ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ವಿಶ್ವದಲ್ಲಿ ಅಶಾಂತಿ ತಲೆದೋರಿದಾಗ, ಸಮಾಜದಲ್ಲಿ ಅಜ್ಞಾನ ಅಂಧಕಾರವು ಆವರಿಸಿದಾಗ, ಸನಾತನ ಧರ್ಮದ ಸ್ವರೂಪವು ಅತಿಭಯಗ್ರಸ್ಥವಾಗಿರುವಾಗ, ಪರಮಾತ್ಮನು ಸಂತ, ಸದ್ಗುರು, ಸತ್ಪುರಷರ ರೂಪದಲ್ಲಿ ಜನ್ಮವೆತ್ತಿ ಲೋಕ ಕಲ್ಯಾಣ ಮಾಡುತ್ತಿರುವ ಕ್ರಮವು ಅನಾದಿಕಾಲದಿಂದಲೂ ನಡೆಯುತ್ತಾ ಬಂದಿರುವುದು. ಈ ಮಹಾತ್ಮರು ಯಾವ ಫಲಾಪೇಕ್ಷೆಯೂ ಇಲ್ಲದೇ ಪರೋಪಕಾರ ಮಾಡುತ್ತಿರುವುದು ಅವಿಸ್ಮರಣೀಯ. ಜನರ ದುಃಖಗಳನ್ನು ನಿವಾರಿಸಿ, ಎಲ್ಲರ ಜೀವನವನ್ನೂ ಸುಖಮಯಗೊಳಿಸುವುದೇ ಈ ಮಹಾತ್ಮರು ಜನ್ಮತಾಳುವುದರ ಉದ್ದೇಶ. ಇಂತಹ ಮಹಾತ್ಮರಲ್ಲಿ ಶ್ರೀಮತ್ ಪರಮಹಂಸ ಪರಿವ್ರಾಜಕಾಚಾರ್ಯ ಭಗವಾನ್ ಶ್ರೀ ಶ್ರೀಧರಸ್ವಾಮಿಗಳವರು ಶ್ರೀದತ್ತ ಅವತಾರಿಗಳೆಂದೇ ಪ್ರಸಿದ್ಧರಾಗಿರುವರು.
ಜನನ- ಬಾಲ್ಯ
ಮಹಾರಾಷ್ಟ್ರದ ನಾಂದೇಡ ಜಿಲ್ಲೆಯ ದೇಗುಲೂರಿನಲ್ಲಿ ‘ಪತಕೀ’ ಎಂಬ ಮನೆತನವಿತ್ತು. ಈ ಕುಲದಲ್ಲಿ ನಾರಾಯಣ ರಾಯರು ಮತ್ತು ಕಮಲಾಬಾಯಿಯರೆಂಬ ಆದರ್ಶ ದಂಪತಿಗಳಿದ್ದರು. ಇವರೇ ಶ್ರೀ ಶ್ರೀಧರಸ್ವಾಮಿಗಳನ್ನು ಪುತ್ರರೂಪದಿಂದ ಪಡೆದ ಭಾಗ್ಯವಂತರು. ಕೀಲಕನಾಮ ಸಂವತ್ಸರದ ಮಾರ್ಗಶಿರ ಶುದ್ಧ ಪೌರ್ಣಿಮೆ ಸೋಮವಾರ ದಿನಾಂಕ 7.12.1908ರಂದು ಚಿಂಚೋಳಿಯಲ್ಲಿ ಶ್ರೀ ದತ್ತಜಯಂತಿ ಉತ್ಸವ ಪ್ರಾರಂಭವಾಯಿತು. ಶ್ರೀದತ್ತ ಜನನದ ವೇಳೆಯಲ್ಲಿಯೇ ಸಾಕ್ಷಾತ್ ಪರಬ್ರಹ್ಮ ಸ್ವರೂಪಿ ಶ್ರೀ ಶ್ರೀಧರರು ಜನ್ಮತಾಳಿದರು. “ನಿತ್ಯಮೇವ ಮೋಕ್ಷ ಶ್ರೀಯಂ ಧರತೀತಿ ಶ್ರೀಧರಃ”, ಯಾವಾಗಲೂ ಮೋಕ್ಷಶ್ರೀಯನ್ನು ಧರಿಸುವವನೇ ಶ್ರೀಧರನೆಂದು ಈ ಅನ್ವರ್ಥವಾದ ಹೆಸರು ತಂದೆತಾಯಿಯವರಿಂದ ಇಡಲ್ಪಟ್ಟಿತು.
