ಕಲ್ಪ ಮೀಡಿಯಾ ಹೌಸ್
ಶಿರಸಿ: ನನ್ನ ಅಪ್ಪನಿಗೆ ತಲೆ ಮೇಲೆ ಹೊಡೆದು ಸಾಯ್ಸಿದ್ದಾರೆ… ರಕ್ತ ನೋಡಿ ಈ ಕಿಟ್‌ನಲ್ಲಿ… ಕೊರೋನಾ ಬಂದು ಸತ್ತಿದ್ದರೆ ತಲೆಯಲ್ಲಿ ರಕ್ತ ಹೇಗೆ ಬರ್ತದೆ…’- ಸ್ಮಶಾನದಲ್ಲಿ ಸೋಂಕಿತ ವೃದ್ಧರೊಬ್ಬರ ಶವದ ಅಂತ್ಯ ಸಂಸ್ಕಾರಕ್ಕೆ ಬಂದವರು ಮಾಡಿ ಹರಿಬಿಟ್ಟಿರುವ ವಿಡಿಯೋದಲ್ಲಿ ಈ ರೀತಿಯ ಮಾತುಗಳು ಕೇಳಿಬರುತ್ತವೆ. ಇದರ ಜೊತೆಗೆ, ಇದು ಶಿರಸಿ ಸಾರ್ವಜನಿಕ ಆಸ್ಪತ್ರೆಯಲ್ಲಾದ ಘಟನೆ ಎಂದು ಕೂಡ ಹೇಳಿರುವುದು ಇಡೀ ಜಿಲ್ಲೆಯ ಜನತೆಯನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.
ದೇಶ, ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆಯ ರೌದ್ರಾವತಾರ ಶುರುವಾಗಿದೆ. ಪ್ರತಿದಿನ ದೇಶದಲ್ಲಿ ಮೂರು ಸಾವಿರಕ್ಕೂ ಅಧಿಕ ಸೋಂಕಿತರು ಸಾವನ್ನಪ್ಪುತ್ತಿದ್ದು, ರಾಜ್ಯದಲ್ಲಿ ಈ ಸಂಖ್ಯೆ ಸಾವಿರ ಮೀರಿದೆ. ಇನ್ನು ಜಿಲ್ಲೆಯಲ್ಲಿ ಕೂಡ ದಿನಕ್ಕೆ 200ರಷ್ಟು ಪ್ರಕರಣಗಳು ಪತ್ತೆಯಾಗುತ್ತಿದ್ದರೂ ಕೇವಲ ಒಬ್ಬರು, ಇಬ್ಬರ ಸಾವುಗಳು ಉಂಟಾಗುತ್ತಿವೆ. ಈ ನಡುವೆ ಶಿರಸಿಯ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ತಲೆಯ ಮೇಲೆ ಹೊಡೆದು ಸಾಯಿಸಿ, ಬಳಿಕ ಸೋಂಕಿತನೆಂದು ಕಿಟ್‌ನಲ್ಲಿ ತುಂಬಿ ಕಳುಹಿಸಿಕೊಟ್ಟಿರುವುದಾಗಿ ವೈರಲ್ ಆಗಿರುವ ವಿಡಿಯೋದಿಂದಾಗಿ ಜನತೆ ಇನ್ನಷ್ಟು ಭಯಭೀತರಾಗಿದ್ದಾರೆ. ಆಸ್ಪತ್ರೆ, ವೈದ್ಯರುಗಳ ಮೇಲೆ ಅನುಮಾನ ಮೂಡುವಂತೆ ಮಾಡಿದೆ. ಹಾಗಿದ್ದರೆ ಅಸಲಿಗೆ ಈ ವಿಡಿಯೋದಲ್ಲಿ ಹೇಳಿದಂತೆ ನಡೆದಿರುವುದು ನಿಜವೇ? ಮುಂದೆ ಓದಿ…
ವೈರಲ್ ವಿಡಿಯೋ ಪ್ರಕಾರ ನಡೆದಿದ್ದೇನು?
ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಪ್ರಕಾರ, ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ಸೋಂಕಿತರ ವೃದ್ಧರೊಬ್ಬರು ದಾಖಲು ಮಾಡಲಾಗಿದೆ. ಈ ವೇಳೆ ಅವರು ಮೃತಪಟ್ಟಿದ್ದಾರೆ. ಕೊರೋನಾದಿಂದಾಗಿ ಸೋಂಕಿತ ಮೃತಪಟ್ಟಿದ್ದಾರೆಂದು ಹೇಳಿ, ಕಿಟ್‌ನಲ್ಲಿ ಮೃತದೇಹವನ್ನು ತುಂಬಿ ಕುಟುಂಬಸ್ಥರಿಗೆ ನೀಡಿದ್ದಾರೆ. ಈ ನಡುವೆ ಕಿಟ್ ತೆರೆಯದಂತೆಯೂ ಹೇಳಿದ್ದಾರೆ. ಇನ್ನು ಕುಟುಂಬಸ್ಥರು ಪಿಪಿಇ ಕಿಟ್ ಧರಿಸಿ ಮೃತದೇಹವನ್ನು ಸ್ಮಶಾನಕ್ಕೆ ತಂದಿದ್ದಾರೆ. ಈ ವೇಳೆ ತಲೆಯ ಭಾಗದಿಂದ ರಕ್ತ ಸುರಿಯುತ್ತಿದ್ದುದನ್ನು ಮೃತನ ಪುತ್ರ, ಕುಟುಂಬಸ್ಥರು ನೋಡಿದ್ದು, ವೈದ್ಯರುಗಳೇ ತಲೆಯ ಮೇಲೆ ಹೊಡೆದು ಸಾಯಿಸಿ, ಬಳಿಕ ಅದು ಗೊತ್ತಾಗಬಾರದೆಂದು ಕೊರೋನಾದಿಂದಾಗಿ ಸತ್ತಿರುವುದಾಗಿ ಹೇಳಿ, ಕಿಟ್‌ನಲ್ಲಿ ತುಂಬಿ ಕೊಟ್ಟಿದ್ದಾರೆ. ಅಲ್ಲದೇ ತಲೆಯ ಮೇಲೆ ಹೊಡೆದಿದ್ದು ಗೊತ್ತಾಗುತ್ತದೆಂದು ಕಿಟ್ ತೆರೆಯದಂತೆ ಆಸ್ಪತ್ರೆಯವರು ಹೇಳಿ ಕಳುಹಿಸಿದ್ದಾರೆನ್ನುವುದು ವಿಡಿಯೋ ನೋಡಿದವರಿಗೆ ಅರ್ಥವಾಗುವ ವಿಷಯ.
ಆಸ್ಪತ್ರೆ ಅವರ ಹೇಳಿದ್ದು ಏನು ??
ಶಿರಸಿ ಪಂಡಿತ್ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಗಜಾನನ್ ಭಟ್ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡಿದೆ. ಮೊದಲಿಗೆ ಘಟನೆಯ ಕುರಿತು ಅವರಿಗೆ ವಿಷಯ ತಿಳಿದಿರಲಿಲ್ಲ. ಹೀಗಾಗಿ ವಿಡಿಯೋ ಕಳುಹಿಸಿದ ಬಳಿಕ ಅದನ್ನು ನೋಡಿ, ಇತರ ವೈದ್ಯರುಗಳೊಂದಿಗೆ ಸಂಪೂರ್ಣ ಮಾಹಿತಿ ಪಡೆದು ಘಟನೆಯ ಕುರಿತು ಸ್ಪಷ್ಟನೆ ನೀಡಿದ್ದಾರೆ.
