ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ವಾಲ್ಮೀಕಿ ರಾಮಾಯಣದ ಒಂದು ಪಾತ್ರವಾಗಿಯೇ ಇದ್ದು ಅದನ್ನು ರಚಿಸಿದ. ರಾಮಾಯಣದ ಸನ್ನಿವೇಶ, ಘಟನೆ, ಪಾತ್ರಗಳ ಸಮಕಾಲೀನನಾಗಿದ್ದು ಅದೆಲ್ಲವನ್ನು ನೋಡಿ, ಆದರ್ಶವನ್ನೇ ತನ್ನ ಕಾವ್ಯದರ್ಶನವನ್ನಾಗಿ ವಾಲ್ಮೀಕಿ ರಾಮಾಯಣದಲ್ಲಿ ಒಡಮೂಡಿಸಿದ್ದಾನೆ. ರಾಮಾಯಣ ಒಟ್ಟಾರೆ ವಾಲ್ಮೀಕಿ ಎನ್ನುವ ಪರ್ವತದಿಂದ ಹರಿಯ ಬಂದಿರುವ ಪವಿತ್ರಪುಣ್ಯನದಿ.
ವಲ್ಮೀಕದಿಂದ,ಹುತ್ತದಿಂದ ಹೊರಬಂದು ಋಷಿಮುನಿಯಾಗಿ ರಾಮಾಯಣದಂತಹ ಅಭೂತಪೂರ್ವ ಕೃತಿಯನ್ನು ಜಗತ್ತಿಗೆ ನೀಡಿ, ಸೂರ್ಯಚಂದ್ರರಿರುವರೆಗೂ ಅಮರ ತಪಸ್ವಿಯಾಗುಳಿದವರೇ ವಾಲ್ಮೀಕಿ. ತಪಸ್ಸು ಮುಗಿಸಿ ಬಂದಾಗ ನಾರದರ ದರ್ಶನವಾಯ್ತು. ಅವರಲ್ಲಿ ವಾಲ್ಮೀಕಿ ಒಂದು ಪ್ರಶ್ನೆ ಕೇಳುತ್ತಾರೆ. ‘‘ಕೋನ್ವಸ್ಮಿನ್ ಸಾಂಪ್ರತಂ ಲೋಕೇ’’ ಎನ್ನುತ್ತಲೇ ಜಗತ್ತಿನ ಅತ್ಯಂತ ಶ್ರೇಷ್ಠ ಹದಿನಾರು ದಿವ್ಯಗುಣಗಳು ಏಕಕಾಲದಲ್ಲಿ ಇರುವ ಮಹಾಪುರುಷರು ಯಾರಾದರೂ ಇದ್ದಾರೆಯೇ ಎಂಬುದೇ ಆ ಪ್ರಶ್ನೆ. ಶ್ರೀ ರಾಮಚಂದ್ರನೇ ಆ ಗುಣ ಶ್ರೇಷ್ಠ ಎಂದು ನಾರದರಿಂದ ಉತ್ತರ ದೊರಕಿತು.
