ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ನಾಲ್ಕು ರಾಜ್ಯಗಳಿಗೆ ಸೇರಿದಂತೆ ಆರ್’ಎಎಫ್ ಘಟಕ ನಗರದಲ್ಲಿ ಆರಂಭವಾಗಲಿದ್ದು, ಇದರ ಶಂಕುಸ್ಥಾಪನೆಗಾಗಿ ಜ.17ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದಾರೆ.
ಜ.17ರಂದು ಅಮಿತ್ ಶಾ ಅವರು ಆಗಮಿಸಲಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಪೂರ್ವ ತಯಾರಿಯಾಗಿ ವೇದಿಕೆ ನಿರ್ಮಾಣ, ಹೆಲಿಪ್ಯಾಡ್ ಸಿದ್ಧತೆಗಳನ್ನು ಸಂಸದ ಬಿ.ವೈ. ರಾಘವೇಂದ್ರ ಅವರು ಇಂದು ವೀಕ್ಷಿಸಿದರು. ಆರ್’ಎಎಫ್ ಘಟಕ ನಿರ್ಮಾಣವಾಗುವ ಪ್ರದೇಶಕ್ಕೆ ಭೇಟಿ ನೀಡಿದ ಅವರು ನೀಲನಕ್ಷೆ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಪ್ರಮುಖರಾದ ಎಸ್. ದತ್ತಾತ್ರಿ, ಜ್ಯೋತಿಪ್ರಕಾಶ್, ಬಳ್ಳೆಕೆರೆ ಸಂತೋಷ್, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ. ಶಾಂತರಾಜು ಸೇರಿದಂತೆ ಹಲವರು ಇದ್ದರು.
ಕರ್ನಾಟಕ, ಗೋವಾ, ಕೇರಳ ಮತ್ತು ಲಕ್ಷ ದ್ವೀಪ ಸೇರಿದಂತೆ ನಾಲ್ಕು ರಾಜ್ಯಗಳ 38 ಜಿಲ್ಲೆಗಳ ಕಾರ್ಯವ್ಯಾಪ್ತಿಗೆ ಒಳಪಡಲಿರುವ ರ್ಯಾಪಿಡ್ ಆಕ್ಷನ್ ಫೋರ್ಸ್ ಕೇಂದ್ರ ತಾಲೂಕಿನ ಬುಳ್ಳಾಪುರದಲ್ಲಿ ಮಂಜೂರಾಗಿದೆ. ಇದಕ್ಕಾಗಿ 50 ಎಕರೆ ಭೂಮಿಯೂ ಸಹ ಮಂಜೂರಾಗಿದೆ.
ರಾಜ್ಯದ ಹಾಗೂ ಜಿಲ್ಲೆಯ ರಕ್ಷಣೆಗೆ ಸಂಬಂಧಿಸಿದಂತೆ ಅಗತ್ಯ ತುರ್ತು ಸಂದರ್ಭಗಳಲ್ಲಿ ಬೇರೆ ರಾಜ್ಯಗಳಿಂದ ಆರ್’ಎಎಫ್ ಸಿಬ್ಬಂದಿಗಳನ್ನು ಕರೆಸಿಕೊಳ್ಳುವ ಅನಿವಾರ್ಯತೆ ಉಂಟಾಗುತ್ತಿತ್ತು. ಆದರೆ ಇದೀಗ ರಾಜ್ಯದಲ್ಲಿಯೇ ಕಾರ್ಯಾರಂಭ ಮಾಡುವುದರಿಂದ ಹೆಚ್ಚಿನ ಅನುಕೂಲವಾಗಲಿದೆ.
ಆರ್’ಎಎಫ್ ಕಾರ್ಯಾರಂಭಗೊಂಡಲ್ಲಿ ಸುಮಾರು ಒಂದೂವರೆ ಸಾವಿರ ಕುಟುಂಬಗಳು ಈ ಭಾಗದಲ್ಲಿ ನೆಲೆ ನಿಲ್ಲಲಿವೆ. ಇದರಿಂದ ನಗರದ ಆರ್ಥಿಕ ಮಟ್ಟ ಸುಧಾರಣೆಯಾಗಲಿದೆ. ಸಿಬ್ಬಂದಿಗಳಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಸಂಬಂಧ ಜಿಲ್ಲಾಡಳಿತ, ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆಗಳು ಮುಂದಾಗಲಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post