‘ಮೊದಲಿಗೆ ವಿಡಿಯೋದಲ್ಲಿ ಹೇಳಿದಂತೆ ವೈದ್ಯರುಗಳು ಹೊಡೆದು ತಲೆಯಿಂದ ರಕ್ತ ಸುರಿಯುತ್ತಿರುವುದಲ್ಲ. ನಮ್ಮ ವೈದ್ಯರುಗಳು ಹಗಲಿರುಳು ಸೋಂಕಿತರ ಸೇವೆಗೆ ಶ್ರಮಿಸುತ್ತಿದ್ದಾರೆ. ಮಾನವೀಯ ನೆಲೆಗಟ್ಟಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಈ ರೀತಿ ನಮ್ಮ ಯಾವ ವೈದ್ಯರೂ ಮಾಡುವುದಿಲ್ಲ’ ಎಂದು ಡಾ.ಗಜಾನನ್ ಭಟ್ ತಿಳಿಸಿದ್ದಾರೆ.‘ನಿನ್ನೆ (ಏ.27) ಮಧ್ಯಾಹ್ನ ನಡೆದ ಘಟನೆಯಿದು. ಅಂದು ನಾನಿರಲಿಲ್ಲ. ಇತರ ಕೋವಿಡ್ ಚಿಕಿತ್ಸೆಗೆ ನಿಯೋಜಿತ ವೈದ್ಯರು ವೃದ್ಧರಿಗೆ ಚಿಕಿತ್ಸೆ ನೀಡುತ್ತಿದ್ದರು. ವೈದ್ಧ ಶಿರಸಿ ತಾಲೂಕಿನ ಅಮಿನಳ್ಳಿ ಭಾಗದವರಾಗಿದ್ದು, 70- 72 ವರ್ಷ ವಯಸ್ಸಾಗಿದೆ. ಅವರು ಫೀವರ್ ಕ್ಲಿನಿಕ್‌ಗೆ ಬರುವಾಗ ಶೇ.70ರಷ್ಟು ಸ್ಯಾಚುರೇಶನ್ ಇತ್ತು. ಆ ಸಂದರ್ಭದಲ್ಲಿ ಆಂಟಿಜೆನ್ ರ‍್ಯಾಪಿಡ್ ಪರೀಕ್ಷೆಗೊಳಪಡಿಸಿದ್ದು, ಸೋಂಕು ಇರುವುದಾಗಿ ದೃಢಪಟ್ಟಿದೆ. ಬಳಿಕ ಆಸ್ಪತ್ರೆಯ ವಾರ್ಡ್ ಗೆ ದಾಖಲಿಸಿಕೊಳ್ಳಲಾಗಿದೆ’ ಎಂದು ಅವರು ವಿವರಿಸಿದರು.
‘ವೃದ್ಧನಿಗೆ ರೆಮ್‌ಡಿಸಿವಿರ್ ಕೊಡಲಾಗಿದೆ. ಆಕ್ಸಿಜನ್ ಅನ್ನು ಕೂಡ ನೀಡಲಾಗುತ್ತಿತ್ತು. ಕೋವಿಡ್ ಸೋಂಕಿತರಿಗೆ ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟುವುದರಿಂದ, ಆ ರೀತಿ ಆಗದಂತೆ ತಡೆಯಲು ಅವರಿಗೆ ಹಿಪೆರಿನ್ ಇಂಜೆಕ್ಷನ್ ನೀಡಲಾಗಿದೆ. ಇಂಜೆಕ್ಷನ್ ಪಡೆದ ಬಳಿಕ ಅವರು ಮೂತ್ರ ಮಾಡಿ ಬರುತ್ತೇನೆಂದು ಶೌಚಾಲಯಕ್ಕೆ ಹೊರಟಿದ್ದಾರೆ. ಅಲ್ಲಿದ್ದ ನರ್ಸ್’ಗಳು ಬೇರೆ ಸೋಂಕಿತರಿಗೆ ಇಂಜೆಕ್ಷನ್‌ಗಳನ್ನು ಕೊಡಲು ಹೋದಾಗ ಶೌಚಕ್ಕೆ ತೆರಳಿದ್ದ ಸೋಂಕಿತ ವೃದ್ಧ ಕುಸಿದಿದ್ದಾರೆ (ಕೊಲ್ಯಾಪ್ಸ್). ಆ ವೇಳೆಯಲ್ಲಿ ತಕ್ಷಣ ಅವರನ್ನು ಎತ್ತುಕೊಂಡು ಬಂದು ಮರುಜೀವ ಕೊಡಲು ಪ್ರಯತ್ನಿಸಿದ್ದಾರೆ. ಆದರೆ ಅವರು ಬದುಕುಳಿಯಲಿಲ್ಲ. ಕೋವಿಡ್ ಸೋಂಕಿತರಾಗಿದ್ದರಿಂದ ಅವರು ಸೋಂಕಿನಿಂದ ಮೃತಪಟ್ಟಿದ್ದಾರೆಂದು ಘೋಷಿಸಲಾಗಿದೆ’ ಎಂದು ತಿಳಿಸಿದ್ದಾರೆ.