ನಾರದರಿಂದ ಬೀಳ್ಕೊಂಡ ವಾಲ್ಮೀಕಿ ಸ್ನಾನಕ್ಕೆ ತಮಸಾ ನದಿ ತೀರಕ್ಕೆ ಬರುತ್ತಾನೆ. ದಡದಲ್ಲಿದ್ದ ಮರದ ಮೇಲೆ ಪರಸ್ಪರ ವಿಹರಿಸುತ್ತಿದ್ದ ಗಂಡು ಹೆಣ್ಣು ಕ್ರೌಂಚಪಕ್ಷಿಯನ್ನು ನೋಡಿದ. ಅಷ್ಟರಲ್ಲಿ ಬೇಡನೊಬ್ಬ ಬಿಟ್ಟ ಬಾಣಕ್ಕೆ ಗಂಡು ಪಕ್ಷಿ ಉರುಳಿ ಪ್ರಾಣ ಬಿಟ್ಟಿತು, ಹೆಣ್ಣು ರೋದಿಸುತ್ತಿವುರುವುದನ್ನು ಕಂಡು ಕರುಣೆಯಿಂದ ಕೋಪಬಂದು ಬೇಡನಿಗೆ ಶಾಪ ನೀಡಿದ. ಆ ಶಾಪ ಮಾನಿಷಾದ ಪ್ರತಿಷ್ಠಾಂ ಎಂಬ ಶ್ಲೋಕವಾಗಿ ಪರಿಣಮಿಸಿತು. ಬ್ರಹ್ಮನ ದರ್ಶನವಾಗಿ ಬ್ರಹ್ಮ ‘‘ಈ ಶ್ಲೋಕದ ದಾಟಿಯಲ್ಲಿಯೇ ರಾಮಾಯಣ ರಚಿಸು, ಭೂಮಿಯ ಮೇಲೆ ಬೆಟ್ಟ ನದಿಗಳಿರುವವರೆಗೂ ರಾಮಾಯಣ ಪ್ರಚಲಿತವಿರುತ್ತದೆ’’ ಎಂಬ ಆದೇಶ ನೀಡಿದ.
ವಾಲ್ಮೀಕಿಯು ನಿಜವಾದ ತಪಸ್ಸಿಗೆ ಕುಳಿತು ರಚಿಸಿದ ರಾಮಾಯಣದಲ್ಲಿ 24000 ಶ್ಲೋಕಗಳಿವೆ. ರಾಮಾಯಣವನ್ನು ಕಾವ್ಯವಾಗಿ, ಪ್ರವಚನರೂಪದಲ್ಲಿ ಅದ್ಭುತವಾಗಿ ಆಸ್ವಾದಿಸಬೇಕಾದರೆ ಅದು ಎಂತಹವರು ತುಂಬಿದ ಸಭೆಯಾಗಿರಬೇಕು ಎಂಬುದನ್ನು ವಾಲ್ಮೀಕಿಯೇ ತಿಳಿಸುತ್ತಾರೆ. ವೇದಪುರಾಣ ಬಲ್ಲವರು, ಶಬ್ದವಿದ್ದರು, ಸಂಗೀತಕಲಾಕೋವಿದರು, ಛಂದೋವಿದರು, ಭಾಷಾಸಾಹಿತ್ಯ, ಜ್ಯೋತಿಷ್ಯ, ಚಿತ್ರ ನಾಟ್ಯ ಶಾಸ್ತ್ರ ಬಲ್ಲವರು, ಶಾಸ್ತ್ರ ತರ್ಕ, ನೀತಿ, ಧರ್ಮ ಬಲ್ಲವರು, ವೇದಾಂತಾರ್ಥ ಪ್ರಬೋಧಕರೂ ಆದವರು ಇದ್ದರೆ ರಾಮಾಯಣವನ್ನು ಅಪೂರ್ವವಾಗಿ ರಸಾಸ್ವದನೆ ಮಾಡಬಹುದು ಎಂದು ಸೂಚಿಸುತ್ತಾರೆ.
