ಕಲ್ಪ ಮೀಡಿಯಾ ಹೌಸ್ | ಮೈಸೂರು |
ಏಳನೇ ವಯಸ್ಸಿನಲ್ಲೇ ಶ್ಲೋಕ ಪಠಣದಲ್ಲಿ ವಿಶ್ವದಾಖಲೆ ನಿರ್ಮಿಸಿದ ಪೃಥು ಪಿ. ಅದ್ವೈತ್ ಅವರಿಗೆ ಮೂಕಾಂಬಿಕಾ ಸಮೃದ್ಧಿ ಬಡಾವಣೆ ನಿವಾಸಿಗಳ ಹಿತರಕ್ಷಣಾ ಸಮಿತಿ ವತಿಯಿಂದ `ಬಾಲಸ್ತೋತ್ರ ಕಲಾರತ್ನ’ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.
ಬಡಾವಣೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ವಲಯ ಉಪಾಧ್ಯಕ್ಷರಾದ ನಂ. ಶ್ರೀಕಂಠಕುಮಾರ್ ಅವರು ಪೃಥುವಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಪೃಥು ಅದ್ವೈತ್ ಅವರು ಏಳನೇ ವಯಸ್ಸಿನಲ್ಲೇ ಇಂತಹ ವಿಶ್ವದಾಖಲೆ ನಿರ್ಮಿಸಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ವಿಶ್ವದಾಖಲೆ ಎಂದರೆ ನಾವು ಇದುವರೆಗೂ ಕೇಳಿದ್ದು ಮತ್ತು ನೋಡಿದ್ದು ವಿಶೇಷವಾದ ವಿಚಾರಗಳಿಗಷ್ಟೆ. ಆದರೆ ನಮ್ಮ ಸನಾತನ ಧರ್ಮದ ಮೂಲದ ವಿಚಾರಗಳಾದ ಸ್ತೋತ್ರಪಠಣದಲ್ಲಿ ವಿಶ್ವದಾಖಲೆ ನಿರ್ಮಿಸಿರುವುದು ನಿಜಕ್ಕೂ ಶ್ಲಾಘನೀಯ ಸಾಧನೆಯಗಿದೆ ಎಂದರು.
ಪೃಥುವಿನ ಈ ಸಾಧನೆ ಅವರ ಕುಟುಂಬ, ಬಡಾವಣೆ ಅಥವಾ ಮೈಸೂರಿಗೆ ಮಾತ್ರವಲ್ಲ ಸಮಸ್ತ ಹಿಂದೂ ಧರ್ಮಕ್ಕೆ ಹೆಮ್ಮೆ ಪಡುವ ವಿಷಯ ಎಂದು ತಿಳಿಸಿದರು.
ಆದರ್ಶ ಸೇವಾ ಸಂಘದ ಅಧ್ಯಕ್ಷ ಜಿ.ಆರ್. ನಾಗರಾಜ್ ಮಾತನಾಡಿ, ಅವರು ಪೃಥುವಿನ ವೇದ ಆಸಕ್ತಿ ಗಮನಿಸಿ ಅವನಿಗೆ ಕಳೆದ ವರ್ಷವೇ ಆದರ್ಶ ಬಾಲ ಪ್ರತಿಭಾರತ್ನ ಪ್ರಶಸ್ತಿ ನೀಡಲಾಗಿತ್ತು. ಅವನು ಈ ವಿಶ್ವದಾಖಲೆ ನಿರ್ಮಿಸಿರುವುದನ್ನು ಗಮನಿಸಿ ಸ್ವತಃ ಪೇಜಾವರ ಶ್ರೀಗಳೇ ದೂರವಾಣಿ ಮೂಲಕ ಅವನನ್ನುಅಭಿನಂದಿಸಿದ್ದಾರೆ ಎಂದರೆ ಈ ರೀತಿಯ ವಿಶ್ವದಾಖಲೆಗಳ ಮಹತ್ವವೇ ಬೇರೆ. ಮಕ್ಕಳ ಆಸಕ್ತಿ ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಕೆಲಸವನ್ನು ಪೋಷಕರು ಮಾಡಬೇಕು ಹಾಗಾದರೆ ಮಾತ್ರ ಯಶಸ್ಸು ಸಾಧ್ಯ ಎಂದು ತಿಳಿಸಿದರು.
ಸಮಿತಿಯ ನಿರ್ದೇಶಕರಾದ ಪಿ.ಟಿ. ಮಹೇಶಪ್ಪ ಮಾತನಾಡಿ, ಸಮಿತಿಯು ಇದುವರೆಗೂ ಮಾಡಿರುವ ಕೆಲಸಗಳನ್ನು ಸಭೆಗೆ ವಿವರಿಸಿದರು.
ಕಾರ್ಯದರ್ಶಿ ನಾಗಭೂಷಣಾಚಾರಿ ಮಾತನಾಡಿ, ಪೃಥು ತನ್ನ ಏಳನೇ ವಯಸ್ಸಿನಲ್ಲಿ ಇದೂವರೆಗೂ ಮಾಡಿರುವ ಸಾಧನೆಗಳಾದ ಅಂತಾರಾಷ್ಟ್ರೀಯ ಪರೀಕ್ಷೆಗಳಲ್ಲಿ ಆತ ಸತತವಾಗಿ ಶಾಲೆಗೆ ಪಡೆಯುತ್ತಿರುವ ಮೊದಲನೇ ರ‍್ಯಾಂಕ್, ಸ್ಟೈಲಿ ಕಿಡ್ ಅವಾರ್ಡ್, ಸೂಪರ್ ಡ್ಯಾನ್ಸ್ ಶೋಗಳ ಬಗ್ಗೆ ವಿವರಿಸಿದರು.