‘ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಹಿಪೆರಿನ್ ಕೊಟ್ಟಿದ್ದರಿಂದ, ಅಂಬ್ಯುಲೆನ್ಸ್ನಲ್ಲಿ ಮೃತದೇಹವನ್ನು ಕೊಂಡೊಯ್ಯುವಾಗ ಜಂಪ್‌ಗಳಿಂದಾಗಿ ತಲೆಯಿಂದ ರಕ್ತ ಸುರಿದಿದೆ ಹೊರತು ಬೇರಾವ ಕಾರಣಗಳಿಂದಲ್ಲ. ಹಿಪೆರಿನ್‌ನ ಪ್ರಭಾವ ಆರು ತಾಸುಗಳಷ್ಟು ಇರುತ್ತದೆ. ವೃದ್ಧ ಬಿದ್ದಾಗ ತಲೆಯಲ್ಲಿ ಚಿಕ್ಕ ಗಾಯವೊಂದು ಆಗಿದೆ. ಆದರೆ ಅವರು ಮೃತಪಟ್ಟಿದ್ದು ಆ ಗಾಯದಿಂದಲ್ಲ, ಬದಲಾಗಿ ಸೋಂಕಿನ ಪ್ರಭಾವದಿಂದಾಗಿ. ಹಿಪೆರಿನ್ ನೀಡಿದ್ದರಿಂದ ಅವರ ತಲೆ ಗಾಯದಲ್ಲಿ ರಕ್ತ ಹೆಪ್ಪುಗಟ್ಟದೇ ಒಂದೇ ಸಮನೆ ಸುರಿದಿದೆ’ ಎಂದು ಸ್ಪಷ್ಟನೆ ನೀಡಿದ್ದಾರೆ.
‘ಅವರು ಸೋಂಕಿನ ತೀವ್ರತರ ಪ್ರಭಾವದಿಂದಾಗಿ ಕುಸಿದು ಮೃತಪಟ್ಟಿದ್ದಾರೆ ಹೊರತು, ತಲೆ ಗಾಯವಾಗಿರುವುದರಿಂದಲ್ಲ. ಈ ಬಗ್ಗೆ ಅವರ ಕುಟುಂಬಕ್ಕೂ ತಿಳಿಸಲಾಗಿದೆ. ಆದರೆ ಅವರಿಗೆ ವೈದ್ಯರು ಹೇಳಿರುವುದು ಅರ್ಥವಾಗಿರಲಿಲ್ಲ ಎಂದು ಕಾಣಿಸುತ್ತದೆ. ಆಕ್ಸಿಜನ್ ಕೊಡುತ್ತೇವೆಂದು ಹೇಳಿದಾಗ ಅವರು ಮೂತ್ರಕ್ಕೆ ಹೋಗಿ ಬರುವುದಾಗಿ ತಿಳಿಸಿದ್ದಾರೆ. ಒಮ್ಮೆ ಆಕ್ಸಿಜನ್ ಹಾಕಿದರೆ ಅದು ಶೇ 90ರಷ್ಟು ಮೇಲಕ್ಕೆ ಬರುವ ತನಕ ತೆಗೆಯಲಾಗುವುದಿಲ್ಲ. ಈ ಕಾರಣದಿಂದ ಅದಕ್ಕೂ ಮುನ್ನವೇ ಹೊಗಿಬರುವುದಾಗಿ ವೃದ್ಧ ಮೂತ್ರಕ್ಕೆ ಹೋಗಿದ್ದಾರೆ. ಇನ್ನು ಅವರು ವಯಸ್ಸಾಗಿದವರಾಗಿದ್ದರಿಂದ ಹಾಗೂ ಗ್ರಾಮೀಣ ಭಾಗದವರಾಗಿರುವ ಕಾರಣ ಅವರಿಗೆ ಮೂತ್ರಕ್ಕೆ ಪಾತ್ರೆ ಕೊಟ್ಟರೂ ಮಾಡಲು ಬರದ ಕಾರಣ ಅವರೇ ಶೌಚಕ್ಕೆ ತೆರಳಿದ್ದರು’ ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post