ಶ್ರೀ ಶ್ರೀಧರರಿಗೆ ಬಾಲ್ಯದಲ್ಲಿಯೇ ಹರಿಕಥೆ, ಕೀರ್ತನೆ, ಸತ್ಸಂಗ, ಪುರಾಣ, ಪ್ರವಚನಗಳಲ್ಲಿ ತುಂಬಾ ಅಭಿರುಚಿಯೂ ಮತ್ತು ಸನಾತನ ಧರ್ಮದಲ್ಲಿ ಅಚಲವಾದ ಶ್ರದ್ಧಾಭಕ್ತಿಯೂ ಇದ್ಧಿತು. ಶ್ರೀಗಳವರು ತಮ್ಮ ತಂದೆ, ತಾಯಿ, ಭ್ರಾತೃವರ್ಗದವರೆಲ್ಲರನ್ನೂ ಬಾಲ್ಯದಲ್ಲಿಯೇ ಕಳೆದುಕೊಂಡರು. ಇದರಿಂದಾಗಿ ಧೃತಿಗೆಡಲಿಲ್ಲ. ಇವರಿಗೆ ತಮ್ಮಲ್ಲಿನ ಅಪಾರವಾದ ಆಧ್ಯಾತ್ಮಿಕ ಸಾಮಥ್ರ್ಯದ ಅರಿವು ಇತ್ತು. ಪರಬ್ರಹ್ಮ ಸ್ವರೂಪಿ ಆತ್ಮ ವಿನಾಶಿ ಎಂಬ ಅಂಶ ಇವರಲ್ಲಿ ಬಾಲ್ಯದಿಂದಲೇ ಜಾಗೃತವಾಗಿದ್ದಿತು.
ವಿದ್ಯಾರ್ಥಿ ಜೀವನ
ಹೈದರಾಬಾದಿನ ‘ವಿವೇಕ ವರ್ಧಿನಿ’ ಶಾಲೆಯಲ್ಲೂ, ನಂತರ ಗುಲ್ಬರ್ಗಾದಲ್ಲೂ ತಮ್ಮ ಬಾಲ್ಯ ವಿದ್ಯಾಭ್ಯಾಸವನ್ನು ಮಾಡಿದರು. ಪ್ರೌಢ ವಿದ್ಯಾಭ್ಯಾಸಕ್ಕಾಗಿ ಪುಣೆಗೆ ಬಂದರು. ಇಲ್ಲಿಯ ಒಂದು ಅನಾಥಶ್ರಮದಲ್ಲಿದ್ದು ನಿತ್ಯವೂ ಭಿಕ್ಷಾನ್ನ ಮಾಡಿಕೊಂಡು ‘ಭಾವೆ’ ಪಾಠಾಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರಿಸಿದರು. ಶ್ರೀಧರರಿಗೆ ದಿನದಿಂದ ದಿನಕ್ಕೆ ಈ ಲೌಕಿಕ ವಿದ್ಯೆಯಲ್ಲಿ ಜಿಗುಪ್ಸೆಯೂ ಆಧ್ಯಾತ್ಮ ವಿದ್ಯೆಯಲ್ಲಿ ಅಭಿರುಚಿಯೂ ಹೆಚ್ಚುತ್ತಲಿತ್ತು. ಈ ನಶ್ವರ ವಿದ್ಯೆಯ ವೇಳೆಯನ್ನು ಶಾಶ್ವತವಾದ ಆಧ್ಯಾತ್ಮ ವಿದ್ಯೆಗಾಗಿ ವಿನಿಯೋಗಿಸಿದರೆ ಆದಷ್ಟು ಜಾಗ್ರತೆ ಆತ್ಮಸಾಕ್ಷಾತ್ಕಾರವಾಗಿ ಲೋಕದ ಉದ್ಧಾರಕ್ಕೂ ಪೂರ್ಣ ಸಾಮಥ್ರ್ಯ ಬರುವುದೆಂದು ನಿರ್ಧರಿಸಿ, ಕೇವಲ ಒಂದು ಕೌಪೀನ ಮಾತ್ರದ ಉಡುಪಿನಿಂದ ತಪಸ್ಸಿಗಾಗಿ ಶ್ರೀಕ್ಷೇತ್ರ ಸಜ್ಜನಗಡಕ್ಕೆ ಪ್ರಯಾಣ ಬೆಳೆಸಿದರು.
ಜ್ಞಾನಾರ್ಜನೆ
ಶ್ರೀಕ್ಷೇತ್ರ ಸಜ್ಜನಗಡವು ಸಮುದ್ರಮಟ್ಟದಿಂದ 2800 ಅಡಿ ಎತ್ತರವಿದ್ದು ಯಾವಾಗಲೂ ಸತತ ಗಾಳಿಯು ಬೀಸುತ್ತಾ ಹವೆಯು ಅತಿಶೀತಲವಾಗಿರುತ್ತೆ. ಶ್ರೀ ಸಮರ್ಥ ರಾಮದಾಸರು ಛತ್ರಪತಿ ಶಿವಾಜಿ ಮಹಾರಾಜರ ಗುರುಗಳು, ತಮ್ಮ ಅವತಾರ ಕಾರ್ಯ ಸಾರ್ಥಕ್ಯದಿಂದ ಶಕ 1903ನೇ ಮಾಘ ಬಹುಳ ನವಮಿಯಂದು ತಮ್ಮ ಲೀಲಾಮಾನುಷ ಶರೀರವನ್ನು ಸಜ್ಜನಗಡದಲ್ಲಿ ವಿಸರ್ಜಿಸಿ ಶ್ರೀರಾಮನಲ್ಲಿ ಐಕ್ಯವಾದರು.
