೊಂಡಿಲ್ಲ. ಯಾವುದಕ್ಕೆ ಬಾಲ್ಯ ಯೌವನ ವೃದ್ಧಾಪ್ಯಗಳಿಲ್ಲ. ಯಾವುದನ್ನು ಯಾವ ರೀತಿಯಿಂದಲೂ ವಿನಾಸಗೊಳಿಸಲಾಗದೋ ಅದುವೇ ದೇವತತ್ತ್ವ. ಭಗವಂತನ ವಿಷಯದಲ್ಲಿ ಎಂದು ಹುಟ್ಟಿದ? ಲಗ್ನವಾದನೆಂದು? ಎಂದು ಅವನ ಸಾವು? ಎಂಬ ಪ್ರಶ್ನೆಗಳಿಗೆ ಅರ್ಥವೇ ಇಲ್ಲ.
ನನ್ನ ದೇಹಕ್ಕೆ ಆದಿ ಅಂತ್ಯ. ಮನಸ್ಸಿಗೂ ಕೂಡ. ಆದರೆ ಇದೇ ದೇಹ-ಮನಗಳಲ್ಲಿರುವ ನಾನು ಎಂಬ ಪ್ರಜ್ಞಾತತ್ತ್ವವಿದೆಯಲ್ಲ ಅದು ಮಾತ್ರ ಆದಿ. ಅಂತ್ಯರಹಿತ. ಅದಕ್ಕೆ ಆಯುಷ್ಯವಿಲ್ಲ. ಕಾಲದ ಪರಿಣಾಮವಿಲ್ಲ. ಅದು ಜೀವಾಂತ ದೇಹದಲ್ಲಿ ಅದು ಇರುವಂತೆ ಪರಿಣಾಮಗೊಳ್ಳುತ್ತಿರುವ ಸಮಸ್ತ ಜಗತ್ತಿನಲ್ಲಿಯೂ ಅದು ಸ್ಥಿರವಾಗಿ ನೆಲೆಸಿದೆ. ಅದೇ ಈಶ ದೇವ! ಅದು ಅನಾದಿ ಅನಂತ. ಅದು ನೆಲೆಸಿದ ಜಗತ್ತು ದೇಹಗಳು ಮಾತ್ರ ಕಲಿಲ! ಮಿಶ್ರಣ! ಕಾಲ ನಿಬಂಧಿತ ಸಮೂಹ! ಇಲ್ಲಿ ವಿವಿಧ ವಸ್ತುಗಳು, ವ್ಯಕ್ತಿಗಳು, ಜೀವ ಜಂತುಗಳು! ರಾಮ, ರಾವಣರು, ಪಾಪಿ, ಪುಣ್ಯವಂತರು, ಸತ್ಯಸಂಧರು, ಅಪ್ರಾಮಾಣಿಕ ವಂಚಕರು, ಬುದ್ದನಂತಹವರು, ಅಂಗುಲಿಮಾಲನಂತವರು, ಮಾರಕರು ತಾರಕರು! ಎಲ್ಲರೂ ಇಲ್ಲಿದ್ದಾರೆ. ಇದು ಕಲಿಲ! ಹೀಗಿದೆ ಜಗತ್ತೆಂದು ಗೊತ್ತಾದರೆ ಮನುಷ್ಯ ಜಾಣನಾಗುತ್ತಾನೆ. ಏನಿದ್ದರೂ, ಏನಾದರೂ ಬಹಳ ತಲೆ ಕೆಡಿಸಿಕೊಳ್ಳುವುದಿಲ್ಲ, ಜಗತ್ತಿನ ಅತಿ ವಿಮರ್ಶೆಗೆ ಹೋಗಬಾರದು.
ಪ್ರತಿವರ್ಷ ಯುಗಾದಿ ಬರುತ್ತದೆ. ಅಖಿಲ ಜೀವಜಾತಕೆ ಹೊಸ ಜನ್ಮವನ್ನು ನೀಡುತ್ತದೆ ಆದರೆ ನಮ್ಮನ್ನು ಮಾತ್ರ ಮರೆತಿದೆ ಎಂದು ಹಳಹಳಿಸುವ ಅಗತ್ಯವಿಲ್ಲ. ಒಂದು ಸೌಂದರ್ಯಾತ್ಮಕ ಶಿಸ್ತು, ಮಾನವೀಯ ಔದಾರ್ಯ, ನಿಸರ್ಗವೂ ಸೇರಿದಂತೆ ಸಣ್ಣಪುಟ್ಟ ಸಂಗತಿಗಳಲ್ಲಿ ಕುತೂಹಲ ಮತ್ತು ಬೆರಗು, ನಿತ್ಯ ವಿದ್ಯಾರ್ಥಿ ವೇತನ, ಡೀಲರ್ನಿಂಗ್, ಮತ್ತು ಖ್ಯಾತಿಯ ಹುಚ್ಚಿಲ್ಲದೆ ಸಾಮಾನ್ಯತೆಯಲ್ಲಿ ನಮ್ಮ ಹೊಸತನವನ್ನು ಕಂಡುಕೊಳ್ಳಲು ಸಾಧ್ಯ.
Get in Touch With Us info@kalpa.news Whatsapp: 9481252093
Discussion about this post