ರಾಮಾಯಣ ಗಾಯತ್ರಿ ಅರ್ಥದ ವಿಸ್ತಾರವೇ ಆಗಿದೆ. ಗಾಯತ್ರಿ ಮಂತ್ರದ 24 ಅಕ್ಷರಗಳೇ 24,000 ಶ್ಲೋಕವಾಗಿ ರಾಮಾಯಣದಲ್ಲಿ ಪಲ್ಲವವಾಗಿದೆ. ರಾಮಾಯಣದಲ್ಲಿ ಸೀತಾ ಪರಿತ್ಯಾಗದ ಸಂದರ್ಭದಲ್ಲಿ ರಾಮಚಂದ್ರ ಲಕ್ಷ್ಮಣನನ್ನು ಕರೆದು ಸೀತೆಯನ್ನು ವಾಲ್ಮೀಕಿಯ ಆಶ್ರಮದ ಬಳಿಯೇ ಬಿಟ್ಟು ಬಾ ಎನ್ನುತ್ತಾನೆ, ಏಕೆಂದರೆ ರಾಮಚಂದ್ರನಿಗೆ ವಾಲ್ಮೀಕಿಯ ಬಗ್ಗೆ ವಿಶಿಷ್ಟ ಗೌರವ, ಪೂಜ್ಯತೆ, ಭರವಸೆಗಳಿದ್ದವು. ಗರ್ಭಿಣಿಯಾಗಿದ್ದ ಸೀತೆ ಲವಕುಶರನ್ನು ಹಡೆದದ್ದು ಪಡೆದದ್ದು ವಾಲ್ಮೀಕಿಗಳ ಆಶ್ರಮದಲ್ಲಿಯೇ. ಅವರಿಗೆ ಗುರುಕುಲ ಸಂಸ್ಕಾರ ನೀಡಿ ವಾಲ್ಮೀಕಿ ಸುಸಂಸ್ಕೃತರನ್ನಾಗಿ ಬೆಳೆಸುತ್ತಾರೆ, ರಾಮಾಯಣ ರಚನೆ ಪೂರ್ಣವಾದಾಗ, ಅದನ್ನು ಮೊಟ್ಟಮೊದಲು ಲವಕುಶರಿಗೇ ಅನುಗ್ರಹಿಸಲು ವಾಲ್ಮೀಕಿ ನಿರ್ಧರಿಸುತ್ತಾನೆ. ಅದಕ್ಕೆ ಮುನ್ನ ಅವರ ಪ್ರತಿಭೆ, ವಿದ್ವತ್ತು ಸಾಮರ್ಥ್ಯ ಯೋಗ್ಯತೆಯನ್ನು ಪರೀಕ್ಷಿಸುತ್ತಾನೆ. ಲವಕುಶರಿಗೆ ಪ್ರಚಂಡ ಮೇಧಾಶಕ್ತಿಯಿತ್ತು. ವೇದಾರ್ಥ ನಿರೂಪಣಾ ಸಾಮರ್ಥ್ಯವಿತ್ತು. ಸಂಗೀತ ವಿದ್ಯೆಯ ಮರ್ಮ ಗೊತ್ತಿತ್ತು. ಆಧ್ಯಾತ್ಮವಿದ್ಯೆಯ ಧರ್ಮ ಗೊತ್ತಿತ್ತು. ಇಬ್ಬರ ಶಾರೀರ ಸಮನ್ವಯ ಅತ್ಯಂತ ಹೊಂದಿ ಕೊಂಡಿತ್ತು. ಮೃದುಮಧುರವಾಗಿ ಮಧುಮಧುರವಾಗಿ ದೇವಗಾಂಧಾರದಲ್ಲಿ ಹಾಡುವ ಇಂಪು ಅವರಿಗಿತ್ತು. ಎಲ್ಲಕ್ಕೂ ಮಿಗಿಲಾಗಿ ಅವರು ಅತ್ಯಂತ ರೂಪಸಂಪನ್ನರಾಗಿದ್ದರು. ಇಡೀ ರಾಮಾಯಣ ಅವರಿಬ್ಬರಿಗೂ ವಾಚೋವಿಧೇಯವಾಗಿತ್ತು. ಹಾಡಿನೊಡನೆ ವೀಣಾಗಾನ ಮಾಡುತ್ತಾ ಅಗತ್ಯಬಿದ್ದರೆ ಪ್ರವಚನವನ್ನು ಮಾಡಬಲ್ಲವರಾಗಿದ್ದರು.