ಸಜ್ಜನಗಡದಲ್ಲಿ ಶ್ರೀ ಶ್ರೀಧರರ ನಿಜ ಪಾರಮಾರ್ಥಿಕ ಜೀವನವು ಪ್ರಾರಂಭವಾಯಿತು. ಹದಿನೈದು ತಿಂಗಳ ಕಾಲ ಇಲ್ಲಿ ಅಖಂಢ ತಪಸ್ಸನ್ನಾಚರಿಸಿದರು. ಈ ತಪಸ್ಸಿಗೆ ಫಲವಾಗಿ ಶ್ರೀ ಶ್ರೀಧರರಿಗೆ ಶ್ರೀ ಸಮರ್ಥ ರಾಮದಾಸರು ದರ್ಶನ ನೀಡಿ ದಕ್ಷಿಣದ ಕಡೆಗೆ ಸಂಚಾರ ಮಾಡಿ ಸನಾತನ ಧರ್ಮವನ್ನು ಭೋದಿಸಿ ಜನತೆಯಲ್ಲಿ ಧರ್ಮಪ್ರವೃತ್ತಿಯನ್ನು ಜಾಗೃತಗೊಳಿಸಬೇಕೆಂದು ಅಪ್ಪಣೆ ಮಾಡಿದರು.
ಧರ್ಮಪ್ರಚಾರ
ಕ್ರಿ.ಶ. 1930ನೇ ಮಾಘ ಬಹಳ ದಾಸನವಮಿ ರಾತ್ರಿ 12 ಘಂಟೆಯ ನಂತರ ಶ್ರಿಧರರು ಗುರುವಿನ ಆಜ್ಞೆಯಂತೆ ದಕ್ಷಿಣದ ಕಡೆಗೆ ಹೋಗಿ ಭಕ್ತಿ, ಜ್ಞಾನ ಪ್ರಚಾರ ಮಾಡುವುದಕ್ಕಾಗಿ ಸಜ್ಜನಗಡವನ್ನು ಬಿಟ್ಟು ಹೊರಟರು. ಕೌಪೀನಧಾರಿಯಾದ ಶ್ರೀಧರರು ಕಾಲು ನಡಿಗೆಯಲ್ಲೇ ಊರಿಂದ ಊರಿಗೆ ಹೋಗಿ ಧರ್ಮಪ್ರಚಾರ ಕಾರ್ಯಕ್ರಮವನ್ನು ಮಾಡುತ್ತಾ ಗೋಕರ್ಣ ಮಹಾಬಲೇಶ್ವರನ ಸೇವೆ ಮಾಡಿ, ಸಿರಸಿ ತಾಲ್ಲೂಕಿನ ಶೀಗೆಹಳ್ಳಿಗೆ ಪ್ರಯಾಣ ಬೆಳೆಸಿದರು. ಶೀಗೆಹಳ್ಳಿಯಲ್ಲಿ ಯತಿಶ್ರೇಷ್ಠರಾದ ಶ್ರೀ ಶಿವಾನಂದಸ್ವಾಮಿಗಳ ಆಶ್ರಮ ಇದೆ. ಇಲ್ಲಿ ಸ್ವಲ್ಪ ದಿನವಿದ್ದು, ಚಂದ್ರಗುತ್ತಿ, ಕುಪ್ಪೆ ಮಾರ್ಗವಾಗಿ ಬನವಾಸಿಗೆ ಬಂದರು. ಬನವಾಸಿಯಲ್ಲಿ ಶ್ರೀ ಶಿವಾನಂದಸ್ವಾಮಿಗಳ ಶಿಷ್ಯೋತ್ತಮರಾದ ಶ್ರೀ ಶಂಕರಾನಂದರ ದರ್ಶನ ಪಡೆದರು. ಆನಂತರ ಶಕೆ 1864 (1942ನೇ ಇಸವಿ) ಚಿತ್ರಭಾನು ಸಂವತ್ಸರದ ವಿಜಯದಶಮಿಯಂದು ಶೀಗೆಹಳ್ಳಿಯಲ್ಲಿ ತುರ್ಯಾಶ್ರಮವನ್ನು ಹೊಂದಿದರು.