ಸಮಿತಿಯ ಉಪಾಧ್ಯಕ್ಷರಾದ ರಾಮಕೃಷ್ಣ ಮಾತನಾಡಿ, ನಮ್ಮ ಬಡಾವಣೆಯ ಮಗುವೊಂದು ಇಷ್ಟು ಸಾಧನೆ ಮಾಡಿರುವುದು ನಮಗೆಲ್ಲ ಸಂತೋಷ ತಂದಿದೆ. ಆದ್ದರಿಂದ ನಾವೆಲ್ಲ ಸಮಿತಿಯವರು ಸೇರಿ ಪೃಥುವನ್ನು ಅಭಿನಂದಿಸಬೇಕೆಂದು ತೀರ್ಮಾನಿಸಿದಾಗ ನಮ್ಮ ಕಾರ್ಯದರ್ಶಿಗಳಾದ ನಾಗಭೂಷಣಾಚಾರಿ ಪೃಥುವಿಗೆ ಬಾಲಸ್ತೋತ್ರ ಕಲಾರತ್ನ ಎಂಬ ಬಿರುದನ್ನು ಸಹ ಸೂಚಿಸಿದರು ಎಂದು ತಿಳಿಸಿದರು.
ಕೇಂದ್ರ ರೇಷ್ಮೆ ಮಂಡಳಿಯ ನಿರ್ದೇಶಕರು ಹಾಗೂ ವಿಜ್ಞಾನಿಗಳಾದ ಗಾಂಧಿದಾಸ್, ಮೂಕಾಂಬಿಕ ಸಮೃದ್ಧಿ ಬಡಾವಣೆಯ ನಿವಾಸಿಗಳ ಸಂಘದ ಅಧ್ಯಕ್ಷರಾದ ಕೆ.ಆರ್. ಗಣೇಶ್, ಉಪಾಧ್ಯಕ್ಷ ರಾಮಕೃಷ್ಣ, ಕಾರ್ಯದರ್ಶಿ ನಾಗಭೂಷಣಾಚಾರಿ ಭಾರತಮಾತೆಗೆ ಪುಷ್ಫಾರ್ಚನೆ ಮಾಡಿದರು.
ಮೂಕಾಂಬಿಕ ಸಮೃದ್ದಿ ಬಡಾವಣೆಯ ನಿವಾಸಿಗಳು ಹಾಗೂ ಸದಸ್ಯರು, ಆದರ್ಶ ಸೇವಾ ಸಂಘದ ಸದಸ್ಯರು, ಕೇಂದ್ರ ರೇಷ್ಮೇ ಮಂಡಳಿ ನೌಕರರು, ವಿಶ್ವ ಹಿಂದೂ ಪರಿಷತ್, ಶಾರದಾ ದೇವಿ ನಗರ ಬ್ರಾಹ್ಮಣ ಸಂಘ, ಶ್ರೀರಾಂಪುರ ಬ್ರಾಹ್ಮಣ ಸಂಘ, ಸಮಾಜ ಸೇವಕಿ ಕಮಲಾ ನಟರಾಜನ್, ಆರ್.ಜೆ. ಅವಿನಾಶ್ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಪೃಥುವಿಗೆ ಅಭಿನಂದನೆ ಸಲ್ಲಿಸಿದರು.
ಶುಭಾ ಅರುಣ್ ಮತ್ತು ತಂಡದವರು ಪ್ರಾರ್ಥಿಸಿ, ಖಜಾಂಚಿ ರಮೇಶ್ ಚಂದ್ರ ವಂದನಾರ್ಪಣೆ ಮಾಡಿದರು.
ಪೃಥು ಪಿ. ಅದ್ವೈತ್ ಕುರಿತಾಗಿ…
ಮೈಸೂರಿನ ಶ್ರೀರಾಂಪುರ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಮೂಕಾಂಬಿಕ ಸಮೃದ್ಧಿ ಬಡಾವಣೆಯ ನಿವಾಸಿಗಳಾದ ಪುನೀತ್ ಜಿ. ಕೂಡ್ಲೂರು ಹಾಗೂ ಪೂಜಾ ದಂಪತಿಗಳ ಪುತ್ರ ಪೃಥು ಪಿ. ಅದ್ವೈತ್ ಅವರು ಪೂರ್ಣಚೇತನ ಪಬ್ಲಿಕ್ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿದ್ದಾನೆ.
ಶಾಲೆಯಲ್ಲಿ ನಡೆದ ವಿಶ್ವದಾಖಲೆ ಮಹೋತ್ಸವ-2024 ರಲ್ಲಿ ಭಾಗವಹಿಸಿ ಮೂವತ್ತು ನಿಮಿಷದಲ್ಲಿ ನೂರೈವತ್ತು ಶ್ಲೋಕಗಳನ್ನು ಪಠಿಸಿ ಮೂರು ವಿಶ್ವದಾಖಲೆಗಳನ್ನು ಏಕಕಾಲದಲ್ಲಿ ನಿರ್ಮಿಸಿದ್ದಾನೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post