ರಾಮಾಯಣದ ಸಂಪೂರ್ಣ ಅನುಗ್ರಹವನ್ನು ಅವರಿಗೆ ಮಾಡಿಸಿದ ವಾಲ್ಮೀಕಿ ಕಾಡಿನ ಋಷಿಮುನಿ ವಿದ್ವಾಂಸರುಗಳನ್ನು ಆಹ್ವಾನಿಸಿ ಅವರೆದುರಿಗೆ ಪ್ರಥಮ ಪ್ರಯೋಗವನ್ನು ಲವಕುಶರಿಂದ ಮಾಡಿಸಿದರು. ಅಲ್ಲಿದ್ದ ಮಹಾನುಭಾವರನ್ನೆಲ್ಲಾ ತಮ್ಮ ಅಮೋಘ ಪ್ರಸ್ತುತಿಯಿಂದ ರಾಮಾಯಣ ಪಾರಾಯಣರನ್ನಾಗಿ ಲವಕುಶರು ಮಾಡುವಲ್ಲಿ ಯಶಸ್ವಿಯಾದರು. ಅವರೆದುರೇ ನಡೆಯಿತೇನೋ ಎನ್ನುವಂತೆ ಬಣ್ಣಿಸಿದರು. ಕಾಡಿನ ಆ ಋಷಿಗಳು ಲವಕುಶರಿಗೆ ಕೌಪೀನ, ಗುದ್ದಲಿ, ಹಗ್ಗ ಸೆನಿಕೆ, ಕಮಂಡಲ, ನಾರುಮಡಿ, ಸಮಿತ್ತು, ಚಾಪೆ, ಯಜ್ಞೋಪವೀಸ, ಕೃಷ್ಣಾಜಿನ, ಜಪಮಾಲೆ, ಮುಂತಾದವನ್ನು ಬಹುಮಾನ ನೀಡಿದರು.
ಇದೊಂದು ವಿಸ್ಮಯ, ಅದ್ಭುತ ಮಹಾಕಾವ್ಯ ಎಂದು ಕೆಲವರೆಂದರೆ, ಮತ್ತೆ ಕೆಲವರು ‘‘ಮುಂದೆ ಬರಲಿರುವ ಅನೇಕ ಕವಿಗಳಿಗೆ ಇದು ಜೀವನಾಧಾರವಾಗುತ್ತದೆ’’ ಎಂದರು. ಹಾಗೆಯೇ ಇಂದು ಲಕ್ಷಲಕ್ಷ ಜನರಿಗೆ ರಾಮಾಯಣ, ನಾಟಕ, ಚಲನಚಿತ್ರ, ಧಾರವಾಹಿ, ಕಥೆ ಕಾದಂಬರಿ, ಚಿತ್ರಕಲೆ, ಸಂಗೀತ, ಶಿಲ್ಪಕಲೆ ಮುಂತಾದ ಪ್ರಕಾರದಲ್ಲಿ ರಾಮಾಯಣವನ್ನು ತೊಡಗಿಸಿಕೊಂಡು ಅದರಿಂದ ಬದುಕನ್ನು ಕಟ್ಟಿಕೊಂಡಿದ್ದಾರೆ. ಭಾರತದಲ್ಲಿ ಹಾಗೂ ಜಗತ್ತಿನ ನಾನಾ ದೇಶಗಳಲ್ಲಿ ಇಂದಿಗೂ ರಾಮನವಮಿ, ರಾಮಕಥಾ, ರಾಮಸಂಗೀತ ವ್ಯಾಪಕವಾಗಿ ಆಚರಣೆಯಲ್ಲಿದೆ.