ಸನ್ಯಾಸ ದೀಕ್ಷೆಯ ನಂತರ ಅಖಿಲ ಮಾನವಕೋಟಿಯ ಉದ್ಧಾರ ಹಾಗೂ ಧರ್ಮಜಾಗೃತಿಗಾಗಿ ಭಗವಾನ್ ಶ್ರೀ ಶ್ರೀಧರಸ್ವಾಮಿಗಳವರು ಪ್ರವಾಸ ಮಾಡತೊಡಗಿದರು. ತಮ್ಮ ಪ್ರವಾಸದಲ್ಲಿ ಕಾಶಿ, ಬದರಿಕಾಶ್ರಮ, ಉತ್ತರಕಾಶಿ, ದ್ವಾರಕಾ, ಗಿರಿನಾರ್, ಹೋಷಂಗಾಬಾದ್, ಕನ್ಯಾಕುಮಾರಿ, ಮುಂಬಯಿ, ಪ್ರಯಾಗ, ಸಜ್ಜನಗಡ, ಅಯೋಧ್ಯೆ ಇತ್ಯಾದಿ ಅನೇಕ ಕಡೆ ಚಾತುರ್ಮಾಸ ಹಾಗೂ ವಾಸ್ತವ್ಯಗಳನ್ನು ಮಾಡಿದರು. ಶ್ರೀ ಶ್ರೀಧರರು ಸುಮಾರು ಎರಡು ಸಾವಿರಕ್ಕೂ ಮಿಗಿಲಾಗಿ ಸಂಸ್ಕøತ, ಹಿಂದಿ, ಮರಾಠಿಯಲ್ಲಿ ಶ್ಲೋಕಗಳನ್ನು ರಚಿಸಿರುತ್ತಾರೆ. ತಮ್ಮ ಅಮೋಘ ತಪಸ್ಸಾಧನೆಯೊಂದಿಗೆ ಶ್ರೀಧರರು ದತ್ತಕರುಣಾರ್ಣವ, ಪರಿವ್ರಾಜ ಮನನಂ, ಆರ್ಯ ಸಂಸ್ಕøತಿ, ಶ್ರೀರಾಮಪಾಠ, ಶ್ರೀಮದ್ಗೀತಾ ಮಹಾತ್ಮೆ, ಮೋಕ್ಷ ಸಂದೇಶ, ಉಜ್ವಲ ಸಂದೇಶ, ಭಕ್ತಿಸಾರ ರಾಮಾಯಣ, ಪ್ರವಚನ ಸುಧಾ, ದಿವ್ಯ ಸಂದೇಶ, ಮುಮುಕ್ಷು ಧರ್ಮ ಇವೇ ಮುಂತಾದ ಅಪೂರ್ವ ಗ್ರಂಥಗಳನ್ನು ರಚಿಸಿರುವುದು ಅವರ ಉದ್ಧಾಮ ಪಾಂಡಿತ್ಯ ಸಿರಿಯ ಪ್ರತೀಕವಾಗಿದೆ. ಹೀಗೆ ಸಂಚರಿಸುವಾಗ ಒಮ್ಮೆ ಸಾಗರದ ಸಮೀಪ ವರದಪುರಕ್ಕೆ ಶ್ರೀ ಶ್ರೀಧರರ ಆಗಮನವಾಯಿತು.
ವರದಪುರ- ಶ್ರೀಧರಾಶ್ರಮ
ಇಂದಿನ ವರದಪುರವು ಹಿಂದೆ ವದ್ದಳ್ಳಿಯಾಗಿತ್ತು. ಶಿವಮೊಗ್ಗ ಜಿಲ್ಲೆಯ ಸಾಗರದಿಂದ 6ಕಿ.ಮೀ. ದೂರದಲ್ಲಿದೆ. ಈ ಪರಿಸರವು ಸಹ್ಯಾದ್ರಿ ಪರ್ವತ ಶ್ರೇಣಿಯ ಒಂದು ಭಾಗವಾಗಿದ್ದು ಹಿಂದೆ ಮಹರ್ಷಿ ಅಗಸ್ತ್ಯ ಮತ್ತು ವ್ಯಾಸರ ಆಶ್ರಮ ಹಾಗೂ ಎಷ್ಟೋ ಸಿದ್ಧ, ಜ್ಞಾನಿ, ಮಹರ್ಷಿಗಳ ನೆಲೆಯ ಬೀಡಾಗಿದ್ದು ಒಂದು ಪುಣ್ಯ ಪಾವನ ಕ್ಷೇತ್ರವಾಗಿತ್ತು. ಇದಕ್ಕೆ ಸಾಕ್ಷೀಭೂತವಾಗಿ ವ್ಯಾಸರಿಂದ ಸ್ಥಾಪಿಸಲ್ಪಟ್ಟ ಶ್ರೀಜಗದಂಬ ಮಂದಿರ, ವ್ಯಾಸಗುಹೆ, ದೇವಿತೀರ್ಥ, ಅಗಸ್ತ್ಯತೀರ್ಥ ಮತ್ತು ಸನ್ಯಾಸೀ ಮಠದ ಅವಶೇಷವೂ ಇದೆ. ಈ ಹಾಳು ಬಿದ್ದಿರುವ ಕ್ಷೇತ್ರವನ್ನು ಊರ್ಜಿತಾವಸ್ಥೆಗೆ ತರಬೇಕೆಂದೂ ತಮ್ಮ ಗುರಿಯ ಸಾಧನೆಗಾಗಿ ಒಂದು ಆಶ್ರಮವನ್ನು ಸ್ಥಾಪಿಸಬೇಕೆಂದೂ ಇಚ್ಛೆಯುಂಟಾಯಿತು. ಅಂತೆಯೇ ದೇವಿ ದೇವಸ್ಥಾನದ ಹಿಂಬದಿ ಪಕ್ಕಕ್ಕಿರುವ ರಮ್ಯವಾದ ಪರ್ವತ ಶಿಖರದಲ್ಲಿ ಒಂದು ಕುಟೀರವನ್ನು ಕಟ್ಟಿಸಿ, ಇದಕ್ಕೆ “ಶ್ರೀಧರಾಶ್ರಮ” ಎಂದು ಶ್ರೀಗಳವರೇ ನಾಮಕರಣ ಮಾಡಿದರು.
