ಕಲ್ಪ ಮೀಡಿಯಾ ಹೌಸ್ | ಉತ್ತರ ಕನ್ನಡ |
ಭಾರೀ ಭೂಕುಸಿತದಿಂದ ಪ್ರಾಣಹಾನಿ, ಆಸ್ತಿ ಹಾನಿ ಸಂಭವಿಸಿದ್ದ ಉತ್ತರ ಕನ್ನಡದಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ಕರ್ನಾಟಕ ಹಾಗೂ ಗೋವಾ ರಾಜ್ಯಗಳನ್ನು ಸಂಪರ್ಕಿಸುತ್ತಿದ್ದ ಕಾಳಿ ಸೇತುವೆ #Kali Bridge ನಿನ್ನೆ ತಡರಾತ್ರಿ ಕುಸಿದು ಬಿದ್ದಿದೆ.
ಕಾರವಾರದಲ್ಲಿದ್ದ ಅಂದಾಜು 200 ಮೀಟರ್ ಉದ್ದದ ಕಾಳಿ ನದಿಯ ಮೇಲೆ ರಾಷ್ಟ್ರೀಯ ಹೆದ್ದಾರಿ 66ರ #National Highway 66 ಮೇಲೆ ಸೇತುವೆ ನಿನ್ನೆ ರಾತ್ರಿ ಕುಸಿದುಬಿದ್ದಿದ್ದು, ಈ ಮೂಲಕ ಕರ್ನಾಟಕ ಹಾಗೂ ಗೋವಾ ನಡುವಿನ ಪ್ರಮುಖ ಸಂಪರ್ಕ ಕಡಿತಗೊಂಡಿದೆ.
ಲಾರಿ ಚಾಲಕನ ರಕ್ಷಣೆ
ಸೇತುವೆ ಕುಸಿದ ವೇಳೆ ಅದರ ಮೇಲೆ ಚಲಿಸುತ್ತಿದ್ದ ಲಾರಿಯೊಂದು ನದಿಯಲ್ಲಿ ಮುಳುಗಿದ್ದು, ಇದರಲ್ಲಿದ್ದ ಚಾಲಕನನ್ನು ಪವಾಡ ಸದೃಶ ರೀತಿಯಲ್ಲಿ ರಕ್ಷಣೆ ಮಾಡಲಾಗಿದೆ.
ಸ್ಥಳಕ್ಕೆ ಬಂದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಲಾರಿ ಚಾಲಕನನ್ನು ರಕ್ಷಿಸಿದ್ದಾರೆ. ಲಾರಿ ಚಾಲಕ ತಮಿಳುನಾಡು ಮೂಲದ ಬಾಲ ಮುರುಗನ್ ಎಂದು ತಿಳಿದುಬಂದಿದೆ.
ನದಿಯಲ್ಲಿ ಇನ್ನೂ ಹೆಚ್ಚಿನ ವಾಹನ ಇರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ರಾಜ್ಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ ನದಿಯಲ್ಲಿ ಕಾರ್ಯಾಚರಣೆಗೆ ಇಳಿದಿದ್ದಾರೆ. ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.
42 ವರ್ಷದ ಹಳೆಯ ಸೇತುವೆ
ಇನ್ನು, ಕುಸಿದಿರುವ ಸೇತುವೆಯನ್ನು 1983ರಲ್ಲಿ ಕಾಳಿ ನದಿಯ ಮೇಲೆ ನಿರ್ಮಿಸಲಾಗಿತ್ತು. ಕರ್ನಾಟಕ ಹಾಗೂ ಗೋವಾ ರಾಜ್ಯದ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿತ್ತು. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇದ್ದ 2 ಸೇತುವೆಗಳ ಪೈಕಿ ಹಳೆಯ ಸೇತುವೆ ಕುಸಿದು ಬಿದ್ದಿದೆ. ಸದ್ಯ ಹೊಸ ಸೇತುವೆಯ ಮೇಲಿಂದಲೂ ವಾಹನ ಸಂಚಾರ ಸ್ಥಗಿತಗೊಂಡಿದೆ.
ಶಾಸಕ ಸತೀಶ್ ಸೈಲ್, ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ, ಎಸ್’ಪಿ ಎಂ. ನಾರಾಯಣ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post