ವಾಲ್ಮೀಕಿ ಚಿತ್ರಿಸಿದ ರಾಮಾಯಣ ಇಕ್ಷ್ವಾಕ್ಷುವಂಶದ ದೊರೆಗಳ ಸಾಧನೆ, ತ್ಯಾಗ, ಶೌರ್ಯ, ಧರ್ಮಶ್ರದ್ಧೆ, ದೈವಭಕ್ತಿ, ಸತ್ಯ, ನ್ಯಾಯ, ಪ್ರಜಾಸಂರಕ್ಷಣೆಗಳನ್ನು ಮೌಲ್ಯಗಳನ್ನು ಮಾಡಿಕೊಂಡು ಬದುಕಿದ ಕಥೆಯನ್ನು ನಿರೂಪಿಸುತ್ತದೆ. ವಾಲ್ಮೀಕಿ ಚಿತ್ರಿಸಿದ ರಾಮಚಂದ್ರ ಪುರುಷೋತ್ತಮನಾದ, ಆದರ್ಶ ದೊರೆಯಾದ, ಧರ್ಮವೇ ಬಂಧಮೋಕ್ಷಕ್ಕೆ ದಾರಿ ಎಂದು ತೋರಿಸಿ ಪಿತೃವಾಕ್ಯಪರಿಪಾಲನೆಗಾಗಿ ವನವಾಸಕ್ಕೂ ಸಿದ್ಧನಾದ ಲಕ್ಷ್ಮಣಭರತರು ಭ್ರಾತೃಪ್ರೇಮದ ಮಹತ್ವವನ್ನು ಮೆರೆದರು. ಕೌಸಲ್ಯೆ ಮಾತೃಹೃದಯಿಯಾದ ಮಮತಾಮಾಯಿ ಹೇಗಿರಬೇಕೆಂದು ತೋರಿಸಿದರು. ಸೀತೆ ನಾರೀಕುಲಕ್ಕೆ ಆದರ್ಶವಾದರು, ಹನುಮಂತ ರಾಮಭಕ್ತನಾಗಿ ಸೇವೆ ಮಾಡುವ ಪರಿಯನ್ನು ನೋಡಿ ದೇವತೆಗಳು ಮೂಕವಿಸ್ಮಿತರಾದರು. ಅಯೋಧ್ಯೆಯ ಪ್ರಜೆಗಳು ಧೈರ್ಯ ಆದರ್ಶಮೌಲ್ಯಗಳಿಂದ ಸಾರ್ಥಕ ಜೀವನ ನಡೆಸಿದರು.
ವಾಲ್ಮೀಕಿ ರಾಮಾಯಣದ ಒಂದು ಪಾತ್ರವಾಗಿಯೇ ಇದ್ದು ಅದನ್ನು ರಚಿಸಿದ. ರಾಮಾಯಣದ ಸನ್ನಿವೇಶ, ಘಟನೆ, ಪಾತ್ರಗಳ ಸಮಕಾಲೀನನಾಗಿದ್ದು ಅದೆಲ್ಲವನ್ನು ನೋಡಿ, ಆದರ್ಶವನ್ನೇ ತನ್ನ ಕಾವ್ಯದರ್ಶನವನ್ನಾಗಿ ವಾಲ್ಮೀಕಿ ರಾಮಾಯಣದಲ್ಲಿ ಒಡಮೂಡಿಸಿದ್ದಾನೆ. ಜಟಾಯು, ಶಬರಿ, ಗುಹ, ಇಂತಹ ಪಾತ್ರಗಳೂ ಮಹಾಪಾತ್ರಗಳಾಗಿ ಮೆರೆದಿರುವುದು ವಾಲ್ಮೀಕಿಯ ದಿವ್ಯಸಂಪನ್ನತೆಯಿಂದಾಗಿ. ರಾಮಾಯಣ ಒಟ್ಟಾರೆ ವಾಲ್ಮೀಕಿ ಎನ್ನುವ ಪರ್ವತದಿಂದ ಹರಿಯ ಬಂದಿರುವ ಪವಿತ್ರಪುಣ್ಯನದಿ.
ವಾಲ್ಮೀಕಿಯು ರಾಮಾಯಣವನ್ನು ಲವಕುಶರಿಗೆ ಹೇಳಿಕೊಟ್ಟಾಯಿತು. ಜಗತ್ತಿನೆಲ್ಲೆಡೆ ಅವರು ಅದನ್ನು ಪ್ರಸರಿಸುವ ಮುಂಚೆ, ರಾಮಚಂದ್ರನಿಗೆ ಅದನ್ನು ಕೇಳಿಸಬೇಕು ಎನ್ನಿಸಿತ್ತು ವಾಲ್ಮೀಕಿಗೆ.
ಆಗ ರಾಮಚಂದ್ರ ನೈಮಿಷಾರಣ್ಯದ ಗೋಮತಿ ನದಿ ತೀರದಲ್ಲಿ ತನ್ನ ಆಳ್ವಿಕೆಯ ಕಡೆಯ ಅಶ್ವಮೇಧಯಾಗ ಮಾಡುತ್ತಿದ್ದ. ದೇಶದ ನಾನಾ ಭಾಗಗಳಿಂದ, ನಾನಾ ಅರಣ್ಯ ತಪೋ ಪ್ರದೇಶಗಳಿಂದ ಜನ ತಂಡೋಪತಂಡವಾಗಿ ಆ ಯಾಗಕ್ಕೆ ಬಂದಿದ್ದರು. ಶಿಷ್ಯನನ್ನು, ಲವಕುಶರನ್ನು ಕರೆದುಕೊಂಡು ವಾಲ್ಮೀಕಿಗಳು ಅಲ್ಲಿಗೆ ಬಂದರು. ರಾಮನ ಗಮನ ಸೆಳೆಯಲು ವಾಲ್ಮೀಕಿಗಳು ಲವಕುಶರಿಗೆ ಒಂದು ಉಪಾಯ ಹೇಳಿಕೊಟ್ಟರು. ರಾಮಚಂದ್ರನ ಆಪ್ತರ ಬಿಡಾರಗಳ, ಯಾಜ್ಞಿಕರ ಬಿಡಾರದ ಮುಂದೆ, ಅವರ ಬಿಡುವಿನ ವೇಳೆಯಲ್ಲಿ ರಾಮಾಯಣ ಹಾಡಿ ಎಂದು, ಯಾರಿಂದಲೂ ಏನೂ ಪಡೆಯ ಕೂಡದು ಅದಕ್ಕಾಗಿ ಎಂದೂ ಸೂಚಿಸಿದರು. ಹಾಗೆಯೇ ನಡೆದು ಅವರೆಲ್ಲ ರಾಮನಿಗೆ ಒತ್ತಾಯಿಸಿ, ಕಡೆಗೆ ಮಕ್ಕಳಿಗೆ ಸಭೆಯಲ್ಲಿ ಹಾಡಲು ಅವಕಾಶ ದೊರೆಯಿತು.
ಸಭೆಯಲ್ಲಿ ನೆರೆದಿದ್ದ ಜನತೆಗೆ ರಾಮನನ್ನೇ ಹೋಲುವ ಇಬ್ಬರು ಮಕ್ಕಳನ್ನು ನೋಡಿ ಕೌತುಕ. ಕೆಲವರಂತೂ ಬಿಂಬಪ್ರತಿಬಿಂಬಗಳಂತಿದ್ದಾರಲ್ಲ ಏನಾಶ್ಚರ್ಯ ಎಂದು ಮಾತನ್ನು ಆಡಿಕೊಂಡರು. ಆದರೆ ಆ ಹುಡುಗರು ಹಾಡುತ್ತಿದ್ದಂತೆ ಭಕ್ತಿ ಲೋಕದ ಅದ್ಭುತಗಳಿಂದ ತಮ್ಮ ಗಾಯನದಿಂದ ಎಲ್ಲರನ್ನೂ ಮೈಮರೆಸಿದರು. ಎಲ್ಲ ಶ್ರೋತೃಗಳು ರಾಮಾಯಣದ ಧನ್ಯತೆಯಲ್ಲಿ ಮುಳುಗಿ ಕಣ್ಣೀರಿನಲ್ಲಿ ಬಗೆ ತೊಳೆಯುತ್ತಿರುವಾಗ, ನೆಲದ ಮೇಲೆ ಕುಳಿತೇ ಅವರೆಲ್ಲಾ ಆ ದಿವ್ಯಾನಂದ ಸವಿಯುತ್ತಿರುವಾಗ, ತಾನೊಬ್ಬ ಮಾತ್ರ ಚಕ್ರವರ್ತಿಯಂತೆ ಸಿಂಹಾಸನದ ಮೇಲೆ ಕುಳಿತು ರಾಮಾಯಣ ಕೇಳುವುದು ಸರಿಯಲ್ಲ ಎನಿಸಿತು. ಸಭಾಸದರೆಲ್ಲಾ ರಾಮಾಯಣ ಕೇಳುತ್ತಾ ಕಣ್ಣುಮುಚ್ಚಿದ್ದಾಗ, ರಾಮ ಶಬ್ದವಾಗದಂತೆ ಸಿಂಹಾಸನದಿಂದ ಇಳಿದು ಬಂದು, ತಾನೂ ನೆಲದ ಮೇಲೆ ಕುಳಿತು ರಾಮಾಯಣವನ್ನು ಸವಿಯುತ್ತಾನೆ.
ಗಾಯನ ಮುಗಿದೊಡನೆಯೇ ಎಲ್ಲರೂ ಕಣ್ಣು ಬಿಟ್ಟಾಗ ರಾಜನೇ ಕಾಣುತ್ತಿಲ್ಲ. ವ್ಯಾಪಕ ಹುಡುಕಾಟದನಂತರ ವಸಿಷ್ಠರು, ಜನರ ಮಧ್ಯೆ ಕಣ್ಣೀರು ಹಾಕುತ್ತಿದ್ದ ರಾಮನನ್ನು ಕಂಡು ಓಡಿಬಂದು, ರಾಮ, ಚಕ್ರವರ್ತಿ ನೆಲದ ಮೇಲೆ ಕೂಡ ಬಾರದು. ನೀನು ಇಲ್ಲಿಗೇಕೆ ಬಂದೆ ಎಂದಾಗ ರಾಮಚಂದ್ರ ಕಣ್ಣೀರು ಒರೆಸಿಕೊಂಡು ಹೇಳಿದ. ‘‘ಈ ರಾಮಾಯಣ ಸಾಧಾರಣದ್ದಲ್ಲ. ಇದು ‘‘ಭೂತಿಕರಂ ಮಮಾಪಿ’’ ಇದು ನನ್ನನ್ನೂ ಪವಿತ್ರಗೊಳಿಸಿಬಿಟ್ಟಿದೆ. ಇದನ್ನು ಸಿಂಹಾಸನದಲ್ಲಿ ರಾಜಭಾವದಿಂದ ಕೇಳುವುದಲ್ಲ, ಭಕ್ತನಾಗಿ ನೆಲದ ಮೇಲೆ ಕುಳಿತು ಅದರಲ್ಲೇ ಮುಳುಗಿ ಸವಿಯಬೇಕು’’ ಎಂದ. ಲವ ಕುಶರನ್ನು ಪ್ರಭು ನೀವು ಯಾರು ಎಂದಾಗ, ಅವರು ನಾವು ವಾಲ್ಮೀಕಿ ಋಷಿಗಳ ಶಿಷ್ಯರು. ಈ ರಾಮಾಯಣವನ್ನು ಅವರೇ ರಚಿಸಿದ್ದಾರೆ’’ ಎಂದಾಗ ರಾಮ ಎದ್ದು ನಿಂತು ಧನ್ಯತಾ ಭಾವದಿಂದ ಕೈಮುಗಿದು ವಾಲ್ಮೀಕಿಗೆ ತನ್ನ ದಿವ್ಯಗೌರವವನ್ನು ಸಮರ್ಪಿಸಿದ’’.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post