ವಿಶ್ವಧರ್ಮದ ಉದ್ಧಾರದ ಪ್ರತೀಕವಾಗಿ ‘ಸತ್ಯಂ ವದ’, ‘ಧಮಂ ಚರ’ ಎಂಬ ಅಂಕಿತವುಳ್ಳ ಸುಮಾರು 30 ಅಡಿ ಎತ್ತರದ ಧರ್ಮಧ್ವಜವನ್ನು ಸ್ಥಾಪಿಸಿದರು. ಶ್ರೀಧರಾಶ್ರಮದ ಪರಿಸರವು ರಮಣೀಯವಾಗಿದ್ದರೂ ಕೊರತೆಯಾದ ನೀರಿನ ಅಭಾವವನ್ನರಿತು ಶ್ರೀಗಳವರು ಪರ್ವತದ ಮಧ್ಯಭಾಗದಲ್ಲಿ ಒಂದು ಉತ್ತಮ ಹಾಗೂ ಸ್ವಚ್ಛವಾದ ಜಲಪ್ರೋತವನ್ನೂ ಕಂಡುಹಿಡಿದು ತಮ್ಮ ತಪೋಬಲದಿಂದ ಅದರಲ್ಲಿ ಅಪಾರಶಕ್ತಿಯನ್ನೂ ತುಂಬಿದರು. ತೀರ್ಥಕುಂಡದಿಂದ ಮುಂದೆ ಸಾಗಿದರೆ ಶ್ರೀಧರತೀರ್ಥವು ಸುಮಾರು ಇಪ್ಪತ್ತು ಅಡಿ ಎತ್ತರದಿಂದ ಕೆಳಕ್ಕೆ ಧುಮುಕುತ್ತದೆ. ಸಾರ್ವಜನಿಕರು ಇಲ್ಲಿ ಸ್ನಾನ ಮಾಡುತ್ತಾರೆ. ಇದು ಗಂಗೆಯಂತೆ ಪವಿತ್ರ, ನಿರ್ಮಲವಾಗಿದ್ದು ಎಷ್ಟು ವರ್ಷಗಳಿದ್ದರೂ ಕೆಡುವುದಿಲ್ಲ. ಅನೇಕ ಚರ್ಮರೋಗಗಳಿಗೆ ಈ ತೀರ್ಥಸ್ನಾನ ಸಿದ್ಧೌಷದವಾಗಿದ್ದು ಅನೇಕ ರೋಗಗಳೂ, ಪಾಪಗಳೂ ಪರಿಹಾರವಾಗುತ್ತಿರುವುದು ನಿತ್ಯದೃಶ್ಯ.
ವರದಪುರದ ಗುಡ್ಡವು ಸಹ್ಯಾದ್ರಿ ಶ್ರೇಣಿಗೆ ಸೇರಿದ್ದು ಇಲ್ಲಿನ ಹೆಮ್ಮರಗಳು, ಜಲವಸತಿ ಇವೆಲ್ಲಾ ಅಪಾರ ಸಂತೋಷವನ್ನಿಯುತ್ತದೆ. ಇಲ್ಲಿನ ಪ್ರಕೃತಿಯ ಸೊಬಗನ್ನು ನೋಡಿ ಆನಂದಿಸುವವರು ಹಲವರು, ಭಕ್ತಿಯಿಂದ ಬಾಗಿ ಬರುವವರು ಮತ್ತಷ್ಟು ಜನ, ಹೀಗೆ ಸದಾ ದಿನನಿತ್ಯ ನೂರಾರು, ಉತ್ಸವ ಕಾಲದಲ್ಲಿ ಹತ್ತಾರು ಸಾವಿರ ಜನ ಬರುತ್ತಲೇ ಇರುತ್ತಾರೆ.
ಶ್ರೀ ಶ್ರೀಧರರು ವಿಶಾಲವಾದ ಗೋಶಾಲೆಯನ್ನು ನಿರ್ಮಿಸಿದರು. ಇಂದಿಗೂ ಅನೇಕ ದನಕರುಗಳಿವೆ. ಆಶ್ರಮಕ್ಕೆ ಬಂದು ಹೋಗುವ ಭಕ್ತಾದಿಗಳಿಗೆ ಊಟಕ್ಕೆ ಇಲ್ಲಿ ಇನ್ಯಾವ ಸೌಲಭ್ಯವೂ ಇಲ್ಲದಿರುವುದರಿಂದ, ಆಶ್ರಮದಿಂದಲೇ ಊಟದ ವ್ಯವಸ್ಥೆ ಏರ್ಪಡಿಸಿರುತ್ತಾರೆ. ಇಂದಿಗೂ ಇದೇ ರೀತಿ ನಡೆಯುತ್ತಿದೆ. ಶ್ರೀ ಶ್ರೀಧರ ಸಾಂಗವೇದ ವಿದ್ಯಾಲಯದಲ್ಲಿ ಸುಮಾರು 30-40 ವಟುಗಳು ಸಂಪ್ರದಾಯದಂತೆ ವೇದವಿದ್ಯಾಭ್ಯಾಸ ನಡೆಸುತ್ತಿದ್ದಾರೆ.
ಶ್ರೀಧರಾಶ್ರಮವನ್ನು ಸ್ಥಾಪಿಸಿದ ನಂತರ ಹೆಚ್ಚುಕಾಲ ವರದಪುರದಲ್ಲಿಯೇ ಕಳೆಯುತ್ತಿದ್ದರೂ ಬರಬರುತ್ತ ಏಕಾಂತದ ಇಚ್ಛೆ ಹೆಚ್ಚಾಗಿ, ಶ್ರೀಧರ ತೀರ್ಥರ ಮೇಲ್ಬಾಗದಲ್ಲಿ ನೂತನÀವಾಗಿ ಕಟ್ಟಿಸಿದ ಕುಟೀರದಲ್ಲಿ ಐದು ವರ್ಷದ ಏಕಾಂತವು ಪ್ರಾರಂಭವಾಯಿತು.
ಮಹಾಸಮಾಧಿ
ಚೈತ್ರ ಬಹುಳ ದ್ವಿತೀಯ ಗುರುವಾರ ದಿನಾಂಕ 19.4.1973ರಂದು ಪ್ರಾತಃಕಾಲ 9 ಗಂಟೆಗೆ ಗುಹಾಕುಟಿಯ ಹೊರ ಪಾಶ್ರ್ವದ ಕೊಠಡಿಯಲ್ಲಿ ಭಗವಾನ್ ಶ್ರೀಧರಯತಿವರ್ಯರು ಒಮ್ಮೆಲೆ ಪಾರ್ಥಿವ ಶರೀರ ತ್ಯಾಗಮಾಡಿ ಬ್ರಹ್ಮೈಕ್ಯರಾದರು.
ಶ್ರೀ ಶ್ರೀಧರ ಮಹಾಮಂಡಲದ ನೇತೃತ್ವದಲ್ಲಿ ಶ್ರೀಗಳವರ ಪಾರ್ಥಿವ ಶರೀರರವನ್ನು ದೇಹ ಬಿಟ್ಟ ಸ್ಥಳದಲ್ಲಿಯೋ ಯಥಾವಿಧಿ ಸಮಾಧಿ ಮಾಡಲಾಯಿತು. ಶ್ರೀಗಳವರ ಸಮಾಧಿ ಸ್ಥಳದಲ್ಲಿ ಶಿಲಾಮಯ ಮಂದಿರದ ನಿರ್ಮಾಣವಾಗಿ ಪ್ರಥಮ ವಾರ್ಷಿಕ ಆರಾಧನೆಯಂದು ಸಮಾಧಿದಲ್ಲಿ ಗುರುಮೂರ್ತಿ ಲಿಂಗ, ಪಾದುಕಾ ಸ್ಥಾಪನೆಯೂ ಆಯಿತು. ಶ್ರೀ ಸಮಾಧಿಗೆ ಪ್ರತಿನಿತ್ಯ ತ್ರಿಕಾಲದಲ್ಲಿ ರುದ್ರಾಭಿಷೇಕಯುಕ್ತವಾಗಿ ಪೂಜೆ ನಡೆಯುತ್ತವೆ. ಇದರಲ್ಲಿ ಮುಖ್ಯವಾದುವು ಶ್ರೀ ಶ್ರೀಧರ ಜಯಂತಿ, ಶ್ರೀ ಆರಾಧನೆ, ಶ್ರೀ ಗುರುಪೂರ್ಣಿಮೆ, ಮತ್ತು ವಿಜಯದಶಮಿ ಮಹೋತ್ಸವಗಳು ಪ್ರತಿದಿನ ಬರುವ ನೂರಾರು ಭಕ್ತರಿಗೆ ಅನ್ನ ಸಂತರ್ಪಣೆ ಎರ್ಪಾಡು ಇರುತ್ತದೆ. ಯಾತ್ರಿಕರಿಗಾಗಿ ವಿಶ್ರಾಂತಿ ಗೃಹವನ್ನೂ ಕಟ್ಟಲಾಗಿದೆ. ಒಂದು ಪುಸ್ತಕ ಭಂಡಾರವನ್ನು ಪ್ರಾರಂಭಿಸಲಾಗಿದೆ. ಆಶ್ರಮದ ಶಾಶ್ವತ ಕೆಲಸಗಳಿಗೆ ಶ್ರೀ ಗುರುವಿನ ಕೃಪಾಶೀರ್ವಾದ ಮತ್ತು ಶ್ರದ್ಧಾಳು ಭಕ್ತಾದಿಗಳ ತನು, ಮನ, ಧನ ಸೇವೆಯೇ ಆಶ್ರಮದ ಆಧಾರ ಅಥವಾ ಬಂಡವಾಳವಾಗಿದೆ.
ಓಂ ನಮಃ ಶಾಂತಾಯ ದಿವ್ಯಾಯ ಸತ್ಯಧರ್ಮ ಸ್ವರೂಪಿಣೇ
ಸ್ವಾನಂದಾಮೃತ ತೃಪಾಯ ಶ್ರೀಧರಾಯ ನಮೋನಮಃ
ಶ್ರೀಧರ ವಚನಾಮೃತ ಆಧ್ಯಾತ್ಮ ರಸಧಾರೆ
ಭಗವಾನ್ ಶ್ರೀಧರರು ಉಪನಿಷತ್ತಿನ ಏಕಾತ್ಮ ದೃಷ್ಟಿ. ಸ್ಥಾವರ ಜಂಗಮಾತ್ಮಕವಾದ ಬ್ರ್ರಹ್ಮಾಂಡವನ್ನೆಲ್ಲ ವ್ಯಾಪಿಸಿದ ಪರಮಚೈತನ್ಯ ಅಥವಾ ಪರಬ್ರಹ್ಮವೇ ಪರಮಾತ್ಮ. ತ್ರಿಮೂರ್ತಿಗಳೂ ಬಹುಸಂಖ್ಯೆಯ ದೇವಾನುದೇವತೆಗಳೂ ಲೋಕಹಿತಕ್ಕಾಗಿ ಸಂಭವಿಸಿದ ಪರಮಾತ್ಮನ ಅವಿರ್ಭಾವಗಳು. ಈ ವಿಶ್ವಾತ್ಮಕ ದೃಷ್ಟಿಯಿಂದಾಗಿ ಶ್ರೀಧರರು ವಿಭಿನ್ನ ದೈವಗಳನ್ನೂ ಮತಧರ್ಮಗಳನ್ನೂ ಗೌರವದಿಂದ ಸಮಭಾವದಿಂದ ಕಾಣುತ್ತಾರೆ. ಈ ಅನುಭಾವದಿಂದಲೇ ಅವರ ಎಲ್ಲ ಪ್ರವಚನಗಳು ಮೂಡಿಬಂದಿವೆ.
ಸಮಗ್ರ ಭಾರತದ ಹಿತವನ್ನು ಚಿಂತಿಸುತ್ತ ದೇಶದ ಉದ್ದಗಲಕ್ಕೆ ಸಂಚರಿಸುತ್ತ ಕರ್ನಾಟಕದ ಮಲೆನಾಡ ನೆಲದಲ್ಲಿ ನೆಲೆಸಿದ್ದ ಸಂತಶ್ರೇಷ್ಠರು ಭಗವಾನ್ ಶ್ರೀ ಶ್ರೀಧರಸ್ವಾಮಿ. ಭಾರತಕ್ಕೆ ಆಗ ತಾನೆ ಸ್ವಾತಂತ್ರ್ಯ ದೊರಕಿ ಸರ್ವಧರ್ಮ ಸಮಭಾವವನ್ನು (ಸೆಕ್ಯುಲರಿಸಂ) ಎತ್ತಿಹಿಡಿದ ನಾಡಾಗಿ ಅಡಿ ಇಡುತ್ತಿದ್ದ ಕಾಲ. ವೈಯುಕ್ತಿಕವಾಗಿ ಮತ್ತು ಸಾಮಾಜಿಕವಾಗಿ ಆಧ್ಯಾತ್ಮಿಕ ಅರಿವು ಉಂಟಾದಾಗ ಸಾಮಾಜಿಕ ಸಾಮರಸ್ಯ ಹಾಗೂ ಧಾರ್ಮಿಕ ಸಾಮರಸ್ಯ ಸಾಧ್ಯ ಎನ್ನುವುದನ್ನು ತಮ್ಮ ನಿರಂತರ ಪ್ರವಾಸ ಪ್ರವಚನಗಳ ಮೂಲಕ ಪ್ರತಿಬಿಂಬಿಸಲು ಪ್ರಯತ್ನಿಸಿದವರು ಈ ಪರಿವ್ರಾಜಕ ಸಂತ.
ಆಧ್ಯಾತ್ಮ ಅವರ ಉಸಿರು. ಈ ನೆಲದ ಉಪನಿಷತ್ತುಗಳಲ್ಲಿ ಧರ್ಮಗ್ರಂಥಗಳಲ್ಲಿ ಹಬ್ಬ-ಹರಿದಿನಗಳ ಆಚರಣೆಗಳಲ್ಲಿ ತಾತ್ತ್ವಿಕ ತಿಳಿವಳಿಕೆ ಹೇಗೆ ಉಸಿರಾಡುತ್ತಿದೆ ಎನ್ನುವುದನ್ನು ಮನವರಿಕೆ ಮಾಡಿಕೊಡಲು ಕನ್ನಡ, ಮರಾಠಿ, ಹಿಂದಿ, ಇಂಗ್ಲಿಷ್, ಸಂಸ್ಕøತ ಭಾಷೆಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಬದುಕಿನುದ್ದಕ್ಕೂ ನೀಡಿದ ಪ್ರಚನಗಳ ಲೆಕ್ಕ ಇಟ್ಟವರಾರು! ಭಕ್ತರೊಬ್ಬರು ಸಾಧ್ಯವಾದಾಗಲೆಲ್ಲ ಹಿಂಬಾಲಿಸುತ್ತ ಆಗಿನ ಗ್ರಾಮಾಫೋನ್ ತಟ್ಟೆಯಲ್ಲಿ ಧ್ವನಿ ಮುದ್ರಿಸಿ ಪ್ರತಿಯೊಂದನ್ನು ಗುರುವಿಗೇ ಅರ್ಪಿಸಿದ್ದರಂತೆ. ‘ಗುರೋರಧೀತಂ ಗುರವೇ ನಿವೇದಿತಮ್’ ಎನ್ನುವ ವಿನೋದದ ಮಾತು ಇಲ್ಲಿ ಯಥಾರ್ಥವೇ ಆಯಿತು. ನಮ್ಮ ಪುಣ್ಯ. ದಶಕಗಳೇ ಕಳೆದ ಮೇಲೆ 18 ವರ್ಷಗಳ ಸತತ ಪರಿಶ್ರಮದಿಂದ 15 ಸಂಪುಟಗಳ (ಧಾರೆಗಳ) ಪುಸ್ತಕರೂಪದಲ್ಲಿ ‘ಶ್ರೀಧರವಚನಾಮೃತ’ವು ಇತ್ತೀಚೆಗೆ ಪ್ರಕಟಗೊಂಡಿದೆ. ಸುಮಾರು 2500 ಪುಟಗಳ ಈ ಪ್ರವಚನ ವಿಸ್ತಾರವನ್ನು ಹದಿನೈದು ಸಂಪುಟಗಳಲ್ಲಿ ವಿಭಾಗಿಸಿದ್ದರಿಂದಾಗಿ ಪುಸ್ತಕಗಳು ಕೈಗೆ ಭಾರವೆನಿಸದೆ ಅನಾಯಾಸ ಓದಿಗೆ ಅನುಕೂಲವಾಗಿವೆ. ಪ್ರತಿಯೊಂದು ಪುಸ್ತಕಗಳ ಮುಖಪುಟಗಳಲ್ಲಿ ವರ್ಣಮಯವಾಗಿ ಮುದ್ರಣಗೊಂಡ ಶ್ರೀಧರರ ಭಾವಚಿತ್ರಗಳು ಅವರ ವಿರಕ್ತ ಮನಸ್ಥಿತಿಯನ್ನೂ ‘ಲೋಕಸಂಗ್ರಹದ’ದ ಕಾರುಣ್ಯಪೂರ್ಣ ವಾತ್ಸಲ್ಯಮಯ ದೃಷ್ಟಿಯನ್ನೂ ಪ್ರತಿಬಿಂಬಿಸಿವೆ.
Get in Touch With Us info@kalpa.news Whatsapp: 9481252093
